ಶಸ್ತ್ರ - ಶಾಂತಿಯ ನಡುವೆ…
ಭಾರತದ ವಿದೇಶಾಂಗ ನೀತಿ ಜಗತ್ತಿಗೇ ಮಾದರಿ. ಮನುಷ್ಯ ಕುಲದ ಉಳಿವಿಗೆ ಅನಿವಾರ್ಯ. ಕೂಗು ಮಾರಿ ಮಾಧ್ಯಮಗಳ ಸಂತೆಯಲ್ಲಿ ನಿಂತು...ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರವಾಸ ಮತ್ತು ಪ್ರಚಾರದ ಹಿನ್ನಲೆಯಲ್ಲಿ...
1947 ರ ಆಗಸ್ಟ್ 15 ರಂದು ಭಾರತ ಸರ್ವತಂತ್ರ ಸ್ವತಂತ್ರ ದೇಶವಾದಾಗ ಬಹುತೇಕರ ಮನೆಯಲ್ಲಿ ಒಲೆ ಹಚ್ಚಲು ಬೆಂಕಿ ಕಡ್ಡಿ ಪೊಟ್ಟಣ ಸಹ ಇರಲಿಲ್ಲ. ಊರಿನ ಯಾರೋ ಒಬ್ಬರೋ ಇಬ್ಬರೋ ಶ್ರೀಮಂತರು ಬೆಂಕಿ ಹಚ್ಚಿದರೆ ಕಾಯ್ದುಕೊಂಡಿದ್ದು ಅದನ್ನು ಕೇಳಿ ಇತರರು ಕೆಂಡ ಅಥವಾ ಬೆಂಕಿ ಪುಳ್ಳೆ ( ಸೌದೆಯ ತುಂಡು ) ಹಚ್ಚಿ ಮನೆಯಲ್ಲಿ ಅಡುಗೆ ಮಾಡಬೇಕಿತ್ತು. ಅಂತಹ ಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಲು ಅತ್ಯಂತ ಜವಾಬ್ದಾರಿಯಿಂದ ಹೆಜ್ಜೆ ಇಡಬೇಕಾಗಿತ್ತು. ದೇಶದಲ್ಲಿ ಚಿನ್ನ ಒಡವೆ ಮುತ್ತು ರತ್ನಗಳು ಬೀದಿ ಬದಿಯ ಅಂಗಡಿಗಳಲ್ಲಿ ರಾಶಿ ರಾಶಿಯಾಗಿ ಮಾರಾಟವಾಗುತ್ತಿತ್ತು ಎಂಬುದು ಇತಿಹಾಸವಾಗಿತ್ತು. ಅದು ಕೆಲವು ಕಡೆ ಸ್ವಲ್ಪ ಸಮಯ ಮಾತ್ರ.
ದೇಶ ವಿಭಜನೆಯಾಗಿ ದಾಯಾದಿ ಪಾಕಿಸ್ತಾನ ಉದಯವಾಗಿತ್ತು. ಆಗಲೂ ಬಲಿಷ್ಠವಾಗಿದ್ದ ತಂಟೆಕೋರ ವಿಸ್ತಾರವಾದಿ ಚೀನಾ ಸಾವಿರಾರು ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡಿತ್ತು. ಎರಡನೇ ಮಹಾಯುದ್ಧದ ನಂತರ ಬಲಿಷ್ಠ ಅಮೆರಿಕ ಮತ್ತು ರಷ್ಯಾ ನಡುವೆ ಶೀತಲ ಸಮರ ನಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಭಾರತಕ್ಕೆ ಒಂದು ವಿದೇಶಾಂಗ ನೀತಿಯ ಅವಶ್ಯಕತೆ ಇತ್ತು.
ಭಾರತ ಸಾಂಸ್ಕೃತಿಕವಾಗಿ ಬಲಿಷ್ಠವಾಗಿತ್ತು. ಸ್ವಾತಂತ್ರ್ಯ ಸಿಗಲು ಕೆಲವು ವರ್ಷಗಳ ಮೊದಲು ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆ ಭಾರತದ ಸಾಂಸ್ಕೃತಿಕ ಮಹತ್ವವನ್ನು ಸಾರಿದ್ದರು. ದೇಶದ ಒಳಗಡೆ ಸಹ ಸಂಚರಿಸಿ ವೈಚಾರಿಕ ಆಧ್ಯಾತ್ಮವನ್ನು ಪ್ರಚುರಪಡಿಸಿದ್ದರು. ಸ್ವಾತಂತ್ರ್ಯ ಹೋರಾಟದ ಅಂತಿಮ ವರ್ಷಗಳಲ್ಲಿ ಮಹಾತ್ಮ ಗಾಂಧಿಯವರು ಅದರ ನೇತೃತ್ವ ವಹಿಸಿ ಶಾಂತಿ ಅಹಿಂಸೆ ಸರಳತೆ ಮತ್ತು ಸತ್ಯಾಗ್ರಹದ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ್ದರು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅತ್ಯಂತ ಪ್ರಗತಿಪರ ಮತ್ತು ವೈವಿಧ್ಯಮಯ ಒಕ್ಕೂಟ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದರು. ಇದು ವಿಶ್ವಮಟ್ಟದಲ್ಲಿ ಹೆಸರು ಮಾಡಿತ್ತು.
ಈ ಎಲ್ಲದರ ಪ್ರಭಾವದಿಂದ ಅಂದಿನ ಪ್ರಧಾನಿ ಶ್ರೀ ಜವಹರಲಾಲ್ ನೆಹರು ಅವರು "ಅಲಿಪ್ತ ನೀತಿ" ಎಂಬ ಅಂದಿಗೂ ಇಂದಿಗೂ ಅತ್ಯುತ್ತಮ ಮಾದರಿಯಾದ ವಿದೇಶಾಂಗ ನೀತಿಯನ್ನು ಅನುಸರಿಸಿ ಯಾವುದೇ ಗುಂಪಿಗೆ ಸೇರದೆ ವಿಶ್ವದ ಶಾಂತಿಯ ರಾಯಭಾರಿ ಪಾತ್ರವನ್ನು ಭಾರತಕ್ಕೆ ನೀಡಿದರು. ಸುಮಾರು 75 ವರ್ಷಗಳ ಭಾರತ ಸ್ವಾತಂತ್ರ್ಯ ನಂತರದ ಆಡಳಿತವನ್ನು ನೆಹರು, ಇಂದಿರಾ, ರಾಜೀವ್, ನರಸಿಂಹರಾವ್, ವಾಜಪೇಯಿ, ಮನಮೋಹನ್ ಸಿಂಗ್. ನರೇಂದ್ರ ಮೋದಿ ಪ್ರಮುಖವಾಗಿ ಮುನ್ನಡೆಸಿದ್ದಾರೆ. ಶಾಸ್ತ್ರಿ, ಮುರಾರ್ಜಿ, ವಿ ಪಿ ಸಿಂಗ್, ಚಂದ್ರಶೇಖರ್, ದೇವೇಗೌಡ, ಗುಜ್ರಾಲ್ ಅವಧಿ ತುಂಬಾ ಕಡಿಮೆ.
ಈ ಸಮಯದಲ್ಲಿ ಭಾರತ ಒಟ್ಟು ಐದು ಯುದ್ದಗಳಲ್ಲಿ ನೇರವಾಗಿ ಭಾಗವಹಿಸಿದೆ.
1947 ಭಾರತ - ಪಾಕಿಸ್ತಾನ,
1962 ಭಾರತ - ಚೀನಾ,
1965 ಭಾರತ - ಪಾಕಿಸ್ತಾನ,
1971 ಭಾರತ - ಪಾಕಿಸ್ತಾನ,
1999 ಕಾರ್ಗಿಲ್ ಯುದ್ಧ.....
ವಿದೇಶಾಂಗ ನೀತಿ ಅಗ್ನಿ ಪರೀಕ್ಷೆಗೆ ಒಳಗಾಗುವುದು ಸಾಮಾನ್ಯವಾಗಿ ಯುದ್ಧದ ಸಮಯದಲ್ಲಿ. ವ್ಯಾಪಾರ ವಾಣಿಜ್ಯವೂ ಮುಖ್ಯ. ಆದರೆ ಇಷ್ಟು ಒತ್ತಡ ಇರುವುದಿಲ್ಲ. ವಿದೇಶಾಂಗ ನೀತಿ ಸೂಕ್ಷ್ಮ ಸಂಕೀರ್ಣ ಮತ್ತು ದೀರ್ಘಕಾಲದ ಹಿತಾಸಕ್ತಿಯನ್ನು ಒಳಗೊಂಡಿರುತ್ತದೆ. ಆ ತಕ್ಷಣದಲ್ಲಿ ಹೇಗೆಂದರೆ ಹಾಗೆ ನೀತಿ ಬದಲಾಯಿಸುವುದು ಸಾಧ್ಯವಿಲ್ಲ. ಹಾಗೆ ಮಾಡಿದರೆ ದೇಶದ ಮೇಲಿನ ವಿಶ್ವಾಸ ಕುಸಿದು ಅಪಾಯಕ್ಕೆ ಸಿಲುಕಬಹುದು.
ಯಾವುದೋ ಒಂದು ಗುಂಪಿಗೆ ಸೇರುವುದು ಸುಲಭ. ತಟಸ್ಥ ನೀತಿ ತಂತಿಯ ಮೇಲಿನ ನಡಿಗೆ. ತುಂಬಾ ಎಚ್ಚರಿಕೆ ಮತ್ತು ಪ್ರಾಮಾಣಿಕತೆ ಬೇಕು. ಇಲ್ಲದಿದ್ದರೆ ಅವಕಾಶವಾದಿ ಎಂಬ ಕೆಟ್ಟ ಹೆಸರು ಬರುತ್ತದೆ. ಸ್ವಲ್ಪ ಎಡಪಂಥೀಯ ಚಿಂತನೆಯ ಕಾಂಗ್ರೇಸ್ ರಷ್ಯಾದ ಪರವಾಗಿಯೂ, ಬಲಪಂಥೀಯ ಚಿಂತನೆಯ ಬಿಜೆಪಿ ಅಮೆರಿಕ ಪರವಾಗಿಯೂ ಮೇಲ್ನೋಟಕ್ಕೆ ಕಂಡುಬರುತ್ತದೆ. ಭಾರತದ ರಕ್ಷಣಾ ವ್ಯವಸ್ಥೆಯ ನಿಜವಾದ ಪಾಲುದಾರ ರಷ್ಯಾ. ಈಗಲೂ ಸಹ. ಭಾರತದ ಯಾವುದೇ ಯುದ್ಧದ ಸಮಯದಲ್ಲಿ ಅಮೆರಿಕ ಭಾರತದ ಪರವಾಗಿ ಸಂಪೂರ್ಣ ನಿಲ್ಲಲಿಲ್ಲ. ಚೀನಾ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಸಹ ಅದು ನಿರೀಕ್ಷಿಸಿದ ಬೆಂಬಲ ನೀಡದೆ ಭಾರತಕ್ಕೆ ಸೋಲಾಯಿತು. ಇತರ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಪರ ಪರೋಕ್ಷವಾಗಿ ಕೆಲಸ ಮಾಡಿತು.
ಸಾಮಾನ್ಯವಾಗಿ ಶ್ರೀಮಂತರ ( ಬಂಡವಾಳ ಶಾಹಿಗಳ ) ಮನಸ್ಥಿತಿ ಹೇಗಿರುತ್ತದೆ ಎಂದರೆ ಯಾರು ಆ ಪರಿಸ್ಥಿತಿಯಲ್ಲಿ ಪ್ರಬಲರು ಮತ್ತು ಯಾರಿಂದ ಹೆಚ್ಚು ಲಾಭವಾಗುತ್ತದೆ ಎಂದು ಅನಿಸುತ್ತದೆಯೋ ಅವರೊಂದಿಗೆ ಸಂಬಂಧಗಳನ್ನು ಬೆಳೆಸುತ್ತಾರೆ. ದುರ್ಬಲರು ಅಥವಾ ದುರ್ಬಲರಾಗುತ್ತಿದ್ದಂತೆ ಕೈ ಬಿಡುತ್ತಾರೆ ಮತ್ತು ಅದನ್ನೇ ಸಹಜ ನ್ಯಾಯ ಎನ್ನುತ್ತಾರೆ. ನ್ಯಾಯ ನೀತಿ ಧರ್ಮಗಳಿಗೆ ಅಲ್ಲಿ ಆಸ್ಪದವೇ ಇಲ್ಲ. ಅಮೆರಿಕ ಸಹ ಈಗ ಭಾರತ ಆರ್ಥಿಕವಾಗಿ ಪ್ರಬಲವಾಗುತ್ತಿದೆ, ಭಾರತ ಒಳ್ಳೆಯ ಮಾರುಕಟ್ಟೆ, ಚೀನಾ ಎದುರಿಸಲು ಭಾರತ ಸಹಾಯ ಮಾಡಬಹುದು ಎಂಬ ದುರಾಲೋಚನೆ ಮತ್ತು ದೂರಾಲೋಚನೆಯಿಂದ ಭಾರತದ ಪ್ರಧಾನಿಯನ್ನು ತುಸು ಹೆಚ್ಚಾಗಿಯೇ ಓಲೈಸುತ್ತಿದೆ. ಹಿಂದೊಮ್ಮೆ ಮಾನವ ಹಕ್ಕುಗಳ ದಮನದ ಕಾರಣಕ್ಕಾಗಿ ಇದೇ ನರೇಂದ್ರ ಮೋದಿಯವರಿಗೆ ಅನೇಕ ವರ್ಷ ವೀಸಾ ನಿರಾಕರಿಸಿತ್ತು ಎಂಬುದನ್ನು ಬೇಕಂತಲೇ ಮರೆಯುತ್ತದೆ.
ಇರಲಿ ಒಂದು ದೇಶವಾಗಿ ಭಾರತಕ್ಕೆ ಅಮೆರಿಕ ರಷ್ಯಾ ಮುಂತಾದ ಎಲ್ಲಾ ದೇಶಗಳು ಮುಖ್ಯ. ಅವುಗಳೊಂದಿಗೆ ಉತ್ತಮ ಬಾಂಧವ್ಯ ಸಹ ಇರಬೇಕು. ಆ ನಿಟ್ಟಿನಲ್ಲಿ ಪ್ರಧಾನಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಅಲಿಪ್ತ ನೀತಿಯನ್ನು ಬಿಡಬಾರದು. ಏಕೆಂದರೆ ಅಮೆರಿಕ ವಾಣಿಜ್ಯ ಉದ್ದೇಶಕ್ಕಿಂತ ಹೆಚ್ಚಾಗಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಮಾರುತ್ತಿದೆ. ಭಾರತ " ಬಲೀಕಾ ಬಕ್ರಾ " ( ಹರಕೆಯ ಕುರಿ ) ಆಗಬಾರದು. ಭಾರತದ ಶಕ್ತಿ ಶಸ್ತ್ರಗಳಲ್ಲ ಶಾಂತಿ ಮತ್ತು ಅಲಿಪ್ತ ನೀತಿ.
ದೇಶ ಒಬ್ಬ ವ್ಯಕ್ತಿಯ ಈಗಿನ ಆಕ್ರಮಣಕಾರಿ ಮನೋಭಾವದ ಮೇಲೆ ವಿದೇಶಾಂಗ ನೀತಿ ರೂಪಿತವಾಗಬಾರದು. ಅದು ಇತಿಹಾಸದ ಆಂತಃ ಶಕ್ತಿಯಿಂದ ರೂಪಿತವಾಗಬೇಕು. ಯಾರು ಎಷ್ಟೇ ಆಸೆ ಆಮಿಷಗಳನ್ನು ಒಡ್ಡಿದರು ನಮ್ಮ ಅಲಿಪ್ತ ವಿದೇಶಾಂಗ ನೀತಿ ದೇಶದ ಮತ್ತು ವಿಶ್ವದ ಹಿತಾಸಕ್ತಿಯಿಂದ ಬಹಳ ಮುಖ್ಯ. ಇಡೀ ವಿಶ್ವವನ್ನು ಹತ್ತು ಬಾರಿ ಸಂಪೂರ್ಣ ನಾಶ ಮಾಡುವಷ್ಟು ಅಣ್ವಸ್ತ್ರಗಳ ಸಂಗ್ರಹ ಈ ಭೂಮಿಯ ಮೇಲಿದೆ. ಇಂತಹ ಸನ್ನಿವೇಶದಲ್ಲಿ ಮಾಧ್ಯಮಗಳು ವಿವಿಧ ದೇಶಗಳ ರಕ್ಷಣಾ ಸಾಮರ್ಥ್ಯದ ಬಗ್ಗೆ ಯೋಚಿಸುವುದಕ್ಕಿಂತ ಶಾಂತಿಯ ಬಗ್ಗೆ ಜನಾಭಿಪ್ರಾಯ ಮೂಡಿಸಬೇಕು. ಅದು ಬಿಟ್ಟು ಭಾರತ - ಅಮೆರಿಕ, ರಷ್ಯಾ - ಚೀನಾ ಹೀಗೆ ಶಕ್ತಿಯ ಹುಚ್ಚಾಟದ ಬಗ್ಗೆ ವರದಿಗಳನ್ನು ಪ್ರಕಟಿಸಿದರೆ ಪ್ರಪಂಚವೇ ನಾಶವಾಗುತ್ತದೆ. ಆ ಎಚ್ಚರಿಕೆ ಮಾಧ್ಯಮದವರಿಗೆ ಇರಬೇಕು.
ಹುಚ್ಚು ಮಾಧ್ಯಮದವರಿಗೆ ಅರ್ಥವಾಗದ ಸೂಕ್ಷ್ಮತೆ ಎಂದರೆ ಬಲಿಷ್ಠ ಆಯುಧ ಮಾತ್ರ ಬಲಿಷ್ಠ ರಕ್ಷಣೆಯಲ್ಲ. ಅದನ್ನು ಮೀರಿದ ವ್ಯಕ್ತಿಗಳ ಮತ್ತು ಶಕ್ತಿಗಳ ವಿಜೃಂಭಣೆಯಲ್ಲಿ ಜಗತ್ತಿನ ಅತ್ಯಂತ ದೊಡ್ಡ ಮತ್ತು ಬಲಶಾಲಿ ಅಸ್ತ್ರ ಪ್ರೀತಿ ಶಾಂತಿ ಅಹಿಂಸೆ ಮಾನವೀಯತೆಯನ್ನು ಮರೆಯಬಾರದು. ಭಾರತದ ಮಾಧ್ಯಮಗಳು ಅಮೆರಿಕದ ಸ್ನೇಹವನ್ನು ಅತಿರಂಜಿತವಾಗಿ ವರ್ಣಿಸುತ್ತಿರುವಾಗ ಭಾರತದ " ಅಲಿಪ್ತ ವಿದೇಶಾಂಗ ನೀತಿಯ " ಮಹತ್ವವನ್ನು ನೆನಪಿಸುತ್ತಾ… ರಷ್ಯಾದ ಆಂತರಿಕ ದಂಗೆ ಇಡೀ ಮನುಕುಲಕ್ಕೆ ಅಪಾಯವಾಗದಿರಲಿ ಎಂದು ಆಶಿಸುತ್ತಾ...
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ