ಶಿಕ್ಷಕರ ದಿನದ ಕವನಗಳು

ಶಿಕ್ಷಕರ ದಿನದ ಕವನಗಳು

ಕವನ

ಗುರುವೆ ನಿನ್ನಯ 

ಗುರುವೆ ನಿನ್ನಯ

ಚರಣ ಕಮಲಕೆ 

ನಾವು ನಮಿಸುವೆವು 

ಅನುದಿನವು 

ಕೊಡು ಎಮಗೆ 

ಸಕಲ ಬುದ್ಧಿಯನು

 

ಪರಬ್ರಹ್ಮ ರೂಪನೆ

ದಯಾಳು ಸಿಂಧುವೆ 

ಕರುಣೆಯ ತೋರುತ

ಹರಸೆನ್ನ ಪ್ರಭುವೆ 

ಎಲ್ಲರೊಳು ಬೆರೆವಂತೆ

ಕಲಿಸಿರುವೆ ರಕ್ಷಕನೆ

 

ಪ್ರೀತಿಯನು ತೋರುತಲಿ

ಎಲ್ಲಾ ವಿದ್ಯೆಯ ಕಲಿಸಿ

ಜಾಣತನವನು ಕೊಟ್ಟು

ಸಲಹಿದೆ ಎನ್ನನು

ತಂದೆಯ ರೂಪದಿ ಬಂದು 

ತಿಳಿಯ ಹೇಳಿದೆ ನೀನು

 

ವಿದ್ಯೆ ಮುದ್ರೆಯ ಅರುಹಿ

ಶಿಷ್ಟಚಾರವ ಕಲಿಸಿ

ಸಕಲ ಆಗಮ ಶಾಸ್ತ್ರ

ತಿಳಿಸಿ ಸಾಗಿದೆಯಿಂದು

ಓ ನನ್ನ ಬಂಧುವೇ

ಕಾರುಣ್ಯ ಚೇತನವೆ

 

ನಿನ್ನ ಮಹಿಮೆಯ ನಾನು

ಹೇಗೆ ಪೊಗಳಲಿ ಗುರುವೆ

ನಿನ್ನಡಿಗೆ ಪೊಡಮಡುವೆ 

ಉದ್ಧರಿಸು ಗುರುವೆ

ಮತಿಗೆ ಮಂಗಳ ನೀಡು 

ಗುರುವೆ ಹೇ ದೇವಾ

-ಹಾ ಮ ಸತೀಶ ಬೆಂಗಳೂರು

***

ಗುರುಭ್ಯೋನಮಃ

ಎಲ್ಲಿರುವೆ ಮಹಾ ಗುರುವೆ ನೀನು

ಜೀವನವನರಳಿಸಿದ ಜ್ಯೋತಿಯೇ॥

 

ಅಂಧಕಾರವನು ನೀಗಿಸಿದವನು

ಅಜ್ಞಾನವನು ತೊಲಗಿಸಿದವನು

ಬಾಳ ಪಥವ ಬೆಳಗಿಸಿದೆ ನೀನು

ಪೂರ್ವಜನ್ಮ ಪುಣ್ಯ ಫಲ ನೀನು॥

 

ಅಕ್ಷರಗಳನೆ ನೀನು ಕಲಿಸಿದವನು

ನುಡಿ ಮುತ್ತುಗಳ ಜೋಡಿಸಿದವನು

ಶಿಕ್ಷೆಯಿಂ ಅರಿವ ಮೂಡಿಸಿದವನು

ನನ್ನ ನೀ ಅಂಕೆಯಲಿ ಇಟ್ಟವನು॥

 

ತಂದೆ ತಾಯಿ ಈ ಜೀವವನಿತ್ತೊಡೆ

ನೀ ಎನಗೆ ಜೀವನವನೇ ಇತ್ತವನು

ಜ್ಞಾನಧಾರೆಯ ಎನಗೆ ಚೆಲ್ಲಿದವನು

ಏನೂ ಬಯಸದ ನಿಸ್ವಾರ್ಥಿ ನೀನು॥

 

ನಿನ್ನ ಜೀವನದ ಕಷ್ಟವನು ಹೇಳದೆ

ನಗು ನಗುತ ಪಾಠವ ಕಲಿಸಿದವನು

ನೂರೆಂಟು ಚಿಂತೆಗಳ ದೂರ ಚೆಲ್ಲಿ

ಜ್ಞಾನದ ಚಿಲುಮೆಯೇ ಆದೆ ನೀನು॥

 

ಆ ದೇವರಿಗಿಂತ ನೀನೇ ದೊಡ್ಡವನು

ದೇವರ ಕಾಣಲು ದಾರಿ ತೋರಿದವನು

ಓ ಗುರುವೇ ಇಹದ ಬ್ರಹ್ಮನು ನೀನೇ

ನಿನಗಿದೋ ಕೋಟಿ ಕೋಟಿ ನಮನ॥

-ಕೆ ನಟರಾಜ್, ಬೆಂಗಳೂರು

ಚಿತ್ರ್