ಶಾಂತಿ

ಶಾಂತಿ

ಬರಹ

ಇದೋ ಬಂತು ನನ್ನ ಸರತಿ
ಆಶು-ಕವಿತೆಯ ವಿಷಯ 'ಶಾಂತಿ',
ವೇದಿಕೆಯೇರುತಿರೆ ಕಾಡಿತು ಭೀತಿ
ಸಭೆಯಲುಂಟಾಯ್ತು ಅಶಾಂತಿ.

ಮೆಲ್ಲನುಸುರಿದೆ, ಕಾಪಾಡಿ ಶಾಂತಿ,
ದಯಮಾಡಿ; ಇದೆನ್ನ ನಮ್ರ ವಿನಂತಿ,
ಕ್ರುದ್ಧರಾದರೆ ನೀವು, ಪಸರಿಸದು ಕವನ ಕಾಂತಿ,
ಹೊಮ್ಮವು ಪ್ರಾಸಬದ್ಧ ಪಂಕ್ತಿ.

ಶಾಂತಿ ದೂತ ಗಾಂಧಿ ತಾತ
ಶಾಂತಿಯೊಂದು ದಿವ್ಯ ಮಂತ್ರ
ಶಾಂತಿಯಿಂದಾಯ್ತು ನಾಡು ಸ್ವತಂತ್ರ
ಬ್ರಿಟಿಷ್ ಆಡಳಿತ ಅಂತ್ಯ, ಕೊನೆಯಾಯ್ತು ಪಾರತಂತ್ರ್ಯ.

ಕುಹುಕಿಯೊಬ್ಬ ಅರಚಿದ 'ಡಿಸ್ಕೊ ಶಾಂತಿ';
ಸಭೆ ಗೊಳ್ಳೆನ್ನಲು, ಛಲದಿ ಮೊಳಗಿದೆ ಸ್ವಾಮಿ,
ಡಿಸ್ಕೋಗೂ ಬೇಕು ಶಾಂತಿ
ಶಾಂತಿಯಿಲ್ಲದಿರೆ ಆದೀತು ರಕ್ತ ಕ್ರಾಂತಿ
ಕೊನೆಗಾದೀತು ಭ್ರಾಂತಿ; ಕಾಪಾಡಿ ಶಾಂತಿ.

ಕರೆ ಗಂಟೆ ಎಚ್ಚರಿಸೆ, ನಾನುಲಿದೆ
ನೀವು ಮೆಚ್ಚಿದರೆ ನನಗೆ ಶಾಂತಿ
ಬೇರೆ ಸ್ಪರ್ಧಿಗಳಿಗೆ ದಿಗ್-ಭ್ರಾಂತಿ,
ಕರ ತಾಡನ ಮುಗಿಲು ಮುಟ್ಟೆ

ಉಸುರಿದೆ, ಓಂ ಶಾಂತಿ, ಶಾಂತಿ, ಶಾಂತಿಃ !!

-ಗುವಿಚರಾ