ಶಿಕ್ಷಕಿಯ ಗೆಲ್ಲಿಸಿದ ವಿದ್ಯಾರ್ಥಿ (ಭಾಗ 1)

"ಟೀಚರ್, ಇವನು ನನ್ನ ಮಗ. ಇವನನ್ನು ಹೇಗಾದರೂ ಮಾಡಿ ನೀವೇ ಸರಿದಾರಿಗೆ ತರಬೇಕು. ಪುಸ್ತಕ ಮುಟ್ಟುವುದಿಲ್ಲ, ಹೇಳಿದ್ದು ಕೇಳುವುದಿಲ್ಲ, ಇಡೀ ದಿನ ಮೊಬೈಲ್ನಲ್ಲಿ ಆಟ ಆಡ್ತಾ ಇರ್ತಾನೆ, ಟಿ.ವಿ ನೋಡ್ತಾನೆ, ನನಗಂತೂ ಸ್ವಲ್ಪನೂ ಕೇಳೋದಿಲ್ಲ. ಇವನ ಬಗ್ಗೆ ನನಗೆ ಯಾವಾಗಲೂ ತಲೆಬಿಸಿ. ಒಂದು ಚುರೂ ಓದು- ಬರೆಯುವುದರ ಕಡೆ ಗಮನವೇ ಕೊಡೋದಿಲ್ಲ. ಈಗಾಗಲೇ ಎರಡು ಶಾಲೆಗಳನ್ನು ಬದಲಾಯಿಸಿ ಆಯಿತು. ಈಗ ನಿಮ್ಮ ಶಾಲೆಗೆ ಸೇರಿಸಿದ್ದೇನೆ. ದಯವಿಟ್ಟು ನನ್ನ ಮಗನನ್ನು ನೀವೇ ಸರಿ ಮಾಡಬೇಕು. ನಾವು ಕಷ್ಟಪಟ್ಟು ದುಡಿದು ನಮ್ಮ ಮಕ್ಕಳು ಒಳ್ಳೆ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿಯಲಿ ಎಂದು ಇಂಗ್ಲಿಷ್ ಮೀಡಿಯಂ ಗೆ ಹಾಕಿದ್ದು. ಆದರೆ ಇವನ್ ನೋಡಿದ್ರೆ ಯಾವಾಗಲೂ ಆಟ ಆಡೋದು, ಟಿವಿ ನೋಡೋದು, ಮೊಬೈಲ್ ನೋಡೋದು ಮಾಡ್ತಿರ್ತಾನೆ."
ಹೊಸದಾಗಿ ನಮ್ಮ ಶಾಲೆಗೆ ಸೇರ್ಪಡೆಗೊಂಡ ನಾಲ್ಕನೇ ತರಗತಿಯ ಹುಡುಗನೊಬ್ಬನ ತಾಯಿ ನಿರಂತರವಾಗಿ ಮಗನ ಬಗ್ಗೆ ನನ್ನಲ್ಲಿ ದೂರನ್ನು ನೀಡುತ್ತಿದ್ದರು. ಪಕ್ಕದಲ್ಲೇ ಆ ಹುಡುಗನೂ ಇದ್ದ! ಆದರೆ ಅವನ ಮುಖ ನೋಡಿದರೆ ಅವನಿಗೂ ಅವನ ಅಮ್ಮ ಹೇಳುವ ದೂರುಗಳಿಗೂ ಯಾವುದೇ ರೀತಿಯಾದ ಸಂಬಂಧವೇ ಇಲ್ಲವೇನೋ ಎಂಬಂತೆ ನಿರ್ಲಿಪ್ತನಾಗಿ ನಿಂತಿದ್ದ!.
ಅಮ್ಮನ ಮಾತು ಮುಂದುವರಿಯುತ್ತಲೇ ಇತ್ತು ತಕ್ಷಣ ಅವರ ಮಾತಿಗೆ ನಾನೇ ಬ್ರೇಕ್ ಹಾಕುತ್ತಾ ಕೇಳಿದೆ. "ನಿಮ್ಮ ಹುಡುಗನ ಬಗ್ಗೆ ನೀವು ಹೇಳಿದ್ದೆಲ್ಲ ಸರಿ. ಆದರೆ ಅವನಿಗೆ ಆಸಕ್ತಿ ಇರುವ ವಿಚಾರಗಳು ಯಾವುದು? ಅವನಿಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಅನ್ನುವುದರ ಬಗ್ಗೆ ನೀವು ಏನು ಹೇಳಲೇ ಇಲ್ಲ ಅಲ್ವಾ?" ಅಂತ ಕೇಳಿದೆ. ಆಗ ಮತ್ತೆ ಅಮ್ಮನ ದೂರುಗಳ ಪಟ್ಟಿ ಪ್ರಾರಂಭವಾಯಿತು "ಮೇಡಂ, ಅವನಿಗೆ ಆಸಕ್ತಿ ಅಂದ್ರೆ ಬರೀ ಆಟ ಆಡೋದು ಮಾತ್ರ. ಹೋಮ್ ವರ್ಕ್ ಮಾಡೋದು, ಪ್ರಾಜೆಕ್ಟ್ ಮಾಡುದು, ಯಾವುದಾದ್ರೂ ಕಾಂಪಿಟೇಶನ್ ಗೆ ಸೇರೋದು ಇಂಥದೆಲ್ಲ ಯಾವ್ದು ಆಗೋದಿಲ್ಲ. ಬರೀ ಇಡೀ ದಿನ ಬೇಕಂದ್ರೆ ಗ್ರೌಂಡ್ ಅಲ್ಲಿ ಆಟ ಆಡ್ತಾ ಇರ್ತಾನೆ. ಆದ್ರೆ ಅವನಿಗೆ 12 ವರ್ಷದವರೆಗೆ ಕಂಟಕ ಉಂಟು ಅಂತ ಅವನ ಜಾತಕದಲ್ಲಿ ಬರೆದಿದೆ. ಹಾಗಾಗಿ ನಾನು ಅವನನ್ನು ಹೆಚ್ಚು ಆಟ ಆಡಲಿಕ್ಕೆ ಕಳಿಸೋದಿಲ್ಲ. ಹಿಂದಿನ ಶಾಲಾ ಶಿಕ್ಷಕರಿಗೂ ಹಾಗೇ ಹೇಳಿದ್ದೆ. ಅವರು ಕೂಡ ಪಿ. ಟಿ ಪಿರೇಡ್ ನಲ್ಲಿ ಅವನಿಗೆ ಹೆಚ್ಚುವರಿ ತರಗತಿ ಮಾಡ್ತಾ ಇದ್ರು. ಆದ್ರೂ ಇವನು ಸುಧಾರಿಸುವುದಿಲ್ಲ." ಅಂತ ಹೇಳಿ ಮಗನ ಕಡೆ ಕೋಪದ ನೋಟಬೀರಿದರು.
ಸಮಸ್ಯೆಯ ಮೂಲ ಏನು ಎಂಬುದು ತಕ್ಕಮಟ್ಟಿಗೆ ನನಗೆ ಅರ್ಥವಾಯಿತು. ಹೆತ್ತವರಿಗೆ ಇಂಗ್ಲಿಷ್ ಜ್ಞಾನ ಇಲ್ಲ, ಮೊಬೈಲ್, ಟಿವಿ ಬಳಕೆಯನ್ನು ಹೇಗೆ ನಿಯಂತ್ರಿಸ ಬೇಕು ಅನ್ನೋದರ ಬಗ್ಗೆ ಅವರಿಗೆ ತಿಳುವಳಿಕೆ ಇಲ್ಲ. ಬದಲಾಗಿ ಮಗುವಿನ ಪ್ರತಿಯೊಂದು ತಪ್ಪಿಗೂ ಮಗುವನ್ನು ಬೈಯುತ್ತಾ, ಪೆಟ್ಟು ಕೊಡುತ್ತಾ, ಆತನನ್ನು ಸರಿ ದಾರಿಗೆ ತರಲು ವ್ಯರ್ಥ ಪ್ರಯತ್ನ ಮಾಡುತಿದ್ದ ಆತನ ಹೆತ್ತವರ ಬಗ್ಗೆ ಕನಿಕರ ಹುಟ್ಟಿತು. ಜೊತೆಗೆ ಮನೆಯಲ್ಲಿ, ಶಾಲೆಯಲ್ಲಿ ಆತನ ಬಾಲ್ಯ ಸಹಜ ಬಯಕೆಯಾದ ಆಟವಾಡುವ ಅವಕಾಶದಿಂದಲೇ ವಂಚಿತನಾಗಿದ್ದ ಹುಡುನಿಗೆ ಶಿಕ್ಷಣದ ಬಗ್ಗೆ ಪ್ರೀತಿ ಹುಟ್ಟಲು ಯಾವುದೇ ಸಕಾರಣವಿರಲಿಲ್ಲ! ಹಾಗಾಗಿ ಆ ವಿದ್ಯಾರ್ಥಿಗೆ ಯಾವುದರಲ್ಲೂ ಆಸಕ್ತಿ ಇಲ್ಲದೆ ನಿರ್ಲಿಪ್ತನಾಗಿ ಇರುತ್ತಿದ್ದ!.
ಈಗ ತಾನೆ ಹೊಸ ಶಾಲೆಗೆ ಸೇರಿದ್ದಾನೆ. ಅವನಿಗೆ ಸ್ವಲ್ಪ ಸಮಯ ಬೇಕಾಗಬಹುದು. ನಾಳೆಯಿಂದ ಶಾಲೆಗೆ ಬರಲಿ' ಎಂದು ಹೇಳಿ ಅವರಿಬ್ಬರನ್ನ ಕಳುಹಿಸಿ ಕೊಟ್ಟೆ. ಮರುದಿನ ಶಾಲೆಗೆ ಹಾಜರಾದ ಆತನನ್ನು ಮಕ್ಕಳಿಗೆಲ್ಲ ಪರಿಚಯಿಸಿ. 'ನಿಮ್ಮ ಸ್ನೇಹಿತರ ಬಳಗಕ್ಕೆ ಮತ್ತೊಬ್ಬನ ಸೇರ್ಪಡೆಯಾಗಿದೆ! ಸೇರಿಸಿಕೊಳ್ಳಿ' ಎಂದು ಹೇಳಿ ಅವನಿಗೆ ಚಪ್ಪಾಳೆಯ ಸ್ವಾಗತವನ್ನು ನೀಡಿದೆ. ಸ್ವಲ್ಪವೂ ವಿಚಲಿತನಾಗದೆ, ಯಾರೊಬ್ಬರ ಮುಖವನ್ನೂ ನೋಡದೆ ನೇರವಾಗಿ ನಾನು ತೋರಿಸಿದ ಬೆಂಚ್ನಲ್ಲಿ ಹೋಗಿ ಕುಳಿತ. ಉಳಿದ ಮಕ್ಕಳಿಗೆಲ್ಲ ಅವನಲ್ಲಿ ಮಾತನಾಡುವ ಕುತೂಹಲ ಎದ್ದು ಕಾಣುತ್ತಿತ್ತು. ಈ ಹುಡುಗ ಮಾತ್ರ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಎರಡು ದಿನ ಹುಡುಗನ ಬಗ್ಗೆ ಯಾವುದೇ ರೀತಿಯಾದ ತಕರಾರು ಕಾಣಲಿಲ್ಲ! ಮೂರನೇ ದಿನದಿಂದ ಶುರುವಾಯಿತು ಮಕ್ಕಳ ದೂರುಗಳು! ಮಕ್ಕಳು ಹೊಸ ಹುಡುಗನ ಬಗ್ಗೆ ಒಂದಲ್ಲ ಒಂದು ದೂರಿನೊಂದಿಗೆ ಬರುತ್ತಿದ್ದರು.
ಮಾಮ್, ಅವನು ಕೆಟ್ಟ ಶಬ್ದ ಉಪಯೋಗ ಮಾಡಿದ, ಅವ ನನಗೆ ಹೊಡೆದ, ಅವನು ನನ್ನನ್ನು ತಳ್ಳಿದ, ಅವನು ನನ್ನ ಊಟವನ್ನು ಕಿತ್ತುಕೊಂಡ, ನನ್ನ ಸ್ನಾಕ್ಸ್ ತಿಂದ! ನನ್ನ ಪುಸ್ತಕ ಬಿಸಾಡಿದ, ನನ್ನ ಪೆನ್ಸಿಲ್ ಕದ್ದ... ಹೀಗೆ ದೂರುಗಳ ಪಟ್ಟಿ ಬೆಳೆಯುತ್ತಾ ಹೋಯಿತು. ವಿದ್ಯಾರ್ಥಿಗಳು ಮಾತ್ರವಲ್ಲ ಶಿಕ್ಷಕರಿಗೂ ಕೂಡ ಆತನ ಬಗ್ಗೆ ಅನೇಕ ರೀತಿಯ ದೂರುಗಳು! ಏನೇ ಮಾಡಿದರೂ ನೋಟ್ಸ್ ಬರೆಯುತ್ತಿರಲಿಲ್ಲ, ಪಾಠದ ಕಡೆ ಗಮನ ಕೊಡುತ್ತಿರಲಿಲ್ಲ, ಹೋಂ ವರ್ಕ್ ಮುಟ್ಟುತ್ತಲೇ ಇರಲಿಲ್ಲ!
ಈ ಹುಡುಗನ ಬಗ್ಗೆ ಶಿಕ್ಷಕರಿಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂಬುದು ವಿದ್ಯಾರ್ಥಿಗಳಿಗೆ ಮನವರಿಕೆಯಾಗಿತ್ತು. ಹಾಗಾಗಿ ತರಗತಿಯ ಎಲ್ಲಾ ಅವಾಂತರಗಳಿಗೂ ಆತನನ್ನೇ ಹೊಣೆ ಮಾಡುತ್ತಿದ್ದರು. ಅವನ ಬಗ್ಗೆ ಸದಾ ಶಿಕ್ಷಕರಲ್ಲಿ ಒಂದಲ್ಲ ಒಂದು ದೂರು ನೀಡಲು ಬರುತ್ತಿದ್ದರು. ಉಳಿದ ಮಕ್ಕಳು ಅಂತದ್ದೇ ಚೇಷ್ಟೆ ಮಾಡಿದರು ಅದು ಕಂಪ್ಲೇಂಟ್ ಆಗುತ್ತಿರಲಿಲ್ಲ! ನಾವುಗಳೂ ಅಷ್ಟೇ ಮಕ್ಕಳ ದೂರುಗಳನ್ನ ಗಂಭೀರವಾಗಿ ಪರಿಗಣಿಸಿ ಆತನಿಗೆ ಉಪದೇಶ ಕೊಡುವ ನೆಪದಲ್ಲಿ ಜೋರು ಮಾಡುವುದು, ಪೆಟ್ಟು ಕೊಡುವುದು, ಬುದ್ಧಿ ಹೇಳುವುದು ಇದೆಲ್ಲವನ್ನು ಮಾಡುತ್ತಿದ್ದೆವು.
ಹೇಗಿದ್ದರೂ, ಅವನಿಗೆ ಆಟವಾಡಲು ಬಿಡಬೇಡಿ ಆ ಟೈಮಲ್ಲಿ ಅವನಿಗೆ ವಿಶೇಷ ತರಗತಿಗಳನ್ನು ಮಾಡಿ ಎಂದು ಅವನ ಅಮ್ಮನೇ ನಮಗೆ ಸಂಪೂರ್ಣ ಅನುಮತಿ ಕೊಟ್ಟಿದ್ದರು. ಹಾಗಾಗಿ ಶಿಕ್ಷಕರು ಕೂಡ ಅವನ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವನ ಪಿ.ಟಿ ಪಿರಿಯಡ್ ನಲ್ಲೂ ಒಂದಲ್ಲ ಒಂದು ಶಿಕ್ಷಕರು ಅವನಿಗೆ ಬೇರೆ ಮಕ್ಕಳ ನೋಟ್ಸ್ ಕೊಟ್ಟು ಅವನ ನೋಟ್ಸ್ ಅನ್ನು ಕಂಪ್ಲೀಟ್ ಮಾಡಿಸುತ್ತಿದ್ದರು. ಆದರೆ ಏನೇ ಮಾಡಿದರೂ ಆ ಹುಡುಗನ ಶೈಕ್ಷಣಿಕ ಪ್ರಗತಿ ಮಾತ್ರ ಮರೀಚಿಕೆಯಾಗಿತ್ತು. ಪ್ರತಿ ಎರಡು ದಿನಕ್ಕೊಮ್ಮೆ ಆತನ ಅಮ್ಮ ನನಗೆ ಕರೆ ಮಾಡಿ ಅವನ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು. ನನಗೂ ಆ ಹುಡುಗ ಚಾಲೆಂಜಿಂಗ್ ಅನ್ನಿಸಿಬಿಟ್ಟ! ಒಳ್ಳೆ ಮಾತಿನಲ್ಲಿ ಹೇಳಿದ್ರು ಇಲ್ಲಾ, ಪೆಟ್ಟು ಕೊಟ್ಟರು ಇಲ್ಲಾ, ಜೋರ್ ಮಾಡಿದ್ರೂ ಇಲ್ಲಾ, ಪಿಟಿ ಪಿರೇಡ್ ಕ್ಯಾನ್ಸಲ್ ಮಾಡಿದ್ರು ಹೀಗೆ ಎಲ್ಲಾ ರೀತಿಯ ಪ್ರಯೋಗಗಳನ್ನು ಅವನ ಮೇಲೆ ಮಾಡಿ ಆಗಿತ್ತು. ಆದರೂ ಅವನೇ ಗೆದ್ದಿದ್ದ ನಾವು ಸೋತಿದ್ದೆವು.
(ಇನ್ನೂ ಇದೆ)
-ಶ್ರೀಮತಿ ಸುಪ್ರಿಯಾ, ಮೂಡುಬಿದಿರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ