ಶಿಕ್ಷಣ ಕ್ಷೇತ್ರದ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್

ಶಿಕ್ಷಣ ಕ್ಷೇತ್ರದ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್

ಜೂನ್ ನಾಲ್ಕರಂದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 139ನೇ ಜಯಂತೋತ್ಸವ ಜರುಗಿತು. ಜಾತಿ ,ಮತ, ಧರ್ಮ ಯಾವುದೇ ಇರಲಿ ಬೆಳಗುವ ಜ್ಯೋತಿ ಮಾತ್ರ ಒಂದೇ. ಇಂತಹ ಹತ್ತು ಹಲವು ಆದರ್ಶಗಳನ್ನು ತಮ್ಮ ಆಡಳಿತದ ಉಸಿರನ್ನಾಗಿಸಿಕೊಂಡಿದ್ದ ಆದರ್ಶ ದೊರೆ "ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್". ಪ್ರಜಾ ಕಲ್ಯಾಣವೇ ರಾಜ್ಯದ ಕಲ್ಯಾಣ, ಶಿಕ್ಷಣ ಎಲ್ಲರಿಗೂ ದೊರಕಬೇಕಾದ ಹಕ್ಕು, ಆಡಳಿತವೆಂದರೆ ರಾಜರ ಆಶ್ರಯ ಮಾತ್ರವಲ್ಲ ಪ್ರಜೆಗಳೆಲ್ಲರೂ ಆಡಳಿತದಲ್ಲಿ ಭಾಗವಹಿಸಬೇಕು, ಸಮಾಜದಲ್ಲಿ ಮೇಲು-ಕೀಳೆಂಬ ತಾರತಮ್ಯ ಇರಬಾರದು, ಅವಕಾಶವಂಚಿತ ಹಿಂದುಳಿದ ವರ್ಗದವರು ಕೂಡ ಇತರರಂತೆ ನಡೆಯಬೇಕು ,ಜಾತಿ ,ಮತ, ಧರ್ಮ ಯಾವುದೇ ಇರಲಿ ಬೆಳಗುವ ಜ್ಯೋತಿ ಮಾತ್ರ ಒಂದೇ. ಇಂತಹ ಹತ್ತು ಹಲವು ಆದರ್ಶಗಳನ್ನು ತಮ್ಮ ಆಡಳಿತದ ಉಸಿರನ್ನಾಗಿಸಿಕೊಂಡಿದ್ದ ಆದರ್ಶ ದೊರೆ "ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್".

ಕನ್ನಡ ನಾಡನ್ನು ಹಲವಾರು ರಾಜವಂಶಗಳು ಕಟ್ಟಿಬೆಳೆಸಿವೆ ಅದರಲ್ಲಿ ಧೃವತಾರೆಯಂತೆ ಕಂಗೊಳಿಸುವ ಅದಮ್ಯ ರಾಜಮನೆತನವೆಂದರೆ ಅದು "ಮೈಸೂರು ಸಂಸ್ಥಾನ". ಇಂತಹ ಮಹಾ ಮಹಾಸಂಸ್ಥಾನದ ಮಹಾರಾಜರಾಗಿ ಕರ್ನಾಟಕವನ್ನು ಭಾರತದ ಅತ್ಯಂತ ಸಂಪತ್ಭರಿತವಾದ ಚಿನ್ನದನಾಡು, ಶ್ರೀಗಂಧದ ನಾಡು, ತಂತ್ರಜ್ಞಾನಗಳ ಬಿಡು ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯವಾದ ಸಾಧನೆಗೊಳಿಸಿದ ರಾಜ್ಯ ಎನಿಸಿಕೊಳ್ಳುತ್ತಿರುವುದು ನಾಲ್ವಡಿ ಅವರ ದೂರದೃಷ್ಟಿಯ ಫಲ. ತನ್ನ ಜೀವಿತ ಅವಧಿಯಲ್ಲಿ ಆಡಳಿತವನ್ನು ಅನುಭವಿಸುವ ದೊರೆ ಇಷ್ಟೊಂದು ವಿಕ್ರಮಗಳನ್ನು ಸಾಧಿಸಬಹುದು ಎಂದು ತೋರಿಸಿ ಕೊಟ್ಟಂತಹ ಪ್ರಜಾ ವತ್ಸಲ ಮಹಾರಾಜ ನಾಲ್ವಡಿ.

ನಾಲ್ವಡಿ ಕೃಷ್ಣರಾಜ ಒಡೆಯರ್ 1884 ಜೂನ್ 4ರಂದು ಜನಿಸಿದರು. ತಂದೆ ಹತ್ತನೇ ಚಾಮರಾಜ ಒಡೆಯರ್, ತಾಯಿ ವಾಣಿವಿಲಾಸ ಸನ್ನಿಧಾನ ಕೆಂಪನಂಜಮ್ಮಣ್ಣಿ ಅವರು. ನಾಲ್ವಡಿಯವರು ಹತ್ತನೇ ವರ್ಷದ ಬಾಲಕನಾಗಿದ್ದಾಗ ತಂದೆಯವರನ್ನು ಕಳೆದುಕೊಳ್ಳುತ್ತಾರೆ ಅಪ್ರಾಪ್ತ ಬಾಲಕ ನಾಲ್ವಡಿಯವರಿಗೆ 1905 ರಲ್ಲಿ ಪಟ್ಟಾಭಿಷೇಕವಾಗುತ್ತದೆ. ನಾಲ್ವಡಿಯವರು ವಯಸ್ಕರಾಗುವತನಕ ರಾಜ ಮಾತೆಯವರು ರಿಜೆಂಟರಾಗಿ ಆಡಳಿತ ನಡೆಸುತ್ತಿರುತ್ತಾರೆ. 16ನೇ ವಯಸ್ಸಿನಲ್ಲಿ ಕಾಥೇವಾಡದ ರಾಜಕುಮಾರಿ ಪ್ರತಾಪ ಕುಮಾರಿ ಅವರೊಡನೆ ವಿವಾಹವಾಗುತ್ತದೆ. ನಾಲ್ವಡಿಯವರಿಗೆ 18 ವರ್ಷ ತುಂಬಿದ ನಂತರ ರಿಜೆಂಟ್ ಆಡಳಿತ ರದ್ದಾಗಿ ನಾಲ್ವಡಿಯವರು ಪರಿಪೂರ್ಣವಾಗಿ ಮಹಾರಾಜರಾಗಿ ಆಡಳಿತ ವಹಿಸಿಕೊಳ್ಳುತ್ತಾರೆ .ಅಂದು ಆಡಳಿತವು ಸುಗಮವಾಗಿರದೆ ಮುಳ್ಳಿನ ಹಾದಿಯಾಗಿರುತ್ತದೆ, ಹಲವಾರು ಕಠಿಣ ಸವಾಲುಗಳು ಅವರ ಮುಂದಿರುತ್ತವೆ ಅವುಗಳೆಲ್ಲವನ್ನೂ ನಿಭಾಯಿಸಿ ಮಹಾರಾಜರೆಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟ ಮಹನೀಯ ನಾಲ್ವಡಿ ಪ್ರಭುಗಳು.

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲವನ್ನು" ಸುವರ್ಣಯುಗ "ಎಂದು ಕರೆಯಲಾಗುತ್ತದೆ ಕರ್ನಾಟಕ ರಾಜ್ಯವನ್ನು ಭಾರತದ ಹಾಗೂ ಏಷ್ಯಾದ ಹಲವು ಪ್ರಥಮ ಯೋಜನೆಗಳ ರಾಜ್ಯವನ್ನಾಗಿಸಿದ್ದು ಇದೇ ನಾಲ್ವಡಿಯವರು ಇವರು ಅನುಸರಿಸಿದ ಮಾರ್ಗ ಮಾಡಿದ ಅಭಿವೃದ್ಧಿ ಆಚಂದ್ರಾರ್ಕವಾಗಿದೇ. "ಬರೆದರೆ ಪುಟಗಳೇ ಸಾಲದಷ್ಟು, ನುಡಿದರೆ ಸಮಯವೇ ತೀರದಷ್ಟು"! ಅಭಿವೃದ್ಧಿ ಕಾರ್ಯಗಳು ಇವರ ಕಾಲದಲ್ಲಿ ನಡೆದಿವೆ ಮಂಡ್ಯದಲ್ಲಿ ಕೃಷ್ಣರಾಜಸಾಗರ ,ಚಿತ್ರದುರ್ಗದಲ್ಲಿ ವಾಣಿವಿಲಾಸ ಜಲಾಶಯ, ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರ, ಕೋಲಾರದ ಚಿನ್ನದಗಣಿ ,ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯ, ಮಂಡ್ಯ ಸಕ್ಕರೆ ಕಾರ್ಖಾನೆ, ಭದ್ರಾವತಿ ಉಕ್ಕಿನ ಕಾರ್ಖಾನೆ ,ಹುಲಿಕೆರೆ ಸುರಂಗ ನಾಲೆ, ಭಾರತೀಯ ವಿಜ್ಞಾನ ಸಂಸ್ಥೆ, ಮೈಸೂರು ಶ್ರೀಗಂಧದ ಕಾರ್ಖಾನೆ, ಸೋಪ್ ಫ್ಯಾಕ್ಟರಿ ,ಮೈಸೂರು ಬ್ಯಾಂಕ್ ,ಹೊಸ ರೈಲ್ವೆ ಮಾರ್ಗಗಳು, ಪಟ್ಟಣಗಳು ,ಅನಿಷ್ಟ ಪದ್ಧತಿಗಳ ರದ್ದತಿ ,ಮಹಿಳೆಯರಿಗೂ ಶಿಕ್ಷಣ ಹಾಗೂ ಮತದಾನ ಪದ್ಧತಿ, ಹಿಂದುಳಿದ ವರ್ಗಕ್ಕೆ ಮೀಸಲಾತಿ, ಆಸ್ಪತ್ರೆಗಳು ,ಕಾರ್ಮಿಕ ವೇತನ, ವಿಧವಾ ವೇತನ ಜಾರಿ ಹೀಗೆ ಸಾವಿರಾರು ಹೊಸ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಮಹಾತ್ಮರು ನಾಲ್ವಡಿಯವರು.

ಮೀಸಲಾತಿಯ ಜನಕ ನಾಲ್ವಡಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಹಿಂದುಳಿದ, ಶೋಷಿತವರ್ಗಗಳ ಮೀಸಲಾತಿಯನ್ನು ಜಾರಿಗೊಳಿಸಲಾಯಿತು .ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಅವಕಾಶವಂಚಿತರಾದ ಹಿಂದುಳಿದವರ್ಗದವರಿಗೆ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಿ ಸಮಾನತೆಯನ್ನು ತರುವ ಪ್ರಯತ್ನ ನಾಲ್ವಡಿ ಅವರದಾಗಿತ್ತು. ಅಂದು ಹಿಂದುಳಿದವರ್ಗದವರಿಗೆ ಪಾಠ-ಪ್ರವಚನ ಮಾಡಲು ಹಿಂಜರಿಯುತ್ತಿದ್ದ ಆಚಾರ್ಯರಿಗೆ ದುಪ್ಪಟ್ಟು ಸಂಬಳವನ್ನು ನೀಡಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳನ್ನು ನಿರ್ಮಿಸಿ ಅವರಿಗೆ ಸುಸಜ್ಜಿತವಾದ ಊಟದ ವ್ಯವಸ್ಥೆಯನ್ನು ಕಲ್ಪಿಸಿ ಯಾರಿಗೂ ತಿಳಿಯದಂತೆ ಮೊದಲು ತಾವು ತರಿಸಿಕೊಂಡು ಆಹಾರವನ್ನು ಪರೀಕ್ಷಿಸಿದ ನಂತರ ವಿದ್ಯಾರ್ಥಿಗಳಿಗೆ ನೀಡಲು ಹೇಳುತ್ತಿದ್ದರಂತೆ. ಏಕೆಂದರೆ ಮೇಲ್ವರ್ಗದ ಮಂದಿ ಅಂದು ಹಿಂದುಳಿದವರಿಗೆ ವಿಷ ಹಾಕಲು ಹಿಂಜರಿಯುತ್ತರಲಿಲ್ಲ ಹಾಗಾಗಿ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಈ ಕಾರ್ಯವನ್ನು ಮಾಡುತ್ತಿದ್ದರು .ದೇಶದಲ್ಲೇ ಪ್ರಥಮ ಬಾರಿಗೆ ದಲಿತರಿಗೂ ಅರಮನೆ ಪ್ರವೇಶ ನೀಡಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶವನ್ನ ಮಾಡಿಕೊಟ್ಟಿದ್ದರು ನಾಲ್ವಡಿ ಅವರ ಕಲ್ಪನೆ "ಒಂದು ರಾಜ್ಯದ ಆಡಳಿತವು ಯಾವುದೇ ಒಂದು ವರ್ಗ ಅಥವಾ ಒಂದು ಜಾತಿಯ ಅಧೀನಕ್ಕೆ ಒಳಪಡಬಾರದು" ಎಂಬುದಾಗಿತ್ತು.

ಕನ್ನಂಬಾಡಿಯನ್ನು ಉಸಿರಾಗಿಸಿದ ಮಹಾತ್ಯಾಗಿ: ಕೃಷ್ಣರಾಜಸಾಗರ ಕನ್ನಂಬಾಡಿ ಅಣೆಕಟ್ಟು ಭಾರತದ ಮೊದಲ ಬೃಹತ್ ಜಲಾಶಯ ಇದು ನಾಲ್ವಡಿ ಅವರ ಕನಸಿನ ಕೂಸು. ಜಲಾಶಯ ನಿರ್ಮಿಸಲು ರಾಜ್ಯದ ಮೂರುವರ್ಷದ ಬಜೆಟ್ ಹಣವನ್ನು ಈ ಒಂದೇ ಯೋಜನೆಗೆ ಬಳಸಬೇಕು ಸುಮಾರು 2 ಕೋಟಿ ವೆಚ್ಚ ತಗಲುತ್ತದೆ ಎಂದು ದಿವಾನರು ಮೂರ್ಖತನದ ಈ ಯೋಜನೆ ಕೈಬಿಡಿ ಎಂದಾಗ ನನ್ನ ಕನಸಿನ ಆಣೆಕಟ್ಟು ಕಟ್ಟಲಾಗದೆ ಜನೋಪಕಾರ ಮಾಡದ ನಾನು ಮಹಾರಾಜನಾಗಿದ್ದೇನು ಫಲವೆಂದು ಚಿಂತಿಸುತ್ತಿದ್ದಾಗ ಅವರ ಪತ್ನಿ ಮಹಾರಾಣಿ "ಲಕ್ಷ್ಮಿವಿಲಾಸ ಸನ್ನಿಧಾನ ಪ್ರತಾಪಕುಮಾರಿ ಅಮ್ಮಣಿ" ಅವರು ಮಹಾರಾಜರಿಗೆ ತಮ್ಮ ಬಳಿಯಿದ್ದ ಒಡವೆಗಳೆಲ್ಲವನ್ನು ನೀಡಿ ಜಲಾಶಯ ನಿರ್ಮಿಸಲು ಹೇಳುತ್ತಾರೆ. ನಾಲ್ವಡಿಯವರು ಅದನ್ನೆಲ್ಲ ಮದರಾಸಿನಲ್ಲಿ ಮಾರಿ ತಮ್ಮ ಕನಸಿನ ಜಲಾಶಯವಾದ "ಕನ್ನಂಬಾಡಿ ಕಟ್ಟೆಯನ್ನು" ನಿರ್ಮಿಸಿ ಹಳೆ ಮೈಸೂರು ಭಾಗದ ಜನತೆಗೆ ಮನೆ ದೇವರಾಗುತ್ತಾರೆ. ಕರುನಾಡನ್ನು ಜಲದನಾಡಾಗಿ ಮಾಡಿ ಅನ್ನದಾತ ಪ್ರಭುವಾಗಿದ್ದಾರೆ ಈ ಅಣೆಕಟ್ಟು ಭಾರತದಲ್ಲೇ ಮೊದಲ ಬಾರಿಗೆ ಅಧಿಕ ವೆಚ್ಚದಲ್ಲಿ ನಿರ್ಮಾಣವಾದ ಬೃಹತ್ ಜಲಾಶಯವಾಗಿದೆ.

ವಿಧವಾ ವೇತನ ಜಾರಿಗೆ ತಂದ ವಿಭೂಷಣ: ಭಾರತದಲ್ಲಿ ಪ್ರಥಮ ಬಾರಿಗೆ ವಿಧವಾ ವೇತನ, ವೃದ್ಯಾಪ ವೇತನ ಜಾರಿಗೊಂಡಿದ್ದು ಮೈಸೂರು ಸಂಸ್ಥಾನದಲ್ಲಿ ಮೈಸೂರು ನಗರದ ಒಬ್ಬ ಮಹಿಳೆ ಹಲವಾರು ತಿಂಗಳುಗಳ ಕಾಲ ಕಂದಾಯ ಪಾವತಿ ಮಾಡಿರುವುದಿಲ್ಲ ಇದನ್ನು ತಿಳಿದ ಮಹಾರಾಜರು ಮಹಿಳೆಯನ್ನು ಅರಮನೆಗೆ ಕರೆಸಿ ಕಂದಾಯ ಪಾವತಿ ಮಾಡದ ಕಾರಣವನ್ನು ಕೇಳಿದಾಗ ಹೆಂಗಸು ಮಹಾರಾಜರಿಗೆ "ಮಹಾಸ್ವಾಮಿ ನನ್ನ ಗಂಡ ನಿಮ್ಮ ರಾಜ್ಯದ ಒಂದು ಇಲಾಖೆಯಲ್ಲಿ ಗುಮಾಸ್ತನಾಗಿದ್ದ ನಾನು ಅವನನ್ನು ಅವಲಂಬಿಸಿದೆ ಇಂದು ಅವನು ತೀರಿಕೊಂಡು ವರ್ಷವಾಯಿತು ನಾನು ಕಂದಾಯ ಎಲ್ಲಿಂದ ತಂದುಕೊಡಲಿ "ಎಂದು ಕೇಳಿದಾಗ ಮಹಾರಾಜರು ಭಾವುಕರಾಗಿ ಅಂದಿನಿಂದ ಆ ಮಹಿಳೆಗೆ ಪ್ರತಿ ತಿಂಗಳು 5ರೂ ವಿಧವಾ ವೇತನ ಹಾಗೂ 5 ಕೆಜಿ ಅಕ್ಕಿ, ದವಸ ,ಧಾನ್ಯವನ್ನು ಅರಮನೆಯಿಂದ ನೀಡಬೇಕೆಂದು ಹೇಳಿ ಅವರಂತೆಯೇ ರಾಜ್ಯದ ಎಲ್ಲಾ ವಿಧವೆಯರಿಗೋ ವಿಧವಾ ವೇತನ ನೀಡುವಂತೆ ಆದೇಶಿಸುತ್ತಾರೆ. ವಿಧವಾ ವೇತನ ಪರಿಕಲ್ಪನೆ ವಿಶ್ವದಲ್ಲೇ ಮೊದಲು ಚಿಗುರೊಡೆದಿದ್ದು ಮೈಸೂರು ಸಂಸ್ಥಾನದಲ್ಲಿ.

ಅಪ್ಪಟ ಕನ್ನಡ ಅಭಿಮಾನಿ ಆಗಿದ್ದ ನಾಲ್ವಡಿಯವರು ತಮ್ಮ ಆಡಳಿತದಲ್ಲಿ ಹಾಗೂ ಪ್ರತಿಯೊಂದು ಕಾರ್ಯದಲ್ಲಿ ಕನ್ನಡವನ್ನು ಮೊದಲು ಬಳಸುತ್ತಿದ್ದರು .ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಬೆಳಗಿಸಲು ಬೆಂಗಳೂರಿನಲ್ಲಿ ಸಾವಿರ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಅದರ ಮಹಾಪೋಷಕರಾದರು, ವಿದ್ಯಾಭ್ಯಾಸಕ್ಕೆ ಒತ್ತುಕೊಟ್ಟು ಮೈಸೂರು ವಿಶ್ವವಿದ್ಯಾಲಯ, ಹಲವಾರು ಇಂಜಿನಿಯರಿಂಗ್ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆ ಹೀಗೆ ಹಲವಾರು ವಿದ್ಯಾಲಯಗಳನ್ನು ಸ್ಥಾಪಿಸಿ ವಿದ್ಯಾಭ್ಯಾಸದ ಅಭಿವೃದ್ಧಿಗೆ ನೀರೆರೆದರು 'ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ' ಕಾರಣೀಭೂತರು ಇದೆ ನಾಲ್ವಡಿಯವರು .ಇಡೀ ಪ್ರಪಂಚದಲ್ಲಿ ಮಾದರಿ ರಾಜರಾಗಿ ಗುರುತಿಸಿಕೊಂಡು ಮಹಾತ್ಮ ಗಾಂಧಿಯವರಿಂದ "ರಾಜರ್ಷಿ", ರಾಮರಾಜ್ಯಪಾಲಕ ಎನಿಸಿಕೊಂಡು, ದಕ್ಷಿಣ ಭಾರತದ ಅಶೋಕ ಚಕ್ರವರ್ತಿ ಎನಿಸಿಕೊಂಡು, ಮಹಾರಾಜರೆಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟಂತಹ ಮಹಾನ್ ಚೇತನ, ಕರ್ನಾಟಕದ ಕಿರೀಟ "ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು" ಇಂದಿನ ಪೀಳಿಗೆಗೆ ಮಾದರಿ ಪುರುಷೋತ್ತಮರಾಗಿದ್ದಾರೆ.

- ಲಕ್ಷ್ಮಿ ಕಿಶೋರ್ ಅರಸ್

ಚಿತ್ರ ಕೃಪೆ: ಇಂಟರ್ನೆಟ್ ತಾಣ