ಶಿಕ್ಷಕರ ದಿನಚರಿಯಿಂದ...
ಶಿಕ್ಷಕ ವೃತ್ತಿ ಅತ್ಯಂತ ನಾಜೂಕಿನ ವೃತ್ತಿ. ವ್ಯಕ್ತಿ ತನ್ನ ಜೀವನದ ಏರುಪೇರುಗಳಲ್ಲಿ ಸ್ಮರಿಸುವ ವ್ಯಕ್ತಿಗಳಲ್ಲಿ ಶಿಕ್ಷಕರೇ ಅಗ್ರರು. ಬಯಸಿ ವೃತ್ತಿಗೆ ಬರದೇ ಹೋದರು, ಅರಸಿ ಬಂದ ವೃತ್ತಿ ಕೇವಲ ತಿಂಗಳ ಕೊನೆಯಲ್ಲಿ ಸಂಬಳ ಲೆಕ್ಕಾಚಾರ ಮಾಡಲು ಮಾತ್ರ ಸೀಮಿತಗೊಂಡರೆ, ಅದು ಶಿಕ್ಷಕನ ಬದುಕಿನ ಬಹುದೊಡ್ಡ ಪ್ರಮಾದ. ಮಗು ತಾಯಿಯ ತೆಕ್ಕೆಯಿಂದ, ಪಡೆಯುವ ಮತ್ತೊಂದು ಸುರಕ್ಷಿತ ಹಾಗೂ ಪವಿತ್ರ ಆಶ್ರಯ ಅಂದರೆ ಶಾಲೆ. ಶಿಕ್ಷಕ ಪ್ರತಿಯೊಂದು ಮಗುವಿಗೆ ಅಭಯ ನೀಡುವವನಾಗಿರುತ್ತಾನೆ. ಆತ ಏಕಕಾಲಕ್ಕೆ ತಂದೆಯ ಜವಾಬ್ದಾರಿ ಹೆಗಲಮೇಲೆ ಹೊರಬಲ್ಲ, ತಾಯಿಯ ಮಮತೆಯನ್ನು ಮಗುವಿಗೆ ನೀಡಬಲ್ಲ, ಸ್ನೇಹಿತನಾಗಿ ಮಗುವಿನ ಜೊತೆಯಾಗಬಲ್ಲ. ಅಣ್ಣನಾಗಿ ಮಗುವಿಗೆ ಪ್ರೀತಿಯನ್ನು ಧಾರೆಯೆರೆಯಬಲ್ಲ. ತಾಯಿ ಕೇವಲ ಅವಳ ಮಗುವಿನ ಅಮ್ಮನಾಗಬಲ್ಲಳು. ಆದರೆ ಗುರು ನೂರಾರು ಮಕ್ಕಳಿಗೆ ತಾಯಿಯ ಸ್ನೇಹ ನೀಡಬಲ್ಲ. ಮಗುವಿನಲ್ಲಿ ಅದಮ್ಯ ಚೇತನವಿರುತ್ತದೆ. ಅದನ್ನು ಹಿಂಡಿ ಹೊರತೆಗೆಯುವ ಹರಿಕಾರ ಶಿಕ್ಷಕ. ಮಗುವಿನ ಬಗ್ಗೆ ಇದೊಂದು ಕಥೆ ಬಹಳ ಅರ್ಥಪೂರ್ಣವಾಗಿದೆ.
ಅದೊಂದು ಊರು. ಆ ಊರಿನಲ್ಲಿ ಬಹಳ ಕಟ್ಟುಪಾಡುಗಳಿದ್ದವು. ಅಲ್ಲಿ ಸುಳ್ಳು ಹೇಳುವವರ ವಿರುದ್ಧ ಜನ ಪಂಚಾಯತಿ ನಡೆಸಿ, ಸುಳ್ಳು ರುಜುವಾತಾದರೆ ಬಹಿಷ್ಕಾರಗಳಂತಹ ಶಿಕ್ಷೆಯನ್ನು ಊರ ಮುಖಂಡರು ವಿಧಿಸುತ್ತಿದ್ದರು. ಆ ಊರಿನಲ್ಲಿ ಮನೀಷ್ ಮತ್ತು ಅನೀಷ್ ಎಂಬ ಇಬ್ಬರು ಅಣ್ಣ ತಮ್ಮಂದಿರಿದ್ದರು. ಮನೀಷ್ ನಾಲ್ಕನೇ ತರಗತಿಯಲ್ಲಿದ್ದರೆ ಅನೀಷ್ ಇನ್ನೂ ಶಾಲೆಗೆ ದಾಖಲಾತಿ ಮಾಡುವ ವಯಸ್ಸಾಗಿರಲಿಲ್ಲ. ಒಂದು ದಿನ ಇವರಿಬ್ಬರು ಮನೆ ಬಿಟ್ಟು ಆಟವಾಡುತ್ತಾ, ಅವರಿಗರಿವಿಲ್ಲದೆ ಬಹುದೂರ ಸಾಗಿದ್ದರು. ಹೀಗೆ ಒಂದು ನಿರ್ಜನ ಪ್ರದೇಶಕ್ಕೆ ತಲುಪಿದರು. ಅಲ್ಲಿ ಸುತ್ತಮುತ್ತ ಯಾರೂ ಇರುವಂತೆ ತೋರುತ್ತಿರಲಿಲ್ಲ. ಅಲ್ಲೊಂದು ಹರಕು ಗುಡಿಸಲು, ಗುಡಿಸಲಿನ ಪಕ್ಕ ಒಂದು ಬಾವಿಯಿತ್ತು. ಅದರಲ್ಲಿ ನೀರು ಸೇದುವ ಹಗ್ಗವೊಂದು ಇಳಿಬಿಟ್ಟಿದ್ದರು. ಆದರೆ ಗುಡಿಸಲು ಬಹಳ ದಿನದಿಂದ ವಾಸವಿಲ್ಲದೆ ಪಾಳು ಬಿದ್ದಿತ್ತು. ಪಕ್ಕದಲ್ಲಿ ಒಂದು ನೀರಿನ ಗುಂಡಿಯಿತ್ತು. ಅಚಾನಕ್ ಮನೀಷ್ ಕಾಲು ಜಾರಿ ಆ ನೀರಿನ ಹಳ್ಳಕ್ಕೆ ಬಿದ್ದು ಬಿಟ್ಟ. ಅದರಲ್ಲಿ ಮನೀಷ್ ಮುಳುಗುವಷ್ಟು ನೀರಿತ್ತು. ನೀರಲ್ಲಿ ಮುಳುಗುತ್ತಿದ್ದ ಮನೀಷ್ ರಕ್ಷಣೆಗಾಗಿ ಬೊಬ್ಬಿಡ ತೊಡಗಿದ. ಆತನ ಕೂಗು ಕೇಳಿಸಿಕೊಳ್ಳಲು ಅಲ್ಲಿ ಪುಟ್ಟ ಅನೀಷನ ಹೊರತು ಬೇರೆ ಯಾರೂ ಇರಲಿಲ್ಲ. ಅನೀಷ್ ತಬ್ಬಿಬ್ಬಾದ. ಅಣ್ಣನನ್ನು ನೋಡಿ ಭಯಭೀತನಾಗಿರಬೇಕು. ಕೂಗಿದರೆ ಕೇಳಿಸಿಕೊಳ್ಳಲು ಕೂಗಳತೆಯಲ್ಲಿ ಯಾರೂ ಇಲ್ಲ. ಅರೆಕ್ಷಣ ಯೋಚಿಸಿದ ಅನೀಷ್ ಪಕ್ಕದ ಬಾವಿ ನೋಡಿದ. ಅದೇನೋ ಹೊಳೆಯಿತೋ ಆ ಪುಟ್ಟ ಜೀವಕ್ಕೆ?.. ಓಡಿ ಹೋದವನೇ ಬಾವಿಯಲ್ಲಿ ಇಳಿಬಿಟ್ಟಿದ್ದ ಹಗ್ಗ ಎಳೆದು ತಂದು ಮನೀಷ್ ಮುಳುಗುತ್ತಿದ್ದ ಹಳ್ಳಕ್ಕೆ ಎಸೆದು, ಒಂದು ತುದಿಯನ್ನು ಹಿಡಿದುಕೊಂಡ. ಮುಳುಗುತ್ತಿದ್ದ ಮನೀಷ್ ಹಗ್ಗವನ್ನು ಹಿಡಿದುಕೊಂಡಾಗ ಅನೀಷ್ ಹಗ್ಗವನ್ನು ಎಳೆಯತೊಡಗಿದ. ಬಹಳಷ್ಟು ಪ್ರಯಾಸಪಟ್ಟು ಎಳೆದಾಗ ಹಳ್ಳಕ್ಕೆ ಬಿದ್ದ ಅಣ್ಣ ಮನೀಷ್ ಮೇಲಕ್ಕೆ ಬಂದ. ಪುಟ್ಟ ತಮ್ಮನ ಸಮಯಪ್ರಜ್ಞೆ ಅಣ್ಣನ ಪ್ರಾಣ ಉಳಿಸಿತ್ತು. ಅವರಿಬ್ಬರು ಊರಿನಕಡೆ ಓಡಿದರು. ಇತ್ತ ಕಡೆ ಊರಿನಲ್ಲಿ ಮಕ್ಕಳು ಕಾಣದೆ ಹುಡುಕಾಟ ಪ್ರಾರಂಭ ಮಾಡಿದ್ದರು. ಸಾಧ್ಯವಿರುವ ಎಲ್ಲಾ ಕಡೆ ಹುಡುಕಿ ಹತಾಶೆಯಲ್ಲಿರುವಾಗ ಮಕ್ಕಳು ಓಡೋಡಿ ಬರುವುದು ನೋಡಿ ನಿಟ್ಟುಸಿರು ಬಿಟ್ಟರು. ಎಲ್ಲರು ಮಕ್ಕಳ ಸುತ್ತ ಸೇರಿ ವಿಚಾರಿಸತೊಡಗಿದರು. ಆಗ ಮನೀಷ್ ನಡೆದ ಘಟನೆಯನ್ನು ತಿಳಿಸಿದ.
ಆದರೆ ಅವರ್ಯಾರೂ ಇವರ ಮಾತನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಕಾರಣ ಹತ್ತು ವರ್ಷದ ಮನೀಷ್ ನನ್ನು ಐದು ವರ್ಷ ಪ್ರಾಯದ ಅನೀಷ್ ಹಳ್ಳದಿಂದ ಮೇಲಕ್ಕೆತ್ತುವುದು ಅಸಾಧ್ಯವೆಂಬುವುದು ಅವರ ವಾದ. ಮಕ್ಕಳು ತಮ್ಮ ತಪ್ಪನ್ನು ಮರೆಮಾಡಲು ಸುಳ್ಳು ಕಥೆ ಕಟ್ಟುತ್ತಿದ್ದಾರೆ ಎಂದು ಅವರು ತಮ್ಮೊಳಗೆ ಮಾತಾಡತೊಡಗಿದರು. ಅವರಲ್ಲಿ ಕೆಲವರಂತೂ ಊರಿನ ಕಾನೂನಿನಂತೆ ವಿಚಾರಣೆ ನಡೆಸಲು ಹಟಮಾಡ ತೊಡಗಿದರು. ಊರಿನ ನಿಯಮದಂತೆ ಅವರು ಹೇಳುವುದು ಸುಳ್ಳಾದರೆ ಪಂಚಾಯತಿ ವಿಧಿಸುವ ಶಿಕ್ಷೆಗೆ ಮಕ್ಕಳು ಗುರಿಯಾಗಬೇಕಿತ್ತು. ಅದು ದೊಡ್ಡವರಾಗಲಿ, ಮಕ್ಕಳಾಗಲಿ ಆ ಊರಿನ ಸಂಪ್ರದಾಯ. ಅದರಂತೆ ಮಕ್ಕಳನ್ನು ಪಂಚಾಯತಿ ಕಟ್ಟೆಗೆ ಕರೆಯಲಾಯಿತು. ಅವರು ಹೇಳುವುದನ್ನು ಮತ್ತೊಮ್ಮೆ ಖಾತರಿಪಡಿಸಿಕೊಂಡರು. ಆಗ ಸತ್ಯವನ್ನು ಪರೀಕ್ಷೆ ಮಾಡಬೇಕೆಂದು ತೀರ್ಮಾನವಾಯಿತು. ಅಲ್ಲೇ ಇದ್ದ ಒಂದು ಹಳ್ಳದ ಬಳಿ ತೆರಳಿ ಮನೀಷ್ ನನ್ನು ಹಳ್ಳದಲ್ಲಿ ನಿಲ್ಲಿಸಿದರು. ಮೇಲೆ ಐದು ವರ್ಷದ ಮಗುವಿನ ಕೈಯಲ್ಲಿ ಹಗ್ಗದ ಒಂದು ತುದಿ ನೀಡಿ, ಇನ್ನೊಂದು ತುದಿಯನ್ನು ಮನೀಷ್ ಗೆ ನೀಡಲಾಯಿತು. ಅನೀಷ್ ಗೆ ಎಳೆಯುವಂತೆ ಸೂಚಿಸಿದರು. ಸುತ್ತ ಸೇರಿದವರು ಒಂದೇ ಉಸಿರಿಗೆ ಸಾಧ್ಯವೇ ಇಲ್ಲ. ಇಷ್ಟು ಚಿಕ್ಕ ಮಗುವಿನಿಂದ ಅಣ್ಣನನ್ನು ಮೇಲಕ್ಕೆತ್ತಲು ಅಸಾಧ್ಯವೆಂದು ಕೂಗಾಡ ತೊಡಗಿದರು. ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು. ಅನೀಷ್ ಅಣ್ಣನನ್ನು ಮೇಲಕ್ಕೆ ಎಳೆಯತೊಡಗಿದ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಅವನಿಂದ ಮೇಲಕ್ಕೆತ್ತಲು ಸಾಧ್ಯವೇ ಆಗಲಿಲ್ಲ. ಜನರೆಲ್ಲಾ ಅವರು ಹೇಳಿದ್ದು ಸುಳ್ಳು, ಅದೀಗ ರುಜುವಾತು ಆಯಿತು ಎಂದು ಕೂಗಾಡತೊಡಗಿದರು. ಇನ್ನೇನು ವಿಧಿ ನಿರ್ಣಯಿಸಬೇಕಿತ್ತು. ಮಕ್ಕಳಲ್ಲವೇ ಬಿಟ್ಟುಬಿಡಬಹುದಿತ್ತು ಅಂದು ಕೊಂಡರು ಕೆಲವರು. ನಿಯಮ ಎಲ್ಲರಿಗೂ ಒಂದೇ. ಇಷ್ಟು ಚಿಕ್ಕದಿರುವಾಗಲೇ ಸುಳ್ಳಿನ ಕಥೆ ಕಟ್ಟಿದರೆ ದೊಡ್ಡವರಾದರೆ ಏನು ಗತಿ?..... ಎಂದು ಪರಚಿಕೊಂಡರು ಹಲವರು. ಆದರೆ ಅಷ್ಟರಲ್ಲಿ ಅವರಲ್ಲಿ ಒಬ್ಬ ಹಿರಿಯ ಅನುಭವಸ್ಥರು ಮುಂದೆ ಬಂದರು. "ಸ್ವಲ್ಪ ಇಲ್ಲಿ ಕೇಳಿ. ಆ ಮಕ್ಕಳು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ" ಎಂದಾಗ ಎಲ್ಲರು ಅವರನ್ನೇ ದಿಟ್ಟಿಸತೊಡಗಿದರು. ಇವರಿಗೇನಾಗಿದೆ ?.... ಎಂದು ತಮ್ಮೊಳಗೆ ಮಾತಾಡತೊಡಗಿದರು. ಹಿರಿಯರು ಮುಂದುವರೆಸಿದರು "ಅಲ್ಲಿ ಅಣ್ಣ ಹಳ್ಳಕ್ಕೆ ಬಿದ್ದದ್ದೂ ನಿಜ, ತಮ್ಮ ಮೇಲಕ್ಕೆ ಎಳೆದದ್ದೂ ನಿಜ. ಇಲ್ಲಿ ಮಗು ಅಣ್ಣನನ್ನು ಮೇಲಕ್ಕೆತ್ತಲು ಸಾಧ್ಯವಾಗದ್ದೂ ನಿಜಾನೇ. ಅಲ್ಲಿ ಈ ಮಗು ಅಣ್ಣನನ್ನು ಮೇಲಕ್ಕೆತ್ತುವಾಗ ನಿನ್ನಿಂದ ಸಾಧ್ಯವಿಲ್ಲ ಎಂದು ಹೇಳಲು ಸುತ್ತಮುತ್ತ ಯಾರೂ ಇರಲಿಲ್ಲ. ಆದರೆ ಇಲ್ಲಿ ನೀವೆಲ್ಲಾ ಸುತ್ತ ಸೇರಿ. ಇದು ನಿನ್ನಿಂದ ಸಾಧ್ಯವೇ ಇಲ್ಲ ಎನ್ನುತ್ತಾ ಆ ಮಗುವಿನ ಆತ್ಮವಿಶ್ವಾಸ ಕಿತ್ತು ಹಾಕಿದಿರಿ. ಆದ್ದರಿಂದಲೇ ಹಳ್ಳಕ್ಕೆ ಬಿದ್ದ ಅಣ್ಣನನ್ನು ಮೇಲಕ್ಕೆತ್ತಲು ನಿರ್ಜನ ಸ್ಥಳದಲ್ಲಿ ಸಾಧ್ಯವಾದ ಮಗುವಿಗೆ ಇಲ್ಲಿ ಸಾಧ್ಯವಾಗಲಿಲ್ಲ "ಹಿರಿಯರ ಮಾತು ಯಾರೂ ಮೀರುತ್ತಿರಲಿಲ್ಲ. ಅವರೆಲ್ಲಾ ಅರ್ಥೈಸಿಕೊಂಡರೋ? ಇಲ್ಲವೋ?.. ಅವರ ಮಾತಿಗೆ ತಲೆಬಾಗಿ ಜಾಗಬಿಟ್ಟರು.
ಹೌದು ಈ ಕಥೆಯಲ್ಲಿ ಅದೊಂದು ಅದ್ಭುತ ಪಾಠವಿಲ್ಲವೇ?... ಪ್ರತಿ ಮಗುವಿನಲ್ಲೂ ಅದೆಂತಹಾ ಶಕ್ತಿಯಿರುತ್ತದೆ. ಆದರೆ ನಾವು ಅವುಗಳನ್ನು ಅನೇಕ ಬಾರಿ ಚಿವುಟಿ ಹಾಕುತ್ತೇವೆ. ಶಿಕ್ಷಕರು ಮಗುವಿನಲ್ಲಿ ಗೌಪ್ಯವಾಗಿರುವ ಶಕ್ತಿಯನ್ನು ಹೊರಹಾಕುವ ನ್ಯೂಟ್ರಾನ್ ಕಣಗಳಲ್ಲವೇ?.... ಆದರೆ ಇಂದು ಶಿಕ್ಷಕರಾದ ನಾವು ನಮ್ಮ ದಾರಿಯಲ್ಲಿ ಸುಗಮವಾಗಿ ಸಾಗಬಲ್ಲೆವೆಯೇ?..... ವ್ಯವಸ್ಥೆ ಅದಕ್ಕೆ ಅವಕಾಶ ನೀಡುತ್ತಿದೆಯೇ?.... ಇಂದು ಒಬ್ಬ ಪೋಷಕ ಶಾಲೆಗೆ ಬಂದಿದ್ದ. ಮಗ ಶಾಲೆಯಲ್ಲಿ ಕಲಿಯುತ್ತಿದ್ದ. ಆದರೆ ಶಾಲೆಯ ಯಾವುದೇ ಕೆಲಸ ಆತನಿಗೆ ಬೇಕಿರಲಿಲ್ಲ. ಓದುವುದಾಗಲಿ, ಬರೆಯುವುದಾಗಲಿ ಮಾಡಲಾರ. ಮಾಡುವುದಿರಲಿ ಕನ್ನಡ ಅಕ್ಷರಗಳನ್ನೇ ಬರೆಯಲು ಅಸಮರ್ಥ. ಈಗ ನೀವೇನು ಮಾಡಿದ್ದೀರಿ?... ಎಂದು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ. ಶಾಲೆಯ ಎಲ್ಲರೂ ಯೂನಿಫಾರಂ ಧರಿಸಿದರೆ, ಈತ ಅದು ನನಗೆ ಸಂಬಂಧವೇ ಇಲ್ಲದಂತೆ ಯಾವುದೋ ಬಟ್ಟೆ ಧರಿಸಿ ಬರುತ್ತಾನೆ. ಅವನಲ್ಲಿ ಪ್ರಾಬ್ಲಂ ಇರಬಹುದು. ಆದರೆ ಅದನ್ನು ಪರಿಹಾರ ಮಾಡಬೇಕಲ್ಲವೇ?.... ಸ್ವಲ್ಪ ಬೆದರಿಸುವ ಅಂದರೆ ಕಾನೂನಿನ ಭಯ. ಅಲ್ಲದೆ ಅವನನ್ನು ಶಾಲೆಗೆ ಸೇರಿಸುವಾಗಲೇ "ನನ್ನ ಮಗನ ಆರೋಗ್ಯ ಸರಿ ಇಲ್ಲ. ಅವನಿಗೆ ನೀವು ಏನೂ ಮಾಡಬಾರದು. ಅವನಿಗೆ ಓದಲು ಬರೆಯಲು ಬರೋದಿಲ್ಲ ಎಂದು ನನಗೆ ಗೊತ್ತು. ಆದರೂ ಮನೆಯಲ್ಲಿ ಅವನನ್ನು ನೋಡಿಕೊಳ್ಳೋದು ಯಾರು?... ಆದ್ದರಿಂದ ಹತ್ತನೇ ತರಗತಿವರೆಗೆ ಶಾಲೆಯಲ್ಲಿ ಇರಲಿ" ಎಂದು ಮಗನ ಮುಂದೆಯೇ ಅಪ್ಪ ಕಟ್ಟಾಜ್ಞೆ ವಿಧಿಸಿದ್ದ. ಈಗ ನಾವೇನೂ ಮಾಡೋ ಪರಿಸ್ಥಿತಿಯಲ್ಲಿರಲಿಲ್ಲ. ಆದರೂ ಅವನಿಗೆ ಕನಿಷ್ಢ ಪಕ್ಷ ಯೂನಿಫಾರಂ ಆದರೂ ತೊಡಿಸಬೇಕೆಂಬ ಹಟ ನನ್ನದು. ಅದಕ್ಕಾಗಿ ಅಪ್ಪನನ್ನು ಶಾಲೆಗೆ ಬರುವಂತೆ ತಿಳಿಸಿದೆ. ಶಾಲೆಗೆ ಒಂದು ವಾರ ಬಿಟ್ಟು ಬಂದ ಅಪ್ಪ "ನನ್ನ ಮಗನ ಬಗ್ಗೆ ನೀವು ಏನನ್ನೂ ವಿಚಾರಿಸಬೇಡಿ. ಅವನು ಯೂನಿಫಾರಂ ಧರಿಸುವುದು ಬೇಡ. ಅವನಿಗೆ ಮಾನಸಿಕ ಹಿಂಸೆ ಕೊಡಬೇಡಿ" ಎಂದು ಮತ್ತೊಮ್ಮೆ ನಮ್ಮ ಕರ್ತವ್ಯ ಪ್ರಜ್ಞೆಯನ್ನು ಮನದಟ್ಟು ಮಾಡಿದ. ಹೌದು ಇದು ಒಬ್ಬರದ್ದೋ ಇಬ್ಬರದ್ದೋ ಕಥೆಯಲ್ಲ. ಬದಲಾಗಿ ಶಿಕ್ಷಕ ವೃತ್ತಿಯ ಪವಿತ್ರತೆಯನ್ನು ಅರಿತು ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕನ ಬವಣೆ. ಒಂದೆಡೆ ಪವಿತ್ರ ವೃತ್ತಿಯ ನಾಮಧಾರಿ. ಇನ್ನೊಂದೆಡೆ ಕೈಕಾಲು ಕಟ್ಟಿಹಾಕಿದ ದಾರುಣ ಸ್ಥಿತಿ. ನನ್ನ ಎದುರಿಗೆ ಒಂದು ಬೋರ್ಡ್ ನೇತಾಡುತ್ತಾ ಇತ್ತು. ಅದು ಮಾನವ ಹಕ್ಕುಗಳ ಆಯೋಗದ ಜಾಹೀರಾತು. ಪಕ್ಕದಲ್ಲೇ ಮಕ್ಕಳ ಹಕ್ಕುಗಳ ಆಯೋಗದ ಬಗ್ಗೆ ಇನ್ನೊಂದು ಜಾಹಿರಾತು. ಕೆಳಗೆ ದೊಡ್ಡದಾದ ಒಂದು ಸಂಖ್ಯೆ 1098. ನನ್ನ ಹತಾಶೆ ತುಂಬಿದ ಮನದಲ್ಲಿ ಮೂಡಿದ ಪ್ರಶ್ನೆ "ಶಿಕ್ಷಕರಿಗೆ ಮಾತ್ರ ಯಾವುದೇ ಆಯೋಗವಿಲ್ಲವೇ?".... ಏಕೆಂದರೆ ಇಂದಿನ ವ್ಯವಸ್ಥೆಯ ದೃಷ್ಟಿಯಲ್ಲಿ ಅವರು ಮಾನವರೋ, ಮಕ್ಕಳೋ ಅಲ್ಲವಲ್ಲ. ಬದಲಾಗಿ ತಿರುಗುತ್ತಿರುವ ಗಾಣದ ಎತ್ತುಗಳಾಗಿದ್ದೇವಲ್ಲಾ?
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ