ಶಿಕ್ಷಕರೊಬ್ಬರ ಪತ್ರ...

ಶಿಕ್ಷಕರೊಬ್ಬರ ಪತ್ರ...

ನನ್ನ ವಿದ್ಯಾರ್ಥಿಗಳಿಗೆ ಕಳಿಸಿದ ಮೆಸೇಜ್. ನನ್ನ ಹಲವು ಹಿರಿಯ ವಿದ್ಯಾರ್ಥಿಗಳು ಇಲ್ಲೂ ಇದ್ದಾರೆ. ಅವರಿಗೂ ನನ್ನದು ಇದೇ ಮಾತು:

ಪ್ರಿಯ ವಿದ್ಯಾರ್ಥಿಗಳೆ,

ನಾನು ಅರವಿಂದ.

ನಾನು ಫೋನ್ ಮಾಡಿದಾಗ ನಿಮಗೆ ಸಮಯ ಹೊಂದದೆ ಹೋಗಬಹುದೆಂದು ನಿಮಗೆ ಅನುಕೂಲವಾದ ಸಮಯದಲ್ಲಿ ನನಗೆ ನೀವೇ ಫೋನ್ ಮಾಡಿ ಎಂದಿದ್ದೇನೆ. ಹಲವರು ಫೋನ್ ಮಾಡುತ್ತಲೂ ಇದ್ದಾರೆ. ಕೆಲವರು ಫೋನ್ ಮಾಡುತ್ತಿಲ್ಲ. ನಾನು ಫೋನ್ ಮಾಡಿದಾಗ ಅವರಿಗೆ ತೆಗೆದುಕೊಳ್ಳಲೂ ಆಗುತ್ತಿಲ್ಲ.

ಫೋನ್ ಮಾಡಿ ಎಂದರೆ ಫೋನೇ ಮಾಡಬೇಕೆಂದಲ್ಲ. ನನ್ನ ಪರ್ಸನಲ್ ನಂಬರ್‌ಗೆ ಸಂಪರ್ಕಿಸಿ ನಿಮ್ಮ ಹಾಜರಿ ಹಾಕಿ ಏನಾದರೂ ಚಾಟ್ ಮಾಡಿದರೂ ಸಾಕು. ಒಟ್ಟಿನಲ್ಲಿ ನೀವು ನಿಮ್ಮ ಎಲ್ಲ ಶಿಕ್ಷಕರೊಂದಿಗೆ ದಿನದಲ್ಲಿ ಒಮ್ಮೆಯಾದರೂ ಸಂಪರ್ಕ ಮಾಡಬೇಕು. ಈ ಸಂಪರ್ಕ ಇದ್ದರೆ ಕಲಿಕೆಯ ಒಂದು ಮನೋಭಾವನೆ ಉಳಿದುಕೊಳ್ಳುತ್ತದೆ. ಶಿಕ್ಷಕರೊಂದಿಗೆ ಸಂಪರ್ಕವೇ ಇಲ್ಲದಿದ್ದರೆ ಕಲಿಕಾ ಪರಿಸರ ಕಡಿಮೆ ಇರುವ ಮಕ್ಕಳಿಗೆ ಕಲಿಕೆಯ ಮೂಡ್ ಬಹಳ ಬೇಗ ಹೊರಟು ಹೋಗುತ್ತದೆ. ಅದಕ್ಕಾಗಿ ಹೇಳಿದ್ದು. ನೀವಿನ್ನೂ ಬಹು ದೀರ್ಘಕಾಲ ಜೀವಿಸಲಿಕ್ಕಿದೆ. ಅನೇಕಾನೇಕ ಸಾಧನೆಗಳನ್ನು ಮಾಡಲಿಕ್ಕಿದೆ. ಆದರೆ ಯಾವ ಸಾಧನೆಯನ್ನು ಮಾಡಬೇಕಾದರೂ ಶಿಕ್ಷಣವು ಕೊಡುವ ಅಂತಃಶ್ಶಕ್ತಿ ಇರಲೇ ಬೇಕು. ಬಡತನ ಇರಬಹುದು. ಕಷ್ಟ ಇರಬಹುದು. ಅದನ್ನು ನಿವಾರಿಸಲು ಸಂಪಾದನೆಯನ್ನೂ ಮಾಡಬಹುದು. ಆದರೆ ಜ್ಞಾನದ ಶಕ್ತಿ ಇಲ್ಲದಿದ್ದರೆ ಮಾಡಿದ ಸಂಪಾದನೆಯಿಂದ ನಿಮಗೂ, ಸಮಾಜಕ್ಕೂ ಯಾವ ಸತ್ಪರಿಣಾಮ ಉಂಟಾಗಬೇಕೊ ಅದೇ ಆಗುವುದಿಲ್ಲ. 

ಕಲಿಕೆಯು ಬರಿಯ ಪರೀಕ್ಷೆಗಾಗಿ ಅಲ್ಲ. ಪರೀಕ್ಷೆಯಲ್ಲಿ ಬರೆದಾದ ನಂತರ ಉಳಿದುಕೊಳ್ಳುವುದು ಜ್ಞಾನ. ಅದಕ್ಕಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ನೀವು ಪ್ರಶ್ನೋತ್ತರಗಳನ್ನು ಬರೆಯುವುದು, ಪಾಠದ ಬಗ್ಗೆ ಕೇಳುತ್ತಾ ಇರುವುದು ಇದನ್ನೇ ಮಾಡಬೇಕೆಂದು ನಾನು ಹೇಳುತ್ತಿಲ್ಲ. ನಿಮ್ಮ ಗೊಂದಲಗಳು, ಸಮಸ್ಯೆಗಳು, ಆತಂಕಗಳು, ನಿರೀಕ್ಷೆಗಳು ಇಂತಹವುಗಳ ಬಗ್ಗೆಯೂ ಮಾತನಾಡಬಹುದು. ಅದರ ಬಗ್ಗೆ ತಿಳಿವಳಿಕೆ ಬೆಳೆಯಿಸಿಕೊಳ್ಳುವುದೂ ಜ್ಞಾನವೇ. ನೀವೆಲ್ಲ ಹದಿಹರೆಯದವರು. ಆ ಸಮಸ್ಯೆಗಳಿರುತ್ತವೆ. ಅವುಗಳ ಬಗ್ಗೆಯೂ ಮಾತನಾಡಬಹುದು. ನಿಮ್ಮ ದಿನಚರಿಯನ್ನು ಹೇಳಬಹುದು. ಏನನ್ನು ಬೇಕಾದರೂ ನನ್ನ ಬಳಿ ಮುಕ್ತವಾಗಿ ಹೇಳಬಹುದು. ಕೇಳಬಹುದು. ದಿನದ 24 ಗಂಟೆಯೂ ನನ್ನ ಫೋನ್ ಆನ್ ಆಗಿಯೇ ಇರುತ್ತದೆ. ದಿನದ ಹದಿನೆಂಟು ಗಂಟೆಯೂ ಬೇರೆ ಯಾರ ಫೋನ್ ತೆಗೆದುಕೊಳ್ಳದಿದ್ದರೂ ನಿಮ್ಮ ಕರೆಯನ್ನಂತೂ ನಾನು ತೆಗೆದುಕೊಳ್ಳುತ್ತೇನೆ. ಆದರೆ ಸಂಪರ್ಕವನ್ನಂತೂ ಮಾಡಬೇಕು. ಈಗ ಒಂದು ಕೆಲಸ ಮಾಡುವ. ಇದೊಂದು ಟಾಸ್ಕ್. ಒಂದು ವಾರದೊಳಗೆ ಇದನ್ನು ಎಲ್ಲರೂ ಮಾಡಿ ಮುಗಿಸಬೇಕು. ಫ್ರೀಡಾಮ ಮೂವ್‌ಮೆಂಟ್ ಬಹಳ ಮುಖ್ಯ ಪಾಠ. ಆ ಪಾಠವನ್ನು ಚಂದದಲ್ಲಿ ಓದಿ. ಆಡಿಯೋ ರೆಕಾರ್ಡ್ ಮಾಡಿ. ನನಗೆ ಕಳಿಸಿ. ನೀವು ಎಷ್ಟು ಚಂದದಲ್ಲಿ ಓದುತ್ತೀರೆಂದು ನಾನು ಕೇಳುತ್ತೇನೆ.

ಒಂದು ಸಲ ನೀವು ಕಲಿಕೆಯ ಸಂಪರ್ಕವನ್ನು ಕಡಿದುಕೊಂಡರೆ ಮತ್ತೆ ಅದನ್ನು ಮರುಗಳಿಕೆ ಮಾಡಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಈಗ ಆಸಕ್ತಿಯನ್ನು ಕಳೆದುಕೊಳ್ಳುವಂತಹ ಸನ್ನಿವೇಶ ಇದೆ. ಆದರೆ ಕಲಿಕೆ ಎಂದರೇನು? ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವೇ ಕಲಿಕೆ. ಪರಿಸ್ಥಿತಿ ಕಷ್ಟವಿದ್ದಾಗಲೂ ನಿಭಾಯಿಸುವ ಸಾಮರ್ಥ್ಯ ನಿಮಗಿದೆ ಎಂದು ನಂಬಿದ್ದೇನೆ. ನಾನು ನಿಮ್ಮ ತಂದೆ-ತಾಯಿಗೆ ಫೋನ್ ಮಾಡಿ ದೂರು ಕೊಡುವುದಿಲ್ಲ. ಏಕೆಂದರೆ ನಿಮ್ಮ ಬಳಿಯೇ ನನಗೆ ನಂಬಿಕೆ ಇದೆ. ನಿಮ್ಮತ್ರವೇ ಮಾಡಿಸ್ತೇನೆ.

ವಿಚಾರ ನಿಮಗೆ ಅರ್ಥವಾಯಿತೆಂದು ನಂಬಿದ್ದೇನೆ.

- ಅರವಿಂದ ಚೊಕ್ಕಾಡಿ, ಶಿಕ್ಷಕರು