ಶಾಕುಂತಲೆ
ಸರಿಗಮ ಸಂಗಮ ತಾಳದ ಥಳುಕಿಗೆ
ಇಂದ್ರನ ಸಭೆಯಲಿ ದಣಿವೆಯೆ ಇಲ್ಲದ
ಬಳುಕುತ ಕುಣಿಯುವ ಯಾಂತ್ರಿಕ ಬಂಧನ
ಅರಸಿಕ ಅಮರರ ನೀರಸ ಸರಸದಿ
ರೋಸಿದ ಮೇನಕೆ ಮೌನದಿ ನವೆದಿರೆ || 1 ||
ನಾರದ ನರರನು ಸಭೆಯಲಿ ಹೊಗಳುತ
ವಿಶ್ವಾಮಿತ್ರನ ತಪಸಿನ ತಾಪವು
ಭೂಮಿಯ ಮೀರುತ ಇಂದ್ರನ ಕಾಡುವ
ಸಂಭವ ತಿಳಿಸಲು ತಪವನು ಕೆಡಿಸುತ
ಮನಿಯನು ಒಲಿಸಲು ಮೇನಕೆ ನೇಮಕ || 2 ||
ವಿಶ್ವಾಮಿತ್ರನ ವಿವರದ ತವಕಕೆ
ನಾರದ ಮುನಿಗಳ ನೈಜದ ವಿವರಣೆ
ಹೊರಟಳು ಮೇನಕೆ ಮುನಿಯನು ಸೇರಲು
ಮದನನ ಬಾಣವ ಮುದದಲಿ ಹೂಡುವ
ಪ್ರಣಯದ ಸರಿಗಮ ಪಂಚಮ ರಾಗದ
ವಸಂತ ವನದೊಳು ಮೋಹದ ಮದನಿಕೆ || 3 ||
ಮೇನಕೆ ಕುಣಿದಳು ಮುನಿಗಳ ಮುಂದೆ
ಶೃಂಗಾರ ಸೊಬಗಿನ ಮತ್ತನು ಸೂಸುತ
ತೀರದ ದಾಹದ ಕಾಮದ ತೃಷೆಯಲಿ
ವಿಶ್ವಾಮಿತ್ರನ ಪ್ರಣಯದ ತಂತಿಯ
ಮೀಟಿದ ಮೇನಕೆ ಮೋಹದ ರಾಗಕೆ
ತಪವನು ತೊರೆದನು ಕೌಶಿಕ ಮುನಿಯು || 4 ||
ದೇವ ಮಾನವ ಪ್ರಣಯದ ಪರಿಣಯ
ಶಿಶುವಿನ ಪ್ರಸವದ ಪ್ರಮಾಣಿತ ಪ್ರಣಯದ
ಪಯಣವ ಮುಗಿಸಿದ ಮೇನಕೆ ಕೌಶಿಕ
ನಡೆದರು ಶಿಶುವನು ಅನಾಥೆಯ ಮಾಡಿ
ತಾಯ್ತನವರಿಯದ ಮೇನಕೆ ಮಡಿಲು
ಶಿಶುವನು ಅಪ್ಪದ ತಾಪಸಿ ಕೌಶಿಕ || 5 ||
ಮಾನವ ಲೋಕದ ಕೋಗಿಲೆ ಸಂತತಿ
ಸುರತದ ಸುಖವನು ಸವಿಯುವ ಸಿನಿಕರು
ಶಿಶುವನು ಪೊರೆಯುವ ಹೊರೆಯನು ಒಲ್ಲರು
ತಂದೆಯು ರಸ ಋಷಿ ವಿಶ್ವಾಮಿತ್ರ
ತಾಯಿಯು ಮೇನಕೆ ತ್ರಿಭುವನ ಸುಂದರಿ
ಭೂಮಿಯ ಕಾಡಲಿ ಅನಾಥ ಶಿಶುವು || 6 ||
ಶಕುಂತ ಪಕ್ಷಿಯು ಪೊರೆದವು ಮಗುವನು
ಕಣ್ವನೆ ಕರುಣೆಯ ತಂದೆಯು ಶಿಶುವಿಗೆ
ಶಕುಂತ ಶಿಶುವನು ಶಾಕುಂತಲೆ ಎಂದರು
ಕೌಶಿಕ ಕ್ಷಾತ್ರದ ಮೇನಕೆ ದೈವದ
ವಿಶ್ವಾಮಿತ್ರನ ಯತ್ನದ ತೇಜದ
ವರ್ಣದ ಗುಣಗಳ ಆಕರ ಶಿಶುವದು || 7 ||
ಕಣ್ವರ ಕ್ಷೇತ್ರದ ಕ್ಷೀರವ ಹೀರುತ
ಬೆಳೆದಳು ಬಾಲಿಕೆ ಕಣ್ವರ ಕಣ್ಮಣಿ
ಸಖಿಯರ ಸ್ನೇಹದಿ ಬನದಲಿ ಬಿರಿದಿಹ
ಅಪೂರ್ವ ಪುಷ್ಪದ ಭೃಂಗದ ಭಂಗವ
ತೊಡೆಯಲು ಬಂದ ದುಷ್ಯಂತ ರಾಜನ
ಮನವನು ಹೊಕ್ಕಳು ಕನಸಲು ಕಾಡುತ || 8 ||
ಕಾಳಿದಾಸನ ಕಾವ್ಯದ ಕನ್ನಿಕೆ
ರವಿವರ್ಮನ ಕುಂಚದ ಕುವರಿಗೆ
ಗಂಧರ್ವ ವಿಧಿಯ ವಿವಾಹ ಬಂಧನ
ಪ್ರಕೃತಿ ಪುರುಷನ ಅಪೂರ್ವ ಮಿಲನ
ನೆನಪಿನ ಮುದ್ರೆಯ ಉಂಗುರ ಪ್ರದಾನ
ದುಷ್ಯಂತ ವಿದಾಯದ ವಿರಹದ ಪರ್ವ || 9 ||
ಕಾಡಿನ ಕೋಮಲೆ ಬಾಡಿದ ಮುಖವನು
ನಗೆಯಲಿ ಅರಳಿಸೊ ಸಖಿಯರ ಯತ್ನದ
ವಿಫಲ ಪ್ರಯತ್ನದ ಪರಿಯನು ಮೀರಿದ
ವಿರಹದ ಮೊರೆತಕೆ ಪರಿವೆಯೆ ಮರೆತಿಹ
ಶಕುಂತಲೆ ಪ್ರೇಮದ ದುರಂತ ಸಮಯಕೆ
ದೂರ್ವಾಸ ಮುನಿಗಳ ಆಶ್ರಮ ಪ್ರವೇಶ || 10 ||
ಮಕ್ಕಳ ಮಮತೆಯನರಿಯದ ದೂರ್ವಾಸ
ಅತಿಥಿ ಸತ್ಕಾರದ ಲೋಪದ ಕೋಪದಿ
ಶಪಿಸಿದ ಶಕುಂತಲೆ ಪ್ರಿಯಕರ ಮರೆಯಲು
ಸಖಿಯರು ಶಾಪದ ವಿಶಾಪವ ಕೇಳಲು
ನೆನಪಿನ ಮುದ್ರೆಯ ಮರಳಿಯೆ ತೋರಲು
ಮರೆವಿನ ಶಾಪದ ವಿಮೋಚನೆ ರಾಜಗೆ || 11 ||
ಮುನಿಗಳ ಮುನಿಸಲು ಸುಖಾಂತ್ಯ ಬಯಸಿದ
ಸಖಿಯರು ಸಂತೈಸೆ ಶಕುಂತಲೆ ಮನವ
ಮರೆತನೆ ದೊರೆಯು ಕಾಡಿನ ಬಾಲೆಯ
ಹೃದಯ ಬಿರಿಯುವ ಮೌನದ ರೋದನ
ಬಾರದ ರಾಜನ ಕುಡಿಯದು ಗರ್ಭದಿ
ಶಕುಂತಲೆ ತೊಳಲಿನ ತಳಮಳ ನಿಲ್ಲದು || 12 ||
ಕಣ್ವರ ಗಮನವ ಸಖಿಯರು ಸೂಚಿಸೆ
ಲಜ್ಜಿತ ಮಗಳ ಮನಸಿನ ದುಗುಡವ
ತಿಳಿದಿಹ ಕಣ್ವರು ಒಪ್ಪಿಗೆ ಸೂಚಿಸೆ
ಬಾಲ್ಯದ ದಿನಗಳ ನೆನಪನು ಹೊತ್ತು
ತೊರೆದಳು ತೌರನು ಕಂಬನಿ ಮಿಡಿಯುತ
ಕಣ್ವರ ಕುವರಿಯು ಪತಿಗೃಹ ಸೇರಲು || 13 ||
ಭಾರದ ಹೃದಯದಿ ಗರ್ಭಿಣಿ ಶಕುಂತಲೆ
ಗೌತಮಿ ಜೊತೆಯಲಿ ನಡೆದಳು ನಗರಿಗೆ
ಸಖಿಯರ ಸರಸದ ಕೆಣಕುವ ಕಥೆಯಲಿ
ದುಷ್ಯಂತನರಮನೆ ವಾಸದ ಕನಸಲಿ
ನದಿಯನು ದಾಟುವ ಸಮಯದಿ ತಿಳಿಯದೆ
ಬೆರಳಿನ ಉಂಗುರ ಜಾರಿತು ನೀರಿಗೆ || 14 ||
ದೂರ್ವಾಸ ದುಷ್ಕರ ಶಾಪದ ಪಾಶದ
ಮರೆವಿನ ಬಲೆಯಲಿ ಬಂಧಿತ ಶಕುಂತಲೆ
ಧಾವಿಸೆ ದುಗುಡದಿ ದುಷ್ಯಂತನೆಡೆಗೆ
ಪರಿಚಯ ವಿರದ ಭಾವದ ಮುಖದಲಿ
ದುಷ್ಯಂತ ದೊರೆಯು ಯಾರೆಂದು ಕೇಳಲು
ದುರಂತ ಶಕುಂತಲೆ ಮನಸದು ಮುದುಡಿತು || 15 ||
ಲಜ್ಜೆಯ ತ್ಯಜಿಸಿ ಸಂಕೋಚವ ಬಿಟ್ಟು
ಭೃಂಗದ ಭಂಗದ ಗಂಧರ್ವ ಪರಿಣಯ
ಸುರತ ಸಂಗದಿ ಒಡಲಲಿ ರಾಜನ
ಒಲವಿನ ಕುಡಿಯದು ಬೆಳೆದಿಹ ನೆನಪಿನ
ಸುರುಳಿಯ ಬಿಚ್ಚುತ ಬೆರಳಲಿ ತೊಡಿಸಿದ
ನೆನಪಿನ ಉಂಗುರ ಬೆರಳನು ತೋರಲು || 16 ||
ಉಂಗುರ ವಿಹೀನ ಉಂಗುರದಂಗುಲಿ
ನೋಡಿದ ದುಷ್ಯಂತ ಲೇವಡಿ ಮಾಡಲು
ಸಹಿಸದ ಗೌತಮಿ ಶಕುಂತಲೆ ಒಪ್ಪಿಸಿ
ಕಣ್ವರ ಕುವರಿಯು ಅನೃತ ನುಡಿಯಳು
ಮುನಿಗಳ ಸೂಚನೆ ಮೇರೆಗೆ ಬಂದೆವು
ಸಖಿಯರು ಹೊರಟರು ಶಕುಂತಲೆ ತೊರೆದು || 17 ||
ವಿಧಿ ವಿಲಾಸದ ಬಲೆಯಲಿ ಶಕುಂತಲೆ
ಮೇನಕೆ ವಿಶ್ವಾಮಿತ್ರರ ಮಗಳು
ಕಣ್ವರ ಪ್ರೀತಿಯ ಧಾರೆಯ ಕುವರಿ
ಧರೆಯನಾಳುವ ದೊರೆಯೆ ಪತಿಯು
ಗರ್ಭದಿ ಭಾವಿ ಭರತ ಚಕ್ರೇಶ
ದುಷ್ಯಂತನೆದುರಲೆ ಅನಾಥೆ ಶಕುಂತಲೆ || 18 ||
ತವರಿಗೆ ತೆರಳಲು ಮನಸದು ಒಪ್ಪದು
ನಡೆದಳು ದಿಟ್ಟೆ ದಟ್ಟಡವಿಯ ವಾಸಕೆ
ಮನುಜರಿಗಿಂತಲು ಮೃಗಗಳೇ ಮೇಲು
ಕಾನನ ವಾಸದಿ ಮಗುವಿನ ಜನನ
ಭರತನ ನಾಮದಿ ಪೊರೆದಳು ಮಗನ || 19 ||
ಮನಸಿನ ಮಂಕಲಿ ದುಷ್ಯಂತ ರಾಜನು
ಹಾಸಿಗೆ ಹಿಡಿದನು ರಾಜ್ಯವ ಮರೆತು
ಚಿಂತೆಯ ಮಂತ್ರಿಯು ವೈದ್ಯರ ಕರೆಸಲು
ರಾಜ ವೈದ್ಯರು ಕೈಚೆಲ್ಲಿ ಕುಳಿತರು
ಮನಸಿನ ದೋಷಕೆ ಔಷಧಿ ದೊರೆಯದು
ಆಹಾರ ವಿಹಾರದಿ ರಾಜನು ತೊಡಗಲಿ || 20 ||
ಅರಮನೆ ಅಡಿಗೆಗೆ ಮತ್ಸ್ಯವ ಸೀಳಲು
ಮೀನಿನ ಹೊಟ್ಟೆಯಲಡಗಿದ ಉಂಗುರ
ರಾಜನ ಮುದ್ರೆಯ ಗುರುತಿನ ಉಂಗುರ
ದೊರೆಯಲು ಮಂತ್ರಿಯು ತೋರಲು ದೊರೆಗೆ
ಶಾಪ ವಿಶಾಪದ ಶಕುಂತಲೆ ನೆನಪಲಿ
ದೂರಾಯಿತು ದೊರೆಯ ಮನಸಿನ ಖಿನ್ನತೆ || 21 ||
ಪತ್ನಿಯ ಹುಡುಕಲು ಕಾಡಿಗೆ ಓಡಿದ
ಕಣ್ವರ ಕೇಳಲು ಶಕುಂತಲೆ ದೊರೆಯದೆ
ಕಾಡಲಿ ಬೇಡರ ಪಡೆಯನು ಕೇಳಲು
ದೂರದ ದಟ್ಟನೆ ಕಾಡಿನ ಮಧ್ಯದ
ಕುಟೀರದಲಿರುವ ಮಾಹಿತಿ ಪಡೆದು
ನಡೆದನು ಹುಡುಕಲು ಪತ್ನಿಯ ಪುತ್ರನ || 22 ||
ಸಿಂಹವ ಮಣಿಸುತ ಹಲ್ಲನು ಎಣಿಸುವ
ಸಾಹಸ ಮೆರೆಯುವ ಭರತನ ಕರೆಯಲು
ದುಷ್ಯಂತ ನೋಡಿದ ಪತ್ನಿಯ ಪುತ್ರನ
ಮರೆತಿಹ ತಪ್ಪಿನ ಕ್ಷಮೆಯನು ಯಾಚಿಸೆ
ಶಕುಂತಲೆ ರಾಜನ ತಪ್ಪನು ಮನ್ನಿಸಿ
ಜೊತೆಯಾದಳು ಪತಿಗೆ ಭರತನ ಸಹಿತ || 23 ||
ಭಾರತ ಕಥನದ ದುಷ್ಯಂತ ಪ್ರಸಂಗದ
ಕಾಳಿದಾಸನ ಅಭಿಙಾನ ಶಾಕುಂತಲೆ
ಸಂಸ್ಕೃತ ನಾಟಕ ತುಂತುರು ಹನಿಗಳ
ಪಾವನ ಸ್ನಾನದ ವಿನಯದ ಯತ್ನದ
ಜಯಪ್ರಕಾಶಿತ ಕನ್ನಡ ಕವನ || 24 ||
Comments
ನಿಮ್ಮ ಪದಗಳ ಲಾಸ್ಯದ ಜೊತೆಗೂಡಿಸಿದ
ನಿಮ್ಮ ಪದಗಳ ಲಾಸ್ಯದ ಜೊತೆಗೂಡಿಸಿದ
ಕಥಾ ಕವನ ಚೆನ್ನಿದೆ.
In reply to ನಿಮ್ಮ ಪದಗಳ ಲಾಸ್ಯದ ಜೊತೆಗೂಡಿಸಿದ by Maalu
ಮಾಲುರವರೆ, ನಿಮ್ಮ ಮೆಚ್ಚುಗೆಗೆ
ಮಾಲುರವರೆ, ನಿಮ್ಮ ಮೆಚ್ಚುಗೆಗೆ ವಂದನೆ