ಶಾಲಾ ಮಕ್ಕಳಿಗೆ ಮಳೆಗಾಲದಲ್ಲೂ ರಜೆ ಇರಲಿ !
ಹೌದು, ಈ ವರ್ಷದ ಮಳೆಗಾಲದ ಮಳೆಯ ರೌದ್ರಾವತಾರ ಕಂಡು ನನ್ನ ಮನದಲ್ಲಿ ಮೂಡಿದ ಭಾವನೆ ಇದು. ಈ ಮಳೆಗಾಲದಲ್ಲಿ ಪ್ರತೀ ರಾತ್ರಿ ನಮ್ಮ ಕಾಲೇಜಿನ ವಾಟ್ಸಾಪ್ ಬಳಗದಲ್ಲಿ ಕಂಡು ಬರುತ್ತಿದ್ದ ಮೆಸೇಜ್ ಅಂದರೆ ‘ನಾಳೆ ಶಾಲೆಗೆ ರಜೆ ಉಂಟಾ?’ ಎಂಬುದಾಗಿರುತ್ತಿತ್ತು. ಮಕ್ಕಳಿಗಿಂತ ಅಧಿಕ ಚಿಂತೆ ಅವರ ಪೋಷಕರಿಗೆ. ಮಕ್ಕಳ ಯೂನಿಫಾರಂ ಒಣಗಿಲ್ಲ ಎನ್ನುವ ಚಿಂತೆ ಒಬ್ಬರದ್ದಾದರೆ, ಮನೆಯ ಸುತ್ತ ನೀರು ನಿಂತಿದೆ, ವಾಹನ ಹೊರ ತೆಗೆಯಲು ಆಗುತ್ತಿಲ್ಲ ಎನ್ನುವುದು ಮತ್ತೊಬ್ಬರ ಸಮಸ್ಯೆ. ಹೀಗೆ ಪೋಷಕರ ಸಮಸ್ಯೆಯ ಜೊತೆಗೆ ಮಕ್ಕಳದ್ದು ಶಾಲೆಗೆ ಹೋಗದೇ ಇರಲು ನಾನಾ ರೀತಿಯ ತಕರಾರು. ಡ್ರೆಸ್ ಒದ್ದೆಯಾದರೆ ತರಗತಿಯಲ್ಲಿ ಕುಳಿತುಕೊಳ್ಳಲು ಕಷ್ಟ. ಮಳೆ ನೀರಿನಲ್ಲಿ ನಡೆದಾಡಲು ಕಷ್ಟ. ಶಾಲೆಯ ಮಾಡು ಸೋರುತ್ತಿದೆ. ತರಗತಿಯಲ್ಲಿ ನೀರು ನಿಂತಿದೆ. ಹೀಗೆ ಹಲವಾರು ಸಮಸ್ಯೆಗಳು. ಈ ಕಾರಣದಿಂದ ಮಳೆಗಾಲದಲ್ಲಿ ಕಡ್ಡಾಯವಾಗಿ (ಬೇಸಿಗೆ ರಜೆಯ ರೀತಿ) ರಜೆ ನೀಡುವುದು ಅಪೇಕ್ಷಣೀಯ.
ಹಿಂದಿನ ತಿಂಗಳುಗಳಲ್ಲಿ ಜೋರಾದ ಮಳೆ ಸುರಿಯುತ್ತಿದ್ದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಅಥವಾ ತಹಶೀಲ್ದಾರರು ರಜೆಯನ್ನು ಘೋಷಣೆ ಮಾಡುತ್ತಿದ್ದರು. ಹೀಗೆ ರಜೆ ನೀಡಿದ ಪರಿಣಾಮವಾಗಿ ಶಾಲಾ ಮಕ್ಕಳಿಗೆ ಸುಮಾರು ೧೦ ಕ್ಕೂ ಅಧಿಕ ದಿನಗಳು ಮಳೆಗಾಲದ ರಜೆ ದೊರೆತವು. ರಜೆ ನೀಡಿದ್ದು ಖಂಡಿತಾ ತಪ್ಪಲ್ಲ. ಏಕೆಂದರೆ ಮಳೆಯಿಂದ ಮಕ್ಕಳಿಗಾಗಬಹುದಾದ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಈ ರಜೆ ನೀಡುವ ಅಗತ್ಯ ಖಂಡಿತಕ್ಕೂ ಇದೆ. ಆದರೆ ರಜೆಯ ಕಾರಣದಿಂದ ಪಾಠಗಳು ನಿಗದಿತ ಸಮಯದಲ್ಲಿ ಮುಗಿಯುತ್ತಿಲ್ಲ. ಓರ್ವ ಶಿಕ್ಷಕರನ್ನು ಮಾತನಾಡಿಸಿದಾಗ ಅವರು ನಿಗದಿತ ಸಮಯದಲ್ಲಿ ಮುಗಿಯಬೇಕಾಗಿದ್ದ ಪಾಠಗಳಿಂದ ಇನ್ನೂ ತುಂಬಾ ಹಿಂದೆ ಇದ್ದಾರೆ. ಇದನ್ನು ಸರಿದೂಗಿಸುವುದು ಹೇಗೆ?
ಜಿಲ್ಲಾಡಳಿತದ ಮತ್ತು ಶಿಕ್ಷಣ ಇಲಾಖೆಯ ಪ್ರಕಾರ ಈ ಪಾಠಗಳನ್ನು ಶನಿವಾರ ಮಧ್ಯಾಹ್ನ, ಸಾಧ್ಯವಾದರೆ ರವಿವಾರ ಅಥವಾ ಸರಕಾರಿ ರಜಾ ದಿನಗಳಂದು ಮಾಡಿ ಪೂರ್ಣಗೊಳಿಸಬೇಕು. ಕಳೆದ ವರ್ಷ ಇದೇ ರೀತಿ ಮಾಡಿ ಪಾಠಗಳನ್ನು ಮುಗಿಸಲಾಗಿತ್ತು. ಇಲ್ಲಿರುವ ಸಮಸ್ಯೆಯೆಂದರೆ ಈಗ ಬಹುತೇಕ ಮಕ್ಕಳು ಶಾಲೆಯ ರಜಾ ಸಮಯದಲ್ಲಿ ಅಂದರೆ ಶನಿವಾರ ಮತ್ತು ಆದಿತ್ಯವಾರಗಳಂದು ಕರಾಟೆ, ನೃತ್ಯ, ಚಿತ್ರಕಲೆ, ವಿವಿಧ ಆಟೋಟಗಳ ತರಬೇತಿಗೆ ಹೋಗುತ್ತಿರುತ್ತಾರೆ. ಕಡ್ಡಾಯವಾಗಿ ಶಾಲಾ ಚಟುವಟಿಕೆಗಳನ್ನು ಈ ಸಮಯದಲ್ಲಿ ಮಾಡಿದರೆ ಆ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ಪೋಷಕರು ಆ ತರಗತಿಗಳಿಗೆ ದುಬಾರಿ ಫೀಸು ಕಟ್ಟಿರುತ್ತಾರೆ. ಇದರ ನಷ್ಟವನ್ನು ಭರಿಸುವವರು ಯಾರು?
ಇದರ ಬದಲಾಗಿ ಬೇಸಿಗೆಯಲ್ಲಿ ನೀಡುವ ಬೇಸಿಗೆ ರಜೆಯ ಅವಧಿಯಿಂದ ಹತ್ತು ದಿನಗಳನ್ನು ಕಡಿತಗೊಳಿಸಿ ಅದನ್ನು ಮಳೆಗಾಲದ ಸಮಯದಲ್ಲಿ ಸಂದರ್ಭಾನುಸಾರ ನೀಡುವುದು ಉತ್ತಮ. ಮಳೆಗಾಲದಲ್ಲಿ ಅಷ್ಟು ರಜೆಗಳನ್ನು ನೀಡುವ ಪ್ರಮೇಯ ಬಾರದೇ ಇದ್ದರೆ ಆ ಉಳಿದ ರಜೆಗಳನ್ನು ದಸರಾ ಸಮಯದಲ್ಲಿ ನೀಡಬಹುದು. ಬೇಸಿಗೆ ರಜೆ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಇದ್ದು, ಬಹುತೇಕ ಶಾಲೆಗಳು ಮೇ ಕೊನೆಯ ವಾರದಲ್ಲಿ ಅಥವಾ ಜೂನ್ ೧ ರಂದು ಪ್ರಾರಂಭವಾಗುತ್ತವೆ. ಇದನ್ನು ಸ್ವಲ್ಪ ಬದಲಾಯಿಸಿ ಮೇ ೨೧ರಂದು ಶಾಲೆ ಪ್ರಾರಂಭವಾಗುವಂತೆ ಮಾಡಿದರೆ ಹತ್ತು ದಿನಗಳು ಲಭಿಸುತ್ತವೆ. ಈ ಹತ್ತು ದಿನಗಳನ್ನು ಮಳೆಗಾಲದಲ್ಲಿ ಜೋರಾದ ಮಳೆ ಬಂದಾಗ ಅಥವಾ ನೆರೆ ಬಂದಾಗ ನೀಡಿದರೆ ಶಾಲೆಯಲ್ಲಿನ ಪಾಠಗಳಿಗೆ ತೊಂದರೆಯಾಗುವುದಿಲ್ಲ. ಈ ರಜೆಗಳಿಗಾಗಿ ಶನಿವಾರದ ಮತ್ತು ಸರಕಾರಿ ರಜೆಗಳನ್ನು ಬಳಸಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಈಗಾಗಲೇ ಬಹಳಷ್ಟು ಮಂದಿ ಈ ವಿಧಾನಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಈಗಾಗಲೇ ಮಳೆಗಾಲದ ಸಮಯದಲ್ಲಿ ಹತ್ತು ದಿನಗಳಿಗೂ ಅಧಿಕ ಸಮಯವನ್ನು ರಜೆಯ ಕಾರಣಕ್ಕೆ ಉಪಯೋಗ ಮಾಡಿರುವುದರಿಂದ ದಸರಾ ರಜೆಯಲ್ಲಿ ಕಡಿತವಾಗುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಹಬ್ಬದ ಸಂಭ್ರಮ ಆಚರಣೆ ಮಾಡಲು ಎಲ್ಲಿಗೂ ಪ್ರವಾಸ ಹೋಗಲು ಸಮಯವೇ ಲಭಿಸುವುದಿಲ್ಲ. ಎರಡು ಮೂರು ದಶಕಗಳ ಹಿಂದೆ ಮಧ್ಯಾವಧಿ ರಜೆ (ದಸರಾ) ಒಂದು ತಿಂಗಳು ಇರುತ್ತಿತ್ತು. ಕ್ರಿಶ್ಚಿಯನ್ ಶಾಲೆಗಳು ಈ ರಜೆಯಲ್ಲಿ ಒಂದು ವಾರ ಕಡಿಮೆ ಮಾಡಿ ಕ್ರಿಸ್ ಮಸ್ ಹಬ್ಬಕ್ಕಾಗಿ ರಜೆ ಕೊಡುತ್ತಿದ್ದರು. ಈಗ ರಜೆಯ ಸ್ವರೂಪವೇ ಬದಲಾಗಿದೆ. ಕೆಲವೊಮ್ಮೆ ರಜೆ ನೀಡುವ ಸಮಯದಲ್ಲಿ ನವರಾತ್ರಿ ಹಬ್ಬವೇ ಇರುವುದಿಲ್ಲ. ಇವೆಲ್ಲವನ್ನು ಸರಿ ಪಡಿಸಲು, ಮಳೆಗಾಲದಲ್ಲೂ ವಿದ್ಯಾರ್ಥಿಗಳಿಗೆ ರಜೆ ನೀಡಲು ಬೇಸಿಗೆ ರಜೆಯನ್ನು ಕಡಿತಗೊಳಿಸುವುದು ಸೂಕ್ತ ಎನ್ನುವುದು ಬಹುತೇಕರ ಅನಿಸಿಕೆ.
ಚಿತ್ರ ಕೃಪೆ: ಅಂತರ್ಜಾಲ ತಾಣ