ಶಿಖರಸೂರ್ಯ ಕಾದಂಬರಿಯ ವಿಮರ್ಶೆ

ಶಿಖರಸೂರ್ಯ ಕಾದಂಬರಿಯ ವಿಮರ್ಶೆ

    ಜ್ಞಾನಪೀಠ ಪ್ರಶಸ್ತಿ ವಿಜೇತ ಕಂಬಾರರ ಈ ಕಾದಂಬರಿಯನ್ನು ನಾನು ಎಂ.ಫಿಲ್ ಪದವಿಯಲ್ಲಿ ಅಧ್ಯಯನ ವಿಷಯವಾಗಿ ತೆಗೆದು ಕೊಂಡಿದ್ದೆ. ಇಲ್ಲಿ ಈ ಕಾದಂಬರಿಯ ಓದಿನ ಸಾರಾಂಶವನ್ನು ತಿಳಿಸಲು ಪ್ರಯತ್ನಿಸುತ್ತೇನೆ.



    'ಶಿಖರಸೂರ್ಯ' ಕಾದಂಬರಿಯು ಜನಪದ ಕತೆಯನ್ನು ಆಧರಿಸಿ ರಚಿತವಾಗಿದೆ. ಚಂದ್ರಶೇಖರ ಕಂಬಾರರ ಐದನೆಯ ಹಾಗೂ ಇಲ್ಲಿವರೆಗಿನ ಕೊನೆಯ ಕಾದಂಬರಿ 'ಶಿಖರಸೂರ್ಯ'. ಈ ಕಾದಂಬರಿಯು 2006 ರಲ್ಲಿ  ಪ್ರಕಟಗೊಂಡಿತು. ಜಾನಪದ ಮೈಯ್ಯಿಗೆ ಆಧುನಿಕ ಸಂವೇದನೆಯನ್ನು ಕಸಿ ಮಾಡಿದ ನಮ್ಮ ಅದ್ವೀತಿಯ ಕವಿಯಾದ ಕಂಬಾರರ 'ಶಿಖರ ಸೂರ್ಯ' ಕಾದಂಬರಿ ಮಹಾಕಾವ್ಯ ಸ್ವರೂಪದ ಒಂದು ವಿಶಿಷ್ಟ ಕೃತಿ. ಇದು ಒಂದು ರೀತಿಯಲ್ಲಿ ಅವರ 'ಚಕೋರಿ' ಮಹಾಕಾವ್ಯದ ಮುಂದುವರಿದ ಭಾಗವಾಗಿದೆ. ಈ ಕೃತಿಯು 2010ರಲ್ಲಿ ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ 2009ರ ಠಾಕೂರ್ ಸಾಹಿತ್ಯ ಪ್ರಶಸ್ತಿಯನ್ನು ಗಳಿಸಿರುವುದು ಈ ಕಾದಂಬರಿಯ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಈ ಕಾದಂಬರಿಯು ಅತ್ಯಂತ ರೋಮಾಂಚನಕಾರಿಯಾಗಿ ಹಲವು ತಿರುವುಗಳನ್ನು ಪಡೆಯುತ್ತ ಓದುಗರಿಗೆ ಹೊಸ ಲೋಕವೊಂದನ್ನು ತೋರಿಸುತ್ತ, ಕ್ಷಣ ಕ್ಷಣಕ್ಕೂ ವಿಸ್ಮಯವನ್ನು ಮೂಡಿಸುವ ಅದ್ಭುತವಾದ ಕಲಾಕೃತಿಯಾಗಿದೆ.



    ಕಾದಂಬರಿಯ ಕಥಾ ಸಾರಾಂಶವನ್ನು ನೋಡುವುದಾದರೆ ಈ ಕಾದಂಬರಿಯ ನಾಯಕ ಶಿಖರ ಸೂರ್ಯ. ಇವನ ಸುತ್ತ ಕಾದಂಬರಿ ರೂಪು ಪಡೆದಿದೆ. ಶಿಖರಸೂರ್ಯ ಮೊದಲು ಚಿನ್ನಮುತ್ತನಾಗಿದ್ದಾಗ(ಅವನ ಮೊದಲ ಹೆಸರು) ಕಲಾವಿದನಾಗಲು ಪ್ರಯತ್ನಿಸಿ ಅದರಲ್ಲಿ ವಿಫಲಗೊಂಡು, ನಂತರದಲ್ಲಿ ಹೇಗಾದರೂ ಮಾಡಿ ಅದನ್ನು ಸಾಧಿಸಬೇಕೆಂಬ ಹಟದಿಂದ ವಾಮಮಾರ್ಗಗಳನ್ನು ಅನುಸರಿಸುತ್ತಾನೆ, ಅದರಲ್ಲೂ ಸಾಧ್ಯವಾಗದೇ ತನ್ನ ಗುರುಗಳ ಶಾಪಕ್ಕೆ ಗುರಿಯಾಗಿ ಅಲ್ಲಿಂದ ತಪ್ಪಿಸಿ ಕೊಳ್ಳಲು ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ.



    ಚಿನ್ನಮುತ್ತನ ಆತ್ಮಹತ್ಯೆಯ ಪ್ರಯತ್ನವು ವಿಫಲವಾಗಿ ಕಾಡಿನ ದೊಡ್ಡ ಕಂದಕಕ್ಕೆ ಬೀಳುತ್ತಾನೆ. ಅಲ್ಲಿಂದ ಆತನನ್ನು ಜಟ್ಟಿಗ ಎಂಬುವನು ಅಲ್ಲಿಂದ ಶಿವಾಪುರಕ್ಕೆ ಕರೆತಂದು ಉಪಚರಿಸುತ್ತಾನೆ. ಶಿವಾಪುರದ ಶಿವಪಾದನ ಮಾತಿನಂತೆ ಜಟ್ಟಿಗ ಮತ್ತು ಆತನ ಮಡದಿ ಬೆಳ್ಳಿಯರಯ ಔಷದೋಪಾಚಾರಗಳಿಂದ ಆತನನ್ನು ಗುಣಪಡಿಸುತ್ತಾರೆ. ನಂತರ ಆತನನ್ನು ಶಿವಾಪುರದ ಅಮ್ಮನ ಬೆಟ್ಟದಲ್ಲಿರುವ ಶಿವಪಾದನ ಬಳಿಗೆ ಕರೆತರುತ್ತಾರೆ. ಇಲ್ಲಿ ಚಿನ್ನಮುತ್ತನಾಗಿದ್ದವನು ಜಯಸೂರ್ಯನ್ನಾಗಿ ಪರಿಚಯಿಸಿಕೊಳ್ಳುತ್ತಾನೆ. ಅಲ್ಲಿನ ವಿಶಿಷ್ಟವಾದ ವಿದ್ಯೆಗಳನ್ನು ಶಿವಪಾದನಿಂದ ಕಲಿಯಬೇಕೆಂಬ ಆಸೆಯಿಂದ, ಬಹುಪ್ರಮುಖ ವೈದ್ಯ ವಿದ್ಯೆಯಾದ ಸಸ್ಯ ಹೃದಯ ವಿದ್ಯೆಯನ್ನು ಕಲಿಯಬೇಕೆಂದು ಶಿವಪಾದನ ಶಿಷ್ಯನಾಗಿ ಸೇರಿಕೊಳ್ಳುತ್ತಾನೆ. ಸಸ್ಯ ವಿದ್ಯೆ ಕಲಿತು, ಅಲ್ಲಿಯೇ ರಹಸ್ಯೆವಾಗಿ ವಜ್ರದೇಹಿ ವಿದ್ಯೆಯನ್ನು ಕಲಿತು ವಜ್ರದೇಹಿಯಾಗಿ ಮಾರ್ಪಟ್ಟು ಶಿವಪಾದನ ನಿಂದನೆಗೆ ಒಳಗಾಗೊ ಅಲ್ಲಿಂದ ಹೊರಹಾಕಲ್ಪಡುತ್ತಾನೆ. ಆಗ ತನಗೆ ಉಪಚರಿಸಿ ಮರುಜೀವವನ್ನು ನೀಡಿದ ಬೆಳ್ಳಿಯ ಮೇಲಿನ ವ್ಯಾಮೋಹದಿಂದ ಅವಳ ಗಂಡ ಜಟ್ಟಿಗನನ್ನು ಕೊಲೆ ಮಾಡಿ ಅವಳನ್ನು ತನ್ನವಳಾಗಿ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲಗೊಂಡು ಊರಿನ ಜನರಿಂದ ಛೀಮಾರಿ ಹಾಕಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಕನಕಪುರಿ ನಗರಕ್ಕೆ ಸೇರುತ್ತಾನೆ.



   ಕನಕಪುರಿಯಲ್ಲಿ ತಾನು ವೈದ್ಯೆನೆಂದು ಪರಿಚಿತನಾಗುವ ಜಯಸೂರ್ಯ. ಇಲ್ಲಿ ಶಿಖರಸೂರ್ಯನಾಗಿ ಬದಲಾಗುತ್ತಾನೆ. ಕನಕಪುರಿಗೆ ಬಂದ ಮೊದಲು ಮಾಡಿದ ಕೆಲಸವೆಂದರೆ ಬಹಳ ದಿನಗಳಿಂದ ರೋಗದಿಂದ ನರಳುತ್ತಿದ್ದ ಕನಕಪುರಿಯ ರಾಜನನ್ನು ಒಂದೇ ದಿನದಲ್ಲಿ ಗುಣಪಡಿಸಿ ಬಹುಬೇಗನೆ ಕನಕಪುರಿಯ ಜನರ ಮನಸ್ಸನ್ನು ತನ್ನತ್ತ ಸೆಳೆಯುತ್ತಾನೆ. ನಂತರ ಕನಕಪುರಿಯ ರಾಜ್ಯವೈದ್ಯನಾಗಿ ನಿಯೋಜನೆಗೊಂಡು ಅರಮನೆಯಲ್ಲುರುವವರ ದೌರ್ಬಲ್ಯಗಳನ್ನು ಬಳಸಿಕೊಂಡು ಕನಕಪುರಿಯ ರಾಜನ ಮಗಳು ಛಾಯಾದೇವಿಯನ್ನು ವಿವಾಹವಾಗುತ್ತಾನೆ. ನಂತರ ಕನಕಪುರಿಯ ಅಧಿಕಾರವನ್ನು ಪಡೆಯಬೇಕೆಂಬ ಹಂಬಲದಿಂದ ಚಂಡೀದಾಸ ಎಂಬುವವನ ಸಹಾಯದಿಂದ ನಾಗಾರ್ಜುನನೆಂಬ ಮುನಿಯ ಬಳಿ ಧಾನ್ಯದಿಂದ ಚಿನ್ನ, ಮೇವಿನಿಂದ ಸೈನಿಕರನ್ನು ಸೃಷ್ಟಿಸುವ ರಸ ವಿದ್ಯೆಯನ್ನು ಕಲಿತು ನಂತರ ಬುಡಕಟ್ಟು ಜನಾಂಗದವರ ಸಹಾಯದಿಂದ ಕನಕಪುರಿಯನ್ನು ಆಕ್ರಮಿಸಿಕೊಳ್ಳುತ್ತಾನೆ. ಆಗ ಇವನ ಸಂಚಿಗೆ ಮಹಾರಾಣಿ, ರಾಜ, ಪ್ರದಾನಿ ಅರ್ಥಪಾಲ, ಸೇನಾಧಿಕಾರಿ ಬದೆಗ ಮುಂತಾದವರು ಬಲಿಪಶುಗಳಾಗುತ್ತಾರೆ. ಇವನ ಆಡಳಿತ ಬಂದ ನಂತರ ಕನಕಪುರಿಯ ಜನ ಮೊದಲು ಚಿನ್ನದ ಆಸೆಯಿಂದ ತಮ್ಮ ಧಾನ್ಯವೆನ್ನೆಲ್ಲಾ ಶಿಖರಸೂರ್ಯನಿಗೆ ಮಾರಿಕೊಂಡು ನಂತರದಲ್ಲಿ ತಮಗೆ ತಿನ್ನಲು ಧಾನ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ.



   ಕೊನೆಗೆ ಕನಕಪುರಿಗೆ ದೊಡ್ಡ ರೋಗ ಬಂದು ಅವನತಿಯನ್ನು ಹೊಂದುವ ಸ್ಥಿತಿಯನ್ನು ತಲುಪುತ್ತದೆ. ಇದನ್ನು ಶಿಖರಶೂರ್ಯ ತಾನು ವ್ಯೆದ್ಯನಾದರೂ ನಿರ್ಲಕ್ಷಿಸುತ್ತಾನೆ. ನಾಗಾರ್ಜುನನ ಮಾತಿನಂತೆ ಶಿವಾಪುರದಲ್ಲಿನ ಚಿನ್ನದ ಬೆಟ್ಟವನ್ನು ಪಡೆಯಬೇಕೆಂಬ ಆಸೆಯಿಂದ ಶಿವಾಪುರಕ್ಕೆ ದಾಳಿಯಿಡುತ್ತಾನೆ. ನಿನ್ನಡಿ ಎಂಬ ಶಿವಪಾದನ ತಿರುಮಂತ್ರದಿಂದ ತನ್ನ ದುರ್ವಿದ್ಯೆಯ ಫಲದಿಂದ ನಿರ್ಮಾಣವಾಗಿದ್ದ ಸ್ಯನಿಕರು, ಚಿನ್ನವೆಲ್ಲಾ ಮೂಲ ಸ್ಥಿತಿಗೆ ಬರುತ್ತದೆ. ನಂತರ ನಿನ್ನಡಿಯಿಂದ ಪರಾಭವಗೊಂಡು ಮತ್ತೆ ಕನಕಪುರಿಗೆ ಮರಳುತ್ತಾನೆ. ಮಹಾರೋಗದಿಂದ ತತ್ತರಿಸಿದ ಜನರ ದಂಗೆಯಿಂದ ತಪ್ಪಿಸಿಕೊಳ್ಳಲಾಗದೇ ಅಲ್ಲಿಂದ ತಪ್ಪಿಸಿಕೊಂಡು ದುರಂತ ಹೊಂದುತ್ತಾನೆ.



    ಹೀಗೆ ಕಾದಂಬರಿ ಮಾನವನ ಅತಿಯಾದ ದುರಾಸೆ, ಸ್ವಾರ್ಥಗಳಿಂದ ಹಲವು ತಿರುವುಗಳನ್ನು ಪಡೆಯುತ್ತಾ ಕೊನೆಗೆ ದುರಂತ ಹೊಂದುವುದನ್ನು ಈ ಕಾದಂಬರಿ ತಿಳಿಸುತ್ತದೆ. ವಾಮಾಚಾರ ವಿದ್ಯೆಯ ಅಹಂಕಾರದಿಂದಾಗಿ ದಾರುಣ ದುರಂತವಾಗುವುದೇ ಈ ಕಾದಂಬರಿಯ ತಿರುಳಾಗಿದೆ.



 

Comments