ಶಾಲೆ ಎಂಬ ರಿಮಾಂಡ್ ರೂಮ್

ಶಾಲೆ ಎಂಬ ರಿಮಾಂಡ್ ರೂಮ್

ಬರಹ

ಇತ್ತೀಚೆಗೆ ಅತ್ಯಂತ ಕಳವಳಕಾರಿ ಬೆಳವಣಿಗೆ ಶಾಲೆಗಳಿಂದ. ಮಕ್ಕಳನ್ನು ಹಿಗ್ಗಾ ಮುಗ್ಗಾ ಥಳಿಸಿ ಅವರ ಸಾವಿಗೂ ಕಾರಣರಾದ ಶಿಕ್ಷಕ ಸಮೂಹದ ಬಗ್ಗೆ ದಿನವೂ ಸುದ್ದಿ. ಶಿಕ್ಷಕರಿಂದ ಅಮಾನವೀಯವಾಗಿ ನಡೆಸಿಕೊಂಡ ಮಕ್ಕಳ ರೋದನವನ್ನು ನಾಗರೀಕ ಸಮಾಜ ಹೇಗೆ ತಾನೇ ಸಹಿಸಿಕೊಳ್ಳಬಹುದು. ಮಕ್ಕಳನ್ನು ಶಾಲೆಗೆ ಕಳಿಸಿದ ನಂತರ ನಿಶ್ಚಿಂತೆಯಿಂದ ಅವರ ಹಿಂತಿರುಗುವಿಕೆ ಕಾಯುವ ಪಾಲಕರು ಅವರನ್ನು ನೋಡುವುದು ಆಸ್ಪತ್ರೆಯಲ್ಲಿ ಎನ್ನುವ ಸ್ಥಿತಿ ನಿರ್ಮಿತವಾಗಿದೆ. ಇನ್ನು ವರದಿ ಆಗದೆ ನಡೆಯುತ್ತಿರುವ ಹಿಂಸೆಗಳ ಬಗ್ಗೆ ನಮಗೇನಾದರೂ ತಿಳಿದಿದೆಯ? ಶಾಲೆಯ ಆಡಳಿತ ವರ್ಗದ ವರ್ಚಸ್ಸಿನಿಂದ, ಪ್ರಭಾವದಿಂದ ಹಲವು ಪ್ರಕರಣಗಳು ಬೆಳಕಿಗೆ ಬಾರದೆ ಹೋಗಿವೆ. ಹೊಡೆತ ತಿಂದ ಮಕ್ಕಳು ಶಿಕ್ಷಕರಿಗೆ ಹೆದರಿ ಹೆತ್ತವರಿಗೆ ಹೇಳುವರೇ? ಬರೀ ಶಾರೀರಿಕ ಹಿಂಸೆ ಮಾತ್ರವಲ್ಲ, ಮಾನಸಿಕ ಹಿಂಸೆ ಬಗ್ಗೆಯೂ ಗಮನ ಹರಿಸಬೇಕಾದ್ದು ಅತ್ಯಗತ್ಯ. ಮಕ್ಕಳು ಬಡ ಕುಟುಂಬಕ್ಕೆ ಸೇರಿದವರಾದರೆ ಅವರ ಕಷ್ಟವನ್ನು ಆಲಿಸುವವರೂ, ಪರಿಹರಿಸುವವರೂ ಯಾರೂ ಇರುವುದಿಲ್ಲ. ನಿರ್ದಯವಾಗಿ ಬಡಿಯುವ ಶಿಕ್ಷಕ ತನ್ನ ಸುಪ್ತ ಮನಸ್ಸಿನಲ್ಲಿ ಅವಿತ ಕ್ರೌರ್ಯವನ್ನು ಹೀಗೆ ಮಕ್ಕಳನ್ನು ಹಿಂಸಿಸುವ ಮೂಲಕ ತೀರಿಸಿಕೊಳ್ಳುತ್ತಾನೆ. ಶಿಕ್ಷಕ ಕೆಲಸಕ್ಕೆ ಸೇರಿಸುವ ಮುನ್ನ ಅವರ ಕುಟುಂಬದ ಹಿನ್ನೆಲೆ, ಅವರ ಮಾನಸಿಕ ಸ್ವಸ್ಥತೆ ಹೀಗೆ ಹಲವು ಕಾರ್ಯಗಳ ಬಗ್ಗೆ ಸರಕಾರ ಗಮನ ಹರಿಸಬೇಕು. ಆತ ಮಾನಸಿಕವಾಗಿ ಯೋಗ್ಯನಲ್ಲದಿದ್ದರೂ ಕೆಲಸವನ್ನು ಗಿಟ್ಟಿಸಿ ಕೊಳ್ಳುತ್ತಾನೆ. ಪಾನ ಮತ್ತರಾಗಿ ಬರುವ ಶಿಕ್ಷಕರೂ ಇಲ್ಲವೇ ನಮ್ಮಲ್ಲಿ? ಇದಕ್ಕಿಂತ ಆತಂಕಕಾರಿ ಬೆಳವಣಿಗೆ ಬೇರೇನೂ ಬೇಕು. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಾಲೆಗಳ ಬಗ್ಗೆ, ಶಿಕ್ಷಕರ ಬಗ್ಗ್ಗೆ ನಾವು ಉದಾಸೀನತೆ ತೋರಿದರೆ ದೇಶದ ಸಂಪತ್ತಾದ ನಮ್ಮ ಮಕ್ಕಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತರಾದ ಮಕ್ಕಳು ಎಷ್ಟು productive ಆಗಬಲ್ಲರು?

ನನ್ನ ಸೋದರಿಯ ಇಬ್ಬರು ಮಕ್ಕಳು ಜೆದ್ದಾಹ ದ ಪ್ರತಿಷ್ಟಿತ ಬ್ರಿಟಿಷ್ ಶಾಲೆಗೆ ಹೋಗುತ್ತಾರೆ. ಆ ಶಾಲೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ರೀತಿ ಕಂಡು ಅಚ್ಚರಿ ಪಟ್ಟೆ. ಯಾವುದೇ ಕಾರಣಕ್ಕೂ ಮಕ್ಕಳ ಮನಸ್ಸಿಗೆ ನೋವಾಗದಂತೆ ಅವರು ವಹಿಸುವ ಎಚ್ಚ್ಚರ, ಕಾಳಜಿ ಮೆಚ್ಚುವಂತಹುದು. ಮೊದಲ ಮೂರು ನಾಲ್ಕನೇ ತರಗತಿವರೆಗೂ ಯಾವುದೇ ಹೋಂ ವರ್ಕ್ ಸಹ ಕೊಡದೆ ಮಕ್ಕಳನ್ನು ಆಟದ ಮೂಲಕ ಮತ್ತು ಪುಟ್ಟ ಪುಟ್ಟ ವರ್ಣರಂಜಿತ ಪುಸ್ತಕಗಳನ್ನು ಓದಿಸುವ ಮೂಲಕ ಮಕ್ಕಳನ್ನು ಮೇಲಿನ ತರಗತಿಗಳಿಗೆ ತಯಾರು ಮಾಡುತ್ತಾರೆ. ಶಾಲೆಯಲ್ಲಿ ನರ್ಸ್ ಬೇರೆ, ಮಕ್ಕಳಿಗೆ ಚಿಕ್ಕ ಪುಟ್ಟ ಗಾಯ ವಾದರೆ, ಅಥವಾ ಬೇರೇನಾದರೂ ತೊಂದರೆಯಾದರೆ ನೋಡಿಕೊಳ್ಳಲು. ಸಂಪೂರ್ಣವಾಗಿ ಬ್ರಿಟಿಷ್ faculty ಹೊಂದಿರುವ ಈ ಶಾಲೆಗೆ ಭೇಟಿ ನೀಡಿದಾಗ ನನಗೆ ತಿಳಿಯಿತು ಅವರ ದೇಶದಲ್ಲಿ ವಿದ್ಯೆಗೂ, ಶಿಕ್ಷಕ ವೃತ್ತಿಗೂ ನೀಡಿರುವ ಮರ್ಯಾದೆ, ಗೌರವ ಏನು ಎಂದು.

ಮಕ್ಕಳನ್ನು ಅವರ ಜಾತಿ ಧರ್ಮದ ಆಧಾರದ ಮೇಲೆ ಅಪಹಾಸ್ಯ ಮಾಡುವುದು ಸಹ ಕೇಳಿಬರುತ್ತಿರುವ ದೂರು. ವೈಯಕ್ತಿಕವಾಗಿ ನನ್ನ ತಮ್ಮನಿಗೂ ಇದೆ ರೀತಿಯ ಅನುಭವವಾಯಿತು. ಚಿಕ್ಕ ಚಿಕ್ಕ ಕಾರಣಕ್ಕೂ ದನ ತಿನ್ನುವವನೆ ಎಂದು ಮೂದಲಿಸುವ ಶಿಕ್ಷಕನ ಕುರಿತು ಏನು ಹೇಳಬೇಕು. ಮಾಧ್ಯಮಿಕ ಶಾಲೆಯಲ್ಲಿದ್ದಾಗ ನನ್ನನ್ನು ಒಬ್ಬ ಶಿಕ್ಷಕ "ಸಾಬು" ಎಂದೇ ಕರೆಯುತ್ತಿದ್ದದ್ದು. ನನಗಾಗ ಅದು ದೊಡ್ಡದಾಗಿ ಕಾಣುತ್ತಿರಲಿಲ್ಲ ಮತ್ತು ಆ ಶಿಕ್ಷಕರ ಪ್ರೀತಿಯ ಶಿಷ್ಯನೂ ನಾನೇ ಆಗಿದ್ದೆ. ಈ ರೀತಿಯ ಸಂಬೋಧನೆ ಅಮೇರಿಕೆಯಲ್ಲಿ ಕರಿಯರನ್ನು ಕುರಿತು ಓರ್ವ ಶಿಕ್ಷಕ ಮಾಡಿದರೆ ಆತನಿಗೆ ಕಂಬಿ ಎಣಿಸುವ ಕಸುಬನ್ನು ನೀಡುತ್ತಾರೆ.
ಯಾವ ಸಂಘಟನೆಯೊಂದಿಗೂ ಸಂಬಂಧ ಇಟ್ಟುಕೊಂಡಿರದ, ಕೌಟುಂಬಿಕ ಹಿನ್ನೆಲೆ, ಮಕ್ಕಳ ಮೇಲಿನ ಅನುಕಂಪ ತೋರುವ, ಪೂರ್ವಾಗ್ರಹ ಪೀಡಿತ ವಿಚಾರಗಳಿಂದ ಬಳಲದ ಹೀಗೆ ಹಲವು character traits ಗಳನ್ನು ನೋಡಿ ಶಿಕ್ಷಕರನ್ನು ನೇಮಿಸಬೇಕು. ಶಿಕ್ಷಕನ ಕೆಲಸವನ್ನು ಗೌರವಾರ್ಹವನ್ನಾಗಿ ಮಾಡಬೇಕು ಮತ್ತು ಕಾಣಬೇಕು. ನಾನು ಒಮ್ಮೆ ನನ್ನ ಚಾಟ್ ಸಂಗಾತಿಯೊಡನೆ ನನ್ನ career ಬದಲಿಸಿ ಶಿಕ್ಷಕನಾಗಬೇಕು ಅಂದಾಗ ಆಕೆ ಹೇಳಿದ್ದು, whaat? you want to be in teaching profession? there is no money in it. ಸಮಾಜದಲ್ಲಿ ಈ ರೀತಿಯ ಭಾವನೆಗಲಿದ್ದರೆ ಉದ್ಯೋಗ ಅರಸುವವನು ಕೈ ತುಂಬಾ ಹಣ ಕೊಡುವ ಉದ್ಯೋಗವನ್ನೇ ಅರಸುತ್ತಾನೆ. ಡಾಕ್ಟ್ರು ಇಂಜಿನಿಯರ್ ಆಗಬೇಕು ಅನ್ನುತ್ತಾನೆ.

ಮಕ್ಕಳನ್ನು ಪೀಡಿಸುವ ಶಿಕ್ಷಕರನ್ನು ಕೆಲಸದಿಂದ ಕಿತ್ತು ಹಾಕಿ ಅವರ ಹೆಸರನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು. ಆಗ ಇತರರಿಗೂ ಎಚ್ಚರಿಕೆಯಿಂದ, ಜಾವಾಬ್ದಾರಿಯಿಂದ ವರ್ತಿಸಲು ಈ ಕ್ರಮ ಸಹಾಯ ಮಾಡುತ್ತದೆ.

ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ತೋರುವವರ ಹಿನ್ನೆಲೆಯನ್ನು ಕೂಲಂಕುಶವಾಗಿ ಪರಿಶೀಲಿಸುವ, ಅವರು ಮಕ್ಕಳನ್ನು ನಡೆಸಿಕೊಳ್ಳಲು ಮತ್ತು ಮುನ್ನಡೆಸಲು ಎಷ್ಟು ಅರ್ಹರು ಎಂಬುದನ್ನು ನೋಡಿ ಸೇರಿಸಿಕೊಳ್ಳಬೇಕು. ಯಾವ ಕೆಲಸಕ್ಕೂ ಲಾಯಕಲ್ಲದ, ಸುಲಭದ ಕೆಲಸ ಇದು ಎಂದು ಕಲಿಸುವ ವೃತ್ತಿಗೆ ಇಳಿಯುವವರ ಬಗ್ಗೆ ಎಚ್ಚರ ಅತ್ಯಗತ್ಯ. ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕನ ಸ್ಥಾನ ಅತ್ಯುನ್ನತವಾದುದು, ಪವಿತ್ರವಾದುದು. " ಗುರು ದೇವೋ ಭವ " ಎಂದು ಕರೆಸಿಕೊಳ್ಳುವ ಶಿಕ್ಷಕ ಚಾರಿತ್ರ್ಯದಲ್ಲಿ ತುಂಬಾ ಉನ್ನತ ಮಟ್ಟಕ್ಕೆ ಏರಿರಬೇಕು, ಅಲ್ಲವೇ?

ಅಂತಿಮವಾಗಿ, ರೋಗಿಗಳಿಗೆ ಇರುವ patients bill of rights ನಂತೆ ನಮ್ಮ ಭವಿಷ್ಯ ಮತ್ತು ದೇಶದ ಆಶಾಕಿರಣರಾದ ನಮ್ಮ ಕಿಣ್ಣರಿಗೂ ಇರಲಿ ಒಂದು bill of rights.