ಶಾಸ್ತ್ರೀಯ ಭಾಷೆಯ ಗುಣ ಲಕ್ಷಣಗಳು

ಶಾಸ್ತ್ರೀಯ ಭಾಷೆಯ ಗುಣ ಲಕ್ಷಣಗಳು

ಬರಹ

ಈ ಹಿಂದೆ ಪ್ರಸ್ತಾಪಿಸಿದ ಹಾಗೆ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ತಮಿಳು ಹಾಗೂ ಸಂಸ್ಕ್ರತ ಪ್ರಾಧ್ಯಾಪಕ ಪ್ರೊ.ಜಾರ್ಜ್ ಎಲ್. ಹಾರ್ಟ್ ಅಂತರ್ಜಾಲದಲ್ಲಿ ತಾವು ಪ್ರಕಟಿಸಿದ್ದ ಲೇಖನದಲ್ಲಿ ಶಾಸ್ತ್ರೀಯ ಭಾಷೆಯ ಕುರಿತು ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದರು.
ಅವುಗಳೆಂದರೆ,

1) ಒಂದು ಭಾಷೆ ಪುರಾತನವಾಗಿರಬೇಕು
2) ಅದು ಸ್ವತಂತ್ರ ಪರಂಪರೆಯನ್ನು ಹೊಂದಿದ್ದು ತನ್ನಷ್ಟಕ್ಕೆ ತಾನೇ ಬೆಳೆದಿರಬೇಕು
3) ಬೇರೊಂದು ಬಾಷೆಯಿಂದ ಒಡಮೂಡಿರಬಾರದು
4) ಸಮೃದ್ಧ್ದವಾದ ಹಾಗೂ ಸಂಪದ್ಭರಿತವಾದ ಪ್ರಾಚೀನ ಇತಿಹಾಸ ಹೊಂದಿರಬೇಕು

ಇದು ಒಂದೆಡೆಯಾದರೆ, ಮತ್ತೊಂದೆಡೆ ಭಾರತ ಸರಕಾರ ಒಂದು ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಮಾನ್ಯ ಮಾಡುವುದಕ್ಕೆ ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದು, ಅವು ಇಂತಿವೆ:

1) ಒಂದು ಭಾಷೆಯ ಪಠ್ಯಗಳು/ದಾಖಲಾದ ಇತಿಹಾಸ ಒಂದು ಸಾವಿರ ವರ್ಷಕ್ಕೂ ಪುರಾತನವಾಗಿರಬೇಕು
2) ಪುರಾತನ ಸಾಹಿತ್ಯ /ಪಟ್ಯಗಳು ತಲೆತಲೆಮಾರುಗಳ ಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದು ಪರಿಗಣಿತವಾಗಿರುಬೇಕು
3) ಸಾಹಿತ್ಯಿಕ ಪರಂಪರೆ ಸ್ವೋಪಜ್ಞವಾಗಿದ್ದು, ಯಾವುದೇ ಬೇರೊಂದು ಭಾಷೆ/ಸಮುದಾಯದಿಂದ ಸ್ವೀಕಾರವಾಗಿರಬಾರದು
4) ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯ ಪ್ರಸ್ತುತ ಭಾಷೆ ಮತ್ತು ಸಾಹಿತ್ಯಕ್ಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಅಥವಾ ಅದರಿಂದ ಬೆಳವಣಿಗೆ ಹೊಂದಿದ ಭಾಷೆಗಳಿಗಿಂತ ಬೇರೆಯದೇ ಎನ್ನಿಸುವ ಹಾಗಿರಬೇಕು (ಉದಾಹರಣೆ: ಲ್ಯಾಟಿನ್ಗಿಂತ ರೋಮನ್; ಸಂಸ್ಕೃತ ಪಾಳಿಗಿಂತ ಪ್ರಾಕೃತ ಮತ್ತು ಆಧುನಿಕ ಇಂಡೋ ಆರ್ಯನ್ ಭಾಷೆಗಳು ಭಿನ್ನವಾಗಿರುವ ಹಾಗೆ)

ಮೇಲಿನ ಚಹರೆಗಳನ್ನು ಗಮನಿಸಿದಾಗ ತಿಳಿಯುವುದೇನೆಂದರೆ, ಭಾರತ ಸರಕಾರ ಗೊತ್ತುಪಡಿಸಿರುವ ಈ ಪಟ್ಟಿಗೂ, ಪ್ರೊ.ಜಾರ್ಜ್ ಎಲ್. ಹಾರ್ಟ್ ಅವರು ಮಾಡಿರುವ ಪಟ್ಟಿಗೂ ಅಂತಹ ವ್ಯತ್ಯಾಸವೇನು ಇಲ್ಲ. ಆದರೆ, ಯುನೆಸ್ಕೊ ಈಗಾಗಲೇ ಗುರುತಿಸಿರುವ ಭಾರತದ ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತದ ಬದಲು ಭಾರತ ಸಕರ್ಾರ ತಮಿಳನ್ನು ಮೊದಲು ಶಾಸ್ತ್ರೀಯ ಭಾಷೆಯೆಂದು ಘೋಷಿಸಿದ್ದರ ಹಿಂದೆ ಕೆಲವು ಹಿತಾಸಕ್ತಿಗಳು ಕೆಲಸ ಮಾಡಿರುವುದು ಮೊದಲ ನೋಟಕ್ಕೆ ಗೋಚರಿಸುತ್ತದೆ. ಅಲ್ಲದೇ, ಸಂಸ್ಕೃತ ಕೇವಲ ಯುನೆಸ್ಕೊದಿಂದ ಮಾತ್ರ ಅಮೇರಿಕ ಯುರೋಪ್ ದೇಶಗಳಲ್ಲಿಯೂ ಕ್ಲಾಸಿಕಲ್ ಭಾಷೆಯೆಂದೇ ಪರಿಗಣಿಸಲ್ಪಟ್ಟಿದ್ದು, ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿಯೂ ಕ್ಲಾಸಿಕಲ್ ಭಾಷೆಯಾಗಿಯೇ ಬೋಧಿಸಲ್ಪಡುತ್ತಿದೆ. ಆದರೆ, ಭಾರತದಲ್ಲಿ ಕ್ಲಾಸಿಕಲ್ ಭಾಷೆಯೆಂದು ಮೊದಲು ಘೋಸಿಸಲ್ಪಟ್ಟಿದ್ದು ಮಾತ್ರ ತಮಿಳು ಆನಂತರ, ಸಂಸ್ಕೃತ. ಅದೂ ತಮಿಳು ಕ್ಲಾಸಿಕಲ್ ಭಾಷೆಯೆಂದು ಘೋಷಿತವಾದ ಒಂದು ವರ್ಷದ ನಂತರ. ಹಾಗಾಗಿ, ಸಕರ್ಾರದ ಈ ಘೋಷಣೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಭಾರೀ ಚಚರ್ೆಗೆ ವಿವಾದಕ್ಕೆ ಗ್ರಾಸವಾಯಿತು. ಇಷ್ಟು ಸಾಲದೆಂಬಂತೆ, ಭಾರತ ಸಕರ್ಾರ ಕ್ಲಾಸಿಕಲ್ ಭಾಷೆಗಳನ್ನು ಗುರುತಿಸುವುದಕ್ಕೆ ಪಟ್ಟಿ ಮಾಡಿದ್ದ ನಾಲ್ಕು ಚಹರೆ/ಮಾನದಂಡವನ್ನು ಪರಿಷ್ಕರಿಸಿ, "ಒಂದು ಭಾಷೆಯ ಪಠ್ಯಗಳು/ದಾಖಲಾದ ಇತಿಹಾಸ ಒಂದು ವರ್ಷಕ್ಕೂ ಪುರಾತನವಾಗಿದ್ದಿರಬೇಕು" ಎನ್ನುವ ಚಹರೆಯನ್ನು ಬದಲಿಸಿ, ಒಂದೂವರೆ ಸಾವಿರ ವರ್ಷಗಳಿಗೆ ಹಿಗ್ಗಿಸಿತು. ಇದರಿಂದಾಗಿ, ಒಂದು ಸಾವಿರ ವರ್ಷದಿಂದ ಆಚೆ ಹಾಗೂ ಒಂದೂವರೆ ಸಾವಿರ ವರ್ಷದ ಒಳಗಿನ ಇತಿಹಾಸವನ್ನು ಹೊಂದಿರುವ ಇತರೇ ಭಾರತೀಯ ಭಾಷೆಗಳನ್ನು ಕ್ಲಾಸಿಕಲ್ ಭಾಷೆ ಪರಿಧಿಯಿಂದ ಹೊರ ಹಾಕುವುದರೊಂದಿಗೆ ತಾನು ಅನುಸರಿಸುತ್ತಿರುವ "ಭಾಷಾ ತಾರತಮ್ಯ"ವನ್ನು ಸರಿಪಡಿಸಲು ತಾನು ಈ ಮೊದಲು ಅನುಸರಿಸಿದ್ದ ನೀತಿ ಹಾಗೂ ಅನ್ವಯಿಸಿದ್ದ ಮಾನದಂಡಗಳನ್ನು ಹೊಂದಿರುವ ಭಾಷೆಗಳಿಗೆ ಕ್ಲಾಸಿಕಲ್ ಭಾಷೆಯ ಸ್ಥಾನಮಾನ ನೀಡುವುದರೊಂದಿಗೆ ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿರುವ "ಸಮಾನತೆ" ತತ್ವವನ್ನು ಎತ್ತಿ ಹಿಡಿಯಬೇಕಾಗಿದೆ.

ಇನ್ನು ಕ್ಲಾಸಿಕಲ್ ಸ್ಥಾನಮಾನ ಏಕೆ ಬೇಕು? ಅದರಿಂದ ಒಂದು ಭಾಷೆಗೆ ಹಾಗುವ ಪ್ರಯೋಜನಗಳಾದರೂ ಏನು? ಇತ್ಯಾದಿ ಪ್ರಶ್ನೆಗಳು ಏಳುತ್ತವೆ. ಆದರೆ, ಇಲ್ಲಿ ಅವುಗಳನ್ನು ಹೇಳ ಹೋಗದೇ ನೇರವಾಗಿ ಕ್ಲಾಸಿಕಲ್ ಸ್ಥಾನಮಾನಕ್ಕೆ ಕನ್ನಡ ಭಾಷೆ ಎಷ್ಟು ಹಾಗೂ ಹೇಗೆ ಎಂಬುದನ್ನಷ್ಟೆ ವಿವರಿಸಬಯಸುತ್ತೇನೆ. ಇಡೀ ಲೇಖನದಲ್ಲಿ ಪ್ರಸ್ತಾಪವಾಗಿರುವ ಪ್ರಮುಖ ಅಂಶಗಳನ್ನು 2006 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ, ಭಾರತೀಯ ಭಾಷಾ ಸಂಸ್ಥಾನದ ಭಾಷಾ ತಜ್ಞರಾದ ಪ್ರೊ.ಲಿಂಗದೇವರು ಹಳೆಮನೆಯವರು ರಚಿಸಿರುವ "ಶಾಸ್ತ್ರೀಯ ಭಾಷೆ ಪರಿಕಲ್ಪನೆ ಮತ್ತು ಸ್ವರೂಪ" ಎನ್ನುವ ಪುಸ್ತಿಕೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಅದುವೇ ಈ ಲೇಖನದ ಏಕೈಕ ಆಕರ ಗ್ರಂಥವಾಗಿದೆ. ಆದರೂ, 2006 ರ ನಂತರ ಕನ್ನಡ ಭಾಷಾ ಸಂಶೋಧನೆಯಲ್ಲಿ ಕೆಲವು ಪ್ರಮುಖ ಬೆಳವಣಿಗೆಗಳಾಗಿವೆ. ಹಾಗಾಗಿ, ಅವುಗಳನ್ನು ಉಲ್ಲೇಖಿಸಿ ನಮ್ಮ ಕನ್ನಡ ಭಾಷೆಯ ಇತಿಹಾಸ, ಶ್ರೇಷ್ಠತೆ ಹಾಗೂ ಅನನ್ಯತೆಗಳನ್ನು ಇಲ್ಲಿ ದಾಖಲಿಸುವುದು ನನ್ನ ಬಹುಮುಖ್ಯ ಕಾಳಜಿಯಾಗಿದೆ. ಯಾವುದೇ ಬಾಷೆಯವರಿಗೆ ಅವರವರ ಭಾಷೆ ಶ್ರೇಷ್ಠವೆನಿಸಿದರೂ, ಒಟ್ಟಾರೆಯಾಗಿ ಎಲ್ಲಾ ಭಾಷೆಗಳ ಗುಣ ಧರ್ಮ ಒಂದೇ ಎಂಬುದನ್ನು ಮರೆಯದಿದ್ದಲ್ಲಿ ಮಾತ್ರ ವಿಶ್ವದಲ್ಲಿ ಭಾಷಾ ಸಾಮರಸ್ಯ ಮೂಡಲು ಸಾಧ್ಯ ಎಂಬುದನ್ನು ಯಾರೂ ಮರೆಯಬಾರದಲ್ಲವೇ?