ಶಾಲಾ ಮಕ್ಕಳಿಗೆ ರಾಗಿಮಾಲ್ಟ್ : ಅಪೌಷ್ಟಿಕತೆ ತಡೆಗೆ ಉತ್ತಮ ಕ್ರಮ

ಶಾಲಾ ಮಕ್ಕಳಿಗೆ ರಾಗಿಮಾಲ್ಟ್ : ಅಪೌಷ್ಟಿಕತೆ ತಡೆಗೆ ಉತ್ತಮ ಕ್ರಮ

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಡಿಸೆಂಬರ್ ನಿಂದ ರಾಗಿ ಮಾಲ್ಟ್ ನೀಡುವುದಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಪ್ರಕಟಿಸಿರುವುದು ಅಪೌಷ್ಟಿಕತೆ ತಡೆಯುವ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆ. ಶಾಲೆಗಳಲ್ಲಿ ಈಗಾಗಲೇ ಬಿಸಿಯೂಟ ನೀಡಲಾಗುತ್ತಿದೆ. ಅಲ್ಲದೆ ಕ್ಷೀರಭಾಗ್ಯದಡಿ ಹಾಲು ಕೊಡಲಾಗುತ್ತಿದೆ. ಇದರ ಜತೆಗೆ ವಾರದಲ್ಲಿ ೨ ದಿನ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಚಿಕ್ಕಿ ಅಥವಾ ಬಾಳೆ ಹಣ್ಣನ್ನು ಸರ್ಕಾರ ನೀಡುತ್ತಿದೆ. ಇದೀಗ ಹಾಲಿನ ಜತೆಗೆ ರಾಗಿ ಮಾಲ್ಟ್ ನೀಡಲು ತೀರ್ಮಾನಿಸಿದ್ದು, ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಶಾಲಾ ಮಕ್ಕಳಿಗೆ ಈಗಾಗಲೇ ನೆರೆಯ ಆಂಧ್ರಪ್ರದೇಶದಲ್ಲಿ ರಾಗಿ ಮಾಲ್ಟ್ ಕೊಡಲಾಗುತ್ತಿದೆ. ಇದೀಗ ಕರ್ನಾಟಕ ಕೂಡ ವಿದ್ಯಾರ್ಥಿಗಳಲ್ಲಿನ ಪೌಷ್ಟಿಕಾಂಶ ಕೊರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದಿಟ್ತ ಹೆಜ್ಜೆಯನ್ನು ಇಟ್ಟಿರುವುದು ಸ್ವಾಗತಾರ್ಹ ಕ್ರಮ. ರಾಗಿ ಮಾಲ್ಟ್ ನಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶ ಇದೆ. ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇದು ಬಹಳ ಪ್ರಯೋಜನಕಾರಿ ಎಂಬುದು ಧೃಢಪಟ್ಟಿರುವ ಸಂಗತಿ.

ಭಾರತೀಯ ಮಕ್ಕಳನ್ನು ಅಪೌಷ್ಟಿಕತೆ ಗಂಭೀರವಾಗಿ ಕಾಡುತ್ತಿರುವುದು ಸ್ಪಷ್ಟ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವೇ ಕೆಲ ತಿಂಗಳ ಹಿಂದೆ ನೀಡಿದ್ದ ಮಾಹಿತಿ ಪ್ರಕಾರ, ದೇಶದಲ್ಲಿ ೧೪ ಲಕ್ಷ ಮಕ್ಕಳು ತೀವ್ರ ರೀತಿಯ ಅಪೌಷ್ಟಿಕತೆ ಸಮಸ್ಯೆಯನ್ನು ಎದುರಿಸುತ್ತಿವೆ. ೪೩ ಲಕ್ಷ ಮಕ್ಕಳು ಅಪೌಷ್ಟಿಕತೆಯ ಬಾಧೆಗೆ ಒಳಗಾಗಿವೆ. ಅಪೌಷ್ಟಿಕತೆ ಗಂಭೀರ ಸ್ವರೂಪದಲ್ಲಿ ಇರುವ ಮಕ್ಕಳ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಯಾವುದೇ ಸಣ್ಣ ಕಾಯಿಲೆ ಬಂದರೂ ಅಂತಹ ಮಕ್ಕಳಿಗೆ ಮಾರಣಾಂತಿಕವಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಸರ್ಕಾರದ ತೀರ್ಮಾನ ಒಳ್ಳೆಯದೇ. ಆದರೆ ಇದರಿಂದ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿ ಮೇಲೆ ಮತ್ತಷ್ಟು ಒತ್ತಡ ಬೀಳುತ್ತದೆ. ವಿವಿಧ ಬೇಡಿಕೆಗಳಿಗಾಗಿ ಬಿಸಿಯೂಟ ಸಿಬ್ಬಂದಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಕೆಲಸಕ್ಕೆ ತಕ್ಕುದಾದ ಸಂಬಳ ಸಿಗುತ್ತಿಲ್ಲ ಎಂಬುದು ಅವರ ಪ್ರಮುಖ ದೂರು. ಇಂತಹ ಪರಿಸ್ಥಿತಿಯಲ್ಲಿ ಹೊಸ ಕೆಲಸವನ್ನು ಸರ್ಕಾರ ಅವರಿಗೆ ಹಚ್ಚುತ್ತಿದೆ. ಆ ಸಿಬ್ಬಂದಿ ಸರ್ಕಾರದ ಯೋಜನೆಗೆ ಅಸಹಕಾರ ಕೊಡದೇ ಇರಬಹುದು. ಆದರೆ ಹೊಸ ಯೋಜನೆ ತರುವಾಗ ಅವರನ್ನೂ ವಿಶ್ವಾಸಕ್ಕೆ ಪಡೆದು, ಅವರ ಸಮಸ್ಯೆಯನ್ನೂ ಪರಿಹರಿಸುವ ಕೆಲಸವಾದರೆ ಯೋಜನೆ ಅತ್ಯುತ್ತಮವಾಗಿ ಜಾರಿಗೆ ಬರುವುದರಲ್ಲಿ ಸಂದೇಹವಿಲ್ಲ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೮-೧೧-೨೦೨೩  

 ಚಿತ್ರ ಕೃಪೆ: ಇಂಟರ್ನೆಟ್ ತಾಣ