ಶಿಕ್ಷಣ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ : ಸೂಕ್ತ ತನಿಖೆ ಅಗತ್ಯ

ಶಿಕ್ಷಣ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ : ಸೂಕ್ತ ತನಿಖೆ ಅಗತ್ಯ

ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲೂ ಭಾರಿ ಪ್ರಮಾಣದ ಲಂಚದ ಹಾವಳಿ ಇದೆ ಎಂಬ ದೂರುಗಳು ಈಗ ಮುನ್ನಲೆಗೆ ಬಂದಿವೆ. ಕಾಮಗಾರಿ ಗುತ್ತಿಗೆಯಲ್ಲಿ ಶೇ ೪೦ರಷ್ಟು ಲಂಚದ ಆರೋಪ ಸರಕಾರವನ್ನು ಮುಜುಗರಕ್ಕೆ ತಂದಿದೆ. ಜತೆಗೆ ಶಿಕ್ಷಣ ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಬಂದಿರುವ ದೂರುಗಳು ಸರಕಾರವನ್ನು ಮತ್ತಷ್ಟು ಮುಜುಗರಕ್ಕೀಡು ಮಾಡಿದೆ. ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರಕಾರ ಮತ್ತು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿರುವುದು ದುರಂತವೇ ಸರಿ. ಶಿಕ್ಷಕರ ನೇಮಕಾತಿ, ವರ್ಗಾವಣೆ, ಟೆಂಡರ್ ಗಳಲ್ಲಿ, ಕಟ್ಟಡ ನಿರ್ಮಾಣ, ಮಾನವ ಸಂಪನ್ಮೂಲ ಸೇವೆಗಳಲ್ಲಿ ಭ್ರಷ್ಟಾಚಾರ ಸಾಮಾನ್ಯವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಆರೋಪಗಳಿಗೆ ಈಗ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಪುರಾವೆಗಳನ್ನು ನೀಡಿದೆ. ಈ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆ. ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತರ ಶಿಕ್ಷಕರ ಪಿಂಚಣಿಯವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೆ ಯಾವ ಕೆಲಸವೂ ಆಗುತ್ತಿಲ್ಲ ಎನ್ನಲಾಗಿದೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಅಕ್ರಮವಾಗಿ ಅನುಮತಿ ನೀಡುವ ಇಲಾಖೆಯೇ, ಮತ್ತೆ ಅಕ್ರಮ ಎಸಗಿದ ಆರೋಪದ ಮೇಲೆ ದುಡ್ಡು ವಸೂಲಿ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಸರಕಾರ, ಶಾಲೆಗಳಲ್ಲಿ ಭ್ರಷ್ಟಾಚಾರ, ಲಂಚ ಮತ್ತು ಕಮೀಷನ್ ನಿರ್ಮೂಲನೆ ಮಾಡಲು ಪೋಲೀಸ್ ಅಧಿಕಾರಿಗಳನ್ನು ನೇಮಿಸಬೇಕಿದೆ. ಅಧಿಕಾರಿಗಳು ತಾವು ಮಾಡುವ ಕೆಲಸದ ಬಗ್ಗೆ ಆನ್ ಲೈನ್ ಮೂಲಕ ಜನರಿಗೆ ತಲುಪಿಸುವ ಕೆಲಸವಾಗಬೇಕು. ಹೊಸ ಶಾಲೆಗಳ ಅನುಮತಿಗೆ ಆಯೋಗ ರಚನೆ ಮಾಡಬೇಕು. ಸರಕಾರಿ ಶಾಲೆಯ ಶಿಕ್ಷಕರು ತರಗತಿಗಳ ಪರಿಶೀಲನೆ, ವಿದ್ಯಾರ್ಥಿಗಳ ಹಾಜರಾತಿಯ ನಿಖರ ಮಾಹಿತಿ ನೀಡಬೇಕು. ಸಚಿವರು ಮತ್ತು ಆಯಾ ಸಮುದಾಯದ ಮಠಾಧಿಪತಿಗಳು ತಮ್ಮ ಸಮುದಾಯದ ಗುತ್ತಿಗೆದಾರರನ್ನು ಮತ್ತು ಶಿಕ್ಷಕರನ್ನು ಬೆಳೆಸಲು ಪ್ರಭಾವ ಬೀರುತ್ತಿದ್ದಾರೆ. ರಾಜಕಾರಣಿಗಳ ಸಂಬಂಧಿಕರಿಗೆ ಟೆಂಡರ್ ನೀಡಿ ಕಮೀಷನ್ ಪಡೆಯಲಾಗುತ್ತಿದೆ ಎನ್ನಲಾಗಿದೆ. ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣಿಗಳು ಮತ್ತು ಮಠಾಧಿಪತಿಗಳ ಹಸ್ತಕ್ಷೇಪವನ್ನು ತಡೆಗಟ್ಟಬೇಕು.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೫-೦೯-೨೦೨೨ 

ಚಿತ್ರ ಕೃಪೆ: ಅಂತರ್ಜಾಲ ತಾಣ