ಶಾಲೆಗೆ ಹೋದ ‘ಶಾನಿ' ಜೀರುಂಡೆ!

ದೇವನಿ ಗುಡ್ಡೆ ಎಂಬ ಕಾಡಿನಲ್ಲಿ ಶಾನಿ ಎಂಬ ಜೀರುಂಡೆ ವಾಸವಾಗಿತ್ತು. ಶಾನಿ ಮನೆಯಲ್ಲಿ ಅದರ ಅಪ್ಪ-ಅಮ್ಮ ಮತ್ತು ಪುಟ್ಟ ಪುಟ್ಟ ತಮ್ಮಂದಿರು ಇದ್ದರು. ಶಾನಿ ತುಂಬಾ ಕೆಂಪಗೆ, ದುಂಡಗೆ ಇದ್ದಳು. ಆ ಪರಿಸರದಲ್ಲಿದ್ದ ಜೀರುಂಡೆಗಳಲ್ಲಿ ಈಕೆಯೇ ಬಹಳ ಸುಂದರ. ಶಾನಿ ತುಂಬಾ ಚೂಟಿ, ಆದರೆ ಶಾಲೆಗೆ ಹೋಗಲು ಮಾತ್ರ ಸೋಮಾರಿ. ಅವಳಿಗೆ ಶಾಲೆಗೆ ಹೋಗುವುದೆಂದರೆ ಬಹಳ ಬೇಸರ. ಅವಳಿಗೆ ತನ್ನ ಗೆಳೆಯರ ಜೊತೆ ಆಟವಾಡುವುದೆಂದರೆ ಬಹಳ ಇಷ್ಟ. ಶಾನಿ ತಾನೂ ಶಾಲೆಗೆ ಹೋಗದೇ, ತನ್ನ ಗೆಳೆಯರ ಶಾಲೆಯನ್ನೂ ತಪ್ಪಿಸುತ್ತಿದ್ದಳು. ಕೆಲವು ಸಲ ವಾರಗಟ್ಟಲೇ ಶಾಲೆಗೆ ಹೋಗುತ್ತಿರಲಿಲ್ಲ.
ಮಧು ಮಿಸ್ ಎಂಬ ಜೇನು ನೊಣವು ಶಾನಿಯ ಶಾಲೆಯ ಟೀಚರ್ ಆಗಿದ್ದರು. ಅವರಿಗೆ ಶಾನಿ ಶಾಲೆಗೆ ಬಾರದೇ ಇರುವುದು ಬಹಳ ಬೇಸರ ತರುತ್ತಿತ್ತು. ಶಾನಿ ಅವಳ ಜೊತೆ ಇತರ ವಿದ್ಯಾರ್ಥಿಗಳನ್ನೂ ಶಾಲೆಗೆ ಬಾರದಂತೆ ಮಾಡುತ್ತಾಳೆ ಎಂದು ನೋವಾಗುತ್ತಿತ್ತು. ಶಾನಿ ಶಾಲೆಗೆ ಬರಬೇಕೆಂದು ಮಧು ಮಿಸ್ ಅವಳಿಗೋಸ್ಕರ ಪುಟ್ಟ ಪುಟ್ಟ ಬಹುಮಾನಗಳನ್ನು, ಪಾರ್ಟಿಗಳನ್ನು, ಪಿಕ್ ನಿಕ್ ಗಳನ್ನು ಏರ್ಪಾಡು ಮಾಡುತ್ತಿದ್ದರು. ಆದರೆ ಶಾನಿಗೆ ಇದೆಲ್ಲಾ ಯಾವುದೂ ಇಷ್ಟವಾಗುತ್ತಿರಲಿಲ್ಲ. ದಿನವಿಡೀ ಹಾರಿ ತಿರುಗಾಡುತ್ತಾ, ಹೂವಿನ ಮಕರಂದವನ್ನು ಹೀರುತ್ತಾ ಇರುವುದೇ ಅವಳಿಗೆ ಖುಷಿ ಕೊಡುತ್ತಿತ್ತು.
ಪ್ರತೀ ದಿನ ಬೆಳಿಗ್ಗೆ ಶಾನಿಯನ್ನು ಎಬ್ಬಿಸಿ ಶಾಲೆಗೆ ಕಳುಹಿಸಲು ಅವಳ ಅಮ್ಮನಿಗೆ ಬಹಳ ಕಷ್ಟವಾಗುತ್ತಿತ್ತು. ಮಿಲ್ಲಿ ಎಂಬ ಮಿಂಚುಳ್ಳಿ ಶಾನಿಯನ್ನು ಶಾಲೆಗೆ ಕರೆದುಕೊಂಡು ಹೋಗಲು ಬರುತ್ತಿತ್ತು. ಅವಳ ಜೊತೆ ಹೋದರೂ, ದಾರಿಯಲ್ಲಿ ಅವಳಿಂದ ತಪ್ಪಿಸಿಕೊಂಡು ಆಟವಾಡಲು ಹೋಗುತ್ತಿದ್ದಳು ಶಾನಿ. ಮಿಲ್ಲಿ ಪ್ರತೀ ದಿನ ಶಾಲೆಗೆ ಹೋಗಿ ಮಧು ಮಿಸ್ ಗೆ ಶಾನಿಯ ಬಗ್ಗೆ ದೂರು ನೀಡುತ್ತಿದ್ದಳು. ಶಾನಿ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅವಳಿಗೆ ಹಾರಾಡುತ್ತಾ, ಚಿಟ್ಟೆಗಳ ಗೆಳೆತನ ಮಾಡಿಕೊಂಡು ಮಕರಂದವನ್ನು ಹೀರುವುದು ಮಾತ್ರ ಇಷ್ಟವಾಗುತ್ತಿತ್ತು.
ಶಾನಿಯ ಟೀಚರ್ ಮಧು ಮಿಸ್ ಮತ್ತು ಮಿಲ್ಲಿ ಮಿಂಚುಳ್ಳಿ ಯಾವಾಗಲೂ ಶಾನಿಯ ಅಮ್ಮನ ಬಳಿ ದೂರು ನೀಡುತ್ತಿದ್ದರು. ಇದರಿಂದ ಶಾನಿಗೆ ದಿನಾಲೂ ಅಮ್ಮನ ಬೈಗುಳ ಕೇಳಬೇಕಾಗಿ ಬರುತ್ತಿತ್ತು. ಒಂದು ದಿನ ಶಾನಿಯ ಅಮ್ಮ ಅವಳನ್ನು ಕರೆದು ಹೇಳಿದರು “ಶಾನಿ, ನೀನು ಶಾಲೆಗೆ ಹೋಗದೇ ಸುಮ್ಮನೇ ತಿರುಗಾಡಿ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ಪ್ರತೀ ದಿನ ನಿನ್ನ ಟೀಚರ್ ನಿನ್ನ ಬಗ್ಗೆ ದೂರು ಹೇಳುತ್ತಾರೆ. ನೀನು ಶಾಲೆಗೆ ತಪ್ಪದೇ ಹೋದರೆ ನಿನಗೆ ಅಲ್ಲಿ ಕಲಿಸುವ ಹಲವಾರು ವಿಷಯಗಳು ಮುಂದೆ ಬದುಕಿನಲ್ಲಿ ಪ್ರಯೋಜನಕ್ಕೆ ಬರಲಿವೆ. ವಿದ್ಯೆ ಜೀವನದಲ್ಲಿ ಬಹು ಮುಖ್ಯ. ನಿನಗೆ ಶಾಲೆಯಲ್ಲಿ ಹೂವಿನಿಂದ ಮಕರಂದ ಹೀರುವ ಬಗ್ಗೆ, ಯಾವ ಹೂವಿನಲ್ಲಿ ಜಾಸ್ತಿ ಮಕರಂದ ಇರುತ್ತದೆ ಎಂಬ ಬಗ್ಗೆ, ಯಾವ ಎಲೆ ತಿಂದರೆ ಶಕ್ತಿ ಬರುತ್ತದೆ ಎಂಬ ಬಗ್ಗೆ, ಯಾವ ಸಸ್ಯಗಳು ವಿಷಕಾರಿ ಎಂಬ ಒಳ್ಳೆಯ ವಿಷಯಗಳು ತಿಳಿಯುತ್ತವೆ. ಇದೆಲ್ಲಾ ಮುಂದಿನ ನಿನ್ನ ಜೀವನಕ್ಕೆ ಅವಶ್ಯಕ ಶಾನಿ" ಎಂದರು.
ಅಮ್ಮನ ಮಾತುಗಳನ್ನು ಕೇಳಲು ಶಾನಿಗೆ ಆಸಕ್ತಿ ಇರಲಿಲ್ಲ. ಅವಳ ಆಸಕ್ತಿ ಇದ್ದದ್ದು ಆಟವಾಡುವುದರಲ್ಲಿ ಮಾತ್ರ. ಆದರೆ ಅವಳು ಅಮ್ಮನನ್ನು ತುಂಬಾ ಪ್ರೀತಿಸುತ್ತಿದ್ದಳು. ಶಾನಿ ಹೇಳಿದಳು ‘ ಅಮ್ಮಾ, ನನಗೆ ಆಟವಾಡಲು ಮಾತ್ರ ಆಸಕ್ತಿ. ಶಾಲೆಯಲ್ಲಿ ಮಧು ಮಿಸ್ ತುಂಬಾ ವಿಷಯಗಳನ್ನು ಹೇಳಿ ನನಗೆ ಗೊಂದಲ ಮಾಡಿ ಬಿಡುತ್ತಾರೆ. ಅವರು ನನಗೆ ತುಂಬಾ ಹೂವಿನ ಚಿತ್ರಗಳನ್ನು ಬಿಡಿಸಲು ಹೇಳುತ್ತಾರೆ. ನನಗೆ ಎಲ್ಲಾ ಕಡೆ ತಿರುಗಾಡಿ ಎಲ್ಲಾ ಹೂವಿನ ಬಗ್ಗೆ ಗೊತ್ತಿದೆ. ನನಗೆ ಪ್ರಕೃತಿಯ ಮಡಿಲಲ್ಲಿ ಆಟವಾಡುತ್ತಾ ಹೂವಿನಿಂದ ಮಕರಂದ ಹೀರುವುದು ಇಷ್ಟ. ಶಾಲೆಗೆ ಹೋದರೆ ನನಗೆ ಉಸಿರು ಕಟ್ಟಿದ ಅನುಭವವಾಗುತ್ತದೆ.”
ಅಮ್ಮ ಮತ್ತೂ ತಾಳ್ಮೆಯಿಂದ “ಮಗೂ ಶಾನಿ, ಇನ್ನು ಸ್ವಲ್ಪ ದಿನಗಳಲ್ಲಿ ಶಾಲೆಗೆ ರಜೆ ಸಿಗುತ್ತದೆ. ನಂತರ ಬೇಕಾದರೆ ನೀನು ಆಟವಾಡು. ನಿನ್ನ ಗೆಳೆಯರೆಲ್ಲಾ ಶಾಲೆಗೆ ಹೋಗುತ್ತಿದ್ದಾರೆ. ಅವರ ಅಮ್ಮಂದಿರು ಎಷ್ಟು ಖುಷಿಯಲ್ಲಿದ್ದಾರೆ ನೋಡು” ಎಂದು ಬೇಸರದಿಂದ ನುಡಿದಳು.
ಅಮ್ಮನಿಗೆ ಬೇಸರ ಮಾಡುವುದು ಶಾನಿಗೆ ಇಷ್ಟವಿರಲಿಲ್ಲ. "ಸರಿ, ನಾಳೆಯಿಂದ ಶಾಲೆಗೆ ಹೋಗುತ್ತೇನೆ" ಎಂದಳು ಶಾನಿ ಬೇಸರದಿಂದ. ಮರುದಿನ ಶಾಲೆಗೆ ಹೋದಾಗ ಅಲ್ಲಿ ಮಧು ಮಿಸ್ ಮಕ್ಕಳಿಗೆಲ್ಲಾ ಉದ್ದದ ಕೊಳವೆ ಹೂವಿನಿಂದ ಮಕರಂದವನ್ನು ಹೀರುವುದು ಹೇಗೆ? ಅದರ ಒಳಗೆ ಜಾರಿ ಬಿದ್ದರೆ ಹೇಗೆ ಹೊರ ಬರುವುದು? ಎಂಬೆಲ್ಲಾ ವಿಷಯಗಳನ್ನು ತಿಳಿಸಿಕೊಟ್ಟರು. ಪುಟ್ಟ ಪುಟ್ಟ ಪ್ರಯೋಗಗಳನ್ನು ಮಾಡಿ ಕಷ್ಟದಲ್ಲಿರುವ ಪುಟ್ಟ ಕೀಟಗಳನ್ನು ಬದುಕಿಸುವ ಬಗ್ಗೆ ತಿಳಿಸಿದರು. ಶಾನಿಯೂ ಆಸಕ್ತಿಯಿಂದ ಎಲ್ಲವನ್ನೂ ಗಮನಿಸಿದಳು.
ಮರುದಿನ ಬೆಳಿಗ್ಗೆ ಶಾಲೆಗೆ ಹೋಗುವಾಗ ಶಾನಿಯ ದೃಷ್ಟಿ ಹತ್ತಿರದಲ್ಲೇ ಇದ್ದ ಹೂವಿನತ್ತ ಹೋಯಿತು. ಆ ಹೂವಿನ ಒಳಗೆ ಮಕರಂದ ಹೀರಲು ಹೋದ ಪುಟ್ಟ ಪುಟ್ಟ ಜೀರುಂಡೆಗಳು ಜಾರಿ ಒಳಗಿನ ಕೊಳವೆಯಲ್ಲಿ ಜಾರಿ ಬಿದ್ದಿದ್ದವು. ಅವುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದವು. ಇದನ್ನು ನೋಡಿದ ಶಾನಿಗೆ ಶಾಲೆಯಲ್ಲಿ ಕಲಿತ ಪಾಠದ ನೆನಪಾಯಿತು. ಅವಳು ಮಧು ಮಿಸ್ ಕಲಿಸಿದ ಉಪಾಯವನ್ನು ಪ್ರಯೋಗಿಸಿ ಆ ಪುಟ್ಟ ಜೀರುಂಡೆಗಳನ್ನು ಹೂವಿನಿಂದ ಹೊರಗೆ ತಂದಳು. ಅಲ್ಲಿಗೆ ಬಂದ ಆ ಪುಟ್ಟ ಜೀರುಂಡೆಗಳ ಅಮ್ಮನವರಿಗೆ ಶಾನಿಯ ಕೆಲಸ ನೋಡಿ ಬಹಳ ಆನಂದವಾಯಿತು. ಅವರೆಲ್ಲಾ ಶಾನಿಯನ್ನು ಹೊಗಳಿದ್ದೇ ಹೊಗಳಿದ್ದು.
ಊರಿನೆಲ್ಲಡೆ ಶಾನಿಯ ಸಾಹಸದ ಕಥೆ ಹರಡಿತು. ಶಾಲೆಯಲ್ಲಿ ಮಧು ಮಿಸ್ ಶಾನಿಗೆ ‘ಚತುರ ರಕ್ಷಕಿ' ಪದಕ ನೀಡಿ ಗೌರವಿಸಿದರು. ಆ ಪದಕವನ್ನು ತೋರಿಸಲು ಶಾನಿ ಬೇಗನೇ ಹಾರುತ್ತಾ ಮನೆಗೆ ಬಂದಳು. ಅಮ್ಮನಿಗೂ ಶಾನಿಯ ಪದಕ ನೋಡಿ ಖುಷಿಯಾಯಿತು. ಶಾನಿ ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡು ಹೇಳಿದಳು "ನಿನ್ನ ಮಾತು ಕೇಳಿ ನಾನು ಶಾಲೆಗೆ ಹೋದದ್ದು ಒಳ್ಳೇದಾಯಿತು. ನನಗೆ ಆ ಪುಟ್ಟ ಜೀರುಂಡೆಗಳನ್ನು ಬದುಕಿಸುವ ಉಪಾಯ ತಿಳಿಯಿತು. ವಿದ್ಯೆ ಯಾವತ್ತೂ ವ್ಯರ್ಥವಲ್ಲ. ನಾನು ಇನ್ನು ದಿನಾಲೂ ಶಾಲೆಗೆ ಹೋಗುತ್ತೇನೆ. ಒಳ್ಳೆಯ ಪಾಠಗಳನ್ನು ಕಲಿಯುತ್ತೇನೆ"
ಶಾನಿಯಲ್ಲಾದ ಪರಿವರ್ತನೆಯನ್ನು ಕಂಡು ಅವಳ ಅಮ್ಮನಿಗೆ ಬಹಳ ಖುಷಿಯಾಯಿತು. ತನ್ನ ಮಗಳು ಕಡೆಗಾದರೂ ಶಾಲೆಗೆ ಹೋಗುವ ಬಗ್ಗೆ ಆಸಕ್ತಿ ತೋರಿಸಿದಳಲ್ಲಾ ಎಂದು ಅವಳನ್ನು ಮತ್ತೊಮ್ಮೆ ಗಟ್ಟಿಯಾಗಿ ತಬ್ಬಿಕೊಂಡು ಮುತ್ತುಕೊಟ್ಟರು.
ನೀತಿ: ನಾವು ಕಲಿತ ವಿದ್ಯೆ ಆಪತ್ತಿನಲ್ಲಿರುವಾಗ ಸಹಾಯಕ್ಕೆ ಬರುತ್ತದೆ. ಆದುದರಿಂದ ಮಕ್ಕಳೇ ವಿದ್ಯಾಭ್ಯಾಸ ಮಾಡುವುದನ್ನು ಯಾವತ್ತೂ ತಪ್ಪಿಸಬೇಡಿ. ವಿದ್ಯಾರ್ಜನೆಯಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ.
ಆಂಗ್ಲ ಮೂಲ: ಡಾ॥ ಕೆ.ಪಿ.ಸಂಧ್ಯಾ ರಾವ್