ಶಿಲ್ಪಿಯ ಚಾತುರ್ಯದ ಹೆಗ್ಗುರುತಾದ ಹರವು

ಶಿಲ್ಪಿಯ ಚಾತುರ್ಯದ ಹೆಗ್ಗುರುತಾದ ಹರವು

ಹರವು.. ಮಂಡ್ಯ ಜಿಲ್ಲೆಯ ಪಾಂಡವಪುರದಿಂದ ಕಟ್ಟೇರಿ ರಸ್ತೆಯಲ್ಲಿ ಹತ್ತು ಕಿಲೋಮೀಟರ್ ದೂರದಲ್ಲಿದೆ. ಕ್ರಿ.ಶ. 1540ರ ಶಾಸನದಲ್ಲಿ ಇದೊಂದು ವ್ಯಾಪಾರ ಕೇಂದ್ರವಾಗಿತ್ತೆಂದು ತಿಳಿಸುತ್ತದೆ. ಇಲ್ಲಿರುವ ವಿಜಯನಗರ ಕಾಲದ ಬೃಹತ್ ರಾಮಚಂದ್ರ ದೇವಾಲಯವೇ ಊರಿನ ವಿಸ್ತರಣೆಯನ್ನು ಹೇಳುತ್ತದೆ. ಇದು ಊರಿನ ಮಧ್ಯಭಾಗದಲ್ಲಿ ಇದ್ದಂತೆ ತೋರುತ್ತದೆ. ಮೈಸೂರು ಅರಸು ಚಿಕ್ಕದೇವರಾಜ (ಕ್ರಿ.ಶ. 1672 - 1704) ರ ಕಾಲದಲ್ಲಿ ಕಾವೇರಿ ನದಿಗೆ ಒಡ್ಡುಹಾಕಿ ಹೋಗಬೇಕಾದ್ದರಿಂದ ಹಳೆಯ ಊರು ಈಗಿರುವ ಜಾಗಕ್ಕೆ ಸ್ಥಳಾಂತರಗೊಂಡಿದೆ. ಊರಿಗೆ ತಕ್ಕಂತೆ ಇದ್ದ ವಿಸ್ತಾರವಾದ ಶಾಸನೋಕ್ತ ಕೆರೆ 'ಶ್ರೀರಾಮದೇವರ ಕೆರೆ' ಈಗ ಸಂಕುಚಿತಗೊಂಡಿದೆ. 

ವಿಜಯನಗರದ ಮೊದಲನೇ ದೊರೆ ನಿರ್ಮಾಣ ಮಾಡಿರುವುದಕ್ಕೆ ಶಾಸನಾಧಾರವಿದೆ. ವೀರಬುಕ್ಕಣ್ಣ (1356-1377) ನ ಕಾಲದಲ್ಲಿ ದೇವಾಲಯವು ಬೃಹತ್ ಪ್ರಾಕಾರದ ನಡುವೆ ಪೂರ್ವಾಭಿಮುಖವಾಗಿ, ಪ್ರವೇಶ ದ್ವಾರವು ಎತ್ತರವಾಗಿ, ಭವ್ಯವಾಗಿ ನಿರ್ಮಾಣವಾಗಿದೆ. ಗರ್ಭಗೃಹ, ಅಂತರಾಳ, ಪ್ರದಕ್ಷಿಣಾಪಥ, 35 ಅಂಕಣದ ಕಂಬಗಳ ಸಾಲಿನ ವಿಶಾಲವಾದ ನವರಂಗ ಮುಖಮಂಟಪ ಹಾಗೂ 78 ಬೃಹತ್ ಚೌಕಾಕಾರದಲ್ಲಿದೆ. ದೀಪಗಳನ್ನು ಹಚ್ಚಲು ಕೆಲವು ಕಂಬಗಳಲ್ಲಿ ದೀಪಾಕೃತಿಗಳನ್ನು ಕೊರೆಯಲಾಗಿದೆ. ಗರ್ಭಗುಡಿಯ ಪ್ರವೇಶದ್ವಾರದಲ್ಲಿ ಜಯ ವಿಜಯರಿದ್ದು ಮೂಲತಃ ಶ್ರೀರಾಮ ಪರಿವಾರ ಶಿಲ್ಪಗಳು ಹಿಂದೆಂದೋ ಗರ್ಭಗುಡಿಯಿಂದ ಕಣ್ಮರೆಯಾಗಿ ಅದೇ ಸ್ಥಾನದಲ್ಲಿ ಮೂರು ಅಡಿ ಎತ್ತರದ ಲಕ್ಷ್ಮೀನಾರಾಯಣ, ಅಕ್ಕಪಕ್ಕ ಶ್ರೀದೇವಿ, ಭೂದೇವಿಯರಿದ್ದಾರೆ. ಆದರೆ ಮೂಲತಃ ಉತ್ಸವ ಮೂರ್ತಿಗಳಂತೂ ಬಹು ಆಕರ್ಷಕವಾಗಿವೆ. ಗರ್ಭಗುಡಿಯ ಉತ್ತರಕ್ಕೆ ಜಲಪ್ರನಾಳವಿದೆ. ಪ್ರನಾಳದ ವಿನ್ಯಾಸವು ಸಿಂಹವಕ್ಷ ಆಕಾರದಲ್ಲಿದೆ. 

ಶಿಲ್ಪಿಯ ಚಾತುರ್ಯಕ್ಕೆ ಇಲ್ಲಿ ಹೆಗ್ಗುರುತಾಗಿರುವ ಏಕಶಿಲಾಕೃತಿಯ ಮುಷ್ಠಿಕೆಯೊಂದು ಕಾಣಸಿಗುತ್ತದೆ. ಅಂಗೈಯಲ್ಲಿಟ್ಟುಕೊಂಡು ನೋಡಬಹುದಾದ ಈ ಏಕಶಿಲಾ ಸಾಲಿಗ್ರಾಮವು ಮನಸೆಳೆಯುವುದಲ್ಲದೆ ಅದರ ಸುತ್ತಲೂ ಅಷ್ಟದಿಕ್ಪಾಲಕರ ಕೆತ್ತನೆಯುಳ್ಳ ಕಿರುಗಂಭಗಳಿವೆ. ಅದರ ಒಳಗಡೆ ನಿಂಬೆಹಣ್ಣಿನ ಗಾತ್ರದ ಎರಡು ಸಾಲಿಗ್ರಾಮಗಳು ಅತ್ತ ಇತ್ತ ಓಡಾಡುವುದಷ್ಟೆ, ಹೊರಕ್ಕೆ ಬರಲಾಗದು. ಸಾಲಿಗ್ರಾಮದ ಪೂಜೆಗೆ ಹೇಳಿಮಾಡಿಸಿದಂಥ ಮುಷ್ಠಿಕೆ ಇದಾಗಿದೆ. ಅದರ ಮೇಲ್ಬಾಗದಲ್ಲಿ ಸುಂದರ ಸರ್ಪಬಂಧವಿದೆ. 

ದೇವಾಲಯದ ಮುಂಭಾಗದಲ್ಲಿ ಸುಮಾರು ಮೂವತ್ತು ಅಡಿ ಎತ್ತರದ ಗರುಡಸ್ತಂಭವಿದ್ದು, ಅದರ ಕೆಳಗೆ ಗರ್ಭಗೃಹಕ್ಕೆ ಎದುರಾಗಿ ಕೈಮುಗಿದು ನಿಂತಿರುವ ಗರುಡ ಶಿಲ್ಪವನ್ನೂ, ಪೂರ್ವಕ್ಕೆ ಶಂಖ ಚಕ್ರ, ಉತ್ತರಕ್ಕೆ ಸಿಂಹ, ದಕ್ಷಿಣಕ್ಕೆ ಆಂಜನೇಯರ ಉಬ್ಬುಶಿಲ್ಪಗಳನ್ನೂ ಬಿಡಿಸಲಾಗಿದೆ. ಈ ಸ್ತಂಭದ ಸಮೀಪದಲ್ಲಿಯೇ ವಸಂತೋತ್ಸವದ ಓಕುಳಿಕಟ್ಟೆಯಿದೆ. "ಶಿಲ್ಪಿಯ ಚಾತುರ್ಯಕ್ಕೆ ಇಲ್ಲಿ ಹೆಗ್ಗುರುತಾಗಿರುವ ಏಕಶಿಲಾಕೃತಿಯ ಮುಷ್ಟಿಕೆಯೊಂದಿಗೆ : ಅದ್ಭುತವಾದ ಧಾರ್ಮಿಕ ಕ್ಷೇತ್ರವಾಗಿದೆ ಈ ಹರವು" ಬನ್ನಿ ಒಮ್ಮೆ…

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು