ಶಿಕ್ಷಕಿಯ ಗೆಲ್ಲಿಸಿದ ವಿದ್ಯಾರ್ಥಿ (ಭಾಗ 2)

ಶಿಕ್ಷಕಿಯ ಗೆಲ್ಲಿಸಿದ ವಿದ್ಯಾರ್ಥಿ (ಭಾಗ 2)

ಹೀಗಿರಲು ಒಂದು ದಿನ ನನ್ನ ಗಣಿತದ ತರಗತಿಯ ಕೊನೆಯ ಐದು ನಿಮಿಷಗಳು ಮಕ್ಕಳಿಗೆ ಹೋಂ ವರ್ಕ್ ನೀಡುತ್ತಾ ಇದ್ದೆ, ಅವಾಗಲೇ ಹೇಳಿದೆ 'ಮಕ್ಕಳೇ ಇವತ್ತಿಂದ ಒಂದು ಬದಲಾವಣೆ ಮಾಡಿಕೊಳ್ಳುವ. ಸಾಮಾನ್ಯವಾಗಿ ಮರುದಿನ ಯಾರು ಹೋಂವರ್ಕ್ ಮಾಡ್ಲಿಲ್ಲ ಎಂದು ಕೇಳುತ್ತಿದ್ದೆ. ಆದರೆ ಇವತ್ತಿಂದ ನಾಳೆ, ಯಾರಿಗೆಲ್ಲ ಹೋಂವರ್ಕ್ ಮಾಡಿಕೊಂಡು ಬರಲಿಕ್ಕೆ ಸಾಧ್ಯವಿಲ್ಲ ಅನ್ನೋದನ್ನ ನೀವು ಇವತ್ತೇ ಹೇಳಿಬಿಡಿ. ನಾಳೆ ಮತ್ತೆ ನಾನು ಕೇಳೋದು, ಅನೇಕರು ಮಾಡ್ಲಿಲ್ಲ ಅನ್ನೋದು, ನನಗೆ ಕೋಪ ಬರೋದು, ನಾನು ನಿಮಗೆ ಜೋರು ಮಾಡೋದು! ಒಟ್ಟಾರೆ ನಮ್ಮ ಇಡೀ ತರಗತಿಯ ವಾತಾವರಣ ಹಾಳಾಗಿ ಹೋಗುತ್ತೆ ಅಲ್ವಾ? ಹಾಗಾಗಿ ಇವತ್ತೇ ಹೇಳಿ ಮಕ್ಕಳೇ ಯಾರೆಲ್ಲ ನಾಳೆ ಹೋಮ್ ವರ್ಕ್ ಮಾಡಿಕೊಂಡು ಬರುವುದಿಲ್ಲ?' ಎಂದು ಕೇಳಿದೆ. ಯಾವ ವಿದ್ಯಾರ್ಥಿಯು ಕೈ ಮೇಲೆ ಮಾಡುವ ಧೈರ್ಯ ತೋರಲಿಲ್ಲ! ಆದರೆ ತಕ್ಷಣ ಒಬ್ಬ ವಿದ್ಯಾರ್ಥಿ ಹೊಸ ಹುಡುಗನ ಕಡೆ ಬೊಟ್ಟು ಮಾಡಿ, "ಮಾಮ್, ನಾಳೆ ಅವನು ಹೋಂವರ್ಕ್ ಮಾಡ್ಕೊಂಡು ಬರುವುದಿಲ್ಲ" ಅಂದ! 

ನಾನು ಆಶ್ಚರ್ಯದಿಂದ ಅವನಲ್ಲಿ ಕೇಳಿದೆ, "ಅವನು ನಾಳೆ ಹೋಂವರ್ಕ್ ಮಾಡುವುದಿಲ್ಲ ಅಂತ ನಿನಗೆ ಹೇಗೆ ಗೊತ್ತು ? ನಿನ್ನಲ್ಲಿ ಅವನು ಹೇಳಿದನಾ?" ಎಂದೆ. ಅದಕ್ಕೆ ಇತರ ಇಬ್ಬರು ಮಕ್ಕಳು ಧ್ವನಿಗೂಡಿಸಿದರು "ಅವ ಹೇಳಿಲ್ಲ ಮೇಡಂ, ಆದರೆ ಅವ ಈ ಶಾಲೆಗೆ ಬಂದಾಗಿನಿಂದ ಒಂದು ದಿನ ಕೂಡ ಹೋಮ್ ವರ್ಕ್ ಮಾಡಿಲ್ಲ, ಹಾಗಾಗಿ ನಾಳೆಯೂ ಅವನು ಮಾಡುವುದಿಲ್ಲ, ವೆರಿ ಸಿಂಪಲ್" ಅಂದರು. 

ಮಕ್ಕಳ ಲಾಜಿಕ್ ಸರಿಯಾಗಿತ್ತು. ಆದರೆ ನಾನು ಮಾತ್ರ ಅವರ ಮಾತಿಗೆ ಸಹಮತ ವ್ಯಕ್ತಪಡಿಸಲಿಲ್ಲ. "ಹಾಗೆಲ್ಲ ಹೇಳಕ್ಕಾಗಲ್ಲ ಮಕ್ಕಳೇ ಯಾರಿಗೆ ಗೊತ್ತು ಒಂದು ವೇಳೆ ನಾಳೆ ಅವನು ಹೋಂ ವರ್ಕ್ ಮಾಡಿಕೊಂಡು ಬರಲೂಬಹುದು" ಎಂದೆ. ಮಕ್ಕಳು ನನ್ನ ಮಾತನ್ನು ಒಪ್ಪಿಕೊಳ್ಳಲು ತಯಾರಿರರಿಲ್ಲ! "ಸಾಧ್ಯನೇ ಇಲ್ಲ ಮೇಡಂ. ಅವನು ಹೋಂ ವರ್ಕ್ ಮಾಡೋದೇ ಇಲ್ಲ" ಅಂತ ಖಡಾ ಖಂಡಿತವಾಗಿ ನನ್ನಲ್ಲಿ ಹೇಳಿಬಿಟ್ಟರು.! 

 "ಹಾಗಾದ್ರೆ ನನಗೂ ನಿಮಗೂ ಒಂದು ಚಾಲೆಂಜ್! ನನ್ನ ಪ್ರಕಾರ ಅವನು ನಾಳೆ ಹೋಂ ವರ್ಕ್ ಮಾಡಿಕೊಂಡು ಬರುತ್ತಾನೆ. ನೀವು ಹೇಳ್ತಾ ಇದ್ದೀರಿ ಅವನು ಮಾಡ್ಕೊಂಡು ಬರುವುದಿಲ್ಲ ಅಂತ. ನೋಡೋಣ ನಾಳೆ ಯಾರು ಗೆಲ್ಲುತ್ತಾರೆ?" ಅಂದೆ. ತಕ್ಷಣ ಮಕ್ಕಳು ಉತ್ಸಾಹದಿಂದ, "ಮ್ಯಾಮ್ ಒಂದು ವೇಳೆ ನಾವು ಗೆದ್ದರೆ ಒಂದು ದಿನದ ಗಣಿತ ತರಗತಿಯಲ್ಲಿ ನೀವು ನಮ್ಮನ್ನು ಆಟವಾಡಲು ಬಿಡಬೇಕು" ಅಂದರು. ಸರಿ ಅಂದೆ. ಇಷ್ಟೆಲ್ಲಾ ಮಾತುಕತೆ ನಡೀತಾ ಇದ್ರೂನು ಆ ಹುಡುಗ ಮಾತ್ರ ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಕುಳಿತಿದ್ದ. ತರಗತಿಯಿಂದ ಹೊರ ಹೋಗುವಾಗ ಯಾಕೋ ನನಗೆ ಈ ಚಾಲೆಂಜ್ನಲ್ಲಿ ನಾನು ಗೆಲ್ಲುತ್ತೇನೆ ಎಂಬ ಭರವಸೆ ಇರಲಿಲ್ಲ.

ಅದೇ ದಿನ ಸಂಜೆಯ ಕೊನೆಯ ಅವಧಿಯಲ್ಲಿ ಆ ಮಕ್ಕಳಿಗೆ ಪಿ.ಟಿ ಪಿರಿಯಡ್ ಇತ್ತು. ಎಲ್ಲಾ ಮಕ್ಕಳು ಆಟದ ಮೈದಾನದಲ್ಲಿ ಆಡುತ್ತಿದ್ದರೆ ಯಥಾಪ್ರಕಾರ ಈ ಹುಡುಗನಿಗೆ ಆಟದ ಅವಧಿ ರದ್ದಾಗಿತ್ತು! ಹಾಗಾಗಿ ಆತ ಕಾರಿಡಾರ್ ನಲ್ಲಿ ನಿಂತು ಮಕ್ಕಳು ಆಟವಾಡುವುನ್ನು ನೋಡುತ್ತಿದ್ದ. ನಾನು ಅವನ ಬಳಿ ಹೋಗಿ ಕೇಳಿದೆ "ನಿನಗೂ ಆಟ ಆಡಬೇಕು ಅನ್ಸುತ್ತೆ ಅಲ್ವಾ ?" ನನ್ನನ್ನು ನೋಡಿದ ತಕ್ಷಣ ತರಗತಿಯೊಳಗೆ ನಡೆದ. ತಕ್ಷಣ ಆತನ ಕೈಯನ್ನು ಹಿಡಿದು ನಿಲ್ಲಿಸಿ ಅವನ ಕಣ್ಣುಗಳನ್ನು ನೋಡುತ್ತಾ ಹೇಳಿದೆ "ನೋಡು ಇವತ್ತು ಬೆಳಗ್ಗೆ ಮಕ್ಕಳು ಚಾಲೆಂಜ್ ಮಾಡಿದ್ದಾರಲ್ವ? ಈಗ ನಾಳೆ ನಾನು ಗೆಲ್ಬೇಕು ಅಂದ್ರೆ ನನಗೆ ನಿನ್ನ ಸಪೋರ್ಟ್ ಬೇಕು. ಒಂದು ಕೆಲಸ ಮಾಡು ನಿನಗೆ ಲೆಕ್ಕ ಮಾಡಲಿಕ್ಕೆ ಗೊತ್ತಿಲ್ಲದಿದ್ದರೂ ಪರವಾಗಿಲ್ಲ ಒಂದೆರಡು ಪ್ರಶ್ನೆಗಳನ್ನಾದರೂ ಒಂದು ಪುಸ್ತಕದಲ್ಲಿ ಬರೆದು, ಅದು ಸರಿ ಇರಲಿ ತಪ್ಪಿರಲಿ ನಿನಗೆ ತೋಚಿದ ಹಾಗೆ ಬರೆದು ತಾ" ಎಂದೆ. ಒಂದು ಕ್ಷಣ ನನ್ನ ಮುಖವನ್ನು ನೋಡಿದ ಹುಡುಗ ನನ್ನ ಕೈ ಬಿಡಿಸಿಕೊಂಡು ತರಗತಿಯೊಳಗೆ ನಡೆದ. ನನಗೆ ನಿರಾಸೆಯಾಯಿತು.

ಮಾರನೇ ದಿನ ಬೆಳಗ್ಗೆ ಎಂದಿನಂತೆ ಸ್ಟಾಪ್ ರೂಮ್ನಲ್ಲಿ ನನ್ನ ಮೇಜಿನ ಹತ್ತಿರ ಬರುವಾಗ ಆಗಲೇ ಎರಡು ಪುಸ್ತಕಗಳು ನನ್ನ ಟೇಬಲ್ ಮೇಲಿದ್ದವು. ಸಾಮಾನ್ಯವಾಗಿ ಹೋಮ್ ವರ್ಕ್ ಪುಸ್ತಕಗಳನ್ನು ನಾನೇ ತರಗತಿಯಲ್ಲಿ ಹೋಗಿ ಮಕ್ಕಳಿಂದ ಸಂಗ್ರಹಿಸುತ್ತಿದ್ದೆ. ಯಾರಿದು ನಾನು ಬರುವ ಮೊದಲೇ ಹೋಂ ವರ್ಕ್ ಪುಸ್ತಕ ಇಲ್ಲಿಟ್ಟಿದ್ದು? ಎಂದು ಯೋಚಿಸುತ್ತಾ ಪುಸ್ತಕದ ಹೆಸರನ್ನು ನೋಡಿದೆ. ನನ್ನ ಕಣ್ಣುಗಳನ್ನು ನನಗೇ ನಂಬಲಾಗಲಿಲ್ಲ! ಯಾಕೆಂದರೆ ಆ ಪುಸ್ತಕ ಹೊಸ ಹುಡುಗನದಾಗಿತ್ತು!! 

ಕೊಟ್ಟ ನಾಲ್ಕು ಪ್ರಶ್ನೆಗಳಲ್ಲಿ ಮೂರು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದ! ಅದರಲ್ಲಿ ಒಂದು ಸರಿ ಉತ್ತರವಾಗಿತ್ತು. ನನಗಂತೂ ಅತ್ಯಂತ ಸಂತೋಷವಾಗಿತ್ತು. ಅಂತೂ ಇಂತೂ ಒಂದಾದರು ಹೋಮ್ ವರ್ಕ್ ಮಾಡಿದನಲ್ಲ ಹುಡುಗ! ಅದೇ ದಿನ ಒಬ್ಬ ವಿದ್ಯಾರ್ಥಿ ತನ್ನ ಹುಟ್ಟು ಹಬ್ಬದ ಪ್ರಯುಕ್ತ ನನಗೆ ನೀಡಿದ ಒಂದು ಸಿಹಿ ತಿಂಡಿಯನ್ನು ಹಿಡಿದುಕೊಂಡು ತರಗತಿಗೆ ಹೋದೆ. ಮಕ್ಕಳತ್ರ ಹೇಳಿದೆ 'ಇವತ್ತು ನಾನು ಈ ಸಿತಿಂಡಿಯನ್ನು ಒಬ್ಬರಿಗೆ ಕೊಡುತ್ತೇನೆ. ಯಾರಿಗೆ ಇರಬಹುದು ಊಹಿಸಿ?' ಎಂದೆ. ಒಬ್ಬೊಬ್ರು ಒಂದೊಂದು ಹೆಸರು ಹೇಳಿದ್ರು. "ಅವರಾರಿಗೂ ಅಲ್ಲ ಈ ತಿಂಡಿಯನ್ನು ನಾನು ಕೊಡ್ತಾ ಇರೋದು ನಮ್ಮ ಶಾಲೆಗೆ ಬಂದ ಹೊಸ ಹುಡುಗನಿಗೆ" ಎಂದೆ. ಮಕ್ಕಳಿಗೆ ಆಶ್ಚರ್ಯ! 'ಯಾಕೆ ಮೇಡಂ?' "ಯಾಕಂದ್ರೆ ಇವತ್ತು ಈ ಹುಡುಗ ನನ್ನನ್ನು ನಿಮ್ಮ ಚಾಲೆಂಜ್ ನಲ್ಲಿ ಗೆಲ್ಲಿಸಿದ್ದಾನೆ" ಅಂದೆ. ಮಕ್ಕಳಿಗೂ ಆಶ್ಚರ್ಯ. 'ಅಷ್ಟೇ ಅಲ್ಲ ನಾನು ಕೇಳುವ ಮುಂಚೆನೇ ನನ್ನ ಟೇಬಲ್ ಮೇಲೆ ಅವನ ಪುಸ್ತಕ ತಂದಿಟ್ಟಿದ್ದಾನೆ. ಹಾಗಾಗಿ ನನ್ನನ್ನು ಗೆಲ್ಲಿಸಿದ ನನ್ನ ವಿದ್ಯಾರ್ಥಿಗೆ ಈ ಸಿಹಿ ತಿಂಡಿ". ಎನ್ನುತ್ತಾ ಆತನನ್ನು ತರಗತಿಯ ಮುಂದೆ ಕರೆದು ತಿಂಡಿ ಕೊಟ್ಟೆ. ನಾನು ಹೇಳದೆ ಹೋದರು ಮಕ್ಕಳೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು.

"ನೋಡಿದ್ರಾ, ಹೋಮ್ ವರ್ಕ್ ಮಾಡುವುದೇ ಇಲ್ಲ ಅನ್ನುತ್ತಿದ್ದ ಇವನು ಕೂಡ ಇವತ್ತು ಹೋಂವರ್ಕ್ ಮಾಡಿಕೊಂಡು ಬಂದಿದ್ದಾನೆ. ಅಂದರೆ ನಾವು ಯಾರನ್ನು ಕೂಡ ಬದಲಾಗಲು ಸಾಧ್ಯವಿಲ್ಲ ಅಂದುಕೊಳ್ಳಬಾರದು ಅಲ್ವಾ ಮಕ್ಕಳೇ?" ಅಂದೆ. ಮಕ್ಕಳು ಹೌದೂ ಎನ್ನುತ್ತಾ ಧ್ವನಿಗೂಡಿಸಿದರು. "ಇನ್ನು ಮುಂದೆ ಅವನಿಗೆ ಕಲಿಯುವುದರಲ್ಲಿ ಖಂಡಿತಾ ಆಸಕ್ತಿ ಹುಟ್ಟುತ್ತದೆ. ನೀವು ಅವನಿಗೆ ಕಲಿಕೆಯಲ್ಲಿ ಸಹಾಯ ಮಾಡಬೇಕು". ಎಂದೆ. ಮಕ್ಕಳಿಗೂ ಖುಷಿಯಾಯಿತು. ಆದರೆ ನಿನ್ನೆ ನನ್ನಲ್ಲಿ ಚಾಲೆಂಜ್ ಹಾಕಿದ ಹುಡುಗ ಹೇಳಿದ "ಛೇ, ನಮಗೆ ಪಿ.ಟಿ ಸಿಗಲಿಲ್ಲ" ಎಂದ. "ಹಾಗೇನಿಲ್ಲ ಇವತ್ತು ನನ್ನನ್ನು ಅವನು ಗೆಲ್ಲಿಸಿದ್ದಾನೆ. ಹಾಗಾಗಿ ನಿಮಗೆ ಈಗ ಆಟವಾಡಲು ಬಿಡುತ್ತೇನೆ. ಎಲ್ಲರೂ ಮೈದಾನಕ್ಕೆ ಹೋಗಿ" ಅಂದೆ. ಮಕ್ಕಳು ತುಂಬಾ ಖುಷಿಯಿಂದ ಹೋ.... ಎನ್ನುತ್ತಾ ತರಗತಿಯಿಂದ ಹೊರ ನಡೆದರು. ಈ ಹುಡುಗ ಮಾತ್ರ ತರಗತಿಯಲ್ಲೇ ನಿಂತಿದ್ದ. "ಯಾಕೆ ನೀನು ಆಟವಾಡಲು ಹೋಗಲ್ವಾ?" ಎಂದೆ. "ಇಲ್ಲ ಮೇಡಂ, ನನ್ನ ಪಿ.ಟಿ ಪಿರೇಡ್ ಕ್ಯಾನ್ಸಲ್ ಆಗಿದೆ" ಅಂದ. ಪರ್ವಾಗಿಲ್ಲಪ್ಪ ಇದು ಪಿ.ಟಿ. ಪಿರಿಯಡ್ ಅಲ್ಲ, ಹಾಗಾಗಿ ನೀನು ಆಟವಾಡಬಹುದು ಬಾ ಎನ್ನುತ್ತಾ ಅವನನ್ನೂ ಮೈದಾನ ಕ್ಕೆ ಕಳುಹಿಸಿದೆ. ಹುಡುಗ ಸಂತೋಷದಿಂದ ಓಡುತ್ತಾ ಮೈದಾನ ತಲುಪಿದ. ಉಳಿದ ಮಕ್ಕಳು ಕೂಡಾ ಆತನನ್ನು ತಮ್ಮ ಸ್ನೇಹಿತನಂತೆ ನಡೆಸಿಕೊಳ್ಳುತ್ತಿದ್ದನ್ನು ಕಂಡು ಸಂತೋಷವಾಯಿತು. ಕ್ರಮೇಣ ಹುಡುಗ ನಮ್ಮ ಶಾಲೆಯ ರೀತಿ - ನೀತಿಗಳಿಗೆ ಹೊಂದಿಕೊಳ್ಳಲು ಪ್ರಾರಂಭಿಸಿದ. ಇತರ ಶಿಕ್ಷಕರೂ ಕೂಡಾ ವಾರದಲ್ಲಿ ಕೆಲವು ದಿನಗಳಾದರೂ ಆತನಿಗೆ ಆಟವಾಡುವ ಅವಕಾಶವನ್ನು ನೀಡುತ್ತಿದ್ದರು. ಆ ಹುಡುಗನ ಸಣ್ಣ ಸಣ್ಣ ಪ್ರಗತಿಯನ್ನು ಕೂಡ ನಾವು ಸಂಭ್ರಮಿಸುತ್ತಾ ಇದ್ದರೆ, ಆತನ ತಾಯಿಗೆ ಸಮಾಧಾನ ಆಗುತ್ತಿರಲಿಲ್ಲ. ಎರಡೇ ವರ್ಷದಲ್ಲಿ ಮತ್ತೆ ಆ ಹುಡುಗನನ್ನು ನಮ್ಮ ಶಾಲೆಯಿಂದ ಬಿಡಿಸಿ ಇನ್ನೊಂದು ಶಾಲೆಗೆ ಸೇರಿಸಿದರು. ಆಮೇಲೆ ಆ ಹುಡುಗನ ಬಗ್ಗೆ ಯಾವುದೇ ವಿವರಗಳು ನನಗೆ ತಿಳಿಯಲೇ ಇಲ್ಲ. ಆ ಹುಡುಗ ಎಲ್ಲೇ ಇದ್ದರೂ ಚೆನ್ನಾಗಿರಲಿ, ಖುಷಿಯಿಂದ ಇರಲಿ ಎನ್ನುವ ಹಾರೈಕೆ ನನ್ನದು.

(ಮುಗಿಯಿತು)

-ಶ್ರೀಮತಿ ಸುಪ್ರಿಯಾ, ಮೂಡುಬಿದಿರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ