ಶಾರ್ಟ್ ಹ್ಯಾಂಡ್ ನ ಬಾಲಕ ಚಂದ್ರಶೇಖರ್
ಶೀಘ್ರಲಿಪಿ ಎಂದರೇನೆಂದೇ ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ವಿದ್ಯಾರ್ಥಿಗಳಿಗಂತೂ ಅದು ಹೊಸ ಶಬ್ದ. ಇಂಗ್ಲೀಷ್ನಲ್ಲಿ ಇದನ್ನು ಶಾರ್ಟಹ್ಯಾಂಡ ಎಂದು ಕರೆಯುತ್ತಾರೆ. ಮೌಖಿಕವಾಗಿ ಹೇಳುವುದನ್ನು ಶೀಘ್ರವಾಗಿ ಲಿಪಿ ರೂಪದಲ್ಲಿ ಬರೆದುಕೊಂಡು, ಅದನ್ನು ಮತ್ತೆ ಬರಹ ರೂಪದಲ್ಲಿಳಿಸುವುದೇ ಶೀಘ್ರಲಿಪಿ. ಇದನ್ನು ಬರೆದುಕೊಳ್ಳುವುದಕ್ಕೆಂದೇ ಒಂದು ಲಿಪಿಯಿದೆ. ಇದನ್ನು ಕಲಿಯುವುದು ಕಷ್ಟವಾದ್ದರಿಂದ ರಾಜ್ಯದಲ್ಲಿ ಶೀಘ್ರಲಿಪಿ ಕಲಿತವರ ಸಂಖ್ಯೆ ವಿರಳ. ವಿಶೇಷವೆಂದರೆ ಇತ್ತೀಚಿನ ವಿದ್ಯಾರ್ಥಿಗಳಿಗೆ ಶೀಘ್ರಲಿಪಿಗೆ ಎಷ್ಟೊಂದು ಬೇಡಿಕೆಯಿದೆಯೆಂಬುದೇ ತಿಳಿದಿಲ್ಲ. ಶೀಘ್ರಲಿಪಿ ಕಲಿತವರಿಗೆ ಉದ್ಯೋಗ ಖಾಯಂ ಎಂಬುದೂ ಬಹಳ ಜನ ಪಾಲಕರಿಗೂ ಗೊತ್ತಿಲ್ಲ. ಇತ್ತೀಚೆಗೆ ನ್ಯಾಯಾಂಗ ಇಲಾಖೆಗೆ ಶೀಘ್ರಲಿಪಿ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಇರುವ ಹುದ್ದೆಗಿಂತ ಶೇ.೨೫ರಷ್ಟು ಮಾತ್ರ ಅರ್ಜಿ ಸಲ್ಲಿಸಿದ್ದರೆಂದರೆ ಶೀಘ್ರಲಿಪಿಕಾರರ ಕೊರತೆ ರಾಜ್ಯದಲ್ಲಿ ಎಷ್ಟಿದೆಯೆಂಬುದನ್ನು ತಿಳಿಯಬಹುದಾಗಿದೆ. ಉದ್ಯೋಗ ವಿನಿಮಯ ಕೇಂದ್ರದಲ್ಲಿ ಶೀಘ್ರಲಿಪಿ ಕಲಿತವರ ನೋಂದಾವಣಿಯೇ ಇಲ್ಲದಂತಾಗಿದೆ. ಇಂತಹ ವಿಶೇಷವಾದ ಅಪರೂಪದ ವಿದ್ಯೆಯನ್ನು ೯ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕನೊಬ್ಬ ಕಲಿತಿದ್ದಾನೆ.
ಮುಖ್ಯವಾಗಿ ಎಸ್ಸೆಸ್ಸೆಲ್ಸಿ ಉತ್ತೀರ್ಣಗೊಂಡ ನಂತರ ಕಲಿಯಬೇಕಾದ ಶೀಘ್ರಲಿಪಿಯನ್ನು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ೧೩ ವರ್ಷದ ಬಾಲಕ ಎ.ಚಂದ್ರಶೇಖರ್ ಕಲಿತು ಸಾದಿಸಿದ್ದಾನೆ. ಈತನ ತಂದೆ ಎ.ಸಿ.ಪತ್ರೆಪ್ಪ ಕೂಡ್ಲಿಗಿಯ ನ್ಯಾಯಾಲಯದಲ್ಲಿ ಶೀಘ್ರಲಿಪಿಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಗ್ಲೀಷ್ನ ಯಾವುದೇ ವಿಷಯವನ್ನು ನಾವು ಚಂದ್ರಶೇಖರ್ನಿಗೆ ಹೇಳಿದರೂ, ಅವನು ಅದನ್ನು ಶೀಘ್ರಲಿಪಿಯಲ್ಲಿ ಮೊದಲು ಬರೆದುಕೊಂಡು(ನಿಮಿಶಕ್ಕೆ ೪೦ ಶಬ್ದಗಳ ವೇಗದಲ್ಲಿ) ಮತ್ತೆ ಅದನ್ನು ಬರವಣಿಗೆಯಲ್ಲಿಳಿಸಿ ಒಂದಕ್ಷರವನ್ನೂ ತಪ್ಪಿಲ್ಲದಂತೆ ಹೇಳುತ್ತಾನೆ. ಇಷ್ಟೇ ಅಲ್ಲದೆ ಕಂಪ್ಯೂಟರ್ನಲ್ಲಿಯೂ ಅದನ್ನು ಟೈಪ್ ಮಾಡಿ ತೋರಿಸುತ್ತಾನೆ. ಮುಖ್ಯವಾದ ಸಂಗತಿಯೆಂದರೆ ಶೀಘ್ರಲಿಪಿಯನ್ನು ಚಂದ್ರಶೇಖರ್ ಕೇವಲ ೯ ತಿಂಗಳಿನಲ್ಲಿಯೇ ಕಲಿತು ಸಾಧಿಸಿದ್ದಾನೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು ಇದನ್ನು ಕಲಿಯಲು ಕನಿಷ್ಠ ೨ ವರ್ಷವಾದರೂ ಬೇಕೆಂಬುದು ಗಮನಿಸಬೇಕಾದ ಅಂಶವಾಗಿದೆ. ೮ನೇ ತರಗತಿಯಲ್ಲಿರುವಾಗಲೇ ಇದರಲ್ಲಿ ಆಸಕ್ತಿ ಮೂಡಿಸಿಕೊಂಡ ಚಂದ್ರಶೇಖರ್ ಈ ಮಟ್ಟದ ಸಾಧನೆ ಮಾಡಲು ತಂದೆಯೇ ಪ್ರೇರಣೆ. ಕೂಡ್ಲಿಗಿಯ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಗೋಪಾಲ್ ಅವರೂ ಸಹ ಚಂದ್ರಶೇಖರ್ನ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಾರೆ. ೭ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ, ೮ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಅಭ್ಯಾಸ ಮಾಡುತ್ತಿರುವ ಚಂದ್ರಶೇಖರ್ ಪ್ರಸ್ತುತ ಕೊಟ್ಟೂರಿನ ಮಹಾದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೯ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಓದಿನಲ್ಲೂ ಮುಂದಿರುವ ಚಂದ್ರಶೇಖರ್ನಿಗೆ ಚಿತ್ರಕಲೆ, ಚೆಸ್ ಇತರ ಆಸಕ್ತಿಗಳು. ಪ್ರತಿದಿನವೂ ಕನಿಷ್ಠ ೨೦ರಿಂದ ೩೦ ಪುಟಗಳಷ್ಟು ಶೀಘ್ರಲಿಪಿಯನ್ನು ಅಭ್ಯಾಸ ಮಾಡುತ್ತಿರುವ ಚಂದ್ರಶೇಖರ್ನಿಗೆ ಇದರಲ್ಲೇ ಮತ್ತಷ್ಟು ಸಾಧನೆ ಮಾಡುವ ಆಸೆ. ಶೀಘ್ರಲಿಪಿಯಲ್ಲಿ ಅತಿ ಕಿರಿಯ ವಯಸ್ಸಿನ ಸಾಧಕನೆಂದು ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಗಬೇಕೆಂಬುದು ಈತನ ಬಯಕೆ.
ಚಂದ್ರಶೇಖರ್ನನ್ನು ಸಂಪರ್ಕಿಸುವ ದೂರವಾಣಿ ಸಂಖ್ಯೆ: ೯೪೮೧೩೦೪೮೨೯
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ