ಶಿಕ್ಷಣ ಎಂಬುದು ಮಾನವೀಯತೆಯ ವಿಕಾಸ !
ಸರ್ಕಾರ ಮತ್ತು ಆಡಳಿತ ವ್ಯವಸ್ಥೆ, ಸ್ವಲ್ಪ ಕಣ್ಣರಳಿಸಿ ನೋಡಬೇಕು, ಕಿವಿಯರಳಿಸಿ ಆಲಿಸಬೇಕು, ಹೃದಯದೊಳಗೆ ಜಾಗ ಕಲ್ಪಿಸಬೇಕು, ಮನಸ್ಸು ಮಾಡಿ ಸ್ವೀಕರಿಸಬೇಕು. ಇಂದು ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಒಂದು ಹೋರಾಟ ಬೆಂಗಳೂರಿನಲ್ಲಿ ನಡೆಯುತ್ತಿದೆ. ಚಳವಳಿ ಮಾಡುತ್ತಿರುವವರು ಹೊರ ದೇಶದವರಲ್ಲ. ನಮ್ಮ ನಿಮ್ಮ ನಡುವಿನ ಬಂಧು ಬಳಗದವರು, ಗೆಳೆಯ ಗೆಳತಿಯರು ಮತ್ತು ಚಿಂತಕರು. ಪಠ್ಯ ಪುಸ್ತಕ ಪರಿಷ್ಕರಣೆಯ ಬಗ್ಗೆ ಒಂದಷ್ಟು ಅಸಮಾಧಾನ ಹೊಂದಿದ್ದಾರೆ. ಈಗ ಆಡಳಿತ ವ್ಯವಸ್ಥೆ ಏನು ಮಾಡಬೇಕು.
ವಾಸ್ತವದಲ್ಲಿ ಇದು ಅತ್ಯಂತ ಮಹತ್ವದ ಮಕ್ಕಳ ಭವಿಷ್ಯದ ಶಿಕ್ಷಣ ಕುರಿತಾದ ಸಮಸ್ಯೆ. ಜನ ಪ್ರತಿನಿಧಿಗಳು ಈ ಬಗ್ಗೆ ತುರ್ತಾಗಿ ವಿಧಾನ ಮಂಡಲದ ಅಧಿವೇಶನ ಕರೆದು ಚರ್ಚೆ ಮಾಡಿ ಒಮ್ಮತದ ಅಭಿಪ್ರಾಯ ರೂಪಿಸಲು ಪ್ರಯತ್ನಿಸಬೇಕು. ಇದರಲ್ಲಿ ಹಠ ಅಸೂಯೆ ಪಕ್ಷ ರಾಜಕೀಯ ಲಾಭ ಇರಲೇಬಾರದು. ಕಾರಣ ಇದು ಕಲಿಕಾ ಕ್ರಮದ ವಿಷಯ. ಆದರೆ ಈ ರಾಜಕೀಯ ವ್ಯವಸ್ಥೆ ಸೂಕ್ಷ್ಮತೆಯನ್ನು ಕಳೆದುಕೊಂಡಿದೆ. ಮತಗಳ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದೆ. ನಾವು ಮಾಡುವುದಾದರು ಏನು?
ನಮಗೆ ತಿಳಿದ ಒಂದಷ್ಟು ಸಲಹೆ ಸೂಚನೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಅಷ್ಟೇ. ಶಿಕ್ಷಣ ಎಂಬುದು ಮಾನವೀಯತೆಯ ವಿಕಾಸ. ಈ ಹಿನ್ನೆಲೆಯಲ್ಲಿ...
1) ವಿವಾದ ದೊಡ್ಡ ಪ್ರಮಾಣದಲ್ಲಿ ಭುಗಿಲೆದ್ದಿರುವುದರಿಂದ ಈ ಶೈಕ್ಷಣಿಕ ವರ್ಷಕ್ಕೆ ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರಿಸುವುದು.
2) ಈಗ ರಚಿಸಿದ ಪಠ್ಯ ಪರಿಷ್ಕರಣೆ ಸಮಿತಿ ಆ ಕೆಲಸ ಮಾಡಲು ಅಸಮರ್ಥವಾದ ಕಾರಣ ತಕ್ಷಣವೇ ಮತ್ತೊಂದು ಹೊಸ ಪರಿಷ್ಕರಣೆಯ ಸಮಿತಿ ರಚಿಸುವುದು.
3) ಈ ಸಮಿತಿ ಸಂಪೂರ್ಣ ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಾಗಿರಬೇಕು. ಯಾವುದೇ ಸರ್ಕಾರದ ಅಧೀನದಲ್ಲಿ ಇರಬಾರದು ಮತ್ತು ಸರ್ಕಾರಗಳು ಬದಲಾದರೂ ಇದು ಅಸ್ತಿತ್ವದಲ್ಲಿ ಇರಬೇಕು.
4) ಈ ಪರಿಷ್ಕರಣೆಗೆ ಸ್ಪಷ್ಟವಾಗಿ ಕೆಲವು ಮಾನದಂಡಗಳನ್ನು ರೂಪಿಸುವುದು.
5) ಆ ಮಾನದಂಡಗಳು ಅಂದರೆ ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಶಿಕ್ಷಣದ ವಿಧಾನಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ ಅಂಗ ಸಂಸ್ಥೆ ಶಿಕ್ಷಣ ತಜ್ಞರು ಅಭಿಪ್ರಾಯದ ಆಧಾರದ ಮೇಲೆ ಯಾವ ರೀತಿ ಇರಬೇಕು ಎಂದು ವಿಶ್ವಮಟ್ಟದಲ್ಲಿ ಹೇಳಲಾಗಿದೆ. ಅದನ್ನೇ ಉಪಯೋಗಿಸಿಕೊಳ್ಳಬೇಕು. ಅದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ.
6) ಪ್ರತಿ ವಿಷಯಕ್ಕೂ ಪ್ರತ್ಯೇಕ ಪರಿಷ್ಕರಣೆ ಸಮಿತಿ ಇರಬೇಕು. ಇತಿಹಾಸ ಸಮಾಜ ವಿಜ್ಞಾನ ಮಾತೃಭಾಷೆ ಹೀಗೆ ಒಂದೊಂದು ಸಮಿತಿ ಬೇರೆ ಬೇರೆ ಇದ್ದರೆ ಉತ್ತಮ ಗುಣಮಟ್ಟ ಸಾಧ್ಯವಾಗುತ್ತದೆ. ಮುಖ್ಯವಾಗಿ ಇತಿಹಾಸದ ಗೊಂದಲಗಳಿಗೆ ಸರ್ಕಾರದ ಅಧೀಕೃತ ಇತಿಹಾಸವನ್ನೇ ಪರಿಗಣಿಸಬೇಕು. ಯಾರೋ ಬರೆದ ಅಭಿಪ್ರಾಯವನ್ನು ಇತಿಹಾಸ ಎಂದು ಪರಿಗಣಿಸಬಾರದು.
7) ಅದರಲ್ಲಿ ಬಹುತೇಕ ಸ್ಥಳೀಯತೆಯಿಂದ ಸಾರ್ವತ್ರಿಕ ವಿಷಯಗಳು, ಕಲಿಕೆಯ ಕ್ರಮಗಳು, ಭೋದನಾ ವಿಧಾನಗಳು ಎಲ್ಲವನ್ನೂ ಹೇಳಲಾಗಿದೆ. ಹಾಗೆಯೇ ಭಾರತದ ಅನೇಕ ಶಿಕ್ಷಣ ತಜ್ಞರು ಸಹ ಪಠ್ಯ ಕ್ರಮದ ವಿಧಾನಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಬರೆದಿದ್ದಾರೆ. ಅದನ್ನು ಸಹ ಪರಿಶೀಲಿಸಬಹುದು.
8) ಬಹುದೊಡ್ಡ ಸವಾಲು ಇರುವುದು ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಯಾರಾಗಬೇಕು ಎಂಬುದು. ಜಾತಿ ಧರ್ಮ ಪಕ್ಷ ಸೈದ್ಧಾಂತಿಕವಾಗಿ ಮನಸ್ಸುಗಳು ಒಡೆದಿರುವಾಗ ಇದನ್ನು ನಿರ್ಧರಿಸುವುದು ಕಷ್ಟ. ಅಷ್ಟರ ಮಟ್ಟಿಗೆ ನಮ್ಮ ಸಮಾಜ ಕಲುಷಿತವಾಗಿದೆ ಅಥವಾ ಒಬ್ಬರಿಗೊಬ್ಬರು ಅನುಮಾನ ಪಡುವಂತಾಗಿದೆ. ಆದರೂ ರಾಜ್ಯದ ಎಲ್ಲಾ ಭಾಗಗಳಿಂದ ಇರುವುದರಲ್ಲಿ ನಿಷ್ಪಕ್ಷಪಾತ ಎಂದು ಗುರುತಿಸಿಕೊಂಡಿರುವ ಮತ್ತು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿರುವ ಚಿಂತಕರನ್ನು ಗುರುತಿಸಿ ಅವರಿಗೆ ಈ ಜವಾಬ್ದಾರಿ ನೀಡಬೇಕು.
9) ಈ ಸಮಿತಿಯ ಸದಸ್ಯರು ಈ ಪರಿಷ್ಕರಣೆಯ ಅವಧಿಯಲ್ಲಿ ಇತರೆ ಯಾವುದೇ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸಲು ಬಿಡದೆ ಅವರಿಗೆ ತಾತ್ಕಾಲಿಕ ರಜೆ ನೀಡಬೇಕು ಮತ್ತು ಸಂಪೂರ್ಣ ಅವಧಿ ಇದಕ್ಕೇ ಮೀಸಲಿಡಬೇಕು. ಅವರಿಗೆ ಎಲ್ಲಾ ರೀತಿಯ ಸಂವಿಧಾನಾತ್ಮಕ ಸ್ವಾತಂತ್ರ್ಯ ನೀಡಬೇಕು.
10) ಈ ನೆಲದ ಅನ್ನ ನೀರು ಗಾಳಿ ಸೇವಿಸುವ ಯಾರೇ ಆದರೂ ಮಕ್ಕಳ ಶಿಕ್ಷಣದಲ್ಲಿ ರಾಜಕೀಯ ಮಾಡಬಾರದು. ಸಿದ್ಧಾಂತಗಳನ್ನು ಹೇರಬಾರದು. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಸದಸ್ಯರಿಗೆ ಸಂವಿಧಾನಾತ್ಮಕವಾಗಿ ಈ ಬಗ್ಗೆ ಪ್ರಮಾಣ ವಚನ ಭೋದಿಸಬೇಕು.
ಹೀಗೆ ಅಥವಾ ಇದಕ್ಕಿಂತ ಉತ್ತಮ ಸಲಹೆಗಳು ಇದ್ದರೆ ಸರ್ಕಾರ ಅದನ್ನು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪಠ್ಯ ಪುಸ್ತಕ ಪರಿಷ್ಕರಣೆಯೂ ಒಂದು ದೊಡ್ಡ ವಿವಾದ ಆಗುವುದಾದರೆ ನಾವು ಇನ್ನೂ ಮಾನಸಿಕವಾಗಿ ದುರ್ಬಲ ವ್ಯವಸ್ಥೆಯಲ್ಲಿ ಇದ್ದೇವೆ ಎಂದೇ ಅರ್ಥ.
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ