ಶಿಕ್ಷಕರ ನೇಮಕಾತಿ ಹಗರಣದ ಆಳಕ್ಕೆ ಸಿಐಡಿ ತನಿಖೆ ಇಳಿಯಲಿ
ಪೋಲೀಸ್ ಸಬ್ ಇನ್ಸ್ಪೆಕ್ಟರ್ (ಪಿ ಎಸ್ ಐ), ಸಹಾಯಕ ಪ್ರಾಧ್ಯಾಪಕ ಹಾಗೂ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷಾ ಅಕ್ರಮಗಳ ಬೆನ್ನಲ್ಲೇ, ಈ ಎಲ್ಲವುಗಳಿಗಿಂತ ಹಳೆಯದಾದ ಅವ್ಯವಹಾರವೊಂದು ಶಿಕ್ಷಣ ಇಲಾಖೆಯಲ್ಲಿ ನಡೆದಿದ್ದು. ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ೨೦೧೨-೧೩ ಹಾಗೂ ೨೦೧೩-೧೪ನೇ ಸಾಲಿನ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಅರ್ಜಿಯನ್ನೇ ಹಾಕದಿದ್ದವರು, ಅರ್ಜಿ ಹಾಕಿಯೂ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದಿದ್ದವರು ೫ ರಿಂದ ೧೦ ಲಕ್ಷ ರು. ಗಳನ್ನು ನೀಡಿ ಅಕ್ರಮವಾಗಿ ಶಿಕ್ಷಕರಾಗಿದ್ದಾರೆ. ಆತಂಕಕಾರಿ ಎಂದರೆ, ಈ ರೀತಿ ಅಕ್ರಮ ಮಾರ್ಗದಲ್ಲಿ ನೇಮಕಗೊಂಡ ಶಿಕ್ಷಕರು ಯಾವುದೇ ಅಳುಕಿಲ್ಲದೆ ಕಳೆದ ಹಲವು ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯವಸ್ಥೆಗೆ ಮೋಸವಾಗಿದ್ದರೂ ಅದು ಬಯಲಿಗೆ ಬಂದಿಲ್ಲ ! ಕೆಲವು ಸಂಘಟನೆಗಳು ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಶಿಕ್ಷಕರ ನೇಮಕಾತಿ ಹಗರಣದ ಕುರಿತು ದೂರು ನೀಡಿದ್ದರಿಂದ, ಅದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ೪೦ ಪರ್ಸೆಂಟ್ ಕಮೀಷನ್ ಆರೋಪವನ್ನು ತೀವ್ರಗೊಳಿಸಿದ್ದರಿಂದ ರಾಜಕೀಯ ಪೈಪೋಟಿಯಲ್ಲಿ ಈ ಹಗರಣ ಜೀವ ಪಡೆದುಕೊಂಡಿದೆ. ಬಳಿಕ ಸಿಐಡಿಗೆ ವರ್ಗಾವಣೆಗೊಂಡು ೧೨ ಶಿಕ್ಷಕರ ಬಳಿಕ ಶಿಕ್ಷಣ ಇಲಾಖೆಯ ಘಾಟಾನುಘಟಿ ಅಧಿಕಾರಿಗಳ ಬಂಧನವಾಗಿದೆ.
ಕೆಲವು ಅಧಿಕಾರಿಗಳು ಕೂಟ ಮಾಡಿಕೊಂಡು, ತಮಗೆ ಬೇಕಾದವರಿಗೆ ಸರ್ಕಾರಿ ಹುದ್ದೆಗಳನ್ನು ಮಾರಿಕೊಳ್ಳುತ್ತಾರೆ ಎನ್ನುವುದೇ ನಾಚಿಕೆಗೇಡಿನ ಸಂಗತಿ. ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದರ ಸಂಕೇತ. ಪ್ರಭಾವಿಗಳ ಕೈವಾಡವಿಲ್ಲದೆ ಇಂತಹ ಸಾಹಸಕ್ಕೆ ತಳಮಟ್ಟದ ಅಧಿಕಾರಿಗಳು ಕೈಹಾಕುವ ಸಾಧ್ಯತೆ ಇರುವುದಿಲ್ಲ. ಆರಂಭದಲ್ಲಿ ಪಿ ಎಸ್ ಐ ಪರೀಕ್ಷಾ ಅಕ್ರಮ ಕುರಿತಂತೆ ಆರೋಪಗಳು ಕೇಳಿಬಂದಾಗಲೂ ಅಧಿಕಾರಿಗಳು ನಂಬಿರಲಿಲ್ಲ. ಪ್ರಕರಣದ ಆಳಕ್ಕೆ ಸಿ ಐ ಡಿ ಇಳಿದಾಗ ಹಲವು ಸ್ಫೋಟಕ ಸಂಗತಿಗಳು ಬಯಲಾಗಿ ಪರೀಕ್ಷೆಯನ್ನೇ ರದ್ದುಗೊಳಿಸಲಾಯಿತು. ಸರ್ಕಾರದ ನೇಮಕಾತಿ ಪರೀಕ್ಷೆಗಳಲ್ಲಿ ಈ ರೀತಿ ಪದೇ ಪದೇ ಅಕ್ರಮಗಳು ನಡೆಯುತ್ತಾ ಹೋದರೆ, ಅವುಗಳ ಪಾವಿತ್ರ್ಯತೆಯ ಬಗ್ಗೆಯೇ ಪ್ರತಿಭಾವಂತರು ವಿಶ್ವಾಸ ಕಳೆದುಕೊಳ್ಳುವ ಅಪಾಯವಿದೆ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದವರಿಗೆ ಸ್ವಾಭಾವಿಕವಾಗಿ ನ್ಯಾಯ ದೊರೆಯಬೇಕೇ ಹೊರತು ಹುದ್ದೆಗಳನ್ನು ಖರೀದಿಸುವವರಿಗಲ್ಲ. ಅಧಿಕಾರಿಗಳು ಈ ಹಗರಣದ ಆಳಕ್ಕೆ ಇಳಿದು ಎಲ್ಲವನ್ನೂ ಬಯಲುಗೊಳಿಸಬೇಕು. ರೂವಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಇಂತಹ ಪ್ರಕರಣಗಳು ಪಾಠವಾಗಬೇಕು. ಭವಿಷ್ಯದಲ್ಲಾದರೂ ಪ್ರತಿಭಾವಂತರಿಗೆ ಅನ್ಯಾಯವಾಗದಂತೆ ತಡೆಯಲು ಕಠಿಣ ವ್ಯವಸ್ಥೆ ರೂಪುಗೊಳ್ಳಬೇಕು. ಶಿಕ್ಷಕ, ಪೋಲೀಸ್, ಪ್ರಾಧ್ಯಾಪಕರಂತಹ ಹುದ್ದೆಗಳು ಮಾರಾಟವಾಗಿಬಿಟ್ಟರೆ ಅದನ್ನು ಖರೀದಿಸಿದವರಿಂದ ಮಕ್ಕಳು ಏನು ಕಲಿತಾವು?
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೮-೦೯-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ