ಶಿವರಾತ್ರಿ : ಮಹಾಸಂಯೋಗ ರಾತ್ರಿ

ಸ್ವರ್ಗದ ಸಂಪತ್ತೆಲ್ಲ ಸಮುದ್ರದ ಪಾಲಾಗಿತ್ತು. ಅಧಿಕಾರಸ್ಥ ದೇವತೆಗಳ ಅಧಿಪತಿಯ ಅಚಾತುರ್ಯದಿಂದ ಆದ ದುರಂತ. ಮರಳಿ ಸಿಗಬೇಕು. ಮಂಥನ ನಡೆಯಬೇಕು. ಮೂರ್ತಿತ್ರಯದ ಅನುಗ್ರಹ, ರಾಕ್ಷಸರ ಸಹಕಾರ, ರಾಷ್ಟ್ರೀಯ ಸನ್ನಿವೇಶದ, ವಿಪತ್ತಿನ ನಿರ್ವಹಣೆಗೆ. ವಿರಳ ದೇವಾಸುರ ಪಕ್ಷಪ್ರತಿಪಕ್ಷ ಒಕ್ಕೂಟ, ವಿಶ್ವ ಸಹಕಾರ ಸರಕಾರ. ಆದರೇನು? ಅಮೃತ್ತಕ್ಕೆ ಮೊದಲು ವಿಷದ ಕಲಶ ಉದ್ಭವ. ವಿಷ ಬಂದರೆ ಸ್ವೀಕರಿಸುವವರಿಲ್ಲ. ಎಲ್ಲರೂ ಸುವಸ್ತುಗಳಿಗಾಗಿ ಕಾಯುವವರೇ, ಅಮೃತಕ್ಕಾಗಿ ಹಾತೊರೆದವರೇ. ಆದರೆ ಮಥನದಲ್ಲಿ ಬಂದುದನ್ನು ನಿರಾಕರಿಸುವಂತಿಲ್ಲ.
ಲಯಕರ್ತ ಶಿವ ಶಂಕರ ಶಂಭು, ಹೇಳಿದ “ನಾನು ಸ್ವೀಕರಿಸುತ್ತೇನೆ.” ಹೌದು ವಿಷದ ಲಯಕ್ಕಾಗಿ, ವಿಶ್ವದ ಸಂಗೀತ, ವಿಶ್ವ ನಾಟ್ಯದ ಲಯವನ್ನು ಕಾಪಾಡುವುದಕ್ಕಾಗಿ. ಅದಕ್ಕೆ ಅವನು ಮಹಾದೇವ, ಮಹಾನಾಯಕ. ವಿಷ ಬಂದಾಗಲೂ ಶಾಂತವಾಗಿ ಸ್ವೀಕರಿಸುವ ಜನನಾಯಕ. “ ಅಯ್ಯೋ ವಿಷ ಹೊಟ್ಟೆಗಿಳಿದರೆ? ಲೋಕ ವಿನಾಶ". ಲೋಕ ಮಾತೆ ಪಾರ್ವತಿಯ ಆತಂಕ. ಏನು ಮಾಡೋಣ. ಕಂಠಕ್ಕೆ ಎರಡು ಹಸ್ತಗಳ ಬಳೆಯ ದಿಗ್ಬಂಧ ಹಾಕಿದಳು. ವಿಷ ಹೆದರಿತು. ಅಲ್ಲೇ ಚಿನ್ಹೆಯಾಯಿತು. ಶಿವ ನೀಲಕಂಠನಾದ. ನಾಯಕರು ವಿಷ ನುಂಗಿ ನೀಲಕಂಠರಾದರೆ ಭೂಷಣ. ನೀಲವು ಅನಂತ ಗೂಢ. ಇಷ್ಟು ಮಾಡಿದ ಶಿವ ಕಾಯಲಿಲ್ಲ. ತಪಸ್ಸಿಗೆ ಹೋಗಿಬಿಟ್ಟ. ಅಮೃತ ಇತರರಿಗೆ, ತನಗೇಕೆಂದ.
ಬ್ರಹ್ಮ, ವಿಷ್ಣು, ಮಹೇಶ್ವರರೊಮ್ಮೆ ಜಗಳದ ರೀತಿ ಆಡಿದರು. ತಾ ಮೇಲು ತಾ ಮೇಲು. ಮೂರೂ ಒಂದೇ ಆದುದರಿಂದ ಎಲ್ಲವೂ ಮೇಲು ಕೆಳಗು. ಇರಲಿ. ಶಿವ ಅಗ್ನಿ ಲಿಂಗನಾಗಿ ಮಹಾಲಿಂಗನಾಗಿ ಎತ್ತರಕ್ಕೂ ಆಳಕ್ಕೂ ಪಸರಿಸಿದ. ಅಳತೆ ಮಾಡಿರಿ ಎಂದ. ಬ್ರಹ್ಮ (ದೊಡ್ಡದು) ವಿಷ್ಣು (ಸರ್ವವ್ಯಾಪಿ) ಇಬ್ಬರಿಗೂ ತುದಿ ಬಡು ಹತ್ತಲಿಲ್ಲ. ಆಕಾಶ ಮೂರ್ತಿ ಅಗ್ನಿರೂಪೀ ಶಿವನಿಗೆ ನಮಸ್ಕರಿಸಿದರು.
ಸರ್ವವೂ ನಿರಾಕಾರವಾಗಿತ್ತು. ಸ್ವಂದನದಿಂದ ಸೃಷ್ಟಿ ಆಗಲೆಂದು ಪರಶಿವ ತತ್ತ್ವದಲ್ಲಿ ಕಲ್ಪವಾಯಿತು. ಕಲ್ಪನೆಯಾಯಿತು. ಕೂಡಲೇ ಆನಂದ ತಾಂಡವ ಆರಂಭ. ಒಂದೊಂದು ಹೆಜ್ಜೆ, ಭಂಗಿ, ಭಾವಕ್ಕೆ ತಾಳ ರಾಗ ಸಾಹಿತ್ಯಕ್ಕೆ ಅನಂತಕೋಟಿ ಪಿಂಡಾಂಡ ಬ್ರಹ್ಮಾಂಡ ಸೃಷ್ಟಿ. ಯುಗಾಂತರದಲ್ಲಿ ಪಶುಪತಿಯ ಆಜ್ಞೆಗಳನ್ನು ಪಶುಗಳು ಉಲ್ಲಂಘಿಸಿದರೋ ಏನೋ, ಆನಂದದ ಸೃಷ್ಟಿ ವಿಕಾರವಾಯಿತು. ಶಿವನಿಗೆ ಸಾಕೆನಿಸಿತು. ಸಂಹಾರ ತಾಂಡವವಾಡಿದ ಮುಂದೆ ಪುನಃ ಆನಂದದ ತಾಂಡವ. ಹೀಗೆ ಶಿವ ಶಕ್ತಿ ಚಕ್ರ ಸದಾಶಿವೋಪವಾಸ.
ಬೇಡನೊಬ್ಬ ಕಾಡಿನಲ್ಲಿ ಸಿಕ್ಕಿದ ಜಿಂಕೆಗೆ ಬಾಣ ಹೂಡಬೇನ್ನುವಷ್ಟರಲ್ಲಿ ಜಿಂಕೆಯ ಸಂಸಾರ ಕಂಡಿತು. ಕರುಣೆ ಹುಟ್ಟಿತು. ಕೊಲ್ಲಲಿಲ್ಲ. ರಾತ್ರಿಯಾಯಿತು ಹಸಿವೆ, ಬಗಲಿನ ನೀರಿನ ಚೀಲವೂ ತೂತು. ಕರ್ಮಜಲ ತೊಟ್ಟಿಕ್ಕಿ ಸೋರಿ ಹೋಯಿತು. ಏನು ಮಾಡುವುದು? ಒಂದು ಮರವೇರಿದ. ಹೊತ್ತು ಕಳೆಯಬೇಕಲ್ಲ? ಮರದ ಎಲೆಯನ್ನು ಒಂದೊಂದೇ ಕಿತ್ತು ಕೆಳ ಹಾಕುತ್ತಿದ್ದ. ಕೆಳಗಿನ ಉರುಟು ಕಲ್ಲಿನ ಮೇಕೆ ಬಿತ್ತು. ಮುಂದೆ ಗೊತ್ತಾಯಿತು. ಅದು ಬಿಲ್ವದ ಮರ. ಕಲ್ಲೇ ಲಿಂಗ. ಬೇಡನದು ಉಪವಾಸ, ಪೂಜೆ, ಜಾಗರಣೆ ಎಲ್ಲವನೂ ಆಯಿತು. ಆಯೋಚಿತ ಸತ್ಕರ್ಮ. ಬೇಡ ಬೇಡದವನಾಗಲಿಲ್ಲ. ಶಿವನಿಗೆ ಬೇಕಾದವನಾದ. ಕೈಲಾಸದಲ್ಲಿ ಅಮರನಾದ. ಜಾಗೃತನಾದ. ಆದಿಕಿರಾತನ ಸಂಗಡಿಗನಾದ.
ಶಿವಶಕ್ತಿ ದಾಂಪತ್ಯ ಅನಾದಿ ಅನಂತ. ವಾಗರ್ಥದ ಹಾಗೆ, ಮಾತು ಅರ್ಥಗಳ ಜೊತೆಯ ಹಾಗೆ ಅರ್ಧನಾರೀಶ್ವರ ಅರ್ಧನಾರೇಶ್ವರೀ ಸಂಯೋಗವದು. ಅದು ಯುಗ ಯುಗದಲ್ಲಿ ನಡೆಯುತ್ತಿರಬೇಕು. ಶಿವನ ಮಾವನು ದಕ್ಷನಾದುದರಿಂದ ಅವಳು ಶಿವನ ಸತಿಯಾದುದಲ್ಲವೇ? ವಿವಾಹದ ದಿನ ಬಲು ಪವಿತ್ರ. ಮಹಾದಿನ. ಲೋಕ ಜಾಗರ.
ಇವೆಲ್ಲ ನಡೆದದ್ದು ಮಾಘ ಬಹುಳ (ಅಥವಾ ಶಾಲಿವಾಹನ ಶಕದ ಮಾಘ, ವಿಕ್ರಮ ಶಕಾಚರಣೆಗೆ ಫಾಲ್ಗುನ ಬಹುಳ) ಚತುರ್ದಶಿ ಅಮವಾಸ್ಯೆಗಳಲ್ಲಿ. ಅದೇ ಮಹಾ ಶಿವರಾತ್ರಿ. ನಿರಾಹಾರವೇ ಆಹಾರ. ರಾತ್ರಿ ತಮಸ್ಸಲ್ಲ ಅದು ಜ್ಞಾನ. ರಹಸ್ಯ ರಾತ್ರಿ. ಮಹಾ ಮಹಾ ಶಿವರಾತ್ರಿ.
***
ಶಿವರಾತ್ರಿಯ ಮಹತ್ವವನ್ನು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿದ್ದಾರೆ ಖ್ಯಾತ ಸಂಸ್ಕೃತಿ ತಜ್ಞ, ಅರ್ಥದಾರಿ, ಕವಿ ಡಾ.ಎಂ.ಪ್ರಭಾಕರ ಜೋಶಿಯವರು. ಇವರು ತಮ್ಮ ‘ತತ್ತ್ವ ಮನನ' ಎಂಬ ಪುಸ್ತಕದಲ್ಲಿ ಈ ಬಗ್ಗೆ ವಿವರಗಳನ್ನು ಬರೆದಿದ್ದಾರೆ. ಈ ಪುಸ್ತಕದ ಮಾಹಿತಿಯನ್ನು ‘ಪುಸ್ತಕ ಸಂಪದ’ ದಲ್ಲಿ ಓದಬಹುದು. ಡಾ. ಜೋಶಿಯವರಿಗೆ ಕೃತಜ್ಞತೆಗಳು.
***
ಡಾ. ಎಂ. ಪ್ರಭಾಕರ ಜೋಶಿಯವರ ‘ತತ್ತ್ವ ಮನನ’ ಪುಸ್ತಕ ದಿಂದ ಆಯ್ದ ಅಧ್ಯಾಯ.