ಶಿವನ ಆಲಯ - ಒಂದು ಜನಪದ ಗೀತೆ

ಶಿವನ ಆಲಯ - ಒಂದು ಜನಪದ ಗೀತೆ

ಕವನ

ತವರೂರ ದಾರೀಲಿ ಬೇಲೀಯ ಹುವ್ವು

ನಕ್ಕೊಂತ ಅರಳೀ ಕೈ ಬೀಸಿ ಕರೆದ್ಯಾವೆ

ಅವ್ವಾನ ನೆನಪ್ನಾಗ ಎದೀ ತಂಪಾಗೈತೆ

ಬಿರ ಬಿರನೆ ನಡಿಯೆಂದು ಮನಸಂದೈತೆ

 

ಅಪ್ಪಯ್ಯನ ಕೈ ಹಿಡಿದು ಜಾತ್ರೀಗಿ ಓಗಿವ್ನಿ

ಕೈತುಂಬ ಕಳ್ಳೇಕಾಯ್ ತಿಂದಿವ್ನೀ

ಬಣ್ಣಾದ ಪುಗ್ಗೇನ ಕೊಡಿಸ್ಯವ್ನೆ ಅಪ್ಪಯ್ಯ

ಕರಡೀಯ ಕುಣ್ತಾವ ತೋರ್ಸವ್ನೆ

 

ಅಣ್ಣಯ್ಯನ್ಜೋಡಿ ದನಮೇಸಾಕೊಗ್ತಿದ್ದೆ

ಎಗರೆಗರಿ ಜಗ್ಳಾವ ಮಾಡತಿದ್ದೆ

ಪುಟ್ತಂಗಿ ಅಂತಿದ್ದ ಬಲು ಮುದ್ದು ಮಾಡ್ತಿದ್ದ

ಮುಲ್ಲಂಕೋಲ ಹಣ್ಣಾ ಕೊಯ್ಕೊಡ್ತಿದ್ದ

 

ಸೀ ಬೆಲ್ಲ ಮೆದ್ದಂಗೆ ತಾಯ್ಮನೆ ಗ್ಯಾನ

ಹಾಲ್ನಲ್ಲೇ ಮಿಂದಂತೆ ತಂಪಾಗ್ತೈತೆ ಮನ

ಮಾರುದ್ದ ಹಾದೀನೂ ಬೋ ದೂರ ಆಗೈತೆ

ತವರ್ಮನೀ ಅಂದರ ಶಿವನ ಆಲಯದಂಗೈತೆ.

 

-*ಶಾಂತಾ ಜೆ ಅಳದಂಗಡಿ*

 

ಚಿತ್ರ್