ಶಿಕ್ಷಣದ ಸುಪ್ತ ಪರಿಣಾಮ

ಶಿಕ್ಷಣದ ಸುಪ್ತ ಪರಿಣಾಮ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)

ಪೂರ್ವಗ್ರಹಗಳಿಲ್ಲದ ಮತ್ತು ಯಾವುದೇ ಪಕ್ಷಪಾತಿಯಾಗದೇ ಇರಲು ಎಲ್ಲ ಪ್ರಯತ್ನಮಾಡಿದರೂ ನ್ಯಾಯಾಧೀಶರ ಶಿಕ್ಷಣ ಮತ್ತು ಸಾಮಾಜಿಕ ಸ್ಥಾನಮಾನವು ಅವರು ಮೊಕದ್ದಮೆ ನಡೆಸುವ ಕ್ರಮದಲ್ಲಿ ಸ್ವಲ್ಪಮಟ್ಟಿನ ಪ್ರಭಾವ ಬೀರಬಹುದು.
    ಬಂಟ್ವಾಳದಲ್ಲಿ ಮ್ಯಾಜಿಸ್ಟ್ರೇಟಾಗಿದ್ದಾಗ ಕಮ್ಯುನಿಸ್ಟ್ ಪಕ್ಷಕ್ಕೆ ನಿಷ್ಠರಾಗಿದ್ದ ರೈತಸಂಘದ ಕೆಲವು ಮುಖಂಡ ಕಾನೂನುಬಾಹಿರ ಕೂಟ ಮಾಡಿಕೊಂಡು ದೊಂಬಿ ಮತ್ತು ಇತರ ಅಪರಾಧಗಳನ್ನು ಮಾಡಿದುದಕ್ಕಾಗಿ ಅವರ ಮೇಲೆ ಕ್ರಮ ಜರುಗಿಸಲಾಗಿತ್ತು.
    ಅವರ ವಿರುದ್ಧ ನನ್ನ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದಾಗಲೇ, ಸಂಘದ ಮುಖಂಡರಲ್ಲಿ ಒಬ್ಬನಾಗಿದ್ದ ಆರೋಪಿ ನಮ್ಮ ಮನೆಗೆ ಬಂದ ಮತ್ತು ಡೋರ್‌ಬೆಲ್ ಬಾರಿಸಿದ. ಬಾಗಿಲು ತೆಗೆದಾಗ, ಆಪಾದಿತನೊಬ್ಬ ನಾನು ಏಕಾಂತದಲ್ಲಿದ್ದಾಗ, ಅನಾಹೂತ ವ್ಯಕ್ತಿಯಾಗಿ ಬಂದುದನ್ನು ನೋಡಿ ತೀವ್ರವಾಗಿ ಬೇಸರಗೊಂಡೆ. ಆತನನ್ನು ಏಕೆ ಬಂದೆ ಕೂಡ ಕೇಳದೆ ರೇಗಿದೆ ಮತ್ತು ಅಲ್ಲಿಂದ ತಕ್ಷಣ ಹೊರಟು ಹೋಗದಿದ್ದಲ್ಲಿ ಪೊಲೀಸಿನವರನ್ನು ಕರೆಯಲಾಗುವುದು ಎಂದೂ ತಿಳಿಸಿದೆ.
    ಸುಮಾರು ಆರು ತಿಂಗಳ ತರುವಾಯ ಪಾಣೆ ಮಂಗಳೂರು ಪಂಚಾಯತಿಯ ಅಧ್ಯಕ್ಷರು ನಮ್ಮ ಮನೆಗೆ ಬಂದರು. ಅವರನ್ನು ಒಳಬರುವಂತೆ ಆಹ್ವಾನಿಸಿದೆ ಮತ್ತು ಒಂದು ಕಪ್ ಚಹಾವನ್ನೂ ಕೊಟ್ಟೆ. ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಮೀನಿನ ಬಹಿರಂಗ ಮಾರಾಟದಿಂದ ಇಡೀ ಪ್ರದೇಶದಲ್ಲಿ ತಡೆಯಲಾಗದಂಥ ದುರ್ವಾಸನೆ ಹಬ್ಬುತ್ತಿದೆ ಎಂದು ದೂರಿದರು. ಮೀನು ವ್ಯಾಪಾರಗಾರರ ಬಗ್ಗೆ ನಾನು ಕಟ್ಟುನಿಟ್ಟಾಗಿ ಗಮನಿಸಬೇಕು ಎಂದು ಕೋರಿದರು.
    ತಾವು ನಮ್ಮ ಮನೆಗೆ ಬರಲು ಸದಾ ಸ್ವಾಗತವಿದೆಯಾದರೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವ ಬೀರಲು ಪ್ರಯತ್ನಿಸಿದ್ದು ಸಂಪೂರ್ಣವಾಗಿ ಅನುಚಿತವಾದುದೆಂದು ವಿನಯವಾಗಿಯೇ ಅವರಿಗೆ ಹೇಳಿದೆ. ತಮ್ಮನ್ನು ಕ್ಷಮಿಸಿ ಎಂದು ಹೇಳಿ, ನನ್ನಿಂದ ಬೀಳ್ಕೊಂಡರು. ನಾನು ನಿರಾತಂಕವಾಗಿದ್ದೆ. ಅದನ್ನು ಮರೆತೂಬಿಟ್ಟೆ.
    ಈ ಎರಡು ಪ್ರಸಂಗಗಳಿಗೆ ಸಂಬಂಧಿಸಿದಂತೆ ಆನಂತರದಲ್ಲಿ ನನ್ನ ವರ್ತನೆಯ ಬಗ್ಗೆ ಆಲೋಚಿಸಿದಾಗ ಮಧ್ಯಮ ದರ್ಜೆಗೆ ಸೇರಿದ ವ್ಯಕ್ತಿಯಾಗಿ ನನ್ನ ಶಿಕ್ಷಣ ಮತ್ತು ಸಾಮಾಜಿಕ ಅಂತಸ್ತು ಆ ಪ್ರಸಂಗಗಳಲ್ಲಿ ಭಿನ್ನವಾಗಿ ವರ್ತಿಸುವಂತೆ ಮಾಡಿದೆ ಎಂದೂ ಆಶ್ಚರ್ಯಪಟ್ಟೆ. ಈ ಎರಡು ಪ್ರಸಂಗಗಳಲ್ಲಿಯೂ ನನ್ನ ಬಳಿಗೆ ಬಂದಿದ್ದ ವ್ಯಕ್ತಿಗಳು ನನ್ನ ಮುಂದೆ ವಿಚಾರಣೆಯಲ್ಲಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತನಾಡಲು ಬಂದಿದ್ದವರೇ ಆಗಿದ್ದರು.