ಶಾಕಿಂಗ್ ಸಾವುಗಳು...

ಭಾವನಾ ಜೀವಿ ಮನುಷ್ಯ ಬಹುಶಃ ಅತಿಹೆಚ್ಚು ಬದುಕಿನ ಭಾಗವನ್ನು ಕಳೆಯುವುದು ಮತ್ತು ತನ್ನ ಯೋಚನಾ ಸಮಯದಲ್ಲಿ ಹೆಚ್ಚು ಮೀಸಲಿಡುವುದು ಸಾವಿನ ಬಗ್ಗೆ ಚಿಂತಿಸುವುದು ಮತ್ತು ಭಯ ಪಡುವುದು. ಹುಟ್ಟು ಅನಿರೀಕ್ಷಿತ ಸಾವು ಅನಿವಾರ್ಯ ಎಂಬುದು ಸ್ಪಷ್ಟವಾಗಿ ತಿಳಿದಿದ್ದರೂ ಜಾತಸ್ಯ ಮರಣಂ ಧ್ರುವಂ ಎಂಬುದು ಗೊತ್ತಿದ್ದರೂ ಅದನ್ನು ಅರಗಿಸಿಕೊಳ್ಳಲು ಸಾಮಾನ್ಯ ಮನುಷ್ಯರಿಗೆ ಇನ್ನು ಸಾಧ್ಯವಾಗಿಲ್ಲ.
ಕನ್ನಡದ ಪ್ರಖ್ಯಾತ ನಟ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ, ಸ್ನೇಹ ಜೀವಿ ಮಾಸ್ಟರ್ ಲೋಹಿತ್ ಎಂಬ ಪುನೀತ್ ರಾಜ್‍ಕುಮಾರ್ ನಿನ್ನೆ ಅತ್ಯಂತ ಅನಿರೀಕ್ಷಿತವಾಗಿ ಇಲ್ಲವಾಗಿದ್ದು ಬಹುತೇಕ ಜನರಿಗೆ ಒಂದು ಶಾಕಿಂಗ್ ನ್ಯೂಸ್. ಮನುಷ್ಯನ ಸಾಮಾನ್ಯ ಆಯಸ್ಸು ಸುಮಾರು 100 ವರ್ಷಗಳು ಎಂದು ಮತ್ತು ಭಾರತೀಯರ ಈ ಕ್ಷಣದ ಸರಾಸರಿ ಆಯಸ್ಸು ಸುಮಾರು 65 ರ ಆಸುಪಾಸು ಎಂತಲೂ ಹೇಳಲಾಗುತ್ತದೆ. 46 ವಯಸ್ಸಿನ ಅಪ್ಪು, ಆರೋಗ್ಯವಾಗಿದ್ದ ಮತ್ತು ಸದಾ ಚಟುವಟಿಕೆಯಿಂದ ಇದ್ದ ಪವರ್ ಸ್ಟಾರ್ ಹಾಗು ಎಲ್ಲಾ ಆಧುನಿಕ ವೈದ್ಯಕೀಯ ಸೌಕರ್ಯಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳು ಹೊಂದಿದ್ದ ಪುನೀತ್ ದಿಢೀರನೆ ಮರೆಯಾಗಿದ್ದು ಜನರಿಗೆ ಶಾಕಿಂಗ್.
ಅದಕ್ಕೆ ನಿಖರವಾದ ಕಾರಣ ವೈದ್ಯಕೀಯ ವಿಜ್ಞಾನ ಹೇಳಬಹುದು. ಆದರೆ ಬದುಕಿನ ಅನುಭವದ ಆಧಾರದ ಮೇಲೆ ಅಭಿಪ್ರಾಯ ಹೇಳುವುದಾದರೆ, ಈ ರೀತಿಯ ಆಘಾತಕಾರಿ ಸಾವುಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಅಪಘಾತ ಆತ್ಮಹತ್ಯೆ ಜೊತೆಗೆ ಹೃದಯಾಘಾತ ಸಹ ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡುತ್ತದೆ. ಪ್ರಕೃತಿಯ ಭೇದಿಸಾಗದ ಅನೇಕ ವಿಸ್ಮಯಗಳಲ್ಲಿ ಇದೂ ಒಂದು.
ಅಮೆರಿಕದ ಒಂದು ವೈದ್ಯಕೀಯ ಸಂಶೋಧನಾ ಕೇಂದ್ರ ವಿವಿಧ ಕ್ಯಾನ್ಸರ್ ರೋಗಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಕ್ಯಾನ್ಸರ್ ಎಂಬ ಖಾಯಿಲೆಗಳು ನಿರ್ದಿಷ್ಟ ವ್ಯಕ್ತಿಗೆ ಹೇಗೆ ಮತ್ತು ಏಕೆ ಬರುತ್ತದೆ ಎಂದು ಸಂಶೋಧನೆ ಮಾಡಿ ವರದಿ ತಯಾರಿಸಲಾಗುತ್ತದೆ. ಅದರಲ್ಲಿ ಶೇಕಡಾ 90 ರಷ್ಟು ವ್ಯಕ್ತಿಗಳಲ್ಲಿ ನಿರ್ದಿಷ್ಟ ಕಾರಣಗಳನ್ನು ಕಂಡುಹಿಡಿಯಲಾಗುತ್ತದೆ. ಆದರೆ ಉಳಿದ ಶೇಕಡಾ 10 ರಷ್ಟು ಜನರಲ್ಲಿ ಕೆಲವು ಕ್ಯಾನ್ಸರ್ ಕಣಗಳು ಹೇಗೆ ಪ್ರವೇಶಿಸಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಲಾಗದೆ ಅದಕ್ಕೆ ದುರಾದೃಷ್ಟ (Bad luck) ಎಂದು ವರದಿಯಲ್ಲಿ ನಮೂದಿಸಲಾಗಿದೆ. (ಇದನ್ನು ಕೆಲವು ವರ್ಷಗಳ ಹಿಂದೆ ಓದಿದ ನೆನಪು).
ಬಹುಶಃ ಪುನೀತ್ ರಾಜ್‍ಕುಮಾರ್ ಅವರ ಸಾವು ಸಹ ಈ ದುರಾದೃಷ್ಟ ಎಂಬ ಪರಿಧಿಯಲ್ಲಿ ಬರಬಹುದೇ? ಅಥವಾ ಮನುಷ್ಯನ ದೇಹ ಪ್ರಕೃತಿ ಅಥವಾ ದೇಹ ಸಂಸ್ಕೃತಿ, ಆತನ ವಿವಿಧ ಅಂಗಗಳು ಒಂದು ನಿರ್ದಿಷ್ಟ ಸಾಮರ್ಥ್ಯ ಹೊಂದಿದ್ದು ಅದು ಅವರ ಪೂರ್ವಜರ ಅನುವಂಶೀಯ ಗುಣಗಳ ಆಧಾರದ ಮೇಲೆ ಬೆಳೆದು ಬಂದಿದ್ದು ಸ್ಪಷ್ಟವಾಗಿ ಗುರುತಿಸಲು ಇನ್ನೂ ಯಾವ ತಂತ್ರಜ್ಞಾನಕ್ಕೂ ಸಾಧ್ಯವಾಗದೆ ಅಭೇಧ್ಯವಾಗಿ ಉಳಿದಿದೆ. ಸಾಮಾನ್ಯ ಜನರ ಈ ರೀತಿಯ ಸಾವುಗಳು ಎಲ್ಲಾ ಕಾಲಕ್ಕೂ ಘಟಿಸುತ್ತಿದ್ದು ಅದು ಹೆಚ್ಚು ಚರ್ಚೆಗೆ ಬರದೆ ಈಗಿನ ಸಮೂಹ ಸಂಪರ್ಕ ಮಾಧ್ಯಮದ ಕ್ರಾಂತಿಯ ಕಾಲದಲ್ಲಿ ಜನಪ್ರಿಯ ವ್ಯಕ್ತಿಗಳ ಸಾವು ಹೆಚ್ಚು ಪ್ರಚಾರಕ್ಕೆ ಬರುತ್ತದೆ. ಆದರೆ ಇದು ಮೂಲಭೂತವಾಗಿ ಒಂದು ಸಹಜ ಕ್ರಿಯೆ ಎಂದು ಭಾವಿಸಬಹುದೇ?
ಶಾಕಿಂಗ್ ಆಗಿರುವ ಗೆಳೆಯ/ಗೆಳತಿಯರಿಗೆ ಒಂದು ಸಣ್ಣ ಕಿವಿ ಮಾತು. ನಮ್ಮ ನಮ್ಮ ಸಾವುಗಳನ್ನು ಮನದಲ್ಲಿ ಕಲ್ಪಿಸಿಕೊಳ್ಳೋಣ. ಸಾವಿನ ನಂತರ ನಮ್ಮ ದೇಹ ಸ್ಥಭ್ದವಾಗುವುದು ಮತ್ತು ಅದಕ್ಕೆ ನಮ್ಮ ಸುತ್ತಮುತ್ತಲಿನ ಜನರ ಪ್ರತಿಕ್ರಿಯೆ ಜೊತೆಗೆ ನಮ್ಮ ಪ್ರೀತಿಪಾತ್ರರ ಮತ್ತು ಅವಲಂಬಿತರ ಭವಿಷ್ಯದ ಜೀವನ ಹಾಗು ಇಲ್ಲಿಯವರೆಗಿನ ನಮ್ಮ ಹತ್ತಿರದವರ ಅನಿರೀಕ್ಷಿತ ಸಾವಿನ ನಂತರ ಅವರ ಸಂಬಂಧಿಗಳು ಹೇಗೆ ಆ ಬದುಕನ್ನು ಎದುರಿಸಿದರು ಎಂದು ಸ್ವಲ್ಪ ಅಧ್ಯಯನ ಮತ್ತು ಚಿಂತನೆ ಮಾಡಿ. ಆಗ ನಮ್ಮ ಮನಸ್ಸುಗಳಿಗೆ ಒಂದಷ್ಟು ಸಮಾಧಾನ ಸಿಗಬಹುದು. ಬದುಕು ಯಾರಿಗೂ ಶಾಶ್ವತ ಅಲ್ಲ. ಅದೊಂದು ಅನಿವಾರ್ಯ ನಿರ್ಗಮನ ಎಂದು.
ಜೀವನದ - ಜೀವಂತಿಕೆಯ ಬಹುಮುಖ್ಯ ಲಕ್ಷಣಗಳಲ್ಲಿ ಒಂದು, ವಿವಿಧ ಭಾವಗಳನ್ನು ಅನಿವಾರ್ಯವಾಗಿ ಅನುಭವಿಸಲೇ ಬೇಕು. ನಮ್ಮ ಬಾಲ್ಯ, ಆಟ ಪಾಠಗಳು, ಆಹಾರ, ಪ್ರವಾಸ, ಶಿಕ್ಷಣ ಉದ್ಯೋಗ ಯೌವ್ವನ, ಪ್ರೀತಿ ಪ್ರೇಮ ಪ್ರಣಯ, ಹಣ ಅಧಿಕಾರ ಪ್ರಚಾರ, ಮೋಸ ವಂಚನೆ ವಿರಹಗಳು, ಆಕಸ್ಮಿಕ ಅನಿವಾರ್ಯವಾಗಳು, ಸುಖ ಸಂತೋಷಗಳು, ಅದೃಷ್ಟ ದುರಾದೃಷ್ಟಗಳು ಹಾಗೆಯೇ ಈ ರೀತಿಯ ಶಾಕಿಂಗ್ ನ್ಯೂಸ್ ಗಳನ್ನು ಸಹ ಸಹಜವಾಗಿ ಅನುಭವಿಸಲೇ ಬೇಕು. "ಹೋರಾಟ ಮಾಡ ಬೇಕಾಗಿರುವುದು ಬದುಕಲೇ ಹೊರತು ಸಾಯಲು ಅಲ್ಲ......" ಮತ್ತೊಮ್ಮೆ.... ಹುಟ್ಟು ಅನಿರೀಕ್ಷಿತ - ಸಾವು ಅನಿವಾರ್ಯ.... ಇಂದಲ್ಲಾ ನಾಳೆ..... ಸ್ವೀಕರಿಸಲು ಸಿದ್ದವಾಗಲೇ ಬೇಕು, ಇಲ್ಲಿ ಆಯ್ಕೆಗಳಿಲ್ಲ.... ಪುನೀತ್ ರಾಜ್‍ಕುಮಾರ್ ಅವರಿಗೆ ಹೃದಯಾಂತರಾಳದಿಂದ ಭಾವಪೂರ್ಣ ಶ್ರದ್ಧಾಂಜಲಿ.
- 363 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಿಂದ ಸುಮಾರು 34 ಕಿಲೋಮೀಟರ್ ದೂರದ ಬೆಂಗಳೂರು ನಗರ ಜಿಲ್ಲೆಯ ಬೇಗೂರು ಗ್ರಾಮ ತಲುಪಿತು. ಇಂದು 30/10/2021 ಶನಿವಾರ 364 ನೆಯ ದಿನ ನಮ್ಮ ಕಾಲ್ನಡಿಗೆ ಬೆಂಗಳೂರು ನಗರ ಜಿಲ್ಲೆಯ ಬೇಗೂರು ಗ್ರಾಮದಿಂದ ಸುಮಾರು 25 ಕಿಲೋಮೀಟರ್ ದೂರದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕು ತಲುಪಲಿದೆ. ನಾಳೆ 31/10/2021 ಭಾನುವಾರ 365 ನೆಯ ದಿನ ಆನೇಕಲ್ ನಿಂದ ಕೋಣನಕುಂಟೆ ಗ್ರಾಮದ ಕಡೆಗೆ....
-ವಿವೇಕಾನಂದ. ಹೆಚ್.ಕೆ, ಬೆಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ