ಶಿಕ್ಷಕರೊಬ್ಬರ ಕೊರಗು

ಶಿಕ್ಷಕರೊಬ್ಬರ ಕೊರಗು

“ನಮ್ಮದೊಂದು ಪ್ರಾಥಮಿಕ ಶಾಲೆ. 308 ಮಕ್ಕಳಿದ್ದಾರೆ . ಎಲ್ಲಾ ಹಳ್ಳಿಯ ಹುಡುಗರು. ಅವರ ಅಪ್ಪ ಅಮ್ಮಂದಿರು ಯಾರೂ ಕಲಿತವರಲ್ಲ. ಹೀಗಾಗಿ ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣ ಇಲ್ಲವೇ ಇಲ್ಲ. ಮನೆಯಲ್ಲಿ ಕಲಿಯುವದಿದ್ದರೆ ಅಪ್ಪ ಕುಡಿದುಕೊಂಡು ಬಂದು ಒದರುವ ವಿಚಿತ್ರ ಶಬ್ದಗಳೇ . ಅಂಥ ಮಕ್ಕಳಿಗೆ ಅವರು ಶಾಲೆಯಲ್ಲಿ ಏನು ಕಲಿಯುತ್ತಾರೋ ಅದು ಮಾತ್ರ ಅಭ್ಯಾಸ . ನಾವು ಹೇಳಿಕೊಟ್ಟದ್ದೇ ವೇದವಾಕ್ಯ .
 
“ಅಂಥಾ ಶಾಲೆ ನಮ್ಮದು. ಇಲ್ಲಿ ಆರು ಜನ ಅಧ್ಯಾಪಕರಿದ್ದೆವು. ಸುಮಾರು 400 ಮಕ್ಕಳು ಬಂದು ಸೇರಿಕೊಳ್ಳುವ ಈ ಶಾಲೆಗೆ ಆರು ಜನ ಅಧ್ಯಾಪಕರು ಸಾಲುತ್ತಿರಲಿಲ್ಲ. ಸರ್ಕಾರ ಶಿಕ್ಷಕರ ಸಂಖ್ಯೆ ಹೆಚ್ಚು ಮಾಡಲು ಒಪ್ಪಲಿಲ್ಲ. ಈಗ ನಾವು ಆರು ಜನರಲ್ಲಿ ಇಬ್ಬರು ನಿವೃತ್ತರಾಗಿದ್ದಾರೆ - ಒಬ್ಬರು ಹೆರಿಗೆ ರಜೆ ತೆಗೆದುಕೊಂಡು ಅಕ್ಟೋಬರ್ ನಿಂದ ಮನೆ ಸೇರಿದ್ದಾರೆ. ಇದ್ದ ಮೂವರಲ್ಲಿ ಹೆಡ್ಮಾಸ್ಟರಿಗೆ ಮೀಟಿಂಗ್. ಇನ್ನೊಬ್ಬರು ಅವಶ್ಯ ರಜೆ ಹಾಕಿ ಹೋಗಬೇಕಾಯ್ತು. 380 ಮಕ್ಕಳ ಮಧ್ಯೆ ನಾನೊಬ್ಬನೇ. “ನನಗೆ ಹುಚ್ಚು ಹಿಡಿದ ಹಾಗೆ ಆಯ್ತು. ಈ ಮಕ್ಕಳಿಗೆ ನಾವು ಮಾಡುತ್ತಿರುವ ಮೋಸ ನೆನೆದು ಕಣ್ಣೀರು ಬಂತು. ಆ ಮಾಸ್ತರರು ಹೇಳುವಾಗ ಮೈಯಲ್ಲಿ ರಕ್ತ ಇದ್ದವನಿಗೆ ಕಣ್ಣಲ್ಲಿ ಹರಿದು ಬರಬೇಕು.
 
ನಿಮಗೆ ಗೊತ್ತಿದೆಯೋ ಇಲ್ಲವೋ ಈ ಸ್ಥಿತಿ ನಮ್ಮ ಪ್ರತಿಯೊಂದು ಹಳ್ಳಿಯಲ್ಲಿ ಇದೆ. ಗದ್ದುಗೆಗೆ ಏರಿದವರೆಲ್ಲ ಮುಂದಾಲೋಚನೆಯಿಲ್ಲದೇ 'ಜನಪ್ರಿಯ' ಯೋಜನೆಗಳನ್ನು ಜಾರಿಗೆ ತಂದ ಪರಿಣಾಮ ಅತ್ಯಂತ ದಾರುಣವೆನಿಸಿರುವುದು ನಮ್ಮ ಕನ್ನಡ ಶಾಲೆಯ ಮಕ್ಕಳ ಮೇಲೆ. ಹಿಂದೆಲ್ಲ ಅಪ್ಪಂದಿರೇ ಕಷ್ಟಪಟ್ಟು ತೆಗೆದುಕೊಡಿುತ್ತಿದ್ದ ಪುಸ್ತಕ ಬಟ್ಟೆಗಳನ್ನು ತಾವೇ ತೆಗೆದುಕೊಡುತ್ತೇವೆ ಎಂಬ ದೊಡ್ಡಸ್ತಿಕೆ ತೋರಿದ ಸರ್ಕಾರ - ಇದೆಲ್ಲ ಕೊಟ್ಟು , ಕಲಿಸುವ ಶಿಕ್ಷಕರೇ ಇಲ್ಲದ ಹಾಗೆ ಮಾಡಿತು. ಇಂದು ಈ ರಾಜ್ಯದ ಶಾಲೆಗಳಲ್ಲಿ ಸಾಮಾನ್ಯವಾಗಿ ಕಲಿಸುವವರ ಕೊರತೆಯಿದೆಯೆಂದರೆ ನಂಬುತ್ತೀರಾ?
 
ನಮ್ಮ ಕರ್ಮ, ಶಿಕ್ಷಣದ ಮಟ್ಟಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ದಾರಿ ತಪ್ಪಿಹೋಗಿದೆ. ಇದೆಲ್ಲ ಕೆಂಪು ಜನರ ಬಳುವಳಿಯೆಂದು ಟೀಕಿಸುವವರು, ಅವರ ವ್ಯವಸ್ಥೆಯನ್ನೇ ಅಳವಡಿಸುವಲ್ಲಿಯೂ ಎಲ್ಲಿ ತಪ್ಪಿದ್ದೇವೆಂದು ಯೋಚಿಸುವುದಿಲ್ಲ. ಭಾರತದಲ್ಲಿ ಶಿಕ್ಷಣಕ್ಕಾಗಿ ವ್ಯಯಿಸುವುದು, ಸರ್ಕಾರದ ಶೇಕಡಾ ಐದರಷ್ಟು ದುಡ್ಡು ಮಾತ್ರ ಎಂದು ಹಿಂದಿನ ಶಿಕ್ಷಣ ಸಚಿವರೇ ಹೇಳಿದ್ದರು. ನಮ್ಮ ಯೋಜನಾ ತಜ್ಞರುಗಳ ಶಿಕ್ಷಣದ ಮಹತ್ವವನ್ನು ಅರ್ಥಮಾಡಿಕೊಂಡಿದ್ದು ಅಷ್ಟು. ಅದರ ಪಾಪವನ್ನು ಇನ್ನೂ ಎಷ್ಟೋ ತಲೆಮಾರುಗಳು ಹೊರಬೇಕಾದೀತು.
 
ಎಲ್ಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ. ಅದರಲ್ಲೂ ಪ್ರಾಥಮಿಕ ಶಿಕ್ಷಣ ಎಲ್ಲಕ್ಕಿಂತ ಮುಖ್ಯವಾಗುವದರಿಂದ ಅದಕ್ಕೆ ಸರಿಯಾದ ಆರೈಕೆ, ತರಬೇತಿ ಸಿಗಬೇಕೆಂಬುದು, ಎಲ್ಲರೂ ಎಚ್ಚತ್ತು ಪ್ರಾಥಮಿಕ ಶಿಕ್ಷಣವನ್ನು ಕಡೆಗಣಿಸುವುದು ದೇಶದ ಭವಿಷ್ಯವನ್ನೆ ಬದಲಿಕೊಡುವುದು ಎಂಬ ಅರಿವು. ಆದರೆ ಏನು ಮಾಡೋಣ? ನಮ್ಮಲ್ಲಿ ಅತ್ಯಂತ ನಿರ್ಲಕ್ಷಕ್ಕೆ ಒಳಗಾದ ಇಲಾಖೆ ಪ್ರಾಥಮಿಕ ಶಿಕ್ಷಣ. ಅದಕ್ಕೇ ಈ ದೇಶ ಹೀಗಿದೆ ; ಮುಂದೆಯೂ ಹೀಗೇ ಇರುತ್ತದೆ!
 
ನಮ್ಮಲ್ಲಿ ಎಲ್ಲವೂ ಸರಿಯಿರುವ ಶಾಲೆಗಳಿವೆಯೇ? ಶಾಲೆಯಿಲ್ಲ. ಶಾಲೆಗೆ ಕಟ್ಟಡವಿಲ್ಲ. ಬೆಂಚುಗಳಿಲ್ಲ. ಕರಿಹಲಗೆಯಿಲ್ಲ. ನಮ್ಮ ಶಾಲೆಗಳು ಎಲ್ಲಾ ಇಲ್ಲಗಳ ಕೂಪಗಳು. ಮೊನ್ನೆ ಹಾಸನದ ಜಿಲ್ಲಾ ಪರಿಷತ್ತಿನಲ್ಲಿ ಸದಸ್ಯರೊಬ್ಬರು ಹೇಳಿದ್ದು. ಒಂದೇ ಕೋಣೆಯಿರುವ ಆ ಶಾಲೆಯಲ್ಲಿ ನಾಲ್ಕು ಮಾಸ್ತರುಗಳು, ಏಳು ತರಗತಿಗಳು, ಸುಮಾರು 350ಜನ ಮಕ್ಕಳಿಗೆ ಒಟ್ಟಿಗೆ ಪಾಠ ನಡೆಯುತ್ತಿದೆಯಂತೆ. ಅಲ್ಲಿ ಕಲಿತವ ಏನು ಕಲಿತಾನು?
 
ನನಗೆ ಬೇಸರವಾಗುವುದೆಂಂದರೆ, ಸರ್ಕಾರ 'ದಿವಾಳಿ'ಯೆಂದು ಘೋಷಿಸಿಕೊಂಡಿರುವ ವೇಳೆ, ನಮ್ಮ ಜನರಾದರೂ ಸಂಬಂಧವೇ ಇಲ್ಲದಂತೆ ಕುಳಿತಿರುವುದು. ಹಣವಿಲ್ಲವೆಂದು ಶಿಕ್ಷಕರನ್ನೇ ನೇಮಿಸದೇ ಸರ್ಕಾರ ಮೂರು ವರ್ಷಗಳಿಂದ ಕೈಕಟ್ಟಿ ಕುಳಿತಿದೆ. ಆದರೆ ಜನ ಮನಸ್ಸು ಮಾಡಿದ್ದರೆ ತಮ್ಮದೇ ಊರ ಮಕ್ಕಳಿಗೆ ನ್ಯಾಯ ಒದಗಿಸುವುದೇನೂ ಕಷ್ಟವಾಗುತ್ತಿರಲಿಲ್ಲ. ಬೇಡ, ಶಾಲೆಯಲ್ಲಿ ತಮ್ಮ ಮಕ್ಕಳ ಸ್ಥಿತಿಯ ಬಗ್ಗೆ ಪಾಲಕರು ಸ್ವಲ್ಪವೇ ತಲೆಕೆಡಿಸಿಕೊಂಡಿದ್ದರೂ ಈ ಪರಿಸ್ಥಿತಿ ಬರುತ್ತಿರಲಿಲ್ಲ.
 
ಮೊನ್ನೆ ಸಿಕ್ಕ ಶಿಕ್ಷಕರು ಹೇಳಿದರು "ಸಾರ್, ನಿಮಗೆ ಏಳು ಸೂತ್ರಗಳಿದ್ದಾವೆ. ಕಾಪಿ ಬರೆಸಬೇಕು, ಒಳ್ಳೆ ಕೆಲಸ ಮಾಡಿಸಬೇಕು, ದಿನಾ ಹೊಸ ಶಬ್ದಗಳನ್ನು ಬರೆಸಬೇಕು ಮುಂತಾಗಿ. ಆದರೆ ನಮ್ಮ ಶಾಲೆಯಲ್ಲಿ ನನಗೆ ಹಾಜರಿ ತೆಗೆದುಕೊಳ್ಳುವುದಕ್ಕಿಂತ ಬೇರೇನೂ ಮಾಡಲಾಗುತ್ತಿಲ್ಲ. ನನ್ನಿಂದಲೇ ಈ ಮಕ್ಕಳಿಗೆ ಅನ್ಯಾಯವಾಗುತ್ತಿದೆಯಲ್ಲಾ ಎಂದು ಹೊಟ್ಟೆ ಉರಿಯುತ್ತಿದೆ. ಏನು ಮಾಡಲಿ? “ ಅಪ್ಪಂದಿರೇ , ಅಮ್ಮಂದಿರೇ ನೀವಾದರೂ ಹೇಳುತ್ತಿರಾ ಅವರೇನು ಮಾಡಬೇಕು?
(ಲೇಖನ ಬರೆದ ವರ್ಷ 1990)
 
(ಚಿತ್ರ ಕೃಪೆ : ಗೂಗಲ್)