ಶಾಂತಿ-ಧಾಮ

ಶಾಂತಿ-ಧಾಮ

ಗೆಳೆಯ ವಿನುವನ್ನ ಆಸ್ಪತ್ರೆಗೆ ಸೇರಿಸಲಾಗಿದೆಯಂತೆ ಬೆಳಗ್ಗೆ ಸುಜಿ ಕರೆ ಮಾಡಿ ಹೇಳಿದಾಗ ಅವನು ತುಂಬಾ ಗಾಬರಿಯಲ್ಲಿದ್ದಂತೆ ಅನಿಸಿತ್ತು.

"ಏನು ಏನಾಯ್ತು ಯಾವಾಗ? ನನ್ನ ಒಂದೇ ಉಸುರಿನ ಪ್ರಶ್ನೆಗೆ ಆತ ಉತ್ತರಿಸಲು ತಡವರಿಸುತಿದ್ದ.

"ಸರಿ ನಾನು ಬಂದೆ" ಎನ್ನುತ್ತಾ ಎರಡು ದಿನದ ರಜೆ ಬರೆದು ಊರಿಗೆ ಹೊರಟೆ.

ನನ್ನ ಸೀಟು ಹಿಡಿದು ಕುಳಿತು ಹೊರಗೆ ದೃಷ್ಟಿ ಹಾಯಿಸಿದೆ. ಅಷ್ಟು ದೂರದಲ್ಲಿ ಕಾಣುವ ಕಡಲು ಇಂದೇಕೋ ಅಸಹಜವಾಗಿ ಅಬ್ಬರಿಸುವಂತೆ ಭಾಸವಾಯಿತು. ಬಿಳಿ ನೊರೆಯ ಅಲೆಗಳ ಉಬ್ಬರ, ಮೇಲೆ ಎತ್ತೆತ್ತರಕ್ಕೆ ಹಾರಾಡುತ್ತಿರುವ ಬಾನಾಡಿಗಳು,

ಮರಳ ಮೇಲೆ ಪಾದ ಹೂತು ಆಟ ಆಡುವ ಮಕ್ಕಳು, ತಮ್ಮದೇ ಲೋಕದಲ್ಲಿ ವಿಹರಿಸುವ ಪ್ರೇಮಿಗಳು.....ಹೀಗೇ ಹೀಗೆ.

ರೈಲು ಕೂ ಶಬ್ದ ಮಾಡುತ್ತಾ ಮುಂದೆ ಸಾಗಿತು. ನನ್ನ ನೆನಪುಗಳು ಹಿಂದಕ್ಕೂ...

ವಿನು, ಸುಜಿ ಮತ್ತು ನಾನು ಅಕ್ಕ ಪಕ್ಜದ ಮನೆಯವರು....ಬಾಲ್ಯದ ಗೆಳೆಯರು.. ಆಟ ಪಾಟ ತುಂಟಾಟ ಬಾಲ್ಯದ ಮೆ(ಬೆ)ರಗಿನಲ್ಲಿ ನಾವು ಮೂವರು ಜೊತೆ ಬಿಟ್ಟುಕೊಟ್ಟವರೇ ಅಲ್ಲ...

"ಶಾಂತಿ ಧಾಮ" ನಮ್ಮ ಆಟದ ಮನೆ. ಅಳು, ನಗು, ಕೋಪ, ಜಗಳ ಎಲ್ಲದರ ಬುತ್ತಿ ಬಿಚ್ಚಿಕೊಳ್ಳೋದು ಅಲ್ಲಿಂದಲೇ. ಬಾಲ್ಯ ಕಳೆದು ಹರೆಯಕ್ಕೆ ಬರುವಷ್ಟರಲ್ಲಿ ಮೂವರೂ ಉದ್ಯೋಗ ಪಡೆದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದೆವು. ಅವರಿಬ್ಬರದೂ ಎರಡು ಮಕ್ಕಳ ಜೊತೆ ದಾಂಪತ್ಯದ ತೇರು ಸುಗಮವಾಗಿ ಸಾಗುತಿತ್ತು.

ನಿಜ ಹೇಳಬೇಕೆಂದರೆ ಅವರ ಸಂತೋಷದಿಂದ ಕೂಡಿದ ಬದುಕು ನನ್ನಲ್ಲಿ  ಸ್ವಲ್ಪ ಅಸೂಯೆ ಹುಟ್ಟಿಸಿದ್ದು ನಿಜ.

ಮದುವೆಯಾಗಿ ವರುಷಗಳಾದರೂ ಸದಾ ಜಗಳ .....ಹೊಂದಾಣಿಕೆಯಿಲ್ಲದ ನನ್ನ ದಾಂಪತ್ಯ....ಥೂ ನನಗೇ ಹೇಸಿಗೆ ಹುಟ್ಟಿಸುತ್ತೆ.

ಬಿಡುವಾಗುವಾಗೆಲ್ಲಾ ನಾವು ಜೊತೆಯಾಗುವಾಗ ವಿನು ಹೇಳುತಿದ್ದ ಮಾತು ಕಿವಿಯೊಳಗೆ ಗುಯ್ಗುಟ್ಟಿತು. ನನ್ನ ಪತ್ನಿ ಚಿತ್ರು ನನ್ನ ಯಾವುದೋ ಜನ್ಮದ ಪುಣ್ಯ ಕಣೋ.,‌‌...ಒಳ್ಳೆ ಫ್ರೆಂಡ್ಲೀ,... ಯಾವುದಕ್ಕೂ ಅಡ್ಡಿ ಬರಲ್ಲ..ಕುಡಿಯೋದು ಸೇದೋದು...ಏನು .ಮಾಡಿದ್ರೂ ಊಹುಂ.ನೋ ಪ್ರೋಬ್ಲಂ. ನನಗೆ ಒಂದು ಕ್ಷಣ ನನ್ನವಳು ಬಬ್ಬಿ ನೆನಪಾಗಿ ಮುಖದ ನರಗಳು ಬಿಗಿಗೊಂಡಿತ್ತು.

ಮದ್ಯ ಬಾಟಲಿ ಎಲ್ಲಿ ಅಡಗಿಸಿಟ್ಟರೂ ತಪ್ಪಿಸಿಡುವಳು ಇಲ್ಲಾ ಸ್ವಲ್ಪ ಚೆಲ್ಲಿ ನೀರು ಬೆರೆಸಿಡುವಳು.....ಸಿಗರೇಟು ಪ್ಯಾಕೆಟು ಒಲೆಗೆಸೆದು ಎಷ್ಟು ಸಲ ನನ್ನ ಕೈಗೆ ಕೆಲಸ ಕೊಟ್ಟು ಕೆನ್ನೆ ಊದಿಸಿಕೊಂಡಿದ್ದಳು. ಎಷ್ಟೋ ಸಾರಿ ಅನಿಸಿದ್ದುಂಟು ಇವಳು ಸೈಕೋ ಇರಬಹುದೇ?

ಮಾಡಿದ ತಪ್ಪನ್ನೇ ಪುನಾಃ ಮಾಡ್ತಾ ಇದಾಳಲ್ಲಾ!? ವಿಚ್ಛೇದನ ನೀಡಲೆ? ಹುಚ್ಚು! ಹಾಗಾದ್ರೂ ಚಿತ್ರೂವಿನಂತ ಹೆಣ್ಣು ಸಿಗೋದು ಏನ್ ಗ್ಯಾರಂಟಿ!?” ಕ್ರಮೇಣ ನಾನೇ ಪರಿಸ್ಥಿತಿ ಯೊಂದಿಗೆ ರಾಜಿ ಮಾಡಿಕೊಂಡೆ...‌.ನೆಮ್ಮದಿಗಾಗಿ....

ಒಂದು ಪೆಗ್ ಏರಿಸಿದರೆ ನಾನು ಕೆಲಸಕ್ಕೆ ಹೋಗುವ ವರೆಗೂ ಮುಖ ಕೊಡದೆ ನನ್ನ ಮುಂದೆ ತಪ್ಪಿಯೂ ಸುಳಿಯದ ಅವಳ ನಡೆ ಅಸಹನೀಯವಾಗಿತ್ತು. ಸಹಜವಾಗಿ  ಸಿಗರೇಟು ಮಧ್ಯ ನನ್ನಿಂದ ದೂರವಾಗಿತ್ತು..‌..ಆದರೆ ಮಾನಸಿಕವಾಗಿ ಒಂದಾಗಲು ನನ್ನಿಂದ ಸಾಧ್ಯವಾಗ್ತಾನೆ ಇಲ್ಲ!!"

ಆಸ್ಪತ್ರೆ ಹೊರಗಡೆ ಸುಜಿ ನನಗಾಗಿ ಕಾದಿದ್ದ.....ಸಮೀಪಿಸುತ್ತಿದ್ದಂತೆ ಮೌನವಾಗಿ ನನ್ನನ್ನು ಅಪ್ಪಿಕೊಂಡ...ಅವನ ಹೃದಯದ ಭಾರ ನನ್ನೊಳಗೆ ಇಮ್ಮಡಿಸಿತು. ಕೆಂಪಗೆ ನರ ಎದ್ದ ಕಣ್ಣುಗಳಿಂದ ಬಾ ಎಂದು ಸನ್ನೆ ಮಾಡಿದ. ವಿನು ನಿಸ್ತೇಜ ಕಣ್ಣುಗಳನ್ನು ಬಿಟ್ಟು ಉದ್ದಕ್ಕೆ ಮಲಗಿದ್ದ. ವೆಂಟಿಲೇಟರ್ ನ ವಿಶೇಷ ಸದ್ದು ನನಗೆ ಭಯ ಹುಟ್ಟಿಸಿತು.

ಹತ್ತಿರ ಸಾಗಿ "ವಿನೂ...." ಅಂದೆ.

ಅಷ್ಟರಲ್ಲಿ ಹತ್ತಿರ ಬಂದ ದಾದಿಯೊಬ್ಬರು ತನ್ನ ತೋರು ಬೆರಳನ್ನ ಬಾಯಿ ಮುಂದಿರಿಸಿ ಸಂಜ್ಞೆ ಮಾಡಿದರು.., ಹೊರಗೆ ನಡೆಯುತ್ತಾ ಸುಜಿ ಬಿಕ್ಕಿದ...."ಕರುಳು ಪೂರ್ತಿ ಬೆಂದಿದೆಯಂತೆ. ಶ್ವಾಸಕೋಶವೂ ವೀಕು"

ನಾನು ಉಗುಳು ನುಂಗಿಕೊಂಡು ಧೀರ್ಘ ಶ್ವಾಸ ಎಳೆದುಕೊಂಡು ಸುಜಿಯ ಹೆಗಲಿಗೆ ಕೈ ಹಾಕಿದೆ. ಹೊರಗೆ ಚಿತ್ರು ಮತ್ತು ಮಕ್ಕಳು ಕುಳಿತಿದ್ದರು.....ಯಾವುದೂ ಅರಿವಿಲ್ಲದಂತೆ ಮುಗ್ಧವಾಗಿ ನಕ್ಕ ಮಕ್ಕಳನ್ನ ಹತ್ತಿರಕ್ಕೆಳೆದುಕೊಂಡೆ.

ಅಷ್ಟರಲ್ಲಿ ಬಾಗಿಲು ತೆರೆದು ಹತ್ತಿರ ಬಂದ ಡಾಕ್ಟರು "ಸಾರಿ..,.ನಾವು ಕೈಲಾದಷ್ಟು ಪ್ರಯತ್ನ ಮಾಡಿದೆವು. ವಿನೀಶ್ ರನ್ನ ಉಳಿಸಿಕೊಳ್ಳಲು ಆಗಲಿಲ್ಲ. ಯಾರಿಗೆ ಯಾರು ಸಮಾಧಾನ ಹೇಳೋದು. ಅತ್ತೆವು...

" ಇನ್ನೇನು ಮಾಡೋದು ನಾವು ಕೊಂಡುಹೋಗುವ ನಮ್ಮವಿನೂನ" ಮಗುವಿನಂತೆ ಅತ್ತ ಸುಜಿ.. ಚಿತ್ರು ಕಣ್ಣು ಮೂಗು ಒರೆಸಿಕೊಳ್ಳುತ್ತಾ,  ಮೊದಲಿಗೆ ಶಾಂತಿಧಾಮ ಇದ್ದ ಜಾಗಕ್ಕೆ.,...ನಂತ್ರ ಮನೆಗೆ... ಅವರ ಆಸೆ ಅದಾಗಿತ್ತು.,.ನಾನು ಈ ವರೆಗೂ ಅವರ ಆಸೆಗೆ ಇಲ್ಲ ಅನ್ನಲಿಲ್ಲ "ಸೆರಗಿನಿಂದ ಬಾಯಿ ಮುಚ್ಚಿಕೊಂಡಳು,  ಚಿತ್ರು ನನ್ನ ಹಲ್ಲುಗಳು ತುಟಿಕಚ್ಚಿಕೊಂಡಿತು.

"ಇಲ್ಲ ಅನ್ನಬೇಕಿತ್ತು ತಂಗೀ .....ಕೆಲವೊಂದಕ್ಕೆ" ಸ್ವಗತವಾಡುತ್ತಾ ಕಣ್ಣುಗಳನ್ನು ಮುಚ್ಚಿಕೊಂಡೆ.

ಉದುರಿದ ಹನಿಯೊಂದು ಮಗುವಿನ ತಲೆ ತೋಯಿಸಿರಬೇಕು. ಮಗು ತಲೆ ಎತ್ತಿ ನನ್ನ ನೋಡಿತು. ಕರ್ಮ ನೆರವೇರಿಸುವೆಡೆಯಲ್ಲೂ ನನಗೆ ನನ್ನ ಬಬ್ಬಿ ಬಹುವಾಗಿ ಕಾಡುತಿದ್ದಳು.

ಕೆಲವೊಂದ್ಕಡೆ ಪ್ರೀತಿಯ ಮುಖ ಒರಟು ಇರಬಹುದು ಅಲ್ವೇ....ನಾವು ಕುರುಡರಾಗಿ ಹೋದ್ರೆ ಅದರ ಹಿಂದಿರುವ ಸೌಂದರ್ಯಾನ ಸವಿಯಲಾರದೆ ಎಷ್ಟು ದೊಡ್ಡ ನಷ್ಟವನ್ನ ತಂದುಕೊಳ್ಳುತ್ತೇವೆ!

ರೈಲು ಸ್ಟೇಷನು ತಲುಪಿದಾಗ ಮಧ್ಯಾಹ್ನವಾಗಿತ್ತು.,...ಉರಿಬಿಸಿಲು ಇಂದೇಕೋ ಏನೂ ಅಲ್ಲ ಎಂದು ಅನಿಸುತಿತ್ತು....ಮನೆ ಕಡೆ ನಡೆದೆ. ಬಾಗಿಲು ತೆಗೆದೇ ಇತ್ತು. ಜಗುಲಿ ದಾಟಿ ಒಳಗಡಿಯಿಟ್ಟು ಅವಳಿಗಾಗಿ ಹುಡುಕಾಡಿದೆ.

ಬಬ್ಬಿ ಒಗೆದು ಒಣಗಿಸಿದ ನನ್ನ ಬಟ್ಟೆಗಳನ್ನು ಅಂದವಾಗಿ ಜೋಡಿಸಿಡುತ್ತಿದ್ದಳು. ದಿನವಿಡೀ ದುಡಿದ ಆಯಾಸ ಅವಳ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಾನು ಅವಳ ಹತ್ತಿರ ಸಮೀಪಿಸಿ "ಬಬ್ಬೀ  ....".ಅಂದೆ. ಕರೆಯ ಬದಲಾವಣೆ ಅವಳು ಗಮನಿಸಿರಬೇಕು.

ಗಾಬರಿಯಿಂದ ಬಂದವಳೇ "ಏನಾಯ್ತು?" ನನ್ನ ಹಣೆ ಕತ್ತು ಮುಟ್ಟಿ ನೋಡಿದಳು " ಇರಿ.,ಉಪ್ಪು ಹಾಕಿ ಲಿಂಬೆ ಶರಬತ್ತು ತರುತ್ತೇನೆ "ಎನ್ನುತ್ತಾ ಒಳ ನಡೆದಳು.

-“ಪದ್ಮ” ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ