ಶಾಸಕರಿಗೊಂದು ತರಬೇತಿ ಶಿಬಿರ…!
ಅತ್ಯಂತ ಸ್ಪರ್ಧಾತ್ಮಕ ಚುನಾವಣಾ ರಾಜಕೀಯದಲ್ಲಿ ಒಂದು ಪಕ್ಷದ ಟಿಕೆಟ್ ಗಿಟ್ಟಿಸಲೇ ಹರಸಾಹಸ ಪಟ್ಟು ಅಪಾರ ಪ್ರಮಾಣದ ಹಣ, ಶ್ರಮ, ಸಂಘಟನೆ, ನಿಂದನೆ, ಕುತಂತ್ರ, ತಾಳ್ಮೆ, ತ್ಯಾಗ, ಬುದ್ದಿವಂತಿಕೆ ಎಲ್ಲವನ್ನೂ ಖರ್ಚು ಮಾಡಿ ಸುಮಾರು ಒಂದು ಲಕ್ಷ ಜನರ ವಿಶ್ವಾಸ ಗಳಿಸಿ ಬಹುತೇಕ ಅಷ್ಟೇ ಪ್ರಮಾಣದ ವಿರೋಧಿಗಳೊಂದಿಗೆ ಹೋರಾಡಿ ಇಡೀ ರಾಜ್ಯದ ಕೇವಲ 224 ಜನರಲ್ಲಿ ಒಬ್ಬರಾಗಿ ಆಯ್ಕೆಯಾಗುವುದು ಸಾಮಾನ್ಯ ವಿಷಯವಲ್ಲ.
ಸಾಮಾನ್ಯ ಜನರಿಗೆ ಅವರ ಕುಟುಂಬ ಅಥವಾ ರಕ್ತ ಸಂಬಂಧಿಗಳು ಬಂಧುಗಳು ಸ್ನೇಹಿತರ ವಿಶ್ವಾಸ ಗಳಿಸುವುದೇ ಸಾಧ್ಯವಾಗುವುದಿಲ್ಲ. ಏನಾದರು ಅಸಮಾಧಾನ ಗಲಾಟೆ ಇದ್ದೇ ಇರುತ್ತದೆ. ಅಂತಹುದರಲ್ಲಿ ಅಷ್ಟು ದೊಡ್ಡ ಸಂಖ್ಯೆಯ ಜನರು ಮತ್ತು ಕಾರ್ಯಕರ್ತರ ಮತ ಗಳಿಸಿ ಶಾಸಕರಾಗುವುದು ಒಂದು ಸಾಧನೆ. ಅದಕ್ಕೆ ಉತ್ತಮ ಸಾಮರ್ಥ್ಯವೂ ಬೇಕು. ಸಾರ್ವಜನಿಕರಿಗೇ ಕೌನ್ಸಿಲಿಂಗ್ ಮಾಡಿ ಅವರ ಮನವೊಲಿಸಲು ಯಶಸ್ವಿಯಾಗಿರುವ ಶಕ್ತಿವಂತರಿಗೆ ಕೌನ್ಸಿಲಿಂಗ್ ಮಾಡಲು ಯಾರು ಸೂಕ್ತ, ಏಕೆ ಮತ್ತು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಒಂದು ಪ್ರಯತ್ನ.
ಮಾನ್ಯ ಸ್ಪೀಕರ್ ಅವರು ರಾಜ್ಯದ ಕೆಲವು ಆಧ್ಯಾತ್ಮಿಕ ಚಿಂತಕರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಈಗಾಗಲೇ ಆ ಚಿಂತಕರ ಬಹುತೇಕ ಮಾತುಗಳು, ಭಾಷಣಗಳು, ಉಪನ್ಯಾಸಗಳು, ಬರಹಗಳನ್ನು ಗಮನಿಸಿದ್ದೇವೆ. ಅದು ಸಾಮಾನ್ಯವಾಗಿ ಭಾವನಾತ್ಮಕ, ಭಕ್ತಿ ಪೂರ್ವಕ, ದೈವಿಕ ಶಕ್ತಿಯ ಪ್ರೇರಣಾತ್ಮಕ, ಪೌರಾಣಿಕ ಪಾತ್ರಗಳ ಸ್ಪೂರ್ತಿದಾಯಕ, ಭ್ರಮಾತ್ಮಕ, ಮೌಡ್ಯ ಮತ್ತು ಅವಾಸ್ತವಿಕ ಆದರ್ಶಗಳ ಸುತ್ತಲೇ ಇರುತ್ತದೆ ಎಂಬುದು ಬಹಿರಂಗವಾಗಿರುವ ವಿಷಯ. ಇವರು ಜನರು ಮತ್ತು ಸಂವಿಧಾನ ಹಾಗು ಪ್ರಕೃತಿಗಿಂತ ಹೆಚ್ಚಾಗಿ ಭಾಗಶಃ ಅಥವಾ ಸಂಪೂರ್ಣವಾಗಿ ದೈವ ನಿಷ್ಟರಾದವರು.
ಇವರುಗಳು ಆಂತರ್ಯದಲ್ಲಿ ಬಸವಣ್ಣನವರ ಸಮ ಸಮಾಜದ ಕನಸು ಕಂಡವರಲ್ಲ, ಕುವೆಂಪು ಅವರ ವಿಶ್ವ ಮಾನವ ಪ್ರಜ್ಞೆ ಹೊಂದಿದವರಲ್ಲ, ಸ್ವಾಮಿ ವಿವೇಕಾನಂದ ವೈಚಾರಿಕ ಆಧ್ಯಾತ್ಮ ಮತ್ತು ಸಾಂಸ್ಕೃತಿಕ ಚಿಂತಕರಲ್ಲ, ಮಹಾತ್ಮ ಗಾಂಧಿಯವರಂತ ಸತ್ಯ ಸರಳ. ಅಹಿಂಸಾ ಹೋರಾಟಗಾರರಲ್ಲ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತ ಜೀವಪರ ನಿಲುವಿನವರಲ್ಲ. ಆಧ್ಯಾತ್ಮವನ್ನು ಉದ್ಯೋಗ ಮತ್ತು ವ್ಯಾಪಾರ ಮಾಡಿಕೊಂಡಿರುವವರು. ಸಾಕಷ್ಟು ಹಣ ಆಸ್ತಿ ಮಾಡಿರುವವರು. ಇವರುಗಳು ಬಹಿರಂಗವಾಗಿ ದೊಡ್ಡ ಮಟ್ಟದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ, ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿದವರಲ್ಲ. ಆಧಿಕಾರಸ್ಥರು ಮತ್ತು ಮಾಧ್ಯಮಗಳ ಜೊತೆ ಮತ್ತು ಅವರ ಪರವಾದ ಸೈದ್ಧಾಂತಿಕ ಸಂಘಟನೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡವರು.
ಆದರೆ ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕೀಯ ವಾಸ್ತವವಾಗಿ ಇರುವುದು ಇದೆಲ್ಲಕ್ಕಿಂತ ಭಿನ್ನ. ಬಹುತೇಕ ಭ್ರಷ್ಟ ಹಣದ ಮೇಲೆ, ಜಾತಿ ವ್ಯವಸ್ಥೆಯ ಮೇಲೆ, ಅನುವಂಶೀಯ ಮನೆತನದ ಮೇಲೆ, ಮೌಡ್ಯದ ಮೇಲೆ, ತನ್ನ ಹಿಂಬಾಲಕ ಪುಡಾರಿಗಳ ಮೇಲೆ, ಮತಾಂಧತೆಯ ಮೇಲೆ, ಸುಳ್ಳು ಭರವಸೆಗಳ ಮೇಲೆ, ಕುತಂತ್ರಗಳ ಮೇಲೆಯೇ ಜಯ ನಿರ್ಧಾರವಾಗಿ ಅವರು ಆಯ್ಕೆಯಾಗಿರುತ್ತಾರೆ.
ಅವರಲ್ಲಿ ಸಾಮಾನ್ಯರಿಗಿಂತ ಅಥವಾ ಇತರ ಎಲ್ಲಾ ಕ್ಷೇತ್ರಗಳ ಜನಪ್ರಿಯರಿಗಿಂತ ಹೆಚ್ಚಿನ ಆತ್ಮವಿಶ್ವಾಸ, ಜನ ಬೆಂಬಲ, ಹಣ ಬೆಂಬಲ, ಅಧಿಕಾರದ ಬೆಂಬಲ, ನಾಯಕರ ಬೆಂಬಲ ಇರುತ್ತದೆ. ಇದರ ಜೊತೆಗೆ ಶಾಸಕರು ಅನೇಕ ಮಿತಿಗಳಿಗೆ ಒಳಪಟ್ಟಿರುತ್ತಾರೆ.
ತನಗೆ ರಾಜಕೀಯ ಅವಕಾಶ ನೀಡಿದ ನಾಯಕ ಅಥವಾ ನಾಯಕರುಗಳಿಗೆ, ಅವರಿಗೆ ಸೀಟು ನೀಡಿದ ಪಕ್ಷಕ್ಕೇ, ಅವರಿಗೆ ಓಟು ಹಾಕಿದ ಜಾತಿ ಧರ್ಮ ಭಾಷೆಯ ಅಥವಾ ಪರಿಚಿತ ಜನರಿಗೆ, ಅವರಿಗೆ ಹಣ ಮತ್ತು ಇತರೆ ಸಹಾಯ ಮಾಡಿದವರಿಗೆ, ಅವರಿಗಾಗಿ ಹಗಲು ರಾತ್ರಿ ದುಡಿದ ಕಾರ್ಯಕರ್ತರಿಗೆ, ಅವರನ್ನು ಬೆಳೆಸಿದ ಕುಟುಂಬದವರಿಗೆ ಹೀಗೆ ಅನೇಕರಿಗೆ ನಿಷ್ಠೆಯನ್ನೂ ಪ್ರದರ್ಶಿಸಬೇಕಾದ ಅನಿವಾರ್ಯತೆ ಸಿಲುಕಿರುತ್ತಾರೆ.
ಇದರ ನಡುವೆ, ವಿರೋಧಿಗಳು, ಮಾಧ್ಯಮದವರು, ಸಾಮಾಜಿಕ ಜಾಲತಾಣಗಳು, ಹಿತಶತ್ರುಗಳು, ಲೋಕಾಯುಕ್ತ ಪೋಲೀಸರು ಮುಂತಾದವರ ಕಣ್ಣು ತಪ್ಪಿಸಿ ಚುನಾವಣೆಗಾಗಿ ಮಾಡಿರುವ ಖರ್ಚಿನ ಸಂಪಾದನೆ, ದಿನನಿತ್ಯದ ಜನರ ಬೇಡಿಕೆಗಳ ನಿರ್ವಹಣೆ, ಸಂಘಟನೆಗಳಿಗೆ ಧನ ಸಹಾಯ, ಪಕ್ಷಕ್ಕೆ ದೇಣಿಗೆ, ಮುಂದಿನ ಚುನಾವಣೆಗೆ ಹಣ, ಬಂಧು ಮಿತ್ರರ ಬೇಡಿಕೆಗಳ ಪೂರೈಕೆ ಮುಂತಾದ ಒತ್ತಡಗಳು ಇರುತ್ತವೆ.
ಇಂತಹ ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಪರಿಸ್ಥಿತಿಯಲ್ಲಿ ಶಾಸಕರುಗಳಿಗೆ ಉಪಯೋಗವಾಗುವ- ವೈಚಾರಿಕ ಮನೋಭಾವ ಬೆಳೆಸುವ - ಪರಿವರ್ತನೆ ಹೊಂದುವ ರೀತಿಯಲ್ಲಿ ತರಬೇತಿ ನೀಡಬೇಕು. ತಾಂತ್ರಿಕವಾಗಿ ಕಾನೂನು, ಸಂವಿಧಾನ, ವಿಧಾನಸಭೆ ಕಾರ್ಯಕಲಾಪಗಳು, ಪ್ರೋಟೋಕಾಲ್ ಇತ್ಯಾದಿಗಳನ್ನು ಸಂವಿಧಾನ ತಜ್ಞರು ಮತ್ತು ಹಿರಿಯ ಅನುಭವ ಸಂಸದೀಯ ಪಟುಗಳು ತಿಳಿವಳಿಕೆ ನೀಡಬಹುದು. ಆದರೆ ವ್ಯವಸ್ಥೆಯ ಸುಧಾರಣೆಗೆ ಅದನ್ನು ಮೀರಿದ ಕೌನ್ಸಿಲಿಂಗ್ ನ ಅವಶ್ಯಕತೆ ಇದೆ. ಮುಖ್ಯವಾಗಿ...
ಇಡೀ ವ್ಯವಸ್ಥೆ ಭ್ರಷ್ಟತೆಯಿಂದ ತುಂಬಿರುವಾಗ ಶಾಸಕರು ಸಂಪೂರ್ಣ ಯು ಟರ್ನ್ ಆಗಿ ಪ್ರಾಮಾಣಿಕರಾಗುವುದು ಅಸಾಧ್ಯ. ಆಗ ಬದುಕಿನ ನಶ್ವರತೆಯನ್ನು ಅರ್ಥ ಮಾಡಿಸಿ, ಅವರ ಸ್ಥಾನದ ಮಹತ್ವವನ್ನು ತಿಳಿಸಿ ಕಡಿಮೆ ಭ್ರಷ್ಟರಾಗುವ ಮತ್ತು ಬಡವರು - ಅಸಹಾಯಕರ ವಿಷಯದಲ್ಲಿ ಸಂಪೂರ್ಣ ಸೇವಾ ಮನೋಭಾವ ವ್ಯಕ್ತಪಡಿಸುವಂತೆ ಅವರಲ್ಲಿ ಮನವಿ ಮಾಡಿಕೊಳ್ಳಬೇಕು. ಯಾವುದೋ ಶ್ರೀಮಂತ ವ್ಯವಹಾರದಲ್ಲಿ ಸ್ವಲ್ಪ ಕಮೀಷನ್ ಪಡೆದರು ಸರ್ಕಾರಿ ಯೋಜನೆಗಳ ಗುಣಮಟ್ಟ ಕಡಿಮೆಯಾಗದಂತೆ ಮುತುವರ್ಜಿ ವಹಿಸಬೇಕು. ಇಲ್ಲಿ ಆಧ್ಯಾತ್ಮ ಗುರುಗಳು ಸಂಪೂರ್ಣ ಪ್ರಾಮಾಣಿಕತೆಯನ್ನು ಹೇಳುತ್ತಾರೆ. ಸ್ವತಃ ಅವರೇ ಇರುವುದಿಲ್ಲ. ಅವರ ಆಸ್ತಿಯಲ್ಲಿ ಸ್ವಲ್ಪ ದಾನ ಸಹ ಮಾಡುವುದಿಲ್ಲ. ಬೇರೆಯವರಿಗೆ ಬುದ್ದಿ ಹೇಳುತ್ತಾರೆ.
ಜಾತಿ ಬೇದ ಪಕ್ಷ ಬೇದವೆಣಿಸದೆ ತಮ್ಮ ಕ್ಷೇತ್ರದ ಎಲ್ಲಾ ಜನರನ್ನು ಪ್ರೀತಿಯಿಂದ ಮಾತನಾಡಿಸಿ ಅಹವಾಲು ಕೇಳುವ ವಿಶಾಲ ಮನೋಭಾವ ಬೆಳೆಸಿಕೊಳ್ಳವಂತೆ ಪ್ರೇರೇಪಿಸಬೇಕು. ಶಾಸಕರು ಇಡೀ ವಾರ ಸಂಪೂರ್ಣ ಸಾರ್ವಜನಿಕ ಕೆಲಸಗಳಲ್ಲಿಯೇ ಕಳೆದು ಹೋಗಬಾರದು. ವಾರಕ್ಕೆ ಒಂದು ದಿನ ಓದು ಚಿಂತನೆ ಮೌನ ಅಧ್ಯಯನಗಳಿಗೆ ಸಮಯ ನೀಡಬೇಕು. ಇದರಿಂದ ತನ್ನ ಕ್ಷೇತ್ರಕ್ಕೆ ಒಳ್ಳೆಯ ಯೋಜನೆ ರೂಪಿಸಲು ಸಾಧ್ಯ. ಅತಿಯಾದ ಕೆಲಸದ ಒತ್ತಡ ಮನುಷ್ಯನ ಚಿಂತನೆ ಮತ್ತು ಕ್ರಿಯಾತ್ಮಕ ಶಕ್ತಿಯನ್ನು ಕುಂದಿಸುತ್ತದೆ ಎಂದು ಮನವರಿಕೆ ಮಾಡಿಕೊಡಬೇಕು.
ಶಾಸಕರು ಕೇವಲ ರಸ್ತೆ, ವಿದ್ಯುತ್, ಸಾರ್ವಜನಿಕ ಸಮಾರಂಭಗಳು, ಜನರ ವೈಯಕ್ತಿಕ ಸಮಸ್ಯೆಗಳು, ಗಲ್ಲಿ ಓಡಾಟಗಳಿಗೇ ಹೆಚ್ಚು ಸಮಯ ಮೀಸಲಿಡದೆ ಅದನ್ನು ಮೀರಿದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ತಮ್ಮ ಕ್ಷೇತ್ರದಲ್ಲಿ ಕನಿಷ್ಠ 50 ಸುಸಜ್ಜಿತ ಗ್ರಂಥಾಲಯಗಳು, 5 ಆಧುನಿಕ ಕ್ರೀಡಾ ಸಂಕೀರ್ಣಗಳು, ಪ್ರತಿ ವಸತಿ ಪ್ರದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರಿನ ಘಟಕಗಳು, ಆರು ತಿಂಗಳಿಗೊಮ್ಮೆ ಉದ್ಯೋಗ ಮೇಳಗಳು, ವರ್ಷಕ್ಕೊಮ್ಮೆ ಸಾಂಸ್ಕೃತಿಕ ಉತ್ಸವಗಳು, ಪ್ರತಿ ತಿಂಗಳಿಗೊಮ್ಮೆ ಕ್ಷೇತ್ರದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಗ್ರಾಮ ವಾಸ್ತವ್ಯ. ಪ್ರತಿ ವಾರ ಒಂದೊಂದು ಸರ್ಕಾರಿ ಆಸ್ಪತ್ರೆ, ಶಾಲೆ, ಹಾಸ್ಟೆಲ್ ಗೆ ಭೇಟಿ ಮತ್ತು ಅಲ್ಲಿನ ಮುಖ್ಯಸ್ಥರೊಂದಿಗೆ ನಿರಂತರ ಸಂಪರ್ಕ ಹೀಗೆ ಕ್ರಮಬದ್ಧವಾಗಿ ಕೆಲಸ ಮಾಡಬೇಕು.
ಆಧುನಿಕತೆಯ ಭರದಲ್ಲಿ ಗಾಳಿ ನೀರು ಆಹಾರ ಅತ್ಯಂತ ಅಪಾಯಕಾರಿ ಹಂತ ತಲುಪಿದೆ. ಅದರ ಶುದ್ಧೀಕರಣ ಕ್ರಿಯೆಗೆ ಹೆಚ್ಚು ಒತ್ತು ಕೊಡಬೇಕು. ಸ್ಥಳೀಯ ಹೋಟೆಲುಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ಜನರಲ್ಲಿ ದೇಶ ಪ್ರೇಮದ ಜಾಗೃತಿ ಮೂಡಿಸಬೇಕು. ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.
ಹೀಗೆ ಶಾಸಕರಿಗೆ ಈ ವಿಷಯಗಳಲ್ಲಿ ಕೌನ್ಸಿಲಿಂಗ್ ಮಾಡಿದರೆ ಅವರ ಕರ್ತವ್ಯಗಳನ್ನು ಜಾಗೃತ ಗೊಳಿಸಿದಂತಾಗುತ್ತದೆ. ಜೊತೆಗೆ ಕೆಲಸ ಮಾಡಲು ಮುಕ್ತ ಅವಕಾಶವನ್ನು ಕಲ್ಪಿಸಬೇಕು. ಅಲ್ಲದೆ ಈ ರೀತಿಯ ಕೌನ್ಸಿಲಿಂಗ್ ಪ್ರತಿ ವರ್ಷ ಮಾಡುತ್ತಲೇ ಇರಬೇಕು. ಅದಕ್ಕೆ ರಾಜ್ಯದ, ರಾಷ್ಟ್ರದ ಮತ್ತು ಅಂತರಾಷ್ಟ್ರೀಯ ಮಟ್ಟದ ನಿಜವಾದ ಸಾಧಕರನ್ನು ಕರೆಸಬೇಕು. ಮುಖವಾಡದ ಮರೆಯಲ್ಲಿ ವೇಷ ತೊಟ್ಟ ಘೋಮುಖ ವ್ಯಾಘ್ರಗಳಿಗೆ ಸಮಾಜದಲ್ಲಿ ಮಾನ್ಯತೆ ದೊರೆಯಬಾರದು. ಎರಡೂ ಪಂಥಗಳಲ್ಲಿ ಈ ರೀತಿಯ ಅತಿರೇಕಿಗಳು ಇದ್ದಾರೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಕೇವಲ ಒಂದು ಕಾಟಾಚಾರದ ಶಿಬಿರವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ