ಶಾಂತಿಯ ಪ್ರತೀಕ - ಭಗವಾನ್ ಬುದ್ಧ

ಶಾಂತಿಯ ಪ್ರತೀಕ - ಭಗವಾನ್ ಬುದ್ಧ

ಬುದ್ಧಂ ಶರಣಂ ಗಚ್ಛಾಮಿ

ಸಂಘಂ ಶರಣಂ ಗಚ್ಛಾಮಿ

ಧರ್ಮಂ ಶರಣಂ ಗಚ್ಛಾಮಿ

ಜೀವಜಗತ್ತಿನ ಜೀವರ ಸಾವು-ನೋವು, ದು:ಖ,ಹಿಂಸೆ ನೋಡಿ ಬೇಸರಿಸಿದ ಮಹಾನುಭಾವ. ಮನದಲಿ ಉದ್ಭವಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರ ಸಿಗದಾಗ, ತಾನೇ ಎಲ್ಲಾ ಸುಖ ಭೋಗಗಳನ್ನು ತ್ಯಾಗ ಮಾಡಿ ನಡೆದ ದೇವೋತ್ತಮ. ಜಗವೆಲ್ಲ ಗಾಢನಿದ್ರೆಗೆ ಜಾರಿದಾಗ ರಾಜ್ಯಕೋಶ, ಮಡದಿ ಮಗನನ್ನು ತೊರೆದ. ಜನರ ಸಂಕಷ್ಟಕ್ಕೆ ಪರಿಹಾರ ಹುಡುಕಿಕೊಂಡು, ವೈರಾಗ್ಯವ ತಳೆದ. ಜಗದೆಲ್ಲೆಡೆ ಸಂಚರಿಸಿ ಆತ್ಮ ಶೋಧನೆಯ ಕೈಗೊಂಡ ಸಿದ್ದಾರ್ಥ, ಬೋಧಿವೃಕ್ಷದಡಿ ಕುಳಿತು, ಜ್ಞಾನೋದಯ ಹೊಂದಿ ಬುದ್ಧನೆಂದೆನಿಸಿದ.

‘ಅಹಿಂಸೆಯೇ ಪರಮ ಧರ್ಮ’, ಯಾರನ್ನೂ ನೋಯಿಸುವ ಹಕ್ಕಾಗಲಿ, ಅಧಿಕಾರವಾಗಲಿ ಯಾರಿಗೂ ಇಲ್ಲ ಎಂಬ ನುಡಿಗಳಿಂದ ಬೋಧನೆಯ ಆರಂಭಿಸಿದ ಸರ್ವಜ್ಞ. ನಿತ್ಯ ಪರಿವರ್ತನಶೀಲವಾದ ಈ ಜಗತ್ತಿಗೆ ಆದಿ ಅಂತ್ಯಗಳಿಲ್ಲವೆಂದು ಸಾರಿದ. ಸುಮಾರು ೪೫ ವರ್ಷಗಳ ಕಾಲ ದೇಶದಗಲ ಪ್ರಯಾಣಿಸಿ ಅಖಂಡ ಧರ್ಮ ಪ್ರಚಾರ ಕೈಗೊಂಡ. ಈ ಧರ್ಮ ಬೋಧನೆಗಳು ಪಾಲಿ ಭಾಷೆಯಲ್ಲಿದೆ. ನಾವು ಓದಿದಂತೆ ಸಮಾಜದಿಂದ ದೂರವುಳಿದ, ತಿರಸ್ಕಾರಕ್ಕೊಳಗಾದ ಭಯಾನಕ ಮಹಾಕ್ರೂರಿ ಅಂಗೂಲಿಮಾಲನನ್ನು, ಹೀನಸ್ಥಿತಿಯಲ್ಲಿದ್ದ ಅಮ್ರಪಾಲಿಯನ್ನು ತನ್ನ ಬೋಧನೆಗಳಿಂದ ಮನಸ್ಸು ಬದಲಾಯಿಸಿ, ಪ್ರೀತಿ, ಕರಣೆಗಳಿಂದ ಗೆದ್ದ ಮಹಾತ್ಮ. ಬೌದ್ಧ ಧರ್ಮದ ಸ್ಥಾಪಿಸಿ, ಜನರನ್ನು ಒಗ್ಗೂಡುವಂತೆ ಮಾಡಿದ ಪುಣ್ಯಶಾಲಿ. ಏಕಾಗ್ರತೆ, ಶ್ರದ್ಧೆ , ನಂಬಿಕೆ, ಅಚಲವಿಶ್ವಾಸ, ದೃಢಸಂಕಲ್ಪದಿಂದ ಎಲ್ಲವನ್ನೂ ‌ಸಾಧಿಸಿ ತೋರಿಸಿದ.

ಪುರಾಣಕಾವ್ಯಗಳು, ಭಾಗವತದಪ್ರಕಾರ ವಿಷ್ಣುವಿನ ೯ನೆಯ ಅವತಾರವೆನ್ನುವರು. ವೈಶಾಖಮಾಸದ ಶುಕ್ಲಪಕ್ಷ ಪೌರ್ಣಮಿಯ ದಿನ ಬೌದ್ಧ ಧರ್ಮೀಯರಿಗೆ ಅತ್ಯಂತ ಶ್ರೇಷ್ಠವೂ, ಪವಿತ್ರವೂ ಆಗಿದೆ. ಬುದ್ಧನ ತತ್ವ, ಬೋಧನೆಗಳನ್ನು ಒಪ್ಪಿದವರೆಲ್ಲ ಅವನ ಅನುಯಾಯಿಗಳಾದರು. ಪರಸ್ಪರ ಪ್ರೀತಿ, ಶಾಂತಿ, ದಯೆ, ಅನುಕಂಪವನ್ನು ಬೆಳೆಸಿಕೊಂಡು ವ್ಯವಹರಿಸಿ ಎನ್ನುತ್ತಾ ಅದರಂತೆ ನಡೆದುಕೊಂಡ ಮಹಾನ್ ಚೇತನ.ಶಾಂತಿಯ ಪ್ರತೀಕ, ಸಕಲ ಜೀವರಾಶಿಗೂ ಒಳ್ಳೆಯದನ್ನೇ ಬಯಸಿದ, ದೇವತ್ವವನ್ನು ಹೊಂದಿದ ಬುದ್ಧನಿಗೆ ಪ್ರಣಾಮಗಳು.

ಏಕಾಗ್ರತೆಯ ಮಂತ್ರ ಪಠಿಸಿದೆ

ನಂಬಿಕೆಯ ಬೇರು ಗಟ್ಟಿಗೊಳಿಸಿದೆ

ಭೋಗ ವೈಭೋಗಗಳ ತ್ಯಜಿಸಿದೆ

ಹಿಂಸೆ ಮಾಡದಿರೆಂದು ಸಾರಿದೆ//

 

ಸುಖದ ಸುಪ್ಪತ್ತಿಗೆ ಕಾಲಲೊದ್ದೆ

ದು:ಖ -ದುಮ್ಮಾನಗಳ ತಪದಿ ಗೆದ್ದೆ

ಆಸೆಗಳ ಬೀಜವ ಮೂಲದಿ ಚಿವುಟಿದೆ

ಯೋಗಿಯಾಗಿ ತ್ಯಾಗಿಯಾಗಿ ಮನದಿ ನೆಲೆಸಿದೆ//

 

ಬೋಧಿವೃಕ್ಷ ನೆರಳಾಗಿ ಆಸರೆಯಾಯಿತು

ಧ್ಯಾನಿಸಿ ಗಳಿಸಿ ಲೋಕೋತ್ತರನಾದೆ

ಕರುಣೆಯ ಕಡಲು ಪರಮ ಪಾವನನಾದೆ

ಶಾಂತಿ ಸಂದೇಶ ಉಪದೇಶ ಮಾಡಿದೆ//

ಸರ್ವರಿಗೂ ಬುದ್ಧ ಜಯಂತಿಯ ಹಾರ್ದಿಕ ಶುಭಾಶಯಗಳು

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ