ಶಿಲ್ಪ ವೈಭವಕ್ಕೆ ಹೆಸರಾದ ಸೇನೇಶ್ವರ ದೇವಸ್ಥಾನ



ಬೈಂದೂರಿನ ಸೇನೇಶ್ವರ ದೇವಸ್ಥಾನ ಶಿಲ್ಪ ವೈಭವಕ್ಕೆ ಹೆಸರಾಗಿದೆ. ದೇವಸ್ಥಾನದ ಸೊಬಗು ದೂರದಿಂದ ನೋಡುವಾಗ ಗೊತ್ತೇ ಆಗುವುದಿಲ್ಲ. ಆದರೆ ಒಳಹೊಕ್ಕು ನೋಡಿದರೆ ಶಿಲ್ಪ ಕಲಾ ಕೆತ್ತನೆಯು ದೇವ ಸಭೆಯಂತೆ ಅನಾವರಣಗೊಳ್ಳುತ್ತ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕರಾವಳಿ ಪ್ರದೇಶದ ಬೇಲೂರು ಎಂದೇ ಇತಿಹಾಸ ತಜ್ಞರಿಂದ ಗುರುತಿಸಲ್ಪಟ್ಟಿರುವ ಸೇನೇಶ್ವರ ದೇವಸ್ಥಾನ ಪ್ರಸ್ತುತ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿದೆ. ರಾಷ್ಟೀಯ ಹೆದ್ದಾರಿಯಲ್ಲಿರುವ ಬೈಂದೂರು ಪೇಟೆಯಲ್ಲಿ ಇಳಿದು ಸ್ವಲ್ಪ ದೂರ ರಥ ಬೀದಿಯಲ್ಲಿ ಸಾಗಿದರೆ ಸೇನೇಶ್ವರ ದೇಗುಲದ ಸ್ವಾಗತ ಗೋಪುರ ನೋಡುಗರನ್ನು ಸ್ವಾಗತಿಸುತ್ತದೆ.
ಅಲ್ಲಿಂದ ಮುಂದಕ್ಕೆ ಹೋದರೆ ಮಹತೋಭಾರ ಸೇನೇಶ್ವರ ದೇವಸ್ಥಾನದ ಕಲಾ ಕುಸುರಿಯ ಮೂರ್ತಿಗಳು ಅಚ್ಚರಿ ಮೂಡಿಸುತ್ತವೆ. ಹತ್ತು ಶತಮಾನಗಳ ಹಿಂದೆ ಕಲ್ಲಿನಲ್ಲಿ ಕೆತ್ತಿದ ದೇವಳದ ಹಲವು ಮೂರ್ತಿಗಳು ಚಿತ್ತಾಕರ್ಷಕ ಅನುಭೂತಿ ನೀಡುತ್ತವೆ. ಪುರಾಣದಲ್ಲಿ ಬಿಂದು ಋಷಿ ತಪಸ್ಸು ಮಾಡಿದ ಈ ಪ್ರದೇಶ ಮುಂದೆ ಬಿಂದುಪುರವಾಗಿ ಬಳಿಕ ಬೈಂದೂರು ಆಗಿ ಮಾರ್ಪಟ್ಟಿದೆ ಎಂಬ ಉಲ್ಲೇಖವಿದೆ.
ರಾಮಾಯಣದಲ್ಲಿ ಶ್ರೀ ರಾಮಚಂದ್ರನು ವಾನರ ಸೇನೆ ಸಮೇತನಾಗಿ ಸೀತಾನ್ವೇಷಣೆಗಾಗಿ ರಾಮೇಶ್ವರಕ್ಕೆ ಹೋಗುವ ಮಾರ್ಗದಲ್ಲಿ ಬೈಂದೂರಿನ ಪ್ರದೇಶಕ್ಕೆ ಭೇಟಿ ನೀಡಿದ. ಈ ಸಂದರ್ಭದಲ್ಲಿ ವಾನರ ಸೇನೆಗೆ ಬಿಂದು ಋಷಿಗಳ ಕೋರಿಕೆಯಂತೆ ಈ ದೇವಸ್ಥಾನವನ್ನು ಬೆಳಗಾಗುವುದರೊಳಗೆ ನಿರ್ಮಿಸಿದ ಕಾರಣದಿಂದ 'ಸೇನೇಶ್ವರ' ದೇವಸ್ಥಾನ ಎಂಬ ಹೆಸರು ಬಂತು ಎಂಬ ಪೌರಾಣಿಕ ಹಿನ್ನಲೆ ಇದೆ.
ಇತಿಹಾಸ ಸಂಶೋಧಕರ ಪ್ರಕಾರ ಹನ್ನೊಂದನೆಯ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಚಕ್ರವರ್ತಿಯ ಸಾಮಂತರಾಗಿದ್ದ ಸೇನ ಅರಸರು ಈ ದೇವಾಲಯವನ್ನು ನಿರ್ಮಿಸಿದರು. ಆ ಕಾರಣದಿಂದ ಸೇನೇಶ್ವರ ಎಂಬ ಹೆಸರು ಬಂತು. ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಪ್ರಧಾನ ದೇವರು ಈಶ್ವರ. ಇಲ್ಲಿ ಲಿಂಗ ರೂಪಿ. ಆದರೆ ಈತನ ಇತರ ರೂಪಗಳು ಸುಂದರವಾಗಿ ಕಲ್ಲಿನಲ್ಲಿ ಅರಳಿವೆ. ದೇವಳದ ಸುಕನಾಸಿಯ ಒಳಗೆ ಹಾಗೂ ಮೇಲ್ಬಾವಣಿಯಲ್ಲಿ ಶಿವನ ನೃತ್ಯ ಭಂಗಿಗಳನ್ನು ಕೆತ್ತಲಾಗಿದೆ.
ಗರ್ಭಗುಡಿಯ ಹೊರ ಸುತ್ತಿನ ದೇವ ಕೋಷ್ಟಕದಲ್ಲಿ ವಿರಾಜಮಾನರಾಗಿರುವ ಕಾಲಭೈರವ, ಚತುರ್ಮುಖ ಬ್ರಹ್ಮ, ಚಂಡೇಶ್ವರಿ ಮೂರ್ತಿಗಳ ಕಲಾ ಸೂಕ್ಷ್ಮತೆ ಹಾಗೂ ಅದರಲ್ಲಿನ ಭಾವಗಳು ಶಿಲ್ಪಿಯ ಕಲಾ ಚತುರತೆಯನ್ನು ಸಾರುತ್ತವೆ. ಮೂರ್ತಿಯ ಮುಖಭಾವದ ಜತೆಗೆ ಪ್ರಭಾವಳಿಯಲ್ಲಿರುವ ಸೂಕ್ಷ್ಮ ಕುಸುರಿ ಕಲೆ ಗಮನಾರ್ಹ. ಗರ್ಭಗುಡಿ, ಸುಕನಾಸಿ ಹಾಗೂ ಬಸವ ಮಂಟಪ ಸಂಪೂರ್ಣವಾಗಿ ಶಿಲೆಯಲ್ಲಿ ನಿರ್ಮಿಸಲಾಗಿದೆ. ಗರ್ಭಗುಡಿಯ ಗೋಪುರ ಮನ ಸೆಳೆಯುತ್ತದೆ. ಸುಕನಾಸಿ ಹಾಗೂ ಗರ್ಭಗುಡಿಯ ಮಧ್ಯೆ ಇರುವ ಕಲ್ಲಿನ ಜಾಲಂಧ್ರ ಕಿಟಕಿ, ಗಜಲಕ್ಷ್ಮಿ ಮಕರ ತೋರಣ, ಸುಕನಾಸಿಯ ಕಲ್ಲಿನ ಕಂಬ ಹಾಗೂ ಸುಕನಾಸಿಯ ಸುತ್ತ ಇರುವ ದೇವರ ವಿಗ್ರಹಗಳು ಹಾಗೂ ದ್ವಾರಪಾಲಕರ ಕೆತ್ತನೆಗಳು ಹೃನ್ಮನ ಸೆಳೆಯುತ್ತವೆ.
ಸೂರ್ಯನಾರಾಯಣ, ಹರಿಹರ, ಗಣಪತಿ, ಮಹಿಷಮರ್ಧಿನಿ, ಮಯೂರ ವಾಹನ ಷಣ್ಮುಖ, ಪ್ರಭಾವಳಿಯಲ್ಲಿ ಮೂರ್ತಿಗಳು ಸುಕನಾಸಿಯ ಸುತ್ತಲೂ ಪ್ರತಿಷ್ಠಾಪಿತವಾಗಿವೆ. ಒಟ್ಟಾರೆ ಅದು ದೇವಸಭೆಯನ್ನು ನೆನಪಿಸುತ್ತದೆ. ಸುಕನಾಸಿಯ ಮೇಲ್ಛಾವಣಿಯಲ್ಲಿ ದಶಾವತಾರ ಹಾಗೂ ಶಿವತಾಂಡವ ನೃತ್ಯದ ಕೆತ್ತನೆಗಳು ಅಭೂತಪೂರ್ವ ಬಸವ ಮಂಟಪದಲ್ಲಿನ ನಂದಿ ಎಲ್ಲಾ ಕೆತ್ತನೆಗಳಿಗೂ ಕಲಶಪ್ರಾಯದಂತಿದೆ. ನುಣ್ಣನೆ ಕಲ್ಲಿನ ನಂದಿಯನ್ನು ನೋಡಿದರೆ ನೈಜ ಬಸವ ಕುಳಿತಂತೆ ಕಾಣುತ್ತದೆ. ಹಿಂಭಾಗದಲ್ಲಿ ಕಾಣುವ ಗರ್ಭಗುಡಿಯ ಶಿಖರ ಅತ್ಯಂತ ಮನೋಹರವಾಗಿದೆ.
ಈ ಪುಣ್ಯ ಕ್ಷೇತ್ರದ ದರ್ಶನದೊಂದಿಗೆ ಸಮೀಪದಲ್ಲಿ ಸೋಮೇಶ್ವರ ಸಮುದ್ರ ತೀರ (ಒತ್ತಿನೆಣೆ ಸಮುದ್ರ ತೀರ), ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ, ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಮರವಂತೆ ಬೀಚ್, ಜೊತೆಗೆ ಮುರ್ಡೇಶ್ವರ ಇತ್ಯಾದಿ ಪ್ರವಾಸಿ ತಾಣವನ್ನು ನೋಡಬಹುದು. "ಶಿವನ ಆಲಯ, ಪ್ರಾಚೀನ ಶಿಲ್ಪಕಲೆಯ ಮೆರಗು, ಚಿತ್ತಾಕರ್ಷಣೆಯ ಹಲವಾರು ಕೆತ್ತನೆಗಳು ಕಣ್ಮನ ಸೆಳೆಯುತ್ತದೆ" ಬನ್ನಿ ಒಮ್ಮೆ ಪ್ರವಾಸಕ್ಕೆ.
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು