ಶಾಲಾಮಕ್ಕಳಿಂದ ಜಲಜಾಗೃತಿ

ಶಾಲಾಮಕ್ಕಳಿಂದ ಜಲಜಾಗೃತಿ

"ಅದು ನನ್ನ ನೀರಿನ ಟ್ಯಾಂಕ್. ಅದರಿಂದ ಏನು ಬೇಕಾದರೂ ಮಾಡಿಕೊಳ್ತೇನೆ. ಅದನ್ನು ಕೇಳಲಿಕ್ಕೆ ನೀವ್ಯಾರು?"

"ನಾನು ಯಾರಂತ ಗೊತ್ತುಂಟಾ? ನನ್ನ ಟ್ಯಾಂಕ್ ಮೊದಲು ಭರ್ತಿ ಆಗಬೇಕು. ಇಲ್ಲಾಂದ್ರೆ ನಿಮ್ಮ ಟ್ಯಾಂಕಿಗೆ ಬೆಂಕಿ ಕೊಡ್ತೇನೆ."

ಇದನ್ನು ಹೇಳಿದವರು ಯಾರು? ದೇಶದ ರಾಜಧಾನಿ ನವದೆಹಲಿಯ ಪ್ರಧಾನ ಪ್ರದೇಶವಾದ ವಸಂತಕುಂಜದ ನಿವಾಸಿಗಳು.

ಅವರು ಈ ಮಾತುಗಳನ್ನು ಹೇಳಿದ್ದು ಯಾರಿಗೆ? "ನಿಮ್ಮ ಟ್ಯಾಂಕಿನಿಂದ ನೀರು ಉಕ್ಕಿ ಹರಿದು ಪೋಲಾಗುತ್ತಿದೆ. ನಿಮ್ಮ ನೀರಿನ ಪಂಪ್ ಬಂದ್ ಮಾಡಿ" ಎಂದು ವಿನಂತಿಸಿದ ಶಾಲಾಮಕ್ಕಳಿಗೆ.

ಇದೆಲ್ಲದರ ಹಿನ್ನೆಲೆ ಏನು? ವಸಂತಕುಂಜ ಪ್ರದೇಶದ ನಿವಾಸಿಗಳಿಗೆ ಹಲವು ವರುಷಗಳಿಂದ ನೀರಿನ ಪರದಾಟ ತಪ್ಪಿಲ್ಲ. ಆದರೂ ಹಲವಾರು ಮನೆಗಳವರಿಗೆ ನೀರೆಂದರೆ ಅಸಡ್ಡೆ. ಉದಾಹರಣೆಗೆ ಪಂಪ್ ಚಾಲೂ ಮಾಡಿದರೆ ಓವರ್‍ಹೆಡ್ ಟ್ಯಾಂಕ್ ತುಂಬಿದೊಡನೆ ನಿಲ್ಲಿಸುತ್ತಿರಲಿಲ್ಲ. ಕುಡಿಯುವ ನೀರು ಗಂಟೆಗಟ್ಟಲೆ ಉಕ್ಕಿ ಹರಿದು ಪೋಲಾಗುತ್ತಿತ್ತು. ಎಪ್ರಿಲ್ ೨೦೦೯ರಲ್ಲಿ ಅಲ್ಲಿನ ಕೆಲವು ಶಾಲಾಮಕ್ಕಳು ಈ ಸಮಸ್ಯೆ ಕೈಗೆತ್ತಿಕೊಂಡರು. ೯೦೦ ಮನೆಗಳಿರುವ ತಮ್ಮ ಕಾಲೊನಿಯಲ್ಲಿ ಜಲಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದರು.  

ಮರುದಿನದಿಂದ ಪ್ರತಿ ದಿನ ಬೆಳಗ್ಗೆ ಕಾಲೊನಿಯಲ್ಲಿ ಈ ಶಾಲಾಮಕ್ಕಳ ಸಣ್ಣ ತಂಡಗಳ ದಂಡಯಾತ್ರೆ ಆರಂಭ. ಅದಕ್ಕಾಗಿ ದಿನದಿನವೂ ಆ ಕಾಲೊನಿಯ ಒಂದು ರಸ್ತೆಯ ಆಯ್ಕೆ. ಅಲ್ಲಿ ನಡೆದು ಹೋಗುವಾಗ, ಯಾವುದಾದರೂ ಮನೆಯ ಓವರ್‍ಹೆಡ್ ಟ್ಯಾಂಕಿನಿಂದ ನೀರು ಉಕ್ಕಿ ಹರಿಯುತ್ತಿದ್ದರೆ, ಆ ಮನೆಯ ಬಾಗಿಲು ತಟ್ಟುತ್ತಿದ್ದರು. ಮನೆಯವರೊಂದಿಗೆ "ನೀರಿನ ಕೊರತೆ ನಮ್ಮ ಕಾಲೊನಿಯ ಸಮಸ್ಯೆ. ನಿಮ್ಮ ಟ್ಯಾಂಕಿನಿಂದ ನೀರು ಪೋಲಾಗುತ್ತಿದೆ. ನಿಮ್ಮ ಪಂಪ್ ನಿಲ್ಲಿಸಿ" ಎಂದು ವಿನಂತಿಸುತ್ತಿದ್ದರು.

ತಮ್ಮ ಸಾಹಸದ ಬಗ್ಗೆ ಮದರ್ಸ್ ಇಂಟರ್‍ನ್ಯಾಷನಲ್ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಸಿದ್ಧಾರ್ಥ ವಾರ್‍ಷ್ನೇಯ ಹೇಳುತ್ತಾನೆ, "ಅವರಲ್ಲಿ ಕೆಲವರಿಗೆ ತಮ್ಮ ತಪ್ಪು ತಿಳಿಯುತ್ತಿತ್ತು. ಅವರು ತಕ್ಷಣವೇ ಪಂಪ್ ನಿಲ್ಲಿಸುತ್ತಿದ್ದರು. ಆದರೆ ಹಲವರು ನಮ್ಮನ್ನು ಗದರಿಸಿ, ರಪ್ಪನೆ ಬಾಗಿಲು ಮುಚ್ಚುತ್ತಿದ್ದರು."

ಅವನ ತಮ್ಮ ಕೌಸ್ತುಭನ ಅನುಭವ ಹೀಗಿದೆ: "ಬೇಸಗೆ ರಜೆಯಲ್ಲಿ ಪ್ರತಿ ದಿನ ಬೆಳಗ್ಗೆ ನಮ್ಮ ಜಲಜಾಗೃತಿ ಅಭಿಯಾನ. ಈಗ (ಜುಲೈ ೨೦೦೯ರಲ್ಲಿ)  ನಮ್ಮ ಶಾಲೆಗಳು ಪುನರಾರಂಭವಾಗಿವೆ. ಹಾಗಾಗಿ ನಾವೀಗ ಪ್ರತೀ ಭಾನುವಾರ ಹೋಗುತ್ತಿದ್ದೇವೆ. ನಾವು ವಿನಂತಿಸಿದ ನಂತರ ಹತ್ತು ಮನೆಯವರಾದರೂ ಸೋರುತ್ತಿದ್ದ ಟ್ಯಾಂಕ್ ರಿಪೇರಿ ಮಾಡಿಸಿದ್ದಾರೆ."

ತಮ್ಮ ಅನುಭವಗಳನ್ನು ಆಧರಿಸಿ, ಈ ಶಾಲಾಮಕ್ಕಳು ಜಲಜಾಗೃತಿ ಬಗ್ಗೆ ಒಂದು ಬೀದಿನಾಟಕವನ್ನೇ ರಚಿಸಿದ್ದಾರೆ. ಬಕೆಟ್‍ಗಳನ್ನು ಬಡಿಯುತ್ತಾ ಈ ಬೀದಿನಾಟಕದ ಪ್ರದರ್ಶನವನ್ನೂ ನಡೆಸುತ್ತಿದ್ದಾರೆ. ನಾಟಕದ ಮೊದಲ ಅಂಕದಲ್ಲಿ ಕಾಲೊನಿಯ ಜನರ ಪ್ರತಿಕ್ರಿಯೆಗಳ ಅಭಿನಯ. ಎರಡನೇ ಅಂಕದಲ್ಲಿ, ಒಂದು ವರುಷದ ಬಳಿದ ಒಂದು ಬಕೆಟ್ ನೀರಿಗಾಗಿ ಕಾಲೊನಿಯ ಜನರು ಜಗಳವಾಡುವ ದೃಶ್ಯ. ಕೊನೆಯ ಅಂಕದಲ್ಲಿ, ಮುಂದೊಂದು ದಿನ ನೀರಿಲ್ಲದೆ ಚಡಪಡಿಸುವ ಜನರು ಚಟಪಟನೆ ಸಾಯುವ ದೃಶ್ಯ.

ಈ ಶಾಲಾಮಕ್ಕಳಿಗೆ ಆರಂಭದಿಂದಲೂ ಮಾರ್ಗದರ್ಶನ ನೀಡಿದವರು "ನಿವಾಸಿಗಳ ಕ್ಷೇಮ ಸಂಘ"ದ ಉಪಾಧ್ಯಕ್ಷರಾದ ಅನುರಾಧ ಮೆಹ್‍ರೋತ್ರ. "ನಾವು ಜಲಜಾಗೃತಿ ಅಭಿಯಾನ ಆರಂಭಿಸಿದಾಗ ಇದ್ದವರು ಕೇವಲ ಐದು ಮಕ್ಕಳು. ಈಗ ಈ ತಂಡದಲ್ಲಿ ಇಪ್ಪತ್ತು ಶಾಲಾಮಕ್ಕಳಿದ್ದಾರೆ. ನಾವು ಹಿರಿಯರು ಮನೆಮನೆಗೆ ಹೋಗಿ ವಿನಂತಿಸಿದಾಗ ಮನೆಯವರು ರೇಗುತ್ತಿದ್ದರು. ಆದರೆ ಶಾಲಾಮಕ್ಕಳು ವಿನಂತಿಸಿದಾಗ ಸ್ಪಂದಿಸುತ್ತಿದ್ದಾರೆ’, ಎನ್ನುತ್ತಾರೆ ಅವರು. ಜುಲೈ ೨೦೦೯ರ ಎರಡನೇ ವಾರದಲ್ಲಿ ನವದೆಹಲಿಗೆ ಹೋಗಿದ್ದಾಗ ಇವನ್ನೆಲ್ಲ ತಿಳಿದುಕೊಂಡೆ.

ಅಂದ ಹಾಗೆ ಜಲಜಾಗೃತಿ ಅಭಿಯಾನದ ಶಾಲಾಮಕ್ಕಳ ತಂಡದ ಹೆಸರು "ಟ್ಯಾಂಕಿ ಟ್ರೂಪರ್ಸ್".  ಆ ತಂಡದ ಸದಸ್ಯರೆಲ್ಲರೂ ಈಗ ಜಲಯೋಧರು. ನಿಮ್ಮ ಊರಿನಲ್ಲಿ ಜಲಜಾಗೃತಿಗಾಗಿ ಇಂತಹ ಶಾಲಾಮಕ್ಕಳ ಜಲಯೋಧರ ಸೈನ್ಯ ಕಟ್ಟುವಿರಾ?