ಶಾಂತಿ ಸ್ಥಾಪನೆಗೆ ಕ್ರಮ ಅಗತ್ಯ
ಜಗತ್ತಿನ ಬಹುತೇಕ ಕಡೆ ಹಿಂಸೆ, ಅಶಾಂತಿಯ ಕರಾಳ ಛಾಯೆ ಆವರಿಸಿಕೊಂಡಿದ್ದು, ಅಮಾಯಕರ ಜೀವಬಲಿ ಮುಂದುವರಿದಿದೆ. ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿಯನ್ನು ವಿರೋಧಿಸಿ ಮತ್ತು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಚಳವಳಿ, ದಂಗೆಯಾಗಿ ಬದಲಾಗಿದೆ. ೩೫೦ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶೇಖ್ ಹಸೀನಾ ಜೀವಭಯದಿಂದ ದೇಶವನ್ನು ತೊರೆದಿದ್ದಾರೆ. ಪ್ರಧಾನಿ ನಿವಾಸಕ್ಕೂ ಪ್ರತಿಭಟನಾಕಾರರು ನುಗ್ಗಿ, ದಾಂಧಲೆ ನಡೆಸಿದ್ದಾರೆ. ಬಾಂಗ್ಲಾದೇಶದಲ್ಲಿನ ಕ್ಷಿಪ್ರ ದಂಗೆ ಹಿನ್ನಲೆಯಲ್ಲಿ ೪,೦೯೬ ಕಿ.ಮೀ. ಉದ್ದದ ಭಾರತ - ಬಾಂಗ್ಲಾದೇಶ ಗಡಿಯುದ್ದಕ್ಕೂ ಗಡಿ ಭದ್ರತಾ ಪಡೆಯು (ಬಿ ಎಸ್ ಎಫ್) ಹೈಅಲರ್ಟ್ ಘೋಷಿಸಿದೆ. ಈಶಾನ್ಯ ಭಾರತದ ಐದು ರಾಜ್ಯಗಳು ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿವೆ. ಬಾಂಗ್ಲಾದೇಶದಲ್ಲಿ ತಲೆದೋರಿರುವ ಸಾಮಾಜಿಕ ಪ್ರಕ್ಷುಬ್ಧತೆ ಮತ್ತು ಅದರಿಂದ ಉಂಟಾಗಿರುವ ರಾಜಕೀಯ ಅನಿಶ್ಚಿತತೆಯು ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಒಂದು ಪಾಠವಾಗಿದೆ. ಎಷ್ಟೇ ಜನಪರ ಎನ್ನಿಸಿಕೊಳ್ಳುವಂತಹ ನೀತಿನಿರ್ಧಾರಗಳನ್ನು ಸರ್ಕಾರ ಕೈಗೊಂಡರೂ, ಅನುಷ್ಟಾನಗೊಳಿಸುವಲ್ಲಿ ತೋರಬೇಕಾದ ಸಂಯಮ ಮುಖ್ಯ ಎಂಬುದನ್ನು ಮರೆಯುವಂತಿಲ್ಲ. ಆಡಳಿತ ನಡೆಸುವವರು ಪರ - ವಿರೋಧ ಅಭಿಪ್ರಾಯಗಳೆರಡನ್ನೂ ಗಣನೆಗೆ ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎಂಬುದಕ್ಕೆ ಬಾಂಗ್ಲಾದೇಶದ ಈಗಿನ ಬೆಳವಣಿಗೆಯೇ ಸಾಕ್ಷಿಯಾಗಿದೆ. ನಾಗರಿಕ ಸೇವೆಗಳಲ್ಲಿ ಸದ್ಯ ಇರುವ ಮೀಸಲಾತಿಯನ್ನು ಪರಿಷ್ಕರಿಸುವಂತೆ, ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಒಳಗೊಂಡು, ಎಲ್ಲ ರೀತಿಯ ಕೋಟಾಗಳನ್ನು ರದ್ದುಪಡಿಸುವಂತೆ ಚಳವಳಿಕಾರರು ಆಗ್ರಹಿಸುತ್ತಿದ್ದಾರೆ.
ಶೇಖ್ ಹಸೀನಾ ಜನರ ದನಿಯನ್ನು ನಿರ್ಲಕ್ಷಿಸಿದರೆ ಅಥವಾ ಯುವಕರ ನೋವುಗಳಿಗೆ ಸ್ಪಂದಿಸಲಿಲ್ಲವೇ ಎಂಬ ಬಗ್ಗೆ ವಿಶ್ಲೇಷಣೆ ನಡೆಯುತ್ತಿವೆಯಾದರೂ, ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಸ್ಥಿರತೆ, ಒಂದಷ್ಟು ಅಭಿವೃದ್ಧಿಗೆ ತೆರೆದುಕೊಂಡಿದ್ದ ಬಾಂಗ್ಲಾದೇಶ ಮತ್ತೆ ಹಿಂಸೆಯ ಮುಷ್ಟಿಯಲ್ಲಿ ಸಿಲುಕಿಕೊಂಡಿದೆ. ಅದೇನಿದ್ದರೂ, ಆದಷ್ಟು ಶೀಘ್ರ ಅಲ್ಲಿನ ಪ್ರಕ್ಷುಬ್ಧತೆ ಕೊನೆಗೊಂಡು ಚುನಾಯಿತ ಸರ್ಕಾರ ಸ್ಥಾಪನೆಗೊಳ್ಳಲಿ. ಮಧ್ಯಪ್ರಾಚ್ಯದಲ್ಲೂ ಉದ್ವಿಗ್ನತೆ ನೆಲೆಸಿದೆ. ಪ್ಯಾಲೆಸ್ತೀನ್ ನ ಹಮಾಸ್ ಸಂಘಟನೆಯ ಮುಂಚೂಣಿ ನಾಯಕ ಇಸ್ಮಾಯಿಲ್ ಹನಿಯೆಯನ್ನು ಇರಾನ್ ರಾಜಧಾನಿ ಟೆಹ್ರಾನಿನಲ್ಲಿ ಜುಲೈ ೩೧ರಂದು ಹತ್ಯೆಗಯ್ಯಲಾಗಿದೆ. ಹಮಾಸ್ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ನೇರ ದಾಳಿ ನಡೆಸಲು ಇರಾನ್ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮುಂದಿನ ೨೪ ಅಥವಾ ೪೮ ಗಂಟೆಗಳಲ್ಲಿ ದಾಳಿಗಳನ್ನು ಆರಂಬಿಸಬಹುದು ಎಂದು ಅಮೇರಿಕದ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ದಾಳಿಯನ್ನು ಎದುರಿಸಲು ಇಸ್ರೇಲ್ ಗೆ ಸಹಾಯ ಹಸ್ತ ಚಾಚಲು ಅಮೇರಿಕ ಮುಂದಾಗಿದೆ. ಮಧ್ಯಪ್ರಾಚ್ಯ ಉದ್ವಿಗ್ನ ಸ್ಥಿತಿ ಕುರಿತಂತೆ ಅಮೇರಿಕದ ವಿದೇಶಾಂಗ ಸಚಿವ ಭಾನುವಾರ ಜಿ-೭ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇಸ್ರೇಲ್ ಮೇಲೆ ಇರಾನ್ ದಾಳಿ ಆರಂಭವಾದರೆ ಮತ್ತೊಂದು ಯುದ್ಧ ನಿಶ್ಚಿತ. ರಷ್ಯಾ ಮತ್ತು ಯುಕ್ರೇನ್ ನಡುವಣ ಸಮರ ಎರಡೂವರೆ ವರ್ಷದಿಂದ ಯಾವ ತಾರ್ಕಿಕ ಅಂತ್ಯವನ್ನೂ ಕಾಣದೆ ಸಾಗುತ್ತಲೇ ಇರುವ ನಡುವೆಯೇ ಜಗತ್ತು ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಗಬೇಕಾಗುತ್ತದೆಯೇ? ಇಂಥ ಹೊತ್ತಲ್ಲಿ ಯುದ್ಧವಿರಾಮದ ಪ್ರಯತ್ನಗಳು ಹೆಚ್ಚಿ, ಜಾಗತಿಕ ನಾಯಕರು ಶಾಂತಿಸ್ಥಾಪನೆಯ ಮಾರ್ಗಗಳನ್ನು ಪ್ರಶಸ್ತಗೊಳಿಸುವುದು ಅಗತ್ಯ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೬-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ