ಶಿವನ ನಟರಾಜ ಅವತಾರದ ಕುರಿತು...

ಶಿವನ ನಟರಾಜ ಅವತಾರದ ಕುರಿತು...

ಹಿಂದೂ ಶಾಸ್ತ್ರದಲ್ಲಿ ಶಿವನ ನಟರಾಜ ಭಂಗಿಗೆ ಹೆಚ್ಚಿನ ಮಹತ್ವವಿದ್ದು, ಮಹಾದೇವರ ವಿಭಿನ್ನ ಅವತಾರಗಳಲ್ಲಿ ಈ ನಟರಾಜ ಅವತಾರವೂ ಒಂದು. ನಟರಾಜ ಎಂದರೆ ನೃತ್ಯಕ್ಕೆ ಅರಸ ಎಂದರ್ಥ.

ಹಿಂದೊಮ್ಮೆ ಅಪಸ್ಮಾರ ಎಂಬ ಅಸುರನು ಬ್ರಹ್ಮ ದೇವನನ್ನು ಕುರಿತು ದೀರ್ಘವಾದ ತಪಸ್ಸನ್ನು ಆಚರಿಸಿದನು. ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನು ನಿನಗೇನು ವರ ಬೇಕೆಂದು ಕೇಳಲು, ಅಪಸ್ಮಾರನು ಜ್ಞಾನ, ಸಂಗೀತ ಮತ್ತು ನೃತ್ಯದ ಸಮಾಗಮದಿಂದ ನನ್ನ ಅಂತ್ಯವಾಗಲಿ ಎಂದು ಕೇಳಿಕೊಂಡನು. ಬ್ರಹ್ಮದೇವನು ವರವನ್ನು ಕರುಣಿಸಿದರು. ಅಪಸ್ಮಾರನು ಇನ್ನು ತನಗೆ ಸಾವಿಲ್ಲವೆಂದು ಬೀಗಿದನು. ಸಾಧು ಸಜ್ಜನರ ಮೇಲೆ ಧಾಳಿ ನಡೆಸಿದನು. ದೇವಲೋಕದ ಮೇಲೆ ಆಕ್ರಮಣ ಮಾಡಿ, ಇಂದ್ರಪದವಿಯನ್ನು ಗೆದ್ದುಕೊಂಡನು.

ತನ್ನ ವರದಿಂದ ಸರ್ವದಿಕ್ಕಿನಲ್ಲೂ ಪ್ರಾಬಲ್ಯವನ್ನು ಪಡೆದುಕೊಂಡು ಮೆರೆಯುತ್ತಿದ್ದ ಅಪಸ್ಮಾರನ ದಬ್ಬಾಳಿಕೆಯಿಂದ ಬೇಸತ್ತ ದೇವತೆಗಳು ಶಿವನ ಮೊರೆ ಹೋದರು. ಜ್ಞಾನವನ್ನು ಜಗತ್ತಿನಲ್ಲಿ ಕಾಪಾಡಲು ಅಪಸ್ಮಾರನನ್ನು ಕೊಲ್ಲಬೇಕಾಗಿತ್ತು. ಆದರೆ ಅಜ್ಞಾನ ಮತ್ತು ಅಂಧತೆಯನ್ನು ಮೆಟ್ಟಿ ನಿಂತಲ್ಲಿ ಮಾತ್ರವೇ ಆ ಅಸುರನ ನಾಶ ಸಾಧ್ಯವಿತ್ತು.

ದೇವತೆಗಳ ಮೊರೆಯನ್ನಾಲಿಸಿದ ಭೋಲೆನಾಥನು ನಟರಾಜ ಅವತಾರವನ್ನು ತಾಳಿದರು. ಇದೇ ಸಂದರ್ಭದಲ್ಲಿ ತನ್ನ ಪರಾಕ್ರಮದ ಸೊಕ್ಕಿನಿಂದ ಮೆರೆಯುತ್ತಿದ್ದ ಅಸುರ ಅಪಸ್ಮಾರನು ಶಿವನಿಗೇ ಸವಾಲೊಡ್ಡುತ್ತಾನೆ. ಶಿವನು ನಟರಾಜ ರೂಪದಲ್ಲಿ ನರ್ತಿಸಿ, ಅಪಸ್ಮಾರನನ್ನು ತನ್ನ ಕಾಲುಗಳ ಅಡಿಯಲ್ಲಿ ಮೆಟ್ಟಿ ನಿಂತು ಅವನನ್ನು ವಧಿಸುತ್ತಾರೆ. ಜ್ಞಾನದ ಮೂಲವೇ ಶಿವನಾಗಿದ್ದ ಕಾರಣ ಜ್ಞಾನ, ಸಂಗೀತ ಮತ್ತು ನೃತ್ಯದ ಸಮಾಗಮದಲ್ಲಿಯೇ ಅಪಸ್ಮಾರರನ ವಧೆಯಾಯಿತು.

ನಟರಾಜ ನೃತ್ಯದ ಸಂಕೇತ. ವಿಶ್ವದ ನಿರ್ಮಾತೃರೊಂದಿಗೆ ಒಂದುಗೂಡುವಿಕೆಯನ್ನು ಈ ನೃತ್ಯ ಬಿಂಬಿಸುತ್ತದೆ. ತ್ರಿಮೂರ್ತಿಗಳ ಒಡೆಯ ಪರಶಿವನ ನಾನಾ ರೂಪಗಳ ಅವತಾರಗಳಲ್ಲಿ ನಟರಾಜ ಅವತಾರವು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ.  ಜನನ ಮತ್ತು ಮರಣದ ದೈನಂದಿನ ಕ್ರಿಯೆಯನ್ನೂ ಈ ನೃತ್ಯವು ಸಂಕೇತಿಸುತ್ತದೆ. ಹೀಗೆ ಶಿವನು ತಮ್ಮ ತಾಂಡವ ನೃತ್ಯದ ಮೂಲಕ ನಮ್ಮ ಮನಸ್ಸಿನಲ್ಲಿರುವ ಅಜ್ಞಾನ, ಭೀತಿಯನ್ನು ಹೊಡೆದೋಡಿಸುತ್ತಿದ್ದಾರೆ.

ಮೊಟ್ಟಮೊದಲ ಬಾರಿಗೆ ಚೋಳರ ಕಂಚಿನ ಪ್ರತಿಮೆಗಳಲ್ಲಿ ನಟರಾಜನನ್ನು ಚಿತ್ರಿಸಲಾಯಿತು. ಜ್ವಾಲೆಗಳಲ್ಲಿ ಶಿವನು ನರ್ತಿಸುತ್ತಿರುವ ಭಂಗಿಯಲ್ಲಿ ಈ ಪ್ರತಿಮೆ ಇದ್ದು ಅವರ ಎಡಗಾಲು ಅಪಸ್ಮಾರ ಅಸುರನ ತಲೆಯ ಮೇಲೆ ಹತೋಟಿಯನ್ನಿಟ್ಟು ನಿಂತಿದೆ. ಈ ಅಸುರನು ಅಜ್ಞಾನದ ಪ್ರತೀಕವಾಗಿದ್ದು, ಒಂದು ಕೈಯಲ್ಲಿ ಡಮರು ಇದ್ದು ಇದು ಸ್ತ್ರೀ ಪುರುಷ ತತ್ವವನ್ನು ಎತ್ತಿಹಿಡಿದಿದೆ. ಅಜ್ಞಾನವನ್ನು ಜ್ಞಾನ ನೃತ್ಯ ಮತ್ತು ಸಂಗೀತದಿಂದ ಮಾತ್ರ ಮೆಟ್ಟಿ ನಿಲ್ಲಲು ಸಾಧ್ಯ ಎಂಬುದನ್ನು  ಮಹಾದೇವರು ತಮ್ಮ ನಟರಾಜ ಅವತಾರದಲ್ಲಿ ತೋರಿಸಿಕೊಟ್ಟಿದ್ದಾರೆ. ಇಂದಿಗೂ ನಾಟ್ಯ ಶಾಲೆಗಳಲ್ಲಿ ನೃತ್ಯವನ್ನು ಆರಂಭಿಸುವುದಕ್ಕೂ ಮೊದಲು ನಟರಾಜನ ವಿಗ್ರಹಕ್ಕೆ ನಮಿಸಲಾಗುತ್ತದೆ.

-ದರ್ಶನ್ ಸುವರ್ಣ

ಚಿತ್ರ ಕೃಪೆ: ಇಂಟರ್ನೆಟ್ ತಾಣ