ಶಾಲೆಗಳನ್ನು ದುರಸ್ತಿ ಮಾಡಿ
ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಬೋಧನೆ ಕಾರ್ಯ ಜತೆಗೇ ಇನ್ನೂ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅವರಿಗೆ ಒಂದಲ್ಲ ಒಂದು ಹೆಚ್ಚುವರಿ ಹೊಣೆಗಾರಿಕೆಯನ್ನು ಸರಕಾರ ವಹಿಸುತ್ತಲೇ ಬಂದಿದೆ. ಬಿಸಿಯೂಟದಿಂದ ಹಿಡಿದು, ಗಣತಿಯವರೆಗೂ ಅವರಿಗೆ ನಾನಾ ಹೊಣೆಯನ್ನು ನೀಡಲಾಗುತ್ತಿದೆ. ಈಗ ದುಃಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳಿಂದ ಮಕ್ಕಳನ್ನು ರಕ್ಷಿಸುವ ಹೊಣೆಯನ್ನೂ ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ! ವಾಸ್ತವದಲ್ಲಿ ಶಿಕ್ಷಣ ಇಲಾಖೆಯು ಆರಂಭವಾದುವುಕ್ಕಿಂತ ಮುಂಚೆಯೇ ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಶಾಲೆಗಳನ್ನು ದುರಸ್ತಿ ಮಾಡಬೇಕಿತ್ತು. ಆದರೆ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಇಲಾಖೆಯು ಅದರ ಜವಾಬ್ದಾರಿಯನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಹಿಸಿ ಸುತ್ತೋಲೆ ಹೊರಡಿಸಿದೆ.
'ದುರ್ಬಲ ಶಾಲೆಗಳಲ್ಲಿರುವ ಮಕ್ಕಳ ರಕ್ಷಣೆ ಹೊಣೆ ನಿಮ್ಮದೇ ಜವಾಬ್ದಾರಿ' ಎಂಬ ಅಂಶ ಸುತ್ತೋಲೆಯಲ್ಲಿದೆ. ಜತೆಗೆ, ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳು ಮತ್ತು ಶೌಚಾಲಯ ಬಳಸಬೇಡಿ, ಕಟ್ಟಡದಿಂದ ಮಕ್ಕಳನ್ನು ತಕ್ಷಣ ಸ್ಥಳಾಂತರ ಮಾಡಬೇಕು. ಸ್ಥಳೀಯ ಸಂಸ್ಥೆಗಳ ನೆರವು ಪಡೆದು ಶಾಲೆಗಳನ್ನು ಸ್ವಚ್ಛಗೊಳಿಸಬೇಕು ಎಂಬ ಇನ್ನಿತರ ಸಂಗತಿಗಳು ಸುತ್ತೋಲೆಯಲ್ಲಿದೆ. ಈ ಸುತ್ತೋಲೆಯನ್ನು ಗಮನಿಸಿದರೆ ಬಹುತೇಕ ಮುಖ್ಯ ಶಿಕ್ಷಕರು ಭಯದಲ್ಲೇ ಕಾರ್ಯನಿರ್ವಹಿಸುವುದು ನಿಶ್ಚಿತ. ಏಕೆಂದರೆ, ರಾಜ್ಯದಲ್ಲಿರುವ ಒಟ್ಟು ೪೮,೪೮೬ ಶಾಲೆಗಳ ಪೈಕಿ ಹತ್ತು ಸಾವಿರಕ್ಕೂ ಅಧಿಕ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಹಲವು ಕಟ್ಟಡಗಳು ಕುಸಿದು ಬೀಳುವ ಹಂತದಲ್ಲಿದ್ದು, ಮಳೆ ಬಂದು ಹಲವು ಶಾಲೆಗಳು ಸೋರುತ್ತಿವೆ. ಹಾಗೆಯೇ, ಸಮರ್ಪಕ ನಿರ್ವಹಣೆಯಿಲ್ಲದೆ ಬಹುತೇಕ ಸರಕಾರಿ ಶಾಲಾ ಕಟ್ಟಡಗಳು ಅಪಾಯದ ಸ್ಥಿತಿಯಲ್ಲಿವೆ. ಹಾಗಾಗಿ, ಮಕ್ಕಳ ರಕ್ಷಣೆ ಹೊಣೆ ನಿಮ್ಮದೇ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಬದಲು ಅಪಾಯಕಾರಿ ಶಾಲೆಗಳನ್ನು ರಿಪೇರಿ ಮಾಡುವುದು ಸೂಕ್ತ. ಶಾಲೆಗಳನ್ನು ಸುಸ್ಥಿತಿಯಲ್ಲಿಡುವುದು ಇಲಾಖೆಯ ಜವಾಬ್ದಾರಿ ಮತ್ತು ಹೊಣೆಗಾರಿಕೆ. ಆದರೆ, ಇದರಿಂದ ನುಣುಚಿಕೊಳ್ಳುತ್ತಿರುವ ಪ್ರಯತ್ನ ಈ ಸುತ್ತೋಲೆ ಸ್ಪಷ್ಟವಾಗಿದೆ.
ಸ್ಥಳೀಯ ಸಂಸ್ಥೆಗಳ ನೆರವು ಪಡೆದು ಶಾಲೆಗಳನ್ನು ಸ್ವಚ್ಛಗೊಳಿಸುವಂತೆಯೂ ತಿಳಿಸಲಾಗಿದೆ. ಈ ಅಂಶವು, ಇಲಾಖೆಯು ಅನುದಾನ ಕೊರತೆಯಿಂದ ಬಳಲುತ್ತಿರುವುದನ್ನು ಎತ್ತಿ ತೋರಿಸುತ್ತದೆ. ವಾಸ್ತವದಲ್ಲಿ ನಗರ ಪ್ರದೇಶಗಳಲ್ಲಾಗಲಿ, ಗ್ರಾಮೀಣ ಪ್ರದೇಶಗಳಲ್ಲಾಗಲಿ ಹೆಚ್ಚುವರಿ ಅನುದಾನವೇ ಇರುವುದಿಲ್ಲ. ಮೊದಲಾದರೆ ಸರ್ವ ಶಿಕ್ಷಾ ಅಭಿಯಾನದಲ್ಲಾದರೂ ನಿಧಿ ದೊರೆಯುತ್ತಿತ್ತು. ಈಗ ಅದೂ ಇಲ್ಲ, ಸ್ಥಳೀಯ ಸಂಸ್ಥೆಗಳು ನೆರವಿಗೆ ಬಾರದಿದ್ದರೆ ಮುಖ್ಯ ಶಿಕ್ಷಕರು ಹೇಗೆ ಹಣವನ್ನು ಹೊಂದಿಸಲು ಸಾಧ್ಯವಾಗುತ್ತದೆ ಅಲ್ಲವೇ? ಈ ಒಂದು ಪ್ರಶ್ನೆಯನ್ನು ಇಲಾಖೆಯು ತನ್ನಷ್ಟಕ್ಕೇ ತಾನೇ ಕೇಳಿಕೊಂಡಿದ್ದರೆ ಸಾಕಾಗಿತ್ತು.
ಶಿಕ್ಷಣ ಇಲಾಖೆಯು ಯಾವುದೇ ಸುತ್ತೋಲೆಯನ್ನು ಹೊರಡಿಸುವ ಮುನ್ನ ಅಥವಾ ಯಾವುದೇ ಜವಾಬ್ದಾರಿಯನ್ನು ಶಿಕ್ಷಕರಿಗೆ ಹೊರಿಸುವ ಮುಂಚೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕು. ಈಗ ಹೊರಡಿಸಿರುವ ಸುತ್ತೋಲೆ ಸ್ಪಷ್ಟವಾಗಿ ಮಕ್ಕಳ ಪ್ರಾಣದ ಜತೆಗೆ ಚೆಲ್ಲಾಟವಾಡುತ್ತಿರುವಂತಿದೆ. ದುಃಸ್ಥಿತಿಯಲ್ಲಿರುವ ಶಾಲೆಗಳನ್ನು ದುರಸ್ತಿ ಮಾಡಬೇಕೆ ಹೊರತು ಅದರಿಂದಾಗುವ ಅಪಾಯವನ್ನು ಮತ್ತೊಬ್ಬರ ತಲೆಗೆ ಕಟ್ಟುವುದಲ್ಲ. ರಾಜ್ಯದ ಬಹುತೇಕ ಕಡೆ ಹಳೇ ಶಾಲೆಗಳಿವೆ. ನಿರಂತರ ಮಳೆಯಿಂದಾಗಿ ಕೊಠಡಿಗಳು ಸೋರುತ್ತಿವೆ. ಮಕ್ಕಳು ಹಾಗೂ ಶಿಕ್ಷಕರು ಭಯದಿಂದ ತರಗತಿಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಎಲ್ಲರ ರಕ್ಷಣೆಯನ್ನು ಮುಖ್ಯ ಶಿಕ್ಷಕರ ಮೇಲೆ ಹಾಕಿದರೆ ಅವರೇನು ಮಾಡಲು ಸಾಧ್ಯವಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ. ಯಾವ ಶಾಲೆಗಳಿಗೆ ತುರ್ತು ದುರಸ್ತಿ ಅಗತ್ಯ ಇದೆ ಎಂದು ಗುರುತಿಸಿ ಅಂಥ ಶಾಲೆಗಳನ್ನು ರಿಪೇರಿ ಮಾಡಿಸಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೦-೦೭-೨೦೨೨
ಚಿತ್ರ ಕೃಪೆ: ಇಂಟರ್ನೆಟ್ ತಾಣ