ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 1)

ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರ ಪ್ರೀತಿ-ಮನ್ನಣೆಗೆ ಪಾತ್ರರಾಗಿರುವ ಕೋಟ ಶಿವರಾಮ ಕಾರಂತರು ಪ್ರಕಟಿಸಿದ ಒಟ್ಟು ಪುಸ್ತಕಗಳ ಸಂಖ್ಯೆ 400 ದಾಟುತ್ತದೆ. 45 ಕಾದಂಬರಿ ಪ್ರಕಟಿಸಿದ್ದ ಕಾರಂತರು 90ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದರು. ‘ಬಾಲಪ್ರಪಂಚ’ ಮತ್ತು ‘ವಿಜ್ಞಾನ ಪ್ರಪಂಚ’ದಂತಹ ವಿಶ್ವಕೋಶಗಳನ್ನು ಸಿದ್ಧಪಡಿಸಿದ ಕಾರಂತರು ಸ್ವತಃ ‘ನಡೆದಾಡುವ ವಿಶ್ವವಿದ್ಯಾಲಯ’ದಂತಿದ್ದರು. ದೇಶದ ಅತ್ಯುನ್ನತ ಪ್ರಶಸ್ತಿಗಳಿಗೆ ಕಾರಂತರು ಭಾಜನರಾಗಿದ್ದರು. ಇಂತಹ ಅಸಾಧಾರಣ ಸಾಧನೆ ಮಾಡಿದ ಕಾರಂತರ ಮೊದಲ ಪುಸ್ತಕ ಮಾತ್ರ ಅನಾಮಿಕವಾಗಿಯೇ ಉಳಿದಿದೆ. ಕಾರಂತರ 21ನೇ ವಯಸ್ಸಿನಲ್ಲಿ (1923) ಪ್ರಕಟವಾದ ಮೊದಲ ಪುಸ್ತಕಕ್ಕೆ ಮರುಮುದ್ರಣದ ಭಾಗ್ಯ ಬಂದದ್ದು 2011ರಲ್ಲಿ. ಅದೂ ’ಶಿವರಾಮ ಕಾರಂತರ ಸಾಹಿತ್ಯ ಶ್ರೇಣಿ’ ಒಂದನೇ ಸಂಪುಟದ ಭಾಗವಾಗಿ.
`ರಾಷ್ಟ್ರಗೀತ ಸುಧಾಕರ’ ಕಾರಂತರ ಮೊದಲ ಪ್ರಕಟಿತ ಗ್ರಂಥವಾದರೂ ಅದೇ ಮೊದಲ ಕೃತಿಯೇನಲ್ಲ. ಮೇಲ್ನೋಟಕ್ಕೆ ಗೀತೆಗಳ ಮೂಲಕ ಕಾರಂತರ ಬರವಣಿಗೆ ಆರಂಭವಾದಂತೆ ಅನಿಸುತ್ತದೆ. ಆದರೆ, ಅದು ನಿಜವೇನಲ್ಲ.
ಶಿವರಾಮ ಕಾರಂತರ ಲೇಖನಗಳನ್ನು ಸಂಗ್ರಹಿಸಿ-ಸಂಪಾದಿಸಿದ ಮಾಲಿನಿ ಮಲ್ಯ ಅವರು ಲೇಖನಗಳ ನಾಲ್ಕನೇ ಸಂಪುಟದಲ್ಲಿ ‘ಮೊದಲ ಲಭ್ಯಕೃತಿ- ರಾಷ್ಟ್ರಭಕ್ತಿಗೀತೆಗಳ ಸಂಗ್ರಹ (1923)ವಾದರೂ, ಈ ಅವಧಿಯಲ್ಲಿ-ರಾಷ್ಟ್ರೀಯ ಚಳವಳಿಗೆ ಪೂರಕವಾಗಿ ಕೆಲವಾದರೂ ಲೇಖನಗಳನ್ನು- ಅಂದು ದಕ್ಷಿಣ ಕನ್ನಡದ ಉಡುಪಿಯಿಂದ ಹೊರಡುತ್ತಿದ್ದ ಸತ್ಯಾಗ್ರಹಿಯಂತಹ ಪತ್ರಿಕೆಗಳಲ್ಲಿ ಪ್ರಕಟಿಸಿರಬಹುದು’ ಎಂದು ಅಭಿಪ್ರಾಯ ಪಡುತ್ತಾರೆ.
ಮಾಲಿನಿ ಮಲ್ಯ ಅವರು ‘ನವಕರ್ನಾಟಕ ಸಾಹಿತ್ಯ ಸಂಪದ’ ಸರಣಿಯ ‘ಶಿವರಾಮ ಕಾರಂತ’ ಪುಸ್ತಕದಲ್ಲಿ ‘ಲಭ್ಯವಿರುವ ದಾಖಲೆಗಳ ಪ್ರಕಾರ 1923ರಲ್ಲಿ ಕಾರಂತರು ಬರೆದಿದ್ದ `ರಾಷ್ಟ್ರಗೀತ ಸುಧಾಕರ’ ಎಂಬ ಕವನ ಸಂಕಲನವೇ ಅವರ ಮೊದಲ ಬರಹವೆಂದು ಭಾವಿಸಿದ್ದೆ. ಆದರೆ, ಕಾರಂತರ ನಾಟಕಗಳ ಬಗ್ಗೆ ನಾನು ನಡೆಸಿದ ಕ್ಷೇತ್ರಾಧ್ಯಯನದ ಫಲವಾಗಿ 1921ರಲ್ಲೇ ಅವರು ‘ನಿಶಾಮಹಿಮೆ’ ನಾಟಕವನ್ನು ಕುಂದಾಪುರದಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಪರಿಷತ್ತಿನ ಸಮಾವೇಶದಲ್ಲಿ ಆಡಿದ್ದ ಸಂಗತಿ ಆ ನಾಟಕದಲ್ಲಿ ಪಾತ್ರ ವಹಿಸಿದ್ದ ಕುಂದಾಪುರದ ವಾಸುದೇವ ನಾಯಕರ ಹೇಳಿಕೆಯಿಂದ ತಿಳಿದು ಬಂದಿದೆ. ಇದರಿಂದ ಕಾರಂತರ ಮೊದಲ ಬರಹ ಕವನ ಸಂಕಲನವಲ್ಲ, ನಾಟಕ ಕೃತಿ ಎಂಬುದಾಗಿ ಭಾವಿಸಬಹುದು. ನಿಶಾಮಹಿಮೆ’ ಮರಾಠಿಯ ಪ್ರಸಿದ್ಧ ನಾಟಕಕಾರ ರಾಮಗಣೇಶ ಗಡಕರಿಯವರ ’ಏಕಚ್ ಪ್ಯಾಲಾ’ದ ರೂಪಾಂತರ. ಈ ಕೃತಿ ಗ್ರಂಥ ರೂಪದಲ್ಲಿ ಪ್ರಕಟಗೊಂಡಿರದ ಪ್ರಯುಕ್ತ ಅದು ಮರೆಯುಲ್ಲುಳಿಯುವಂತಾಯಿತು’ ಎಂದು ಉಲ್ಲೇಖಿಸಿದ್ದಾರೆ.
ಈ ಮಾಹಿತಿಯನ್ನು ವಿ.ಎಂ. ಇನಾಂದಾರ್ ಅವರು ’ಶಿವರಾಮ ಕಾರಂತ: ಬದುಕು-ಬರಹ’ ಕೃತಿಯಲ್ಲಿ ‘ವೃತ್ತಿರಂಗಭೂಮಿಗಾಗಿ “ನಿಶಾಮಹಿಮೆ” (ಗಡಕರಿಯವರ ಮರಾಠಿ ಏಕಚ ಪ್ಯಾಲಾ ನಾಟಕದ ಅನುವಾದ) “ಸತೀ ಸಂಯುಕ್ತ”, “ಗೋಮಾತೆ”, “ವಿಜಯನಗರದ ಸೂರ್ಯ, “ಕಠಾರಿ ಭೈರವ”, “ಗದಾಯುದ್ಧ”, “ಕರ್ಣಾರ್ಜುನ, “ಜ್ವಾಲಾಬಂಧನ", ಮತ್ತು ’ದೆಹಲಿಯ ದೌರ್ಭಾಗ್ಯ” ಎಂದು ಮುಂತಾಗಿ ನಾಟಕಗಳನ್ನು ಬರೆದುಕೊಟ್ಟು ನಿರ್ದೇಶಿಸಿದರು. ಈ ಯಾವ ನಾಟಕಗಳೂ ಮತ್ತೆ ರಂಗಭೂಮಿಯ ಮೇಲೆ ಕಾಣಿಸಿಕೊಂಡಿಲ್ಲ. ಪುಸ್ತಕರೂಪದಲ್ಲಿಯೂ ಪ್ರಕಟವಾಗಿಲ್ಲ. ಅಂಥ ನಾಟಕಗಳನ್ನು ಬಿಟ್ಟು ಕಾರಂತರು ಹೊಸ ಪ್ರಯೋಗಗಳತ್ತ ಸಾಗುವಂತೆ ಅವು ಮಾಡಿದುವು ಎನ್ನುವ ದೃಷ್ಟಿಯಿಂದ ಮಾತ್ರ ಅವನ್ನು ನಾವು ನೆನೆಯಬೇಕಷ್ಟೇ’ ಎಂದು ಖಚಿತಪಡಿಸಿದ್ದಾರೆ.
’ನಿಶಾಮಹಿಮೆ’ ಕುರಿತು ಮಾಲಿನಿ ಮಲ್ಯ ಅವರು ನವಕರ್ನಾಟಕಕ್ಕಾಗಿ ಬರೆದ ಪುಸ್ತಕದಲ್ಲಿ ’ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ಕೊಡುತ್ತಿದ್ದ ಕಂಪೆನಿ ನಾಟಕಗಳಿಂದ ಪ್ರಭಾವಿತರಾದ ಕಾರಂತರು ರಂಗಭೂಮಿಯನ್ನು ಮೂಢನಂಬಿಕೆ ನಿವಾರಿಸಿ, ಸಮಾಜ ಉದ್ದರಿಸುವ ಕೆಲಸಕ್ಕೆ ಆಯ್ದುಕೊಂಡರು. ಅಂದಿನ ಪ್ರಸಿದ್ಧ ಮರಾಠಿ ನಾಟಕ ’ಏಕಚ್ ಪ್ಯಾಲಾ’ವನ್ನು ಮಿತ್ರರ ನೆರವಿನಿಂದ ಕನ್ನಡಕ್ಕೆ ಅನುವಾದಿಸಿದ್ದಲ್ಲದೆ, ಸ್ವಲ್ಪ ರೂಪಾಂತರವನ್ನೂ ಮಾಡಿ ’ನಿಷಾ ಮಹಿಮೆ’ ಎಂದು ಹೆಸರಿಸಿ, ಸ್ವಂತ ನಿರ್ದೇಶನ, ನಟನೆಗಳಿಂದ, ಸ್ನೇಹಿತರನ್ನೂ ಸೇರಿಸಿಕೊಂಡು ಈ ನಾಟಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಪ್ರದರ್ಶಿಸಿದರು. ಮದ್ಯಪಾನದ ಕೆಡುಕುಗಳನ್ನು ತಿಳಿಸುವ ಈ ನಾಟಕ ಯಶಸ್ವಿಯಾಯಿತು. 1921ರಲ್ಲಿ ಕುಂದಾಪುರದಲ್ಲಿ ಜರುಗಿದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಕಾರಂತರ ನಿಷಾ ಮಹಿಮೆ ನಾಟಕ ಪ್ರದರ್ಶನಗೊಂಡ ಉಲ್ಲೇಖವಿದೆ. ಮುದ್ರಣ ರೂಪದಲ್ಲಿ ಲಭ್ಯವಿಲ್ಲದ ಈ ನಾಟಕ ಶಿವರಾಮ ಕಾರಂತರ ಮೊತ್ತ ಮೊದಲ ಸಾಹಿತ್ಯ ಕೃತಿ’ಎಂದು ಖಚಿತ ಪಡಿಸುತ್ತಾರೆ.
ಗೌರೀಶ ಕಾಯ್ಕಿಣಿ ಅವರು ಉದಯವಾಣಿಗೆ ಬರೆದ (25-9-1988) ’ನಟಸಾಮ್ರಾಟ ಬಾಲಗಂಧರ್ವ’ ಲೇಖನದಲ್ಲಿ ’ಏಕಚ್ ಪ್ಯಾಲಾ’ದ ಬಗ್ಗೆ ’ರಾಮ ಗಣೇಶ ಕಡಕರಿ (ಕವಿ ’ಗೋವಿಂದಾಗ್ರಜ’) ಬಾಲಗಂಧರ್ವರಿಗಾಗಿ ’ಏಕಚ ಪ್ಯಾಲಾ’ ನಾಟಕ ಬರೆದರು. ಆ ತನಕ ರಾಜಕನ್ನೆಯರ ಶ್ರೀಮಂತ ರಂಗಸಜ್ಜಿಕೆಯಲ್ಲಿ ಶೋಭಿಸುತ್ತಿದ್ದ ಬಾಲಗಂಧರ್ವರಿಗಾಗಿ ಅವರು ಒಬ್ಬ ಸೆರೆಕುಡುಕ ನಾಯಕನ ದುರ್ದೆಶೆಗೆ ಬಲಿಯಾದ ಹೆಂಡತಿ ಸಿಂಧೂಳ ಪಾತ್ರವನ್ನು ನಿರ್ಮಿಸಿದರು. ಬಾಲಗಂಧರ್ವರು ನಾಟಕವನ್ನು ಬೇಡಿದಾಗಲೇ ಗಡಕರಿ ಅವರಿಗೆ ಅಂದಿದ್ದರು. ನಾರಾಯಣರಾವ್ (ಬಾಲಗಂಧರ್ವ) ಖಾಡಿಲಕರರು ನಿಮ್ಮನ್ನು ಜರತಾರೀ ಸೀರೆ ಶಾಲು ಹಾಗೂ ರತ್ನಾಭರಣಗಳಲ್ಲಿ ಮೆರೆಯಿಸಿದರು. ನಾನು ನಿಮ್ಮನ್ನು ಹರಕು ಸೀರೆಯಲ್ಲಿ ಸ್ಟೇಜಿಗೆ ತರಲಿದ್ದೇನೆ’ ಎಂಬ ಮಾಹಿತಿ ಒದಗಿಸಿದ್ದಾರೆ.
ಎನ್ಕೆ (ಎನ್.ಕೆ. ಕುಲಕರ್ಣಿ) ಅವರು ’ಗಡಕರಿ ಪ್ರತಿಭಾವಂತ ನಾಟಕಕಾರ. ಮದ್ಯಪಾನದ ದುರಂತ ಚಿತ್ರದೊಂದಿಗೆ ಹಿಂದೂ ಸ್ತ್ರೀಧರ್ಮದ ಆದರ್ಶವನ್ನು ಈ ನಾಟಕದಲ್ಲಿ ಗಡಕರಿಯವರು ಮಾರ್ಮಿಕವಾಗಿ ರೂಪಿಸಿದ್ದಾರೆ. ಇಂತಹ ರಸಸಾಮಗ್ರಿ ಸಿಕ್ಕ ಮೇಲೆ ಅಷ್ಟೇ ಪ್ರತಿಭಾವಂತ ಕಲಾವಿದ ಬಾಲ ಗಂಧರ್ವರ ಕೂ ಹಿಡಿದವರುಂಟೆ? ಕಥಾನಾಯಿಕೆ ಸಿಂಧುವಾಗಿ ಕಟುಕನೂ ಕಣ್ಣೀರು ಹಾಕುವಂತೆ ಮಾಡಿದರು. ಗಡಕರಿಯಂಥ ನಾಟಕಾರರಿಲ್ಲ, ಬಾಲಗಂಧರ್ವರಂತಹ ನಟರಿಲ್ಲ, ಎಂಬ ಮಾತಿಗೆ ಸಾಕ್ಷಿಯಂತಿತ್ತು ’ಏಕಚ್ ಪ್ಯಾಲಾ’’ ಎಂದು ಕಸ್ತೂರಿ (ಮೇ 1973)ಗೆ ಬರೆದ ’ಬಾಲ ಗಂಧರ್ವ’ ಲೇಖನದಲ್ಲಿ ವಿವರಿಸಿದ್ದಾರೆ.
ಈ ಮಾಹಿತಿಗೆ ಪೂರಕವೆಂಬಂತೆ ನಾ ಡಿ’ಸೋಜಾ ಅವರು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಅಭಿನಂದನ ಗ್ರಂಥ ’ನಂದನವನ’ (1978)ದ ’ಮೂರು ಮುಖಗಳು: ರಾಘವ’ ಲೇಖನದಲ್ಲಿ ’ಶ್ರೀ ಅಂಬಾ ಪ್ರಸಾದಿತ ನಾಟಕ ಮಂಡಳಿ ಈ ಶತಕದ ಎರಡು-ಮೂರನೇ ದಶಕಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿತವಾಗಿ ನಾಟಕ ರಂಗದಲ್ಲಿ ಬಹಳಷ್ಟು ಸೇವೆಯನ್ನು ಮಾಡಿದ ವ್ಯಾಪಾರ ಕಲಾಮೇಳ. ಇದರ ಮಾಲೀಕರು ದಿವಂಗತ ರಂಗನಾಥ ಭಟ್ ಮುಂಡಾಜೆ. ಶಿವರಾಮ ಕಾರಂತರು ಈ ಕಂಪೆನಿಯೊಡನೆ ಸಂಪರ್ಕವಿರಿಸಿಕೊಂಡಿದ್ದಲ್ಲದೆ ’ಏಕಚ್ ಪ್ಯಾಲಾ’ ಮರಾಠಿ ನಾಟಕದ ಕನ್ನಡ ಅನುವಾದವನ್ನು `ನಿಷಾಮಹಿಮೆ’ ಎಂಬ ಹೆಸರಿನಲ್ಲಿ ಮಾಡಿಕೊಟ್ಟು ಈ ಕಂಪನಿಯವರಿಂದ ಆಡಿಸಿದರು. ಕಾರಂತರ ’ಸತೀ ಸಂಯುಕ್ತೆ’ಯನ್ನು ಕೂಡ ಇವರು ಅಭಿನಯಿಸುತ್ತಿದ್ದರು. ಕಾಳಿಂಗರಾಯರು ಕೂಡ ಈ ಕಂಪೆನಿಯ ಮೂಲಕವೇ ರಂಗಪ್ರವೇಶ ಮಾಡಿದ್ದು’ ಎಂದು ಮತ್ತಷ್ಟು ವಿವರ ನೀಡುತ್ತಾರೆ.
(ಇನ್ನೂ ಇದೆ)
-ದೇವು ಪತ್ತಾರ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ