ಶಾಂತಿಯ ಪರವಾಗಿ ಧ್ವನಿ ಎತ್ತುವ...!

ಶಾಂತಿಯ ಪರವಾಗಿ ಧ್ವನಿ ಎತ್ತುವ...!

ರೇಪ್‌ಗಳು, ಕೊಲೆಗಳು ಊಹಿಸಲು ಸಾಧ್ಯವಾಗದ ಹಿಂಸೆಗಳು ಈ ಕ್ಷಣದಲ್ಲೂ ನಿರಂತರವಾಗಿ ನಡೆಯುತ್ತಿದೆ ಉಕ್ರೇನ್ ಎಂಬ ದೇಶದ ನೆಲದಲ್ಲಿ. ನಮಗೆ ಬರುತ್ತಿರುವ ಯುದ್ಧ ಭೂಮಿಯ ಮಾಹಿತಿಗಳು ಸ್ವಲ್ಪವೇ ಇರಬೇಕು. ನಮ್ಮವರೆಗೂ ತಲುಪಲಾಗದ ಇ‌ನ್ನೆಷ್ಟು ಹಿಂಸಾತ್ಮಕ ಸುದ್ದಿಗಳಿವೆಯೋ? ರಾಕ್ಷಸ ಪುಟಿನ್, ವಿವೇಚನೆ ಇಲ್ಲದ ಬಪೂನ್ ಝಲೆನ್ಸ್ಕಿ, ಕರುಣೆ ಇಲ್ಲದ ಶಕುನಿ ಬೈಡನ್ ಇವರಿಗೆ ಆ ಜೀಸಸ್ ಅಥವಾ ಅಲ್ಲಾ ಅಥವಾ ಬ್ರಹ್ಮ ಇತ್ಯಾದಿ ದೇವರುಗಳು ಕಪಾಳಮೋಕ್ಷ ಮಾಡಬಾರದೆ. ಈಗ ಪ್ರತ್ಯಕ್ಷವಾಗದ ಆ ದೇವರು ಮತ್ತೆ ಬರುವುದಾದರೂ ಯಾವಾಗ?

ಖುರಾನ್ ಹೇಳಿದ ಶಾಂತಿ ಸಂದೇಶ, ಭಗವದ್ಗೀತೆ ನೀಡಿದ ಶಾಂತಿ ಸಂದೇಶ, ಬೈಬಲ್ ನುಡಿದ ಶಾಂತಿ ಸಂದೇಶ ಇವುಗಳಿಂದ ಪ್ರೇರಿತರಾದ ಕೋಟ್ಯಂತರ ಜನ ಈ ಹಿಂಸೆಯನ್ನು ನೋಡಿಯೂ ತಮ್ಮ ಪಾಡಿಗೆ ತಾವು ಮೌನವಾಗಿ ನಪುಂಸಕರಾಗಿರುವುದಾದರೂ ಏಕೆ ?  ಎರಡು ದೇಶಗಳ ನಡುವೆ ಯುದ್ಧ ನಿಲ್ಲಿಸಲಾಗದ ಈ ಜಗತ್ತಿನ ಎಲ್ಲಾ ಧರ್ಮ ಗುರುಗಳು, ನೊಬೆಲ್ ಶಾಂತಿ ವಿಜೇತರು, ಎಲ್ಲಾ ದೊಡ್ಡ ದೊಡ್ಡ ದೇಶಗಳ ಅಧ್ಯಕ್ಷರು - ಪ್ರಧಾನಿಗಳಿಗೆ ಒಂದು ಧಿಕ್ಕಾರ ಹೇಳೋಣವೇ ? ಕಷ್ಟದಲ್ಲಿ ಇರುವಾಗ ಸಹಾಯ ಮಾಡದ ಯಾವುದೇ ದೇವರು ಧರ್ಮ ಸಂದೇಶ ವ್ಯಕ್ತಿಗಳು ಶಕ್ತಿಗಳು ಎಷ್ಟೇ ಪ್ರಭಾವಿಗಳು ಜನಪ್ರಿಯರು ಬುದ್ದಿವಂತರು ಆಗಿದ್ದರು ಪ್ರಯೋಜನವೇನು ?

ಪ್ರತಿನಿತ್ಯ ಸೈನಿಕರು ಸೇರಿ ಎಷ್ಟೊಂದು ಅಮಾಯಕ ಜನರು ಬಾಂಬು ಬಂದೂಕುಗಳಿಗೆ ನೇರವಾಗಿ ಬಲಿಯಾಗುತ್ತಿದ್ದಾರೆ, ಎಷ್ಟೊಂದು ಜನ ಶಾಶ್ವತ ಅಂಗವಿಕಲರಾಗುತ್ತಿದ್ದಾರೆ, ಎಷ್ಟೊಂದು ಜನ ಮಹಿಳೆಯರು ವಿದುವೆಯರಾಗುತ್ತಿದ್ದಾರೆ, ಎಷ್ಟೊಂದು ಮಕ್ಕಳು ಅನಾಥರಾಗುತ್ತಿದ್ಸಾರೆ, ಎಷ್ಟೊಂದು ಜನ ರೋಗಿಗಳಾಗುತ್ತಿದ್ದಾರೆ‌. ಇದನ್ನು ನೋಡಿಯೂ ಕೇಳಿಯೂ ಯಾವುದೇ ಸ್ಪಂದನೆ ಇಲ್ಲದ ಆಧುನಿಕ ಮಾನವ ಜನಾಂಗದ ಬಗ್ಗೆ ಜಿಗುಪ್ಸೆ ಉಂಟಾಗುತ್ತಿದೆ.

ಇನ್ನು ಮುಂದೆ ನಮ್ಮ ಕಾರ್ಯಾಚರಣೆ ಮತ್ತಷ್ಟು ಉಗ್ರವಾಗುತ್ತದೆ ಎಂದು ರಷ್ಯಾದವರು, ಎಷ್ಟೇ ಜನ ಸತ್ತರೂ ಏನೇ ಹಾನಿಯಾದರು ನಾವು ಶರಣಾಗುವುದಿಲ್ಲ ಎಂಬ ಉಕ್ರೇನಿಯನ್ನರು, ನೀವು ಧೈರ್ಯವಾಗಿ ಎದುರಿಸಿ ನಾವು ನಿಮಗೆ ಶಸ್ತ್ರಾಸ್ತ್ರ ನೀಡಿ ಸಹಾಯ ಮಾಡುತ್ತೇವೆ ಎನ್ನುವ ನ್ಯಾಟೋ ಒಕ್ಕೂಟ. ಏನು ಇವರೆಲ್ಲ ಸಾಯುವ ಸಾಯಿಸುವ ಆಟ ಆಡುತ್ತಿದ್ದಾರೆಯೇ ? ಜೀವ ಜೀವನದ ಬೆಲೆ ಇವರಿಗೆ ತಿಳಿದಿಲ್ಲವೇ ? ಏನನ್ನಾದರೂ ಪುನರ್ ಸೃಷ್ಟಿಸಬಹುದು. ಆದರೆ ಒಮ್ಮೆ ಹೋದ ಜೀವವನ್ನು ಮರಳಿ ಪಡೆಯಲಾಗುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಇವರಿಗೆ ಇಲ್ಲವಾಯಿತೇ ಅಥವಾ ಇದ್ದರು ಮನುಷ್ಯನ ರಾಕ್ಷಸ ಪ್ರವೃತ್ತಿಯೇ ಮೇಲುಗೈ ಪಡೆಯಿತೇ ?

ವಿಶ್ವ ಜನಸಂಖ್ಯೆಯ ಕನಿಷ್ಠ 20% ಜನರಾದರೂ ಶಾಂತಿಯ ಪರವಾಗಿ ತಮ್ಮ ಧ್ವನಿ ಮೊಳಗಿಸಿದ್ದರೆ ಒಂದಷ್ಟು ಒತ್ತಡವಾದರೂ ನಿರ್ಮಾಣವಾಗುತ್ತಿತ್ತು. ಆದರೆ ಯಾಕೋ ಎಲ್ಲರೂ ನಮಗೆ ಸಂಬಂಧವೇ ಇಲ್ಲ ಎಂಬಂತೆ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ನಡುವೆ ರಷ್ಯಾದ ಅಧಿಕೃತ ವಾರ್ತಾ ಸಂಸ್ಥೆ ಮೂರನೆಯ ಮಹಾಯುದ್ಧ ಈಗಾಗಲೇ ಪ್ರಾರಂಭವಾಗಿದೆ ಎಂದು ಹೇಳಿದೆ.

ಎರಡು ಮಹಾಯುದ್ಧಗಳು ಸಹ  ಸುಮಾರು ‌4-5 ವರ್ಷಗಳು ನಡೆದು ಲಕ್ಷಾಂತರ ಜನರ ಸಾವಿನ ನಂತರ ಯುದ್ಧ ನಿಂತು ಆಮೇಲೆ ಒಂದು ಒಪ್ಪಂದಕ್ಕೆ ಬರಲಾಯಿತು. ಈಗಲೂ ಬಹುಶಃ ಅದು ಪುನರಾವರ್ತನೆ ಆಗಬಹುದು. ಅಂದರೆ ಯುದ್ಧ ಇನ್ನೂ ದೀರ್ಘಕಾಲ ನಡೆದು ಸಾಕಷ್ಟು ವಿನಾಶವಾದ ನಂತರ ಯಾರೋ ಸೋತು ಯಾರೋ ಗೆದ್ದು ಯುದ್ಧ ನಿಲ್ಲಬಹುದು. ಆದರೆ ‌ಆ ದೊಡ್ಡ ಅನಾಹುತಗಳನ್ನು ಮೊದಲೇ ಊಹಿಸಿ ಈಗಲೇ ಯುದ್ಧ ನಿಲ್ಲಿಸಿ ಒಂದು ಒಪ್ಪಂದಕ್ಕೆ ಬರಲಾಗದ ಮಾನಸಿಕ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆಯೇ ಈ ನರ ರಾಕ್ಷಸರು ?

ಇದನ್ನೆಲ್ಲಾ ನೋಡುತ್ತಿದ್ದರೆ ದೇವರು ಧರ್ಮ ಒಳ್ಳೆಯತನ ಎಲ್ಲವೂ ಪುಸ್ತಕದ ಬದನೆಕಾಯಿ ಮಾತ್ರ. ಅಂತಿಮವಾಗಿ ಈ ಸೃಷ್ಟಿಯಲ್ಲಿ ‌ಚಾರ್ಲ್ಸ್ ಡಾರ್ವಿನ್‌ನ " ಬಲಿಷ್ಠವಾದದ್ದು ಮಾತ್ರ ಉಳಿಯುತ್ತದೆ " ( Survival of the fittest " ) ಎಂಬ ತತ್ವವೇ ವಾಸ್ತವ ಎನಿಸುತ್ತದೆ. ಆದರೂ ಏನೇ ಆಗಲಿ ನಾವುಗಳು ಕನಿಷ್ಠ ನಮ್ಮ ನೆಲೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಶಾಂತಿಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡೋಣ. ಮೂರನೆಯ ಮಹಾಯುದ್ಧ ನಮ್ಮನ್ನು ಸುಡುವ ಮೊದಲು ನಾವು ಯುದ್ದವನ್ನು ಸುಡಲು ಪ್ರಯತ್ನಿಸೋಣ.

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ