ಶಾಲಾಕಾಲೇಜುಗಳಲ್ಲಿ ನೀರಪಾಠ, ಪ್ರಾತ್ಯಕ್ಷಿಕೆ
ಫಸಲು ಬೇಕಿದ್ದರೆ ಹೊಲಗಳಲ್ಲಿ ಬೀಜ ಬಿತ್ತಬೇಕು. ಜಲಜಾಗೃತಿಯ ಫಸಲು ಬೇಕಿದ್ದರೆ ಜಲಸಾಕ್ಷರತೆಯ ಬೀಜ ಬಿತ್ತಬೇಕು. ಎಲ್ಲಿ? ಶಾಲೆಗಳಲ್ಲಿ. ಅದೆಲ್ಲ ಹೇಗೆ ಸಾಧ್ಯ ಅಂತೀರಾ? ಅದು ಸಾಧ್ಯವೆಂದು ತೋರಿಸಿಕೊಟ್ಟ ಮಂಗಳೂರಿನ ಎರಡು ಕಾಲೇಜುಗಳ ನಿದರ್ಶನಗಳಿಲ್ಲಿವೆ.
ಮಂಗಳೂರಿನ ಬಾವುಟಗುಡ್ಡೆಯ ನೆತ್ತಿಯಲ್ಲಿದೆ ಸೈಂಟ್ ಎಲೋಸಿಯಸ್ ಕಾಲೇಜು. ಅಲ್ಲಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಳೆಕೊಯ್ಲಿನ ವಿಷಯ ತಿಳಿದಾಗ ಹೊಸಲೋಕವೊಂದರ ಪರಿಚಯ. ಪ್ರಿನ್ಸಿಪಾಲರೊಂದಿಗೆ ಮಳೆಕೊಯ್ಲಿನ ಯೋಜನೆಯ ಪ್ರಸ್ತಾಪ. ಪೆನ್ನು ಹಿಡಿಯುತ್ತಿದ್ದ ಕೈಗಳು ಹಾರೆಪಿಕ್ಕಾಸು ಹಿಡಿದವು. ಕಾಲೇಜಿನ ಹಾಸ್ಟೆಲಿನ ಹತ್ತಿರ ಮಳೆನೀರ ಇಂಗುಗುಂಡಿಗಳ ಮತ್ತು ತಡೆಗೋಡೆಗಳ ನಿರ್ಮಾಣ. ಚಾವಣಿ ನೀರನ್ನೂ ಇಂಗುಗುಂಡಿಗೆ ತಿರುಗಿಸಿದರು ವಿದ್ಯಾರ್ಥಿಗಳು. ಇದರಿಂದಾಗಿ ಅವರು ಕಣ್ಣಾರೆ ಕಂಡ ಪರಿಣಾಮ, "ಗುಂಡಿಯ ನೀರೆಲ್ಲ ನಾಲ್ಕೇ ಗಂಟೆಗಳಲ್ಲಿ ಇಂಗುತ್ತದೆ." ಆ ಕಾಲೇಜಿಗೆ ’ಮಂಗಳೂರಿನಲ್ಲಿ ಮಳೆಕೊಯ್ಲು ಮಾಡಿದ ಮೊದಲ ಕಾಲೇಜು’ ಎಂಬ ಹೆಗ್ಗಳಿಕೆ. ’ಕಾಲೇಜಿನ ಕ್ಯಾಂಪಸ್ಸಿನಲ್ಲಿ ಬೀಳುವ ಎಲ್ಲ ನೀರನ್ನೂ ನಾವು ಇಂಗಿಸುತ್ತೇವೆ; ಒಂದು ಹನಿಯನ್ನೂ ಚರಂಡಿಗೆ ಹರಿಯಲು ಬಿಡುವುದಿಲ್ಲ’ ಎಂಬುದು ಅವರ ನಿರ್ಧಾರ.
ಮಂಗಳೂರಿನಿಂದ ಹತ್ತು ಕಿಮೀ ದೂರದಲ್ಲಿದೆ ವಾಮಂಜೂರು. ಅಲ್ಲಿಂದ ೨ ಕಿಮೀ ದೂರದಲ್ಲಿದೆ ಪಿಲಿಕುಳ ನಿಸರ್ಗಧಾಮ. ಅಲ್ಲೀಗ ವಾರಾಂತ್ಯಗಳಲ್ಲಿ ಜನರ ಜಾತ್ರೆ. ಅಲ್ಲೇ ಹತ್ತಿರದಲ್ಲಿದೆ ಹಳ್ಳಿ ಕಿರಾಮ್. ಅಲ್ಲಿನ ೪೫ ಸಣ್ಣ ಹಿಡುವಳಿ ಕುಟುಂಬಗಳ ಅಡಿಕೆ ತೋಟಗಳು ಕೊಳ್ಳದಲ್ಲಿವೆ. ಕಿರಾಮಿನ ಗುಡ್ಡದ ಆ ಬದಿಯ ಬಯಲಿನಲ್ಲಿ ೫ ಸೆಂಟ್ಸ್ ಮನೆಗಳು. ಅವುಗಳಿಗೆ ನಳ್ಳಿ ನೀರು ಒದಗಿಸಲಿಕ್ಕಾಗಿ ಕೊಳವೆಬಾವಿಗಳನ್ನು ಕೊರೆದಾಗಿನಿಂದ ಕಿರಾಮಿಗೆ ನೀರಿನ ಸಮಸ್ಯೆ. ಅದಕ್ಕೆ ಅಲ್ಲಿನವರು ಕಂಡುಕೊಂಡ ಪರಿಹಾರ ಮಳೆನೀರ ಕೊಯ್ಲು.
’ಮಳೆನೀರಿಂಗಿಸುವ ವಿದ್ಯೆ ನಿಮಗೆ ಮುಂಚೆ ಗೊತ್ತಿರಲಿಲ್ಲವೇ?’ ಎಂಬ ಪ್ರಶ್ನೆಗೆ ಅಲ್ಲಿಯ ಹಿರಿಯರೊಬ್ಬರ ಉತ್ತರ, ’ಗೊತ್ತಿದ್ದರೆ ನಾನು ಸುಮ್ಮನಿರುತ್ತಿದ್ದೆನೇ? ಹತ್ತು ವರುಷ ಮುಂಚೆಯೇ ಈ ಕೆಲಸ ಮಾಡುತ್ತಿದ್ದೆ.’ ಕಿರಾಮ್ ಜನರಿಗೆ ಈ ವಿದ್ಯೆ ಕಲಿಸಿದವರು, ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನವರು. ಅಲ್ಲಿನ ಇಬ್ಬರು ಪ್ರಾಧ್ಯಾಪಕರು ಮಳೆನೀರ ಕೊಯ್ಲಿನ ಪ್ರಸ್ತಾಪವನ್ನು ಹಳ್ಳಿಯ ತರುಣರ ಮುಂದಿಟ್ಟರು. ಇದೆಲ್ಲ ಹೊಸತಾದರೂ ಅವರು ಉತ್ಸಾಹ ತೋರಿದರು. ಗುಡ್ಡಗಳಲ್ಲಿ ಹಾಗೂ ತೋಟಗಳಲ್ಲಿ ಮಳೆನೀರ ಕೊಯ್ಲಿಗಾಗಿ ಒಂದು ಸಮಿತಿ ಹಾಗೂ ಯೋಜನೆ ತಯಾರು. ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಕಾರ್ಮೆಲ್ ರೀಟಾರಿಂದ ಆರ್ಥಿಕ ಹಾಗೂ ವಿದ್ಯಾರ್ಥಿಗಳ ಸಹಾಯದ ಭರವಸೆ.
ಕಿರಾಮ್‌ನಲ್ಲಿ ಆಸಕ್ತರ ಜಮೀನಿನಲ್ಲಿ ಕೆಲಸ ಶುರು. ಒಬ್ಬೊಬ್ಬರ ಜಮೀನಿನಲ್ಲಿ ಒಂದು ವಾರ ಕೆಲಸ. ಇಬ್ಬರು ಆಳುಗಳ ಕೂಲಿ ಆಯಾ ಕುಟುಂಬದವರು ಕೊಟ್ಟರೆ ಇನ್ನಿಬ್ಬರದು ಕಾಲೇಜಿನ ವತಿಯಿಂದ ಪಾವತಿ. ಇದರೊಂದಿಗೆ ಊರಿನ ೧೫ - ೨೦ ಜನರ ಶ್ರಮದಾನ. ಕಿರಾಮ್ ಕುಟುಂಬಗಳ ಒಗ್ಗಟ್ಟು ಎಲ್ಲ ಹಳ್ಳಿಗಳಿಗೂ ಮಾದರಿ. ಇದನ್ನೇ ಬಳಸಿಕೊಂಡು, ಸೈಂಟ್ ಆಗ್ನೆಸ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳು ಮಳೆಕೊಯ್ಲಿನ ರಚನೆಗಳನ್ನು ನಿರ್ಮಿಸುವ ಯೋಜನೆ ಕಾರ್ಯಗತಗೊಳಿಸಿದ್ದು ವಿಶೇಷ.
ಹಲವಾರು ಶಾಲೆಗಳಲ್ಲಿ ಮಳೆಕೊಯ್ಲಿನ ಬಗ್ಗೆ ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ನಡೆಸುತ್ತಾರೆ. ಒಂದೊಂದು ಶಾಲೆಯಲ್ಲಿ ಒಬ್ಬರು ಮೇಸ್ಟ್ರು ಅಥವಾ ಟೀಚರ್ ಒಂದು ಹೆಜ್ಜೆ ಮುಂದಿಟ್ಟರೆ ಸಾಕು - ಶಾಲೆಯಲ್ಲೇ ಮಳೆನೀರ ಕೊಯ್ಲಿನ ಪ್ರಾತ್ಯಕ್ಷಿಕೆ ಮಾಡಲು ಸಾಧ್ಯ. ದಕ್ಷಿಣ ಕನ್ನಡದ ಅನೇಕ ಶಾಲೆಗಳಲ್ಲಿ ಇಂತಹ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಸರಕಾರದ ದೇಣಿಗೆಗೆ ಕಾಯಬೇಕಾಗಿಲ್ಲ. ಶಾಲಾಮಕ್ಕಳು ಎನ್.ಎಸ್.ಎಸ್. ಕಾರ್ಯಕ್ರಮದ ಅಂಗವಾಗಿ ಇದನ್ನು ಮಾಡಬಹುದು. ಈ ವ್ಯವಸ್ಥೆಗೆ ಕೆಲವು ನೂರು ರೂಪಾಯಿಗಳ ವೆಚ್ಹ ಬಂದರೂ ಊರಿನವರೇ ಅದನ್ನು ದೇಣಿಗೆ ನೀಡಬಲ್ಲರು.
ಇದರಿಂದೇನು ಲಾಭ? ಶಾಲಾ ವಠಾರದಲ್ಲಿ ಹಾಗೂ ಅದರ ಸುತ್ತಮುತ್ತಲಿನ ಬಾವಿಗಳಲ್ಲಿ ನೀರಿನ ಲಭ್ಯತೆ ಹೆಚ್ಚುತ್ತದೆ. ಈ ಯಶೋಗಾಥೆ ಶಾಲಾಮಕ್ಕಳಿಂದ ಅವರ ಹೆತ್ತವರನ್ನು ಮುಟ್ಟುತ್ತದೆ. ತಮ್ಮ ತಮ್ಮ ಊರಿನ ಶಾಲೆಯಲ್ಲೇ ಇರುವ ಮಳೆನೀರಕೊಯ್ಲು ಹಾಗೂ ನೀರಿಂಗಿಸುವ ಮಾದರಿ ಆ ಕೆಲಸಕ್ಕೆ ಮುಂದಾಗಲು ಹಲವರಿಗೆ ಪ್ರೇರಣೆ ನೀಡಬಲ್ಲುದು, ಅಲ್ಲವೇ?