ಶಿಕ್ಷಕಿಯನ್ನು ರಾವಣನಿಗೆ ಹೋಲಿಸಿದ ಬಾಲಕಿ !
ಅಷ್ಠಮಿಯ ಅದ್ದೂರಿಯ ಸಂಭ್ರಮದಲ್ಲಿ ಎಲ್ಲ ಮಕ್ಕಳಿಗೂ ನೃತ್ಯದ ತರಬೇತಿ ನೀಡಲಾಗುತ್ತಿದ್ದು, ಮಕ್ಕಳು ತುಂಬಾ ಸಂತೋಷದಿಂದ ಇದ್ದಾರೆ. ಎಲ್ಲವನ್ನು ಬೇಗನೆ ಕಲಿಯುತ್ತಿದ್ದಾರೆ ಎಂಬುದು ಸಂತಸದ ವಿಚಾರ. ಹೀಗೆ ಒಂದು ದಿನ ಎಲ್ಲವೂ ಮುಗಿದು ಮಕ್ಕಳನ್ನು ಮನೆಗೆ ಕಲಿಸುವ ಸಮಯ, ಅವರವರ ವಾಹನ ಬರುವವರೆಗೂ ಅವರ ಬಳಿಯೇ ನಿಂತು ನಂತರ ನಮ್ಮ ತರಗತಿ ಕೆಲಸಕ್ಕೆ ಹಿಂತಿರುಗುವುದು ನಮ್ಮ ಶಾಲಾ ದಿನಚರಿ. ಆ ಸಮಯದಲ್ಲಿ ಮಕ್ಕಳೊಂದಿಗೆ ಮಕ್ಕಳಾಗುವುದು ನನ್ನ ಹವ್ಯಾಸ. ಹೀಗೆ ಅವರ ಬಳಿ ತಮಾಷೆ ಮಾಡುತ್ತಾ ನಗುತ್ತಿರುವಾಗ, ಒಂದು ಮಗು ಕೇಳಿತು, "ಮಾತಾಜಿ ನಮಗೆಲ್ಲ ಕೃಷ್ಣ, ರಾಧೆ, ಯಶೋಧ ಎಲ್ಲ ಪತ್ರಗಳನ್ನು ಕೊಟ್ಟಿದ್ದೀರಿ... ಮತ್ತೆ ನೀವು ಏನಾಗ್ತೀರಿ?" ನಾನು ಹೇಳಿದೆ ನಿಮ್ಮನ್ನೆಲ್ಲ ತಯಾರು ಮಾಡಬೇಕಲ್ಲ ಮಕ್ಕಳೇ ನಾನು ನಿಮ್ಮ ಮಾತಾಜಿಯಾಗೆ ಇರುತ್ತೇನೆ ಎಂದೆ.
ಆಗ ಅವಳು "ಬೇಡ ಬೇಡ, ನಾನು ನಿಮಗೆ ಒಂದು ಆಕ್ಟಿಂಗ್ ಕೊಡ್ತೀನಿ, ಓಕೆ ನ" ಎಂದಳು. ನಾನು ಓಕೆ ಎಂದೇ... ಆಗ ಅವಳು ನನಗೆ ಕೊಟ್ಟ ಪಾತ್ರದ ಹೆಸರು ಕೇಳಿ ಒಂದು ನಿಮಿಷ ನನ್ನ ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳು ಹುಟ್ಟಿದವು, ಬೇಜಾರಾಯಿತು, ದುಃಖವಾಯಿತು, ತುಂಬಾ ಮನಸ್ಸಿಗೆ ನಾಟಿತು..!! ಕಾರಣ ಅವಳು ಹೇಳಿದ್ದು ನಮ್ಮ ಮಾತಾಜಿ ''ರಾವಣ' ಎಂದು.... ಕ್ಷಣಕಾಲ ಪ್ರಶ್ನೆಗಳ ಸುರಿಮಳೆಯ ಇದ್ದ ನನ್ನ ಮನಸ್ಸು, ನಂತರ ಸ್ವಲ್ಪ ಸಮಾಧಾನ ಮಾಡಿಕೊಂಡು ಮನಸ್ಸಿಲ್ಲದ ನಗುಮೊಗದಿಂದ ಕೇಳಿದೆ, ಏಕೆ ಪುಟ್ಟ ನಾನು ರಾವಣ? ರಾವಣ ಯಾರೆಂದು ನಿನಗೆ ಗೊತ್ತೇ? ಅವನು ಹೇಗಿರುತ್ತಾನೆ ಎಂದು ನೀನು ಕೇಳಿದ್ದೀಯಾ? ಎಂದೆಲ್ಲ ಕೇಳಿದೆ. ಆಗ ಅವಳು "ಹಾ ನನಗೆ ಗೊತ್ತು, ಅವನಿಗೆ ಹತ್ತು ತಲೆ ಇರತ್ತೆ" ಎಂದಳು... ಆಗ ನಾನು ಅಳುವ ಮುಖ ಮಾಡಿ ನನಗೇಕೆ ರಾವಣ ಎಂದು ಹೇಳಿದೆ ಪುಟ್ಟ? ನನಗೆ ಬೇಜಾರಾಯಿತು ಎಂದೇ....
ಆದರೆ ಅದಕ್ಕೆ ಅವಳ ಉತ್ತರ ಮಾತ್ರ ತುಂಬಾ ಅದ್ಭುತವಾಗಿತ್ತು. "ಮಾತಾಜಿ ರಾವಣ ಎಂದಿದ್ದಕ್ಕೆ ನಿಮಗೇಕೆ ಬೇಜಾರಾಯಿತು? ನೀವು ಖುಷಿ ಪಡಬೇಕು, ಅವನಿಗೆ ಹತ್ತು ತಲೆ, ಅವನು ತುಂಬಾ ಶಕ್ತಿವಂತ, ನಾನು ನಿಮಗೆ ಏಕೆ ಈ ಹೆಸರು ಕೊಟ್ಟೆ ಗೊತ್ತ? ನೀವು ನಮ್ಮನ್ನೆಲ್ಲ ಸುಧಾರಿಸುವ ಭರದಲ್ಲಿ ಸಂಜೆ ಹೊತ್ತಿಗೆ ಸುಸ್ತಾಗಿರುತ್ತಿರಿ, ನಾವೆಲ್ಲ ನಿಮಗೆ ಇಡೀ ದಿನ ರಗಳೆ ಕೊಡುತ್ತೇವೆ, ತಲೆ ತಿನ್ನುತ್ತೇವೆ, ಆದರೂ ನಗುನಗುತ್ತಾ ಮಾತನಾಡುತ್ತೀರಿ, ಅದಕ್ಕೆ ನಿಮಗೆ ಹತ್ತು ತಲೆ ಬೇಕು. ಆದರೆ ಒಂದು ವಿಚಾರ, ನೀವು ಶಾಲೆ ಮುಗಿದ ನಂತರ ರಾಮನಾಗಬೇಕು ಎಂದಳು. ಏಕೆ ಎಂದು ಕೇಳಿದೆ. ಆಗ ಅವಳು ಹೇಳಿದಳು, "ನಿಮ್ಮ ಆ ತಲೆ ನೋವಿನ ಹತ್ತು ತಲೆಗಳನ್ನು ರಾಮನ ಬಾಣದಿಂದ ಎಲ್ಲವನ್ನು ಉರುಳಿಸಿ, ಖುಷಿಯಿಂದ ಮನೆಗೆ ಹೋಗಿ" ಎಂದು ಜೋರಾಗಿ ನಕ್ಕಳು. ಆಗ ನೀನು ಏನಾಗುವೆ ಎಂದು ಕೇಳಿದ್ದಕ್ಕೆ, "ನಾನು ನಿಮ್ಮ ಸಹಾಯಕ್ಕೆ ಲಕ್ಷ್ಮಣ ಆಗುವೆ" ಎಂದಳು. ಖುಷಿ ತಡೆಯಲಾರದೆ ಮನಸ್ಸು ಭಾರವಾಯಿತು. ಮೊದಲು ರಾವಣ ನ ಹೋಲಿಕೆಗೆ ನಾನಾ ಅರ್ಥ ಕಲ್ಪಿಸಿಕೊಂಡು ಬೇಜಾರಾದ ನನಗೆ, ಅವಳ ಮನಸ್ಸಿನ ಭಾವನೆ, ನನ್ನ ಮೇಲಿನ ಕಾಳಜಿ ಅರ್ಥವಾಯಿತು. ಮಕ್ಕಳು ದೇವರ ಸಮಾನ ಎಂದು ಹೇಳುತ್ತಾರೆ, ಸುಳ್ಳಲ್ಲ.. 6 ವರ್ಷದ ಮಗು ಇಷ್ಟೆಲ್ಲ ವಿಚಾರ ಮಾಡುತ್ತದೆ ಎಂದರೆ ಅದು ನಮ್ಮ ಭಾಗ್ಯ, ಈ ಬ್ಯುಸಿ ಜೀವನದಲ್ಲಿ ಮಕ್ಕಳ ಮನಸ್ಸನ್ನು ಅರಿಯಲು ಸಮಯ ಕೊಡದೆ ನಾವು ಸೋಲುತ್ತಿದ್ದೇವೆ…
-ರಮ್ಯಾ ಆರ್ ಭಟ್, ಕುಂದಾಪುರ
ಚಿತ್ರ ಕೃಪೆ: ಇಂಟರ್ನೆಟ್ ತಾಣ