ಶಾರಿಕ್ ಹಿಂದಿರುವ ಜಾಲ ಪತ್ತೆ ಹಚ್ಚಿ

ಶಾರಿಕ್ ಹಿಂದಿರುವ ಜಾಲ ಪತ್ತೆ ಹಚ್ಚಿ

ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಪೋಟ ಭಯೋತ್ಪಾದನಾ ಕೃತ್ಯವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಉಗ್ರ ಶಾರಿಕ್ ದೇಶದ ಹಲವೆಡೆ ನಡೆದ ಬಾಂಬ್ ಸ್ಪೋಟ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಮುಂದೆಯೂ ಹಲವು ದಾಳಿಗಳನ್ನು ನಡೆಸಲು ತಯಾರಿ ಮಾಡಿಕೊಂಡಿದ್ದ ಎನ್ನಲಾಗಿದೆ. ಹೀಗಿದ್ದಾಗ ಶಾರಿಕ್ ಏಕಾಂಗಿಯಲ್ಲ ಎಂಬುದು ಸ್ಪಷ್ಟ. ಆತನ ಹಿಂದೆ ದೊಡ್ಡ ಜಾಲವೇ ಇದ್ದು, ಪೊಲೀಸರು ಆ ಜಾಲವನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಉಗ್ರರ ಹೆಡೆಮುರಿ ಕಟ್ಟಬೇಕಿದೆ. ಮಂಗಳೂರು ಹಾಗೂ ಕೊಯಮುತ್ತೂರು ಪ್ರಕರಣಗಳ ತನಿಖೆ ನಡೆಸುತ್ತಿರುವ ಸಂಸ್ಥೆಗಳು ಕೃತ್ಯಗಳಿಗೆ ಕಾರಣರು ಯಾರು, ಅವರು ಯಾವ ಸಂಘಟನೆಗೆ ಸೇರಿದವರು, ಆ ಸಂಘಟನೆಯ ಜಾಲ ಎಲ್ಲೆಲ್ಲಿ ಹರಡಿಕೊಂಡಿದೆ ಎಂಬುದನ್ನು ಪತ್ತೆ ಮಾಡಬೇಕು. ಅದನ್ನು ನಿರ್ಮೂಲಗೊಳಿಸಬೇಕು. ಅಷ್ಟೇ ಅಲ್ಲದೆ, ಯುವಕರು ಭಯೋತ್ಪಾದನೆಯ ಮಾರ್ಗ ಹಿಡಿಯೋದಕ್ಕೆ ಕಾರಣ ಏನು ಎಂಬುದನ್ನೂ ಪತ್ತೆ ಮಾಡಬೇಕು. ಕೆಲವು ಸಂಘಟನೆಗಳನ್ನು ನಿಷೇಧಿಸಿದಾಗ ಅವುಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸುಲಭವಾಗುತ್ತದೆ. ಆದರೆ ಅವೇ ಸಂಘಟನೆಗಳು ಇನ್ನೊಂದು ಹೆಸರಿನಲ್ಲಿ ತಲೆಯೆತ್ತಿ, ಮತ್ತದೇ ಕೃತ್ಯಗಳಲ್ಲಿ ತೊಡಗುತ್ತವೆ. ಆದ್ದರಿಂದ ಕೇವಲ ಸಂಘಟನೆಗಳನ್ನು ನಿಷೇಧಿಸಿದರೆ ಸಾಲದು. ಸಂಘಟನೆಗಳಲ್ಲಿ ಭಾಗಿಯಾಗಿದ್ದವರ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯ. ದ್ವೇಷ ಭಾಷಣಗಳು ಇಂದಿನ ಯುವಕರ ಮನಸ್ಸನ್ನು ಹಾಳು ಮಾಡುತ್ತಿರುವ ಪರಿಣಾಮವೇ ಈಗ ನಡೆಯುತ್ತಿರುವ ಸ್ಪೋಟ, ದಂಗೆ, ದಳ್ಳುರಿಗೆ ಕಾರಣ. ರಾಜಕೀಯ ನಾಯಕರು ತಮ್ಮ ಮತಬ್ಯಾಂಕ್ ಗಳನ್ನು ಭದ್ರಪಡಿಸಿಕೊಳ್ಳಲು ಪರಸ್ಪರ ಧರ್ಮ, ಜಾತಿಗಳ ವಿರುದ್ಧ ಮುಗಿಬೀಳುತ್ತಿದ್ದಾರೆ. ದ್ವೇಷ ಭಾಷಣ ಮಾಡುವ ಮೂಲಕ ಯುವಕರ ಮನಸ್ಸನ್ನು ಹಾಳು ಮಾಡುತ್ತಿದ್ದಾರೆ. ಆ ರೀತಿಯ ಯುವಕರು ಮುಂದೊಂದು ದಿನ ಹಿಂಸಾ ಕೃತ್ಯಕ್ಕೆ ಬಳಕೆಯಾಗುತ್ತಿದ್ದಾರೆ. ಆದ್ದರಿಂದ ದ್ವೇಷ ಭಾಷಣ ಮಾಡುವವರು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರ ವಿರುದ್ಧ ಕ್ರಮ ಜರುಗಿಸುವ ಕೆಲಸ ಆಗಬೇಕು. ಧಾರ್ಮಿಕ ತೀವ್ರವಾದವನ್ನು ತಡೆಯುವ ಹೊಣೆಯು ನಾಗರಿಕ ಸಮುದಾಯದ ಮೇಲೆಯೂ ಇದೆ. ಅದಕ್ಕಿಂತ ಹೆಚ್ಚಾಗಿ ಸರಕಾರ, ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಈ ದಿಸೆಯಲ್ಲಿ ಹೆಚ್ಚು ಕೆಲಸ ಮಾಡಬೇಕು. ಶಾಂತಿ, ಸಾಮರಸ್ಯ ಮೂಡಿಸುವಲ್ಲಿ ಅವರು ಮೇಲ್ಪಂಕ್ತಿ ಹಾಕಿ ಕೊಡಬೇಕು.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೫-೧೧-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ