ಶಾಂತೇಶ್ವರನ ವಚನಗಳು

ಶಾಂತೇಶ್ವರನ ವಚನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಜನಾರ್ದನ ದುರ್ಗ
ಪ್ರಕಾಶಕರು
ಚವಿಷ್ಕಾ ಪ್ರಕಾಶನ ದುರ್ಗ, ನಿಡ್ಪಳ್ಳಿ ಗ್ರಾಮ ಮತ್ತು ಅಂಚೆ, ಪುತ್ತೂರು-೫೭೪೨೫೯.
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಶಾಲಾ ಶಿಕ್ಷಕರಾಗಿರುವ ಜನಾರ್ದನ ದುರ್ಗ ಅವರ ಚೊಚ್ಚಲ ಕೃತಿ ‘ಶಾಂತೇಶ್ವರನ ವಚನಗಳು' ಬಿಡುಗಡೆಯಾಗಿದೆ. ಸಂತೋಷದ ಸಂಗತಿ ಎಂದರೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಚೊಚ್ಚಲ ಕೃತಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ಕೃತಿಯು ಪಡೆದುಕೊಂಡಿದೆ. ಹಲವಾರು ಸಮಯದಿಂದ ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸಾಪ್ ಬಳಗಗಳಲ್ಲಿ ತಮ್ಮ ‘ಶಾಂತೇಶ್ವರನ ವಚನಗಳನ್ನು' ಹಂಚಿಕೊಳ್ಳುತ್ತಿದ್ದ ಜನಾರ್ದನ ದುರ್ಗ ಅವರು ತಾವು ಬರೆದ ವಚನಗಳಲ್ಲಿ ಅತ್ಯುತ್ತಮ ಎನಿಸಿದ ೨೦೦ ವಚನಗಳನ್ನು ಆಯ್ದು ಈ ಕೃತಿಗೆ ಬಳಸಿಕೊಂಡಿದ್ದಾರೆ. 

ಡಾ. ವರದರಾಜ ಚಂದ್ರಗಿರಿ ಇವರು ಕೃತಿಯ ಹಾಗೂ ಕವಿಯ ಪರಿಚಯವನ್ನು ಮುನ್ನುಡಿಯಲ್ಲಿ ಬಹಳ ಸೊಗಸಾಗಿ ಮಾಡಿಕೊಟ್ಟಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ಕವಿ ಮಿತ್ರರೂ, ಶಾಲಾ ಅಧ್ಯಾಪಕರೂ ಆಗಿರುವ ಶ್ರೀ ಜನಾರ್ದನ ದುರ್ಗ ಅವರು ಕೊಟ್ಟ ಸುಮಾರು ಇನ್ನೂರು ವಚನಗಳ ಗುಚ್ಛವನ್ನು ಬಿಡಿಸಿ ಓದುತ್ತಿದ್ದಂತೆ, ವಚನ ಸಾಹಿತ್ಯವು ಅದರ ಆಳ-ಅಗಲ-ವಿಸ್ತಾರಗಳ ಜೊತೆಗೆ ಹೊಸ ಕಾಲದಲ್ಲಿ ಅದು ಮರುಹುಟ್ಟು ಪಡೆಯುವ ಪ್ರಕ್ರಿಯೆಯ ಬಗೆಗೂ ಒಂದಷ್ಟು ಯೋಚಿಸುವಂತಾಯಿತು. ಶಾಶ್ವತ ಮೌಲ್ಯಗಳು (eternal values) ಎಂದು ನಾವು ಪಟ್ಟಿ ಮಾಡಬಹುದಾದ ನಮ್ಮ ಜೀವನ ಮೌಲ್ಯವನ್ನು ಕನ್ನಡಕ್ಕೇ ವಿಶಿಷ್ಟವಾದ ವಚನಗಳ ಮೂಲಕ ಹೇಗೆ ಮರು ಸೃಷ್ಟಿಗೆ ಒಳಪಡಿಸಬಹುದು ಎಂಬ ಪ್ರಯತ್ನವನ್ನು ಕವಿ ಇಲ್ಲಿ ಮಾಡಿದ್ದಾರೆ. ಬದುಕುವ ಕಲೆಗೆ ತರಬೇತಿ ನೀಡುವ ಈ ಕಾಲದಲ್ಲಿ ವಚನದಂತಹ ಪುಟ್ಟ ಸಾಹಿತ್ಯದ ಪ್ರಕಾರವೊಂದು ಮಾಡಬಲ್ಲ ಮೌಲ್ಯ ಸಂವಹನ ಸಾಮರ್ಥ್ಯವನ್ನು ಕಂಡಾಗ ಆಶ್ಚರ್ಯವುಂಟಾಗುತ್ತದೆ. ಪುಟ ತೆರೆದು ಓದಿ ಮನನ ಮಾಡುವ ಮನಸ್ಸು ಇರಬೇಕು, ಅಷ್ಟೇ.

ಜನಾರ್ದನ ದುರ್ಗ ಅವರದ್ದು ನಿರ್ಲಿಪ್ತ ಮನಸ್ಸಿನ ಕವಿ ಹೃದಯ. ಸಮಾಜದಲ್ಲಿರುವ ಒಳ್ಳೆಯದನ್ನು ಎತ್ತಿತೋರಿಸುವ, ತಪ್ಪುಗಳನ್ನು ತಿದ್ದುವ ‘ಅಧ್ಯಾಪಕ ಗುಣ' ಅವರಲ್ಲಿ ಸಹಜವಾಗಿದೆ ಹಾಗೆ ತಿಳಿಹೇಳುವಾಗಲೂ ಇನ್ನೊಬ್ಬರಿಗೆ ನೋವಾಗದಂತೆ ಎಚ್ಚರ ವಹಿಸುವ ಕಾಳಜಿಯೂ ಇದೆ. ಇಲ್ಲಿನ ವಚನಗಳಲ್ಲಿ ಆಶಯದಲ್ಲೂ ಆಕೃತಿಯಲ್ಲೂ ಬಸವಣ್ಣನ ವಚನಗಳು, ಸರ್ವಜ್ಞನ ವಚನಗಳು ಮತ್ತು ಡಿವಿಜಿಯವರ ಮಂಕುತಿಮ್ಮನ ಕಗ್ಗ ಈ ಮೂರು ಕನ್ನಡದ ಕ್ಲಾಸಿಕ್ ಗಳು ಮುಪ್ಪುರಿಗೊಂಡ 'ಹದ' ಇದೆ. ಈ ವಚನಗಳು ತಲುಪಬೇಕಾದ ಲಕ್ಷ್ಯದ ಬಗೆಗೂ ಕವಿಗೆ ಸ್ಪಷ್ಟ ಅರಿವು ಇದೆ. ಗುರಿಯೇ ಇಲ್ಲದೆ ಬದುಕುವ ಯುವ ಜನಾಂಗ, ಪ್ರಚಾರ ಪ್ರಸಿದ್ದಿಗಳೇ ಯಶಸ್ಸಿನ ದಾರಿ ಎಂದು ಭಾವಿಸಿರುವ ಹೊಸ ತಲೆಮಾರು, ಬದುಕುವ ಸವಾಲುಗಳನ್ನು ಎದುರಿಸಲಾರದೆ ಆತ್ಮಸ್ಥೈರ್ಯವನ್ನೇ ಕಳೆದುಕೊಂಡ ಸೋತ ಜನ ವರ್ಗ ಇಂಥವರಿಗೆ ಈ ವಚನಗಳು ದೊರೆತರೆ ಏನಾದರೂ ಫಲಕಾರಿಯಾಗಬಹುದು ಎಂಬ ಪ್ರಾಮಾಣಿಕ ಮನಸ್ಥಿತಿ ಇದರ ಹಿಂದಿದೆ. ಇಲ್ಲಿನ ಬಹುತೇಕ ವಚನಗಳು ಕೊರೋನಾ ಕಾಲದಲ್ಲಿ ರಚನೆಯಾದವುಗಳು ಎಂಬುದನ್ನೂ ಇಲ್ಲಿ ಗಮನಿಸಬೇಕು. 

ಜ್ಞಾನ -ಜಾಣಕ್ಕಿಂತ ಮಾನವೀಯತೆಯೇ ಬದುಕಿಗೆ ನೆಮ್ಮದಿ ನೀಡುವ ದಾರಿ ಎಂದು ಪ್ರಾರಂಭವಾಗುವ ಇಲ್ಲಿನ ವಚನಾಮೃತಧಾರೆಯು ತಾಯ್ತನ, ಸಾಹೋದರ್ಯ, ಪರೋಪಕಾರ, ಪ್ರೀತಿ ಹೀಗೆ ಒಂದರ ಹಿಂದೆ ಒಂದೆಂಬಂತೆ ಮೌಲ್ಯವಾಹಕಗಳಾಗಿ ಹರಿದು ಬರುತ್ತವೆ.

ಕೊಟ್ಟದ್ದು ಮರೆಯಲು ಬೇಕು ; ಪಡೆದುದ ಮರೆಯದಿರಬೇಕು (ವ: ೧೩)

ಮರೆವ ಬಾಳುವೆಗಿಂತ ಬೆರೆವ ಬಾಳುವೆ ಸೊಗಸು (ವ: ೧೩೦)

ದಿಟ್ಟಿ ಬದಲಿಸೆ ದಿವ್ಯವಾಗಿಹುದು ಭವಿತವ್ಯ (ವ: ೪೬)

ಏರಿ ನಿಲ್ಲುವ ಬಯಕೆ ಮನುಜ ಜನ್ಮದ ಕೇಡು (ವ: ೨೨)

ತನ್ನತನವೆಂಬುದು ಮಾನವಗೆ ಸಣ್ಣತನ (ವ: ೮೦)

ಇಂತಹ ಸಾಲುಗಳು ಕೇವಲ ಕವಿ ಪ್ರತಿಭೆಯ ಉತ್ಪನ್ನಗಳು ಮಾತ್ರವಲ್ಲ. ಇವುಗಳ ಹಿಂದಿನ ಆಶಯವೂ ಅಷ್ಟೇ ಸಕಾಲಿಕವಾದುವು.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಕೃತಿಗೆ ಶುಭ ಹಾರೈಸಿದ್ದಾರೆ ಪುತ್ತೂರಿನ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್ ಆರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು. ಈ ಕೃತಿಯಲ್ಲಿರುವ ವಚನಗಳು ತಮ್ಮಲ್ಲಿ ಹೇಗೆ ಮೂಡಿದವು ಎಂಬುದನ್ನು ಬಹಳ ಸೊಗಸಾಗಿ ತಮ್ಮ ‘ಮನದಾಳದಿಂದ' ಹೇಳಿದ್ದಾರೆ ಜನಾರ್ದನ ದುರ್ಗ ಇವರು. ಒಂದೆಡೆ ಅವರು ಬರೆಯುತ್ತಾರೆ “ಶಾಂತೇಶ್ವರನ ವಚನವೆಂಬ ರಚನೆಗಳು ಕೆಲವೊಮ್ಮೆ ಸರಳ ಲಯವೊಂದು ಭಾವದೊಂದಿಗೆ ಮಿಲಿತಗೊಂಡು ಅರೆ ಕ್ಷಣದಲ್ಲಿ ರಚನೆಗಳಾಗಿದ್ದೂ ಇದೆ. ಮತ್ತೊಮ್ಮೆ ವಿಷಯ ವಸ್ತು ಮತ್ತು ಪ್ರಾಸದ ನಡುವೆ ಕದನವೇ ಏರ್ಪಟ್ಟು ಆರು ಸಾಲಿಗಾಗಿ ದಿನವನ್ನೇ ಸವೆಸಿದ್ದೂ ಉಂಟು. ಮಗದೊಮ್ಮೆ ಭಾವದೊಂದಿಗೆ ಪ್ರಾಸಗಳು ಚಿಮ್ಮಿ ಹೊಸ ಪದಗಳೆ ಉದ್ಭವಿಸಿ ನನ್ನನ್ನೇ ಬೆರಗುಗೊಳಿಸಿದ್ದುಂಟು. ಇವೆಲ್ಲವನ್ನೂ ಸಾಹಿತ್ಯದ ಮನಸ್ಸುಗಳಿಗೆ ಒಪ್ಪಿಸುತ್ತಿದ್ದೇನೆ. 

ಇಲ್ಲಿ ಶಾಂತೇಶ್ವರ ಎನ್ನುವ ಅಂಕಿತವು ಅಷ್ಟೇ, ನಮ್ಮ ಗ್ರಾಮ ದೇವತೆಯಾದ ಶಾಂತಾ ದುರ್ಗೆ ಹಾಗೂ ಊರಿನ ದೇವರಾದ ಮಹಾಲಿಂಗೇಶ್ವರ ದೇವರ ನೆನಪಿಗಾಗಿ ಶಾಂತ + ಈಶ್ವರ = ಶಾಂತೇಶ್ವರ ಎಂದು ಭಕ್ತಿಯಿಂದ ಅರ್ಪಿಸಿಕೊಂಡಿದ್ದೇನೆ.” 

ಪುಸ್ತಕಕ್ಕೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಹಾಗೂ ಉಪನ್ಯಾಸಕರಾದ ಡಾ. ನರೇಂದ್ರ ರೈ ದೇರ್ಲ. ಪುಸ್ತಕದಲ್ಲಿರುವ ವಚನಗಳು ಶ್ರೀಸಾಮಾನ್ಯರೂ ಅರ್ಥೈಸಿಕೊಳ್ಳುವಂತೆ ಸರಳ ಭಾಷೆಯಲ್ಲಿ ನಿರೂಪಿತವಾಗಿದೆ. 

“ಗೆದ್ದಾಗ ಜಗದಲ್ಲಿ ಮುದ್ದಾಡಿ ಹೊಗಳುವರು !

ಬಿದ್ದಾಗ ಬದಿಗೆ ಸರಿ ಇಲ್ಲದಿರೆ ತುಳಿಯುವರು !

ಗೆದ್ದವನ ಸನಿಹದಲಿ ಸಾಸಿರದ ಜನವುಂಟು

ಬಿದ್ದವನ ಎತ್ತುವರೆ ಮುಚ್ಚುಮರೆ ತಡೆಯುಂಟು !

ಗೆದ್ದವನ ಹಾದಿಯಲಿ ಕಲ್ಲು ಮುಳ್ಳಿನ ನಂಟು

ಬಿದ್ದವಗೆ ಗೆಲುವು ದಿಟ ಶಾಂತೇಶ್ವರ ॥’

ಇಲ್ಲಿರುವುದು ಒಂದು ಉದಾಹರಣೆಯಷ್ಟೇ.  ಭಾಷೆ ಸರಳವಾದರೂ ಈ ವಚನದಲ್ಲಿ ಹುದುಗಿರುವ ಅರ್ಥ ಬಹಳ. ಇಂತಹ ಇನ್ನೂರು ವಚನಗಳು ಈ ಕೃತಿಯಲ್ಲಿವೆ. ಸುಮಾರು ೧೦೦ ಪುಟಗಳ ಈ ಕೃತಿಯನ್ನು ವಚನಕಾರರಾದ ಜನಾರ್ದನ ದುರ್ಗ ಅವರು ತಮ್ಮ ಅಮ್ಮ ‘ಕಮಲ ದುರ್ಗ' ಅವರಿಗೆ ಅರ್ಪಣೆ ಮಾಡಿದ್ದಾರೆ. ನಿಜಕ್ಕೂ ಇಲ್ಲಿರುವ ವಚನಗಳು ‘ನವೀನ ಅವನಿಗೊಂದು ವಿನೂತನ ವಚನ' ವೇ ಆಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.