ಶಿವರಾತ್ರಿ
ಶಿವರಾತ್ರಿ ಅಂದರೆ ನನಗೆ ನೆನಪಾಗುವುದು ದೇವರಿಗಿಂತ ಹೆಚ್ಚು ಆ ಹಬ್ಬದಂದು ರಾತ್ರಿಯಲ್ಲಿ ನಡೆಯುತ್ತಿದ್ದ ಆವಾಂತರಗಳು. ಶಿವರಾತ್ರಿಯ ದಿನ ಜಾಗರಣೆ ಮಾಡಬೇಕೆಂದೋ ಅಥವಾ ಮತ್ತೆ ಯಾವುದೋ ಕಾರಣಕ್ಕೆ ರಸ್ತೆಯ ನಡುವೆ ಕಲ್ಲು, ಡ್ರಮ್ ಏನಾದರು ಇಡುವವರಿದ್ದರು.ಅಂಗಡಿಯ ಫಲಕಗಳು ಎಲ್ಲೆಲ್ಲೋ ಇರುತ್ತಿದ್ದುವು. ಜಾಗರಣೆ ಮಾಡುವಾಗ ದೇವರ ಧ್ಯಾನ ಮಾಡುತ್ತಾ ಕಳೆಯದೆ ಇಂತಹ ಕೆಟ್ಟ ಕೆಲಸದಲ್ಲಿ ಕಳೆಯಬೇಕೆಂದು ಅವರಿಗೆ ಅದ್ಯಾರು ಹೇಳುತ್ತಿದ್ದರೋ! ಇದಕ್ಕಿಂತ ಭಯಾನಕವಾಗಿ ಆಗಿನ ಹಂಚಿನ ಮನೆಗಳಿಗೆ ಕಲ್ಲು ಎಸೆಯುವುದು ಸಾಮಾನ್ಯವಾಗಿತ್ತು. ಮನೆಯವರು ಆಕ್ಶೇಪಿಸಿದರೆ ಇನ್ನೂ ಹೆಚ್ಚು ಕಲ್ಲು ಬೀಳುತ್ತಿದ್ದುವು.ಬೇರೆಯವರ ಬಾಯಿಯಿಂದ ಶಾಪ ಹಾಕಿಸಿಕೊಳ್ಳದೆ ಇರಬಾರದು ಎಂಬ (ಮೂಢ)ನಂಬಿಕೆ ಸಾಮಾನ್ಯವಾಗಿತ್ತು.ತೆಂಗಿನಮರ ಏರಿ ಬೊಂಡ(ಸೀಯಾಳ) ಕುಡಿಯುವ ಧೈರ್ಯಶಾಲಿಗಳಿಗೆ ಬರವಿರಲಿಲ್ಲ. ಪೇಟೆ ಪಟ್ಟಣಗಳಲ್ಲಿ ಶಿವರಾತ್ರಿಗೆ ಮೊದಲೇ ಪೊಲೀಸರು ಇಂತಹ ಕುಕೃತ್ಯಗಳ ವಿರುದ್ಧ ಜನರಿಗೆ ಎಚ್ಚರಿಕೆ ನೀಡುವುದು,ರಾತ್ರಿ ಗಸ್ತು ನಡೆಸುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದರು. ಆದರೆ ಕೇಡಿಗಳು ತಮ್ಮ ಕೀಟಲೆಗಳನ್ನು ಸಲೀಸಾಗಿ ನಡೆಸುತ್ತಿದ್ದರು.ಪೊಲೀಸರ ಗಸ್ತು ನಡೆಯುತ್ತಿತ್ತೋ ಇಲ್ಲವೋ ನೋಡಲು ನಾವು ಮನೆಯ ಹೊರಗೆ ಬಂದರೆ ತಾನೇ?
ಅದೃವಶಾತ್ ಇತ್ತೀಚಿನ ವರ್ಷಗಳಲ್ಲಿ ಅಂತಹ ಘಟನೆಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿವೆ. ನಾವು ಮುಂದುವರಿಯುತ್ತಿರುವುದಕ್ಕೆ ಇದೊಂದು ಸಾಕ್ಷಿಯಿರಬಹುದು. ಶಿವರಾತ್ರಿಯ ಜಾಗರಣೆ ಬೇರೆಡೆಯೂ ಹೀಗೇ ಇರುತ್ತಿದ್ದುವೋ ಅಲ್ಲ,ನಮ್ಮ ಕರಾವಳಿ ತೀರದ ಪ್ರದೇಶಗಳಲ್ಲಿ ಮಾತ್ರಾ ಇಂತಹ ಪರಿಸ್ಥಿತಿಯಿತ್ತೋ ಎನ್ನುವ ಕಲ್ಪನೆ ನನಗಿಲ್ಲ.ಈ "ಜಾಗರಣೆ" ಎರಡ್ಮೂರು ದಿನಕ್ಕೆ ವ್ಯಾಪಿಸಿಕೊಳ್ಳುತ್ತಿದ್ದುವು. ಶಿವರಾತ್ರಿ ಕಳೆದ ಮನೆಯ ಹಂಚು ಬದಲಾಯಿಸಬೇಕಾಗಿ ಬರುತ್ತಿತ್ತೇ ಈಗ ನೆನಪಾಗುತ್ತಿಲ್ಲ.
ಇಂತಹ "ಜಾಗರಣೆ"ಯನ್ನು ನಾನಾಗಲಿ ನನ್ನ ಗೆಳೆಯರಾಗಲಿ ಎಂದೂ ನಡೆಸಿರಲಿಲ್ಲ ಎನ್ನುವುದು ನಮ್ಮ ಸಭ್ಯತೆಗೆ ಹಿಡಿದ ಕನ್ನಡಿ ಅಲ್ಲದೆ ಇನ್ನೇನು?ಈಗಲೂ ಇಂತಹ "ಆಚರಣೆ"ಗಳು ಮುಂದುವರೆದಿದ್ದರೆ ಕೋಮು ಗಲಭೆಗಳೇ ಆಗುತ್ತಿದ್ದುವೋ ಏನೋ!