ಶಾಲಾ ಶಿಕ್ಷಣ : ಮಕ್ಕಳ ಜೀವನಕ್ಕೆ ಸುಭದ್ರ ಬುನಾದಿಯಾಗಲಿ

ಶಾಲಾ ಶಿಕ್ಷಣ : ಮಕ್ಕಳ ಜೀವನಕ್ಕೆ ಸುಭದ್ರ ಬುನಾದಿಯಾಗಲಿ

ಈ ವಾರದಿಂದ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ. ಮೊದಲ ೨ ದಿನಗಳ ಕಾಲ ಶಾಲೆಗಳಲ್ಲಿ ಸಿದ್ಧತಾ ಕಾರ್ಯಗಳು ನಡೆಯಲಿದ್ದರೆ ಬುಧವಾರದಿಂದ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯಲಿವೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಕ್ಕಳ ಶೈಕ್ಷಣಿಕ ಜೀವನದ ಮೊದಲ ಹೆಜ್ಜೆಗಳೆಂದೇ ಪರಿಗಣಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮಕ್ಕಳನ್ನು ತರಗತಿಯ ಶಿಕ್ಷಣಕ್ಕೆ ಒಗ್ಗಿಕೊಳ್ಳುವಂತೆ ಮಾಡುವ ಮತ್ತು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ವೇದಿಕೆಯನ್ನೊದಗಿಸಿಕೊಡುವ ಮೂಲಕ ಅವರ ಭವಿಷ್ಯಕ್ಕೆ ಈ ಹಂತದಲ್ಲಿಯೇ ಭದ್ರವಾದ ಬುನಾದಿ ಹಾಕುವ ಕೆಲಸ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳ ಹೆತ್ತವರಿಂದಾಗಬೇಕು.

ಇತೀಚಿನ ವರ್ಷಗಳಲ್ಲಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪ್ರಬಲ ಪೈಪೋಟಿ ನೀಡುವ ಜತೆಯಲ್ಲಿ ಫಲಿತಾಂಶದಲ್ಲೂ ಗಮನಾರ್ಹ ಸಾಧನೆ ತೋರುತ್ತಿದೆ. ಈ ಹಿನ್ನಲೆಯಲ್ಲಿ ಸರಕಾರಿ ಶಾಲೆಗಳತ್ತ ಮಕ್ಕಳ ಹೆತ್ತವರು ದೃಷ್ಟಿ ಹರಿಸತೊಡಗಿದ್ದು, ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರ್ಪಡೆಗೊಳಿಸಲು ಆಸಕ್ತಿ ತೋರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಕಳೆದ ದಶಕದ ಅವಧಿಯಲ್ಲಿ ಶಿಕ್ಷಣದಲ್ಲಿ ಮಹತ್ವದ ಮಾರ್ಪಾಡುಗಳನ್ನು ಮಾಡಲಾಗಿದ್ದು ಮಕ್ಕಳು ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಾಗಲು ವಿವಿಧ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸರಕಾರ ರೂಪಿಸಿರುವ ಎಲ್ಲ ಯೋಜನೆಗಳ ಜಾರಿಯಲ್ಲೂ ಶಿಕ್ಷಕರು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದು ಸಹಜವಾಗಿಯೇ ಫಲಿತಾಂಶಗಳು ಗೋಚರಿಸತೊಡಗಿವೆ.

ಇವೆಲ್ಲದರ ಹೊರತಾಗಿಯೂ ಸರಕಾರಿ ಶಾಲೆಗಳಲ್ಲಿನ್ನೂ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಸುಭದ್ರವಾದ ಕಟ್ಟಡ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅತ್ಯಗತ್ಯವಾಗಿರುವ ಸಾಧನ, ಸಲಕರಣೆಗಳು, ಶೌಚಾಲಯ... ಹೀಗೆ ಹಲವಾರು ಕೊರತೆ, ಸಮಸ್ಯೆಗಳು ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿವೆ. ಈ ನಿಟ್ಟಿನಲ್ಲಿ ಸರಕಾರ ಇನ್ನಷ್ಟು ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಕ್ಕೆ ಸರಕಾರ ಒಪ್ಪಿರುವುದರಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಅಷ್ಟೇನೂ ಬಾಧಿಸದು ಎಂದು ನಿರೀಕ್ಷಿಸಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಪಾಲಿಗೆ ಆಶಾಕಿರಣವಾಗಿರುವ ಸರಕಾರಿ ಶಾಲೆಗಳನ್ನು ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳು ಇನ್ನಷ್ಟು ಸಶಕ್ತವಾಗಿ ಮುನ್ನಡೆಯುವಂತಾಗಲು ಕೇವಲ ಸರಕಾರ ಮಾತ್ರವಲ್ಲದೆ ಸಮಾಜದಿಂದಲೂ ಸಹಕಾರ ಮತ್ತು ಪ್ರೋತ್ಸಾಹದ ಅಗತ್ಯವಿದೆ.

ಇನ್ನು ಖಾಸಗಿ ಶಾಲೆಗಳು ಕೂಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಾ ಬಂದಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆಯಿಂದಾಗಿಯೇ ಶಿಕ್ಷಣದಲ್ಲಿ ಕರ್ನಾಟಕ ದೇಶದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. 

ಈ ಬಾರಿಯ ಶೈಕ್ಷಣಿಕ ವರ್ಷ ಯಾವುದೇ ವಿವಾದ, ಗೊಂದಲಗಳಿಲ್ಲದೆ ಸಾಂಗವಾಗಿ ಪೂರ್ಣಗೊಂಡು ದೇಶದ ಭಾವೀ ಪ್ರಜೆಗಳಾಗಿರುವ ಮಕ್ಕಳ ಮುಂದಿನ ಶೈಕ್ಷಣಿಕ ಜೀವನಕ್ಕೆ ಭದ್ರವಾದ ತಳಪಾಯವನ್ನು ಹಾಕುವಂತಾಗಲಿ. ೨೦೨೩-೨೪ರ ಶೈಕ್ಷಣಿಕ ವರ್ಷ ಮಕ್ಕಳು ಮತ್ತು ಶಿಕ್ಷಕರ ಪಾಲಿಗೆ ಆಶಾದಾಯಕವಾಗಿರಲಿ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೯-೦೫-೨೦೨೩    

ಚಿತ್ರ ಕೃಪೆ: ಅಂತರ್ಜಾಲ ತಾಣ