ಶಾಲೆಗಳು ತೆರೆಯಲೇ ಬೇಕಿವೆ
ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಹಾಗೂ ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಂದ್ ಆಗಿರುವ ಶಾಲೆಗಳನ್ನು ಪುನರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಶುಕ್ರವಾರ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಲಿದ್ದು, ಅದರಲ್ಲಿ ಈ ಕುರಿತು ನಿರ್ಣಯ ಆಗಲಿದೆ. ಸಚಿವರೇ ಹೇಳಿರುವಂತೆ, ಕೋವಿಡ್ ಸೋಂಕು ಇದುವರೆಗೆ ಯಾವುದೇ ಮಕ್ಕಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಿಲ್ಲ. ಈ ಬಾರಿ ೧,೨೫೦ ಮಕ್ಕಳು ಹಾಗೂ ಒಟ್ಟಾರೆಯಾಗಿ ೧ ರಿಂದ ೧೦ ನೇ ತರಗತಿಯವರೆಗಿನ ಒಟ್ಟು ೬,೭೦೦ ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರಾದರೂ, ಯಾವುದೇ ಗಂಭೀರ ಅಡ್ಡಪರಿಣಾಮಗಳು ಇವರ ಮೇಲೆ ಆಗಿಲ್ಲ. ಹೆಚ್ಚಿನ ಮಕ್ಕಳು ಲಕ್ಷಣ ರಹಿತ ಸೋಂಕಿತರಾಗಿರುವುದರಿಂದ, ಇವರಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆಯೂ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಕೋವಿಡ್ ಸೋಂಕು ಉಲ್ಬಣಗೊಂಡಿರುವ ಜಿಲ್ಲೆಗಳು ಹಾಗೂ ಮಹಾನಗರಗಳಲ್ಲಿ ಮಾತ್ರ ಶಾಲೆಗಳನ್ನು ಬಂದ್ ಮಾಡಲಾಗಿದ್ದು, ರಾಜ್ಯಾದ್ಯಂತ ಶೇ.೮೦ರಷ್ಟು ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ರಾಜಧಾನಿಯಲ್ಲಿ ಮುಚ್ಚಿರುವ ಶಾಲೆಗಳು ಹಾಗೂ ಸಂಕಷ್ಟಕ್ಕೊಳಗಾಗಿರುವ ಮಕ್ಕಳ ಸಂಖ್ಯೆ ಸಣ್ಣದೇನಲ್ಲ. ಇನ್ನಾದರೂ ತಕ್ಷಣವೇ ಶಾಲೆಗಳನ್ನು ತೆರೆಯಲು ಸರಕಾರ ಮುಂದಾಗಬೇಕಿದೆ.
ಮೊದಲ ಹಾಗೂ ಎರಡನೇ ಅಲೆಗಳ ಕೋವಿಡ್ ನ ವೇಳೆ ಅನಗತ್ಯವಾಗಿ ಸಂಕಷ್ಟಕ್ಕೀಡಾದವರು ೧ ರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು. ಈ ಮಕ್ಕಳು ಸ್ವತಃ ಏನನ್ನಾದರೂ ಅಧ್ಯಯನ ಮಾಡುವಷ್ಟು ದೊಡ್ದವರಲ್ಲ. ಇವರಿಗೆ ಶಿಕ್ಷಕರ ಮಾರ್ಗದರ್ಶನ ಬೇಕೇ ಬೇಕು. ಆನ್ ಲೈನ್ ತರಗತಿಗಳಲ್ಲಿ, ನೇರ ತರಗತಿಗಳಲ್ಲಿ ಆಗುವ ಅರ್ಧದಷ್ಟೂ ಪಠ್ಯಕ್ರಮವೂ ಸಾಧ್ಯವಾಗಲಿಲ್ಲ. ಎರಡನ್ನೂ ತುಲನೆ ಮಾಡಿದ ನಂತರ ಮಕ್ಕಳೇ ನೇರ ತರಗತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಶಿಕ್ಷಕರು, ಶಾಲೆಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೂ ನೇರ ತರಗತಿಗಳೇ ಒಟ್ಟಾರೆ ಶಿಕ್ಷಣ ಚಕ್ರದ ಜೀವದಾಯಿನಿ. ಎರಡು ವರ್ಷ ಕಾಲ ನಿಂತುಹೋಗಿರುವ ಕಲಿಕೆಯಿಂದಾಗಿ ಮಕ್ಕಳು ತಮ್ಮ ದೇಹದ ಬೆಳವಣಿಗೆಗೆ ತಕ್ಕ ಮಾನಸಿಕ, ಶೈಕ್ಷಣಿಕ ಬೆಳವಣಿಗೆಯ ಗತಿಯನ್ನು ಪಡೆದುಕೊಂಡಿಲ್ಲ. ಅಧ್ಯಯನಗಳ ಪ್ರಕಾರ, ಕಲಿಕೆಯ ಅವಧಿಗಳ ನಡುವಿನ ಅಂತರ ಹೆಚ್ಚುತ್ತಾ ಹೋದಂತೆ ಕಲಿಕೆಯ ಕಂದಕವೂ ಹೆಚ್ಚುತ್ತದೆ. ಮಕ್ಕಳು ಈಗಾಗಲೇ ಇಂಥ ಹಲವು ಕಂದಕಗಳ ನಡುವೆ ಬಿದ್ದಿದ್ದಾರೆ. ಈಗಾಗಲೇ ಇರುವ ವರ್ಗ ಕಂದಕದ ನಡುವೆ ಡಿಜಿಟಲ್ ಕಂದಕವೂ ಏರ್ಪಟ್ಟಿದೆ. ಖಾಸಗಿ ಶಾಲೆಗಳು ಹಾಗೂ ಹಣವುಳ್ಳವರು ತಮ್ಮ ಮಕ್ಕಳಿಗೆ ಕಲಿಕೆಯ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಅನೇಕ ಮಕ್ಕಳು ಕಲಿಕೆಯನ್ನು ಅರ್ಧದಲ್ಲೇ ಕೈಬಿಟ್ಟು ಶಾಶ್ವತ ಅಶಿಕ್ಷಿತರಾಗುವ ಸಾಧ್ಯತೆಯೂ ಹೆಚ್ಚಿದೆ.
ವೀಕೆಂಡ್ ಕರ್ಫ್ಯೂ ಆರ್ಥಿಕತೆಗೆ ನೀಡುತ್ತಿರುವ ಹೊಡೆತ ದೊಡ್ಡದು. ಹಾಗೆಯೇ ಶಾಲೆಗಳ ಮುಚ್ಚುಗಡೆ ಒಟ್ಟಾರೆ ಶಿಕ್ಷಣ ವ್ಯವಸ್ಥೆ. ಆರ್ಥಿಕತೆಗೆ ನೀಡುತ್ತಿರುವ ಏಟು ಇನ್ನೂ ಬಲವಾದುದು. ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಇದ್ದರೆ ಮಾನಸಿಕವಾಗಿ ಜರ್ಜರಿತರಾಗುತ್ತಾರೆ. ಒಂದು ತಲೆಮಾರಿನ ಮಕ್ಕಳ ಮಾನಸಿಕ ವೈಕಲ್ಯಕ್ಕೆ ಸರಕಾರ ಕಾರಣವಾಗುತ್ತದೆ. ಆದ್ದರಿಂದ ಶಾಲೆಗಳ ತೆರೆಯುವಿಕೆ ಒಳ್ಳೆಯದು. ಶಾಲೆಗಳಲ್ಲಿ ಪ್ರತಿನಿತ್ಯ ಆರೋಗ್ಯ ತಪಾಸಣೆ ಮತ್ತು ಎಲ್ಲ ಕೊರೊನಾ ಮುನ್ನೆಚ್ಚರಿಕೆಗಳನ್ನು ನಡೆಸಲಾಗುವುದರಿಂದ, ಶಾಲೆಗಳು ಬೇರೆಲ್ಲ ಕಡೆಗಳಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ.
ಕೃಪೆ- ವಿಜಯ ಕರ್ನಾಟಕ ಪತ್ರಿಕೆ, ದಿ.೨೧-೦೧-೨೦೨೨, ಸಂಪಾದಕೀಯ
ಅಂತರ್ಜಾಲ ಚಿತ್ರ ಕೃಪೆ