ಶಿಕ್ಷಣ ಸಚಿವರಿಗೊಂದು ಬಹಿರಂಗ ಪತ್ರ...
ಮಾನ್ಯ ಶ್ರೀ ಮಧು ಬಂಗಾರಪ್ಪನವರು,
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರು,
ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.
ಮಾನ್ಯರೇ, ತಾವು ನಿನ್ನೆ ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ಜಾಗೃತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, ಮುಂದಿನ ವರ್ಷದಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಶಾಲೆಗಳಲ್ಲಿ ಪ್ರತಿ ವಾರದ ಕೊನೆಯಲ್ಲಿ "ಮೌಲ್ಯ ಶಿಕ್ಷಣದ" ಬಗ್ಗೆ ತರಗತಿಯ ಪಾಠಗಳನ್ನು ಪ್ರಾರಂಭಿಸುವ ಯೋಜನೆಯ ಬಗ್ಗೆ ಹೇಳಿದ್ದೀರಿ. ಹಾಗೆಯೇ ಆ ಮೌಲ್ಯ ಶಿಕ್ಷಣದ ಪಠ್ಯಪುಸ್ತಕಗಳು, ಕಲಿಸುವ ಕ್ರಮಗಳು ಹೇಗಿರಬೇಕೆಂದು ಒಂದು ಅಧ್ಯಯನ ಸಮಿತಿಯನ್ನು ರಚಿಸಿದ್ದು ಅದರ ವರದಿಗಾಗಿ ಕಾಯುತ್ತಿರುವುದಾಗಿ ಮಾಹಿತಿ ಕೊಟ್ಟಿದ್ದೀರಿ. ಜೊತೆಗೆ ಇದನ್ನು ಯಾವುದೇ ರೀತಿಯ ಪರೀಕ್ಷೆ ಅಥವಾ ಅಂಕಗಳ ವ್ಯಾಪ್ತಿಯಿಂದ ಹೊರಗಿಟ್ಟಿದ್ದೇವೆ ಎಂದೂ ಹೇಳಿದ್ದಾಗಿ ವರದಿಯಾಗಿದೆ.
ಮಾನ್ಯರೇ, ಮೊದಲನೆಯದಾಗಿ ನಿಮ್ಮ ಈ ಆಲೋಚನೆಗೆ ತುಂಬು ಹೃದಯದ ಧನ್ಯವಾದಗಳು. ಇದು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವಾದ ವಿಷಯವಾಗಿದೆ. ಹಾಗೆಯೇ ಒಂದಷ್ಟು ಸಲಹೆ ರೂಪದ ಮನವಿಯನ್ನು ಈ ಮೂಲಕ ನಿಮಗೆ ಸಲ್ಲಿಸುತ್ತಿದ್ದೇವೆ. ಈ ಮೌಲ್ಯ ಶಿಕ್ಷಣವನ್ನು ಪ್ರೌಢ ಶಾಲೆಯ ಹಂತದಲ್ಲಿ ಜಾರಿಗೊಳಿಸಿದರೆ ಉತ್ತಮ. ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಎಂದಿನ ಸಾಮಾನ್ಯ ರೀತಿಯಲ್ಲಿ ಶಾಲೆಯ ಶಿಕ್ಷಕರೇ ಸಹಜವಾಗಿ ತಮ್ಮ ಪಾಠ ಪ್ರವಚನಗಳ ನಡುವೆಯೇ ಒಂದಷ್ಟು ಮೌಲ್ಯಗಳ ಬಗ್ಗೆ ಮಾಹಿತಿ ನೀಡಿದರೆ ಸಾಕಾಗುತ್ತದೆ. ಏಕೆಂದರೆ ಅವರಿಗೆ ಮೌಲ್ಯಗಳು ಅರ್ಥವಾಗುವಷ್ಟು ಮಾನಸಿಕ ಬೆಳವಣಿಗೆ ಮತ್ತು ಸ್ವಾತಂತ್ರ್ಯ ಇರುವುದಿಲ್ಲ.
ಎರಡನೆಯದಾಗಿ, ಇದನ್ನು ಒಂದು ಕಡ್ಡಾಯ ಪಠ್ಯಕ್ರಮವಾಗಿ ನೂರು ಅಂಕಗಳ ಒಂದು ವಿಷಯವಾಗಿ ಭೋದಿಸಬೇಕು. ಇದು ಇಂದಿನ ಅನಿವಾರ್ಯವಾಗಿದೆ. ಏಕೆಂದರೆ ಮೌಲ್ಯಗಳು ಕೇವಲ ವಾಣಿಜ್ಯೀಕರಣವಾಗಿಲ್ಲ, ಕೇವಲ ಕಲುಷಿತವಾಗಿಲ್ಲ, ಕೇವಲ ಕುಸಿತ ಮಾತ್ರವಾಗಿಲ್ಲ, ಬದಲಾಗಿ ವಿರುದ್ಧ ಮೌಲ್ಯಗಳು ಈ ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿರುವುದರಿಂದ ಇದನ್ನು ಕೇವಲ ಕಾಟಾಚಾರದ ಅಥವಾ ತೋರಿಕೆಯ ಬೋಧನೆ ಮಾಡಿದರೆ ಸಾಕಾವಾಗುವುದಿಲ್ಲ. ಅಂಕಗಳ ದೃಷ್ಟಿಯಲ್ಲಿ ಪರೀಕ್ಷೆಯಾಗಿ ಇದನ್ನು ಕಡ್ಡಾಯಗೊಳಿಸಬೇಕಾಗುತ್ತದೆ. ಆಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಂಭೀರವಾಗಿ ಪರಿಗಣಿಸುತ್ತಾರೆ. ಅದಕ್ಕಾಗಿ ಪಠ್ಯಕ್ರಮದಲ್ಲಿ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡರೆ ಉತ್ತಮವಾಗಿರುತ್ತದೆ ಎಂಬ ನಮ್ಮ ಸಲಹೆ ಹೀಗಿದೆ...
ಒಟ್ಟು ಅಂಕಗಳು 100. ಅದರಲ್ಲಿ ಪ್ರಾಯೋಗಿಕ ಅಂಕಗಳಿಗೆ 50 ಮತ್ತು ಪ್ರಶ್ನೆ ಪತ್ರಿಕೆಯ ಉತ್ತರ ಬರವಣಿಗೆಗೆ 50 ಅಂಕಗಳು. ಪ್ರಾಯೋಗಿಕ ಪಠ್ಯದಲ್ಲಿ ಇರಬೇಕಾದ ಅಧ್ಯಾಯಗಳು.
1) ಪ್ರೌಢಶಾಲೆಯ ವಿದ್ಯಾರ್ಥಿಗಳು ವರ್ಷದ ಯಾವುದಾದರೂ ಅವಧಿಯಲ್ಲಿ ಕಡ್ಡಾಯವಾಗಿ ಒಂದು ಅನಾಥಾಶ್ರಮಕ್ಕೆ ಖುದ್ದು ಭೇಟಿ ನೀಡಿ ಅಲ್ಲಿನ ಕೆಲವು ಮಕ್ಕಳನ್ನು ಸಂದರ್ಶಿಸಿ, ಆ ಮಕ್ಕಳು ಅನಾಥವಾದ ಕಾರಣಗಳನ್ನು ಅರ್ಥಮಾಡಿಕೊಂಡು ವಿವರವಾಗಿ ಪ್ರಬಂಧ ಬರೆದು ಸಲ್ಲಿಸಬೇಕು. ಅದಕ್ಕೆ 10 ಅಂಕಗಳು.
2) ಹಾಗೆಯೇ ವಿದ್ಯಾರ್ಥಿಗಳು ಒಂದು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಆ ಭೇಟಿಯಲ್ಲಿ ವೃದ್ಧರು ಅಲ್ಲಿಗೆ ಸೇರಿರುವ ಕಾರಣ, ಅನಿವಾರ್ಯತೆ, ಅಲ್ಲಿ ಸೇರಿದ ಮೇಲೆ ಅವರ ಮನಸ್ಥಿತಿ, ಸಮಾಜದ ಬಗ್ಗೆ ಅವರ ಅಭಿಪ್ರಾಯ, ಕೌಟುಂಬಿಕ ವ್ಯವಸ್ಥೆಯ ಮಹತ್ವ ಮುಂತಾದವುಗಳನ್ನು ತಿಳಿದುಕೊಂಡು ಅವರನ್ನು ಸಂದರ್ಶಿಸಿ ಮತ್ತೊಂದು ಪ್ರಬಂಧ ಬರೆಯಬೇಕು. ಅದಕ್ಕೆ 10 ಅಂಕಗಳು.
3) ವಿದ್ಯಾರ್ಥಿಗಳು ಒಂದು ಸಾಂಕ್ರಾಮಿಕ ರೋಗಗಳ ಅಥವಾ ಮರಣಾಂತಿಕ ರೋಗಗಳಿಗೆ ತುತ್ತಾಗಿರುವ ರೋಗಿಗಳು ದಾಖಲಾಗಿರುವ ಯಾವುದಾದರೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಮರಣ ಶಯ್ಯೆಯಲ್ಲಿರುವ ರೋಗಿಯನ್ನು ಸಾಧ್ಯವಾದರೆ ಮಾತನಾಡಿಸಿ ಅಥವಾ ಅವರ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು ರೋಗದ ಕಾರಣ, ಅದಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳು ಮತ್ತು ಸಂಬಂಧಿಕರ ಸಹಾಯ, ಆ ಸಮಯದಲ್ಲಿ ಸಿಗುತ್ತಿರುವ ಹಣಕಾಸಿನ ವ್ಯವಸ್ಥೆ ಮುಂತಾದಗಳ ಬಗ್ಗೆ ಮತ್ತೊಂದು ಪ್ರಬಂಧ ಬರೆಯಬೇಕು. ಅದಕ್ಕೆ 10 ಅಂಕಗಳು.
4) ವಿದ್ಯಾರ್ಥಿಗಳು ಪರಿಸರ ಅಂದರೆ ಮುಖ್ಯವಾಗಿ ಗಾಳಿ, ನೀರು, ಆಹಾರ, ಪ್ಲಾಸ್ಟಿಕ್ ಬಳಕೆ, ರಾಸಾಯನಿಕ ಮತ್ತು ಕಲಬೆರಿಕೆ ಪದಾರ್ಥಗಳು ಮುಂತಾದ ಪರಿಸರ ನಾಶದಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ, ಅದಕ್ಕೆ ಸಂಬಂಧಿಸಿದವರನ್ನು ಭೇಟಿ ಮಾಡಿ ಚರ್ಚಿಸಿ, ಆ ರೀತಿಯ ಒಂದು ಮಲಿನ ಸ್ಥಳಕ್ಕೆ ಹೋಗಿ ದೃಶ್ಯಗಳನ್ನು ಸೆರೆಹಿಡಿದು, ಆ ಬಗ್ಗೆ ಪ್ರಬಂಧ ಬರೆಯಬೇಕು. ಅದಕ್ಕೆ 10 ಅಂಕಗಳು.
5) ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಕೇಂದ್ರದ ಯಾವುದಾದರೂ ಒಂದು ಕಾರಾಗೃಹಕ್ಕೆ ಭೇಟಿ ನೀಡಿ ಅಲ್ಲಿ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಒಳಗಾಗಿ ಶಿಕ್ಷೆ ಅನುಭವಿಸುತ್ತಿರುವ ಖೈದಿಗಳನ್ನು ಭೇಟಿ ಮಾಡಿ ಅಪರಾಧಕ್ಕೆ ಕಾರಣಗಳು, ಈಗ ಅವರ ಮನಸ್ಥಿತಿ, ಈಗಿನ ಅವರ ಅಭಿಪ್ರಾಯ ಮುಂತಾದವುಗಳ ಬಗ್ಗೆ ಸಂದರ್ಶನ ಮಾಡಿ ಮತ್ತೊಂದು ಪ್ರಬಂಧ ಬರೆಯಬೇಕು. ಅದಕ್ಕೆ 10 ಅಂಕಗಳು.
ಇದರ ಜೊತೆಗೆ, ಮಾದಕ ವಸ್ತು ವ್ಯಸನ ಕೇಂದ್ರಕ್ಕೆ ಭೇಟಿ ನೀಡಿ ಮಾದಕ ವ್ಯಸನಿಗಳ ಬಗ್ಗೆಯೂ ಸಹ ಸ್ವಲ್ಪ ಎಚ್ಚರಿಕೆಯಿಂದ ಮಾಹಿತಿ ಕಲೆಹಾಕಿ ಅದರ ಬಗ್ಗೆಯೂ ಪ್ರಬಂಧ ಬರೆಯಬೇಕು. " ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕು ನಮಗಿಲ್ಲ" ಎಂಬ ಆಹಾರ ವ್ಯರ್ಥವಾಗದಿರುವ ಮತ್ತು ಆಹಾರದ ಮಹತ್ವ ಸಾರುವ ಬಗ್ಗೆಯೂ ಒಂದು ಅಧ್ಯಾಯ ಸೇರಿಸಬೇಕು. ಇದು ಪ್ರಾಯೋಗಿಕ ತರಗತಿಗಳು. ಉಳಿದ ಐವತ್ತು ಅಂಕಗಳಿಗೆ ಇದರಲ್ಲಿ ಪರಿಣತಿ ಹೊಂದಿದ ಸಮಾಜದ ವಿವಿಧ ಗಣ್ಯರನ್ನು ಕರೆಯಿಸಿ ಪಾಠ ಪ್ರವಚನ ಮಾಡಬೇಕು. ಅದರಲ್ಲಿ ಮನುಷ್ಯ ಸಂಬಂಧಗಳು, ದೇಶ ಭಕ್ತಿ, ಸಮಾನತೆ, ಸ್ವಾತಂತ್ರ್ಯ, ಸಂವಿಧಾನಾತ್ಮಕ ಹಕ್ಕುಗಳು, ಕರ್ತವ್ಯಗಳು, ಮಿಲಿಟರಿ ಶಿಸ್ತು, ನೈತಿಕತೆ ಇನ್ನು ಮುಂತಾದ ವಿಷಯಗಳನ್ನು ಅಡಕಗೊಳಿಸಿ ಪಠ್ಯಕ್ರಮ ರೂಪಿಸಬೇಕು.
ಈ ನೂರು ಅಂಕಗಳು ಮುಂದಿನ ಕಾಲೇಜು ತರಗತಿಯ ಪ್ರವೇಶಕ್ಕೆ ಎಲ್ಲಾ ಇತರ ವಿಷಯಗಳಂತೆ ಕಡ್ಡಾಯವಾಗಿ, ಅಂದರೆ ಗಣಿತ, ವಿಜ್ಞಾನ, ಸಮಾಜ, ಭೂಗೋಳ ಮುಂತಾದ ವಿಷಯಗಳಷ್ಟೇ ಮಹತ್ವವನ್ನು ಇದಕ್ಕೂ ಕೊಡಬೇಕು. ಆಗ ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಸಾಧ್ಯವಾದಲ್ಲಿ ಈ ಅಂಕಗಳಿಗೆ ಮೊದಲ ಆದ್ಯತೆಯನ್ನು ಕೊಟ್ಟಲ್ಲಿ ಇನ್ನೂ ಉತ್ತಮ.
ಇದು ಸಲಹೆ ರೂಪದ ಕೆಲವು ಮನವಿ ಮಾತ್ರ. ಇದಕ್ಕಿಂತ ಉತ್ತಮ ಅಂಶಗಳು ನಿಮ್ಮ ಅಧ್ಯಯನ ವರದಿಯಲ್ಲಿ ಸಿಕ್ಕರೆ ಅದನ್ನು ಅನುಷ್ಠಾನಗೊಳಿಸಿ. ಒಟ್ಟಿನಲ್ಲಿ ಕೇವಲ ಕಾಟಾಚಾರದ ಬೋಧನೆಯಾಗದೆ ಇದೊಂದು ಅನಿವಾರ್ಯ, ಕಡ್ಡಾಯ ಶಿಕ್ಷಣವಾಗಬೇಕು. ಹಾಗೆಯೇ ಪ್ರಶ್ನಿಸುವ ಮನೋಭಾವವನ್ನು ಮಕ್ಕಳಲ್ಲಿ ಕಲಿಸಬೇಕು. ಜೊತೆಗೆ ಕೇವಲ ಮಕ್ಕಳಲ್ಲಿ ಮಾತ್ರ ಮೌಲ್ಯಗಳನ್ನು ತುಂಬದೆ, ಇದೇ ರೀತಿಯ ಪಠ್ಯಕ್ರಮದ ಒಂದು ಪ್ರಾಯೋಗಿಕ ಸರ್ಟಿಫಿಕೇಟ್ ಕೋರ್ಸ್ ಅನ್ನು ಎಲ್ಲಾ ಜನಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ, ವೃತ್ತಿಪರರಿಗೆ ಕೂಡ ಕನಿಷ್ಠ ಒಂದು ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಅಥವಾ ತರಬೇತಿ ನೀಡಿದರೆ, ಆಗ ಎರಡು ಕೈಯಿಂದ ಚಪ್ಪಾಳೆ ಹೊಡೆದಂತೆ ಒಂದು ಕಡೆ ವಿದ್ಯಾರ್ಥಿಗಳು, ಇನ್ನೊಂದು ಕಡೆ ಜವಾಬ್ದಾರಿ ಸ್ಥಾನದಲ್ಲಿರುವವರು ಮಾನವೀಯ ಮೌಲ್ಯಗಳನ್ನು ಕುರಿತು ಮಾತನಾಡತೊಡಗಿದರೆ ಕನಿಷ್ಠ ಮುಂದಿನ 10 ವರ್ಷಗಳಲ್ಲಾದರೂ ಈ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಪುನರ್ ಸ್ಥಾಪನೆಯಾಗಬಹುದು. ಈಗಿನ ಅಪಘಾತ, ಆತ್ಮಹತ್ಯೆ, ಅತ್ಯಾಚಾರ, ಕೊಲೆ, ವಂಚನೆ, ಭ್ರಷ್ಟಾಚಾರ, ಜಾತಿ ವ್ಯವಸ್ಥೆ ಕಡಿಮೆಯಾಗಬಹುದು.
ದಯವಿಟ್ಟು ಈ ಬಗ್ಗೆ ಗಂಭೀರವಾಗಿ ಚಿಂತಿಸಿ. ಇದಕ್ಕಿಂತ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ತಾವು ಸಮಯ ನಿಗದಿಪಡಿಸಿದಲ್ಲಿ ನಾವು ಬಂದು ಇದನ್ನು ಮತ್ತಷ್ಟು ವಿವರವಾಗಿ ನಿಮ್ಮ ಬಳಿ ಚರ್ಚಿಸುತ್ತೇವೆ. ಅದಕ್ಕೆ ಸಮಯವಿಲ್ಲವೆಂದಾದಲ್ಲಿ ದಯವಿಟ್ಟು ಇದನ್ನೇ ಪರಿಗಣಿಸಿ. ಒಟ್ಟಿನಲ್ಲಿ ಮೌಲ್ಯಗಳ ಬಗ್ಗೆ ತಾವು ಮಾತನಾಡಿರುವುದು ತುಂಬಾ ಸಂತೋಷ. ನಿಮ್ಮ ಅವಧಿಯಲ್ಲಿಯೇ ಇದನ್ನು ಜಾರಿಗೊಳಿಸಲು ಪ್ರಯತ್ನಿಸಿ. ಧನ್ಯವಾದಗಳು.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ