ಶಿರಾ ತಾಲೂಕಿನ ಸುಂದರ ತಾಣಗಳು

ಶಿರಾ ತಾಲೂಕಿನ ಸುಂದರ ತಾಣಗಳು

‘ಶಿರಾ' ತುಮಕೂರಿನಿಂದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿ.ಮೀ. ದೂರದಲ್ಲಿ ಪಶ್ಚಿಮದಲ್ಲಿದೆ. ಇದು ತಾಲ್ಲೂಕು ಕೇಂದ್ರವಾಗಿದೆ. ರತ್ನಗಿರಿಯ ರಂಗಪ್ಪನಾಯಕನಿಂದ ಈ ಊರು ಹಾಗೂ ಕೋಟೆಗಳು ಕಟ್ಟಲ್ಪಟ್ಟವೆಂದು ತಿಳಿದು ಬರುತ್ತದೆ. 1686ರಲ್ಲಿ ಮೊಗಲರ ವಶವಾದಾಗ ಮೊಗಲರ ಸೈನ್ಯದ ಕೇಂದ್ರವಾಗಿದ್ದಿತ್ತು. ದಿಲಾವರ್ ಖಾನನು ಎಂಬ ಮೊಗಲ್ ಅಧಿಕಾರಿಯ “ಖಾನ್‌ಬಾಗ್” ಎಂಬ ಸುಂದರವಾದ ಉದ್ಯಾನವನ್ನು ನಿರ್ಮಿಸಿದನೆಂದೂ ಬೆಂಗಳೂರಿನ 'ಲಾಲ್‌ಬಾಗ್' ಉದ್ಯಾನವನ್ನು ಬೆಳೆಸಲು ಹೈದರಾಲಿಗೆ ಇದೇ ಸ್ಫೂರ್ತಿಯನ್ನು ನೀಡಿತೆಂದು ತಿಳಿದು ಬರುತ್ತದೆ. ಇಲ್ಲಿನ 'ಜುಮ್ಮಾ ಮಸೀದಿ' ಹಾಗೂ 'ಮಲ್ಲಿಕ್‌ರಿಹಾನ್' ಗೋರಿಯ ಮೊಗಲ್ ಶೈಲಿಯ ಸುಂದರವಾದ ಕಟ್ಟಡಗಳಾಗಿವೆ. ಇಲ್ಲಿರುವ 'ಇಬ್ರಾಹಿಂ ರೋಜಾ' ಕಟ್ಟಡವು ನಾಲ್ಕು ಮಿನಾರ್‌ಗಳನ್ನು ಬಿಟ್ಟರೆ ಇದನ್ನು ಒಂದು ಹಿಂದೂ ಕಟ್ಟಡವೆಂದೇ ಹೇಳುವಂತಿದೆ. 

ಇಲ್ಲಿನ ರೇವಣ್ಣಸಿದ್ಧರ ದೇವಾಲಯದಲ್ಲಿ ಸುಂದರವಾದ ಭಿತ್ತಿಚಿತ್ರಗಳಿವೆ. ಈ ಪಟ್ಟಣವನ್ನು ರತ್ನಗಿರಿಯ ರಂಗಪ್ಪನಾಯಕನು ಕಟ್ಟಿಸಿದನು. ಊರಿನ ಸುತ್ತಲೂ ನಾಗರಿಕರ ರಕ್ಷಣೆಗಾಗಿ ಶತ್ರುಗಳ ಆಕ್ರಮಣವನ್ನು ತಡೆಯುವ ಸಲುವಾಗಿಯೂ ಕೋಟೆಯನ್ನು ಕಟ್ಟಲಾಯಿತು. 1687ರಲ್ಲಿ ಔರಂಗಜೇಬನು ಬಿಜಾಪುರವನ್ನು ಸ್ವಾಧೀನಪಡಿಸಿಕೊಂಡು ದಾಳಿಯನ್ನು ತೀವ್ರ ಮಾಡಿ ಶಿರಾ ಪ್ರಾಂತ್ಯವನ್ನು ಗೆದ್ದು, ಆಡಳಿತ ಕೇಂದ್ರವಾಗಿ ಮಾಡಿದನು. ಶಿರಾ ನಗರವು ಮೊಘಲರ ಮೆಚ್ಚುಗೆ ಪಡೆಯಿತು. ದಿಲಾವರ್ ಖಾನನ ಕಾಲದಲ್ಲಿ ಐವತ್ತು ಸಾವಿರ ಮನೆಗಳು ಶಿರಾ ಪಟ್ಟಣದಲ್ಲಿತ್ತು ಎಂದೇ ತಿಳಿಯಲಾಗಿದೆ. 

ತುಂಡು ಕಲ್ಲುಗಳಿಂದ ನಿರ್ಮಿತವಾಗಿರುವ ಇಲ್ಲಿನ ಜುಮ್ಮಾಮಸೀದಿಯಲ್ಲಿ ಮಲ್ಲಿಕ್ ರಿಹಾನ್ ನ ಗೋರಿ ಇದೆ. ಮುಸ್ಲಿಂ ಶೈಲಿಯಲ್ಲಿನ ಈ ಕಟ್ಟಡವು ಆಕರ್ಷಕವಾಗಿದೆ. ಕೋಟೆಯು ಕಲ್ಲು ಮತ್ತು ಗಾರೆಗಳಿಂದ ಕಟ್ಟಲ್ಪಟ್ಟಿದ್ದು ಸುತ್ತಲೂ ಕಂದಕವಿದೆ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ರತ್ನಗಿರಿಯ ದೊರೆ ರಂಗಪ್ಪ ನಾಯಕ ನಿರ್ಮಿಸಿದನೆನ್ನಲಾದ ಶಿರಾ ಕೋಟೆ 1686ರಲ್ಲಿ ಮೊಗಲರ ವಶವಾಗಿ ಫೌಜು ದಾರಿ ಕೇಂದ್ರವಾಯಿತು. ಸುತ್ತಲೂ ಕಂದಕಗಳನ್ನು ಹೊಂದಿದ್ದು, ಬಲಾಡ್ಯವಾದ ಕಲ್ಲಿನ ಕೋಟೆ ಇರುವ ಶಿರಾವನ್ನು ಹೈದರಾಲಿ ಆಳಿದ್ದುಂಟು. ಶಿರಾ ಕೋಟೆಯಲ್ಲಿ ಮೊಗ‌ಲ್ ಅಧಿಕಾರಿ ದಿಲಾವರ್ ಖಾನ್ ಬೆಳೆಸಿದ ಸುಂದರ ಉದ್ಯಾನವೇ ಹೈದರಾಲಿ ಲಾಲ್‌ಬಾಗ್ ನಿರ್ಮಿಸಲು ಸ್ಫೂರ್ತಿ ನೀಡಿತ್ತು.  

ಬೆಂಗಳೂರು-ಪುಣೆ ಹೆದ್ದಾರಿಯಲ್ಲಿರುವ ಶಿರಾ ತಲುಪಲು ಬೆಂಗಳೂರಿನಿಂದ 112 ಕಿ.ಮೀ. ತುಮಕೂರಿನಿಂದ 52 ಕಿ.ಮೀ. ಕ್ರಮಿಸಬೇಕು. "ಸುಂದರ ಶೈಲಿಯ ಶಿಲ್ಪ ಕಲೆಗಳ ಸ್ಪೂರ್ತಿಯ ಸ್ಥಳ, ಇತಿಹಾಸದ ಅನೇಕ ಘಟನೆಗಳ ತವರೂರು - ಇದು ತುಮಕೂರು ಜಿಲ್ಲೆಯ ಶಿರಾ ತಾಲೂಕು" ಬನ್ನಿ ಒಮ್ಮೆ ಪ್ರವಾಸಕ್ಕೆ…

( ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು