ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 2)

ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 2)

’ಗಡಕರಿ ಮಾಸ್ತರ’ರು ಎಂದೇ ಜನಪ್ರಿಯರಾಗಿದ್ದ ’ಕಿರ್ಲೋಸ್ಕರ್‌ ನಾಟಕ ಕಂಪೆನಿ’ಯಲ್ಲಿ ಕಲಾವಿದರಿಗೆ ಮರಾಠೀ ಪಾಠ ಕಲಿಸುತ್ತಿದ್ದರು. ಗಡಕರಿಯವರನ್ನು ಕುರಿತು ಸುಮತೀಂದ್ರ ನಾಡಿಗರು `ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ (1989) ಕೃತಿಯಲ್ಲಿ 1885 ರಲ್ಲಿ ಹುಟ್ಟಿದ ಗೋವಿಂದಾಗ್ರಜರು (ರಾಮಗಣೇಶ ಗಡಕರಿ) ಪೂನಾದ ಫರ್ಗೂಸನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು, ಅವರು ಪ್ರಸಿದ್ಧ ನಾಟಕಕಾರರೂ ಆಗಿದ್ದರು. ಮಾತು ಮಾತಿಗೆ ಚಮತ್ಕಾರಗಳನ್ನು ಜೋಡಿಸುತ್ತಿದ್ದ ಈ ಕವಿ ತಮ್ಮ ಮೇಲೆ ಪ್ರಭಾವ ಬೀರಿದವರಲ್ಲಿ ಒಬ್ಬರು ಎಂದು ಬೇಂದ್ರೆಯವರು ಹೇಳಿದ್ದಾರೆ. ಗೋವಿಂದಾಗ್ರಜರ ಅತ್ಯಂತ ಪ್ರಸಿದ್ಧವಾದ ರಾಜಹಂಸ ಮಾರು ನಿಜಲಾ.!! ಎನ್ನುವ ಕವಿತೆಯ ಬಂಧಕ್ಕೆ, ಸ್ಮರಣೆಯಲ್ಲಿ ಉಳಿಯುವಂಥ ಅದರ ಮಾಂತ್ರಿಕತೆಗೆ ಕನ್ನಡ ಕವಿಗಳೂ ಮರುಳಾಗಿದ್ದರು’ ಎಂದು ಬರೆದಿದ್ದಾರೆ.

ಅ.ರಾ. ತೋರೊ ಅವರು ಕಸ್ತೂರಿಗೆ (ನವೆಂಬರ್‌ 1982) ಬರೆದ ’ಬೇಂದ್ರೆ -ಮಹಾರಾಷ್ಟ್ರ ಕಂಡಂತೆ’ ಲೇಖನದಲ್ಲಿ ’ಗೋವಿಂದಾಗ್ರಜರ ’ಮಹಾರಾಷ್ಟ್ರ ಗೀತಾ’ ಬೇಂದ್ರೆಯವರಿಂದ ಎಷ್ಟೊಂದು ಸುಂದರವಾಗಿ ಕನ್ನಡಿಸಲ್ಪಟ್ಟಿದೆಯೆಂದರೆ ಅವರೊಂದಿಗೆ ಮಾತನಾಡುತ್ತಿದ್ದಾಗ ನಾನೊಮ್ಮೆ ಹೇಳಿದೆ, ’ಸರ್‌, ಗೋವಿಂದಾಗ್ರಜರು ನಿಮಗಿಂತ ಮುಂಚೆಯೇ ಹುಟ್ಟಿ ಒಳ್ಳೆಯದನ್ನೇ ಮಾಡಿದರು, ಇಲ್ಲವಾದರೆ ಅವರ ಮೇಲೆ ವಾಙ್ಮಯಚೌರ್ಯದ ಆರೋಪ ಖಂಡಿತ ಬರುತ್ತಿತ್ತು ಎಂದು. ಅವರು ನಕ್ಕು ಬಿಟ್ಟರು’ ಎಂದು ನೆನಪಿಸಿಕೊಂಡಿದ್ದಾರೆ.

’ಏಕಚ ಪ್ಯಾಲಾ’ ಬಗೆಗೆ ಬೇಂದ್ರೆ ಉವಾಚ’ ಎಂಬ ಲೇಖನದಲ್ಲಿ (ಆರ್ಕೆಸ್ಟ್ರಾ ಮತ್ತು ತಂಬೂರಿ) ಗೌರೀಶ ಕಾಯ್ಕಿಣಿ ಅವರು ಗಡಕರಿ ಅವರ ’ಅವರ ನಾಟಕಗಳಲ್ಲಿ ’ಏಕಚ ಪ್ಯಾಲಾ’ ಗಂಧರ್ವ ಕಂಪೆನಿಯನ್ನೂ ’ಭಾವಬಂಧನ’ ಮಾಸ್ಟರ್‌ ದೀನಾನಾಥ ಮಂಗೇಶಕರರ ಬಲವಂತ ನಾಟಕ ಮಂಡಳಿಯನ್ನೂ ಮುಳುಗಡೆಉ ಮಡುವಿನಿಂದ ಎತ್ತಿ ನಿಲ್ಲಿಸಿದವು. ನಾಟ್ಯಲೇಖನ, ಪಾತ್ರ ಸೃಷ್ಟಿಯಲ್ಲಿ ಗಡಕರಿ ಮರಾಠಿಯ ಶೇಕ್ಸ್‌ಪಿಯರ್‌ ಎನಿಸಿಕೊಂಡರು’ ಎಂದು ವಿವರಿಸುತ್ತಾರೆ.

ಅದೇ ಲೇಖನದಲ್ಲಿ ಕಾಯ್ಕಿಣಿಯವರು ’ನಮ್ಮ ಬೇಂದ್ರೆ ಮಾಸ್ತರರು ಈ ಗಡಕರಿ ಮಾಸ್ತರರ ವಿಷಯವಾಗಿ ಸಲ್ಲಿಸಿದ ಕಾಣಿಕೆಯ ಕುರಿತು. ನಮ್ಮ ವರಕವಿ ಪುಣೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕವಿ ’ಗೋವಿಂದಾಗ್ರಜ’ರಿಂದ ತುಂಬ ಪ್ರಭಾವಿತರಾಗಿದ್ದರು. ಬೇಂದ್ರೆಯವರ ಕಾವ್ಯಮಯ ಶೈಲಿಯ ಭಾಷಾಸಂಪತ್ತು ಚತುರೋಕ್ತಿಚಾತುರ್ಯ, ಊಹೆ ಉತ್ಪ್ರೇಕ್ಷೆಗಳ ದಿಗಂತ ಉಡ್ಡಾಣ. ಹರಟೆ- ಹುಚ್ಚಾಟಗಳಲ್ಲಿಯ ವಿಕಟ ವಿನೋ ಇವುಗಳಲ್ಲಿ ಗಡಕರಿಯವರ ಪ್ರಭಾವ ಕಾಣಿಸುತ್ತವೆ’ ಎಂದು ಬರೆದಿದ್ದಾರೆ.

ಕಾಯ್ಕಿಣಿ ಅವರು ’ಆರ್ಕೆಸ್ಟ್ರಾ ಮತ್ತು ತಂಬೂರಿ’ (1993) ಪುಸ್ತಕದ ’ರಾಮ ಗಣೇಶ ಗಡಕರಿ’ ಲೇಖನದಲ್ಲಿ ’ವರಕವಿ ಬೇಂದ್ರೆ ಪುಣೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕವಿ ಗೋವಿಂದಾಗ್ರಜರ ಕಾವ್ಯದ ಚಮತ್ಕಾರ ಮತ್ತು ಶ್ಲೇಷ ಪ್ರಚುರ ಭಾಷಾ ಶೈಲಿಗೆ ಅವರ ವಿಕಟ ವಿನೋದದ ಉತ್ಪ್ರೇಕ್ಷೆಯ ಸ್ವೈರ ಉಡ್ಡಾಣಕ್ಕೆ ’ವಾಗೀಂದ್ರ ಜಾಲಕ್ಕೆ’ ಮನ ಸೋತಿದ್ದರು. ಗಡಕರಿಯವರ ವಾಗ್ವೈಜಯಂತಿ ಹೂವಿನ ಜೇನಿಗೆ ಗುಂಗುಗಾನವೆಸಗುವ ಭೃಂಗದ ಬೆನ್ನೇರಿ ಬೇಂದ್ರೆಯವರ ಕಲ್ಪನಾ ವಿಲಾಸ ಬಂತು. ಗಡಕರಿಯವರ ವಾಙ್ಮಯಾಭ್ಯಾಸದ ಮಂಥನ ಕ್ರಿಯೆ ಮೂಲದಲ್ಲಿ ಇದೆ’ ಎಂದು ಪುನರುಚ್ಚರಿಸಿದ್ದಾರೆ.

ಗಡಕರಿ ಅವರ ಮಹತ್ವ ಮತ್ತು ಅವರ ’ಏಕಚ್‌ ಪ್ಯಾಲಾ’ ಕನ್ನಡ ಸಾಹಿತ್ಯವನ್ನು ಪ್ರಭಾವಿಸಿದ ರೀತಿಯಿದು. ಅದಿರಲಿ.

ಶಿವರಾಮ ಕಾರಂತರು ತಮ್ಮ ಮೊದಲ ಕೃತಿಯ ಬಗ್ಗೆ ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ, ’ಸ್ಮೃತಿಪಟಲದಿಂದ’ದ ಎರಡನೇ ಸಂಪುಟ (1978) ದಲ್ಲಿ ’ಈ ಹೊತ್ತು ನಾನೊಬ್ಬ ಸಾಹಿತಿ ಅನಿಸಿಯೇ ಬಿಟ್ಟಿದ್ದೇನೆ. ಹಾಯ್‌ಸ್ಕೂಲ್ ಓದುತ್ತಿದ್ದಾಗ ಪೋರ್ತ್ ಫಾರ್ಮಿನಲ್ಲಿ 'ವಿಯೋಗಿನಿ' ಎಂಬ ಒಂದು ಕಾದಂಬರಿಯನ್ನು ಬರೆಯಲು ಹವಣಿಸಿ, ಅರ್ಧ ಅಧ್ಯಾಯವನ್ನಾದರೂ ಬರೆದಿರಬೇಕೆಂಬುದೂ ನೆನಪಿದೆ. ಅದರ ಪ್ರತಿ ಈಗ ನನ್ನ ಕೈಗೆ ಸಿಗುತ್ತಿದ್ದರೆ ಏನೆಲ್ಲ ಬರೆದಿದ್ದೆ ಎಂಬ ನನ್ನ ಮೂರ್ಖತೆಯ ಆಳ ತಿಳಿಯುತ್ತಿತ್ತೋ ಏನೋ. 'ವಿಯೋಗಿನಿ' ಎಂಬ ಭರ್ಜರಿ ಹೆಸರನ್ನು ಕೇಳಿದಾಗಲೇ ವೆಂಕಟಾಚಾರ್ಯರ ಕಾದಂಬರಿಗಳನ್ನು ಓದಿದ ವ್ಯಾಮೋಹದಿಂದ, ಅರ್ಥವೇನೇ ಇದ್ದರೂ ಆಡಂಬರದ ಶಬ್ದಗಳನ್ನು ತುರುಕಿಸಬೇಕೆಂಬ ಚಪಲ ಅಂದು ನನ್ನಲ್ಲಿ ಮೂಡಿತ್ತೆಂಬುದು ಸ್ಪಷ್ಟವಾಗುತ್ತದೆ. ಗದ್ಯವಿರಲಿ, ಪದ್ಯವಿರಲಿ-ಅದು ಇರುವುದೇ ವ್ಯಕ್ತಿ ತನ್ನ ಅನುಭವಗಳನ್ನು, ತಿಳಿವನ್ನು, ಭಾವನೆಗಳನ್ನು, ಕಲ್ಪನೆಗಳನ್ನು, ವಿಚಾರಗಳನ್ನು ತನಗನಿಸಿದಷ್ಟೇ ಶಕ್ತಿಯುತವಾಗಿ, ಸ್ವಾರಸ್ಯವಾಗಿ ಇತರರಿಗೆ ತಿಳಿಸುವುದಕ್ಕೆ ಎಂಬ ವಿಚಾರಸರಣಿ ಆ ಕಾಲಕ್ಕಂತು ಖಂಡಿತವಾಗಿ ನನ್ನಲ್ಲಿ ಮೂಡಿರಲಿಲ್ಲ. ಇತರರಿಗಿಂತಲೂ ತಾನು ಭರ್ಜರಿ ಮಾತುಗಾರ ಎಂದು ತೋರಿಸುವ ಸಾಧನ ಅದಾಗಿ ಕಾಣಿಸಿತ್ತು’ ಎಂಬ ಬರವಣಿಗೆಯ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕಾರಂತರ ಪ್ರಕಾರ ’ವಿಯೋಗಿನಿ’ ಅವರ ಮೊದಲ ರಚನೆಯಾದರೂ ಅದು ಅಪೂರ್ಣ ಹಾಗೂ ಅಪ್ರಕಟಿತ ಕೃತಿ. ಆದ್ದರಿಂದ ಅದಕ್ಕೆ ಮೊದಲ ಪ್ರಯತ್ನದ ಶ್ರೇಯ ದೊರೆಯಬಹುದೇ ಹೊರತು ಮೊದಲ ಕೃತಿಯಾಗಲಾರದು.

ಆದರೆ, ಕಾರಂತರು ತಮ್ಮ ’ಹುಚ್ಚು ಮನಸ್ಸಿನ ಹತ್ತು ಮನಸ್ಸುಗಳು’ ಕೃತಿಯಲ್ಲಿ ’1924ರಲ್ಲಿ ನನ್ನ ಸಂಪಾದಕತ್ವದಲ್ಲಿ 'ವಸಂತ' ಎಂಬ ಮಾಸ ಪತ್ರಿಕೆಯನ್ನು ಹೊರಡಿಸುವ ನಿರ್ಧಾರವಾಯಿತು. 'ಸಂಪಾದಕ' ಎಂಬ ಪದದ ಮೇಲೆ ಮೋಹ ನನಗೆ. 'ಯಾವೊಂದು ಬಿರುದು ಇಲ್ಲದೆ ಹೋದರೂ, ಸಂಪಾದಕ' ಎಂಬ ಬಿರುದಿಂದ ದೊಡ್ಡ ವ್ಯಕ್ತಿಯಾಗಬಹುದೆಂದು ಅನಿಸಿತೋ ಏನೋ ! ಆ ಕೆಲಸ ಮಾಡಲು ಒಪ್ಪಿಕೊಂಡೆ. ನನ್ನಲ್ಲಿ ಹಣವಿರಲಿಲ್ಲ. ದೇವಣ್ಣ ಪೈಗಳವರು ಸಾಲಮಾಡಿ, 'ಒಂದು ವರ್ಷದ ಮಟ್ಟಿಗೆ ಅದನ್ನು ಹೇಗೂ ನಡೆಸುವ' ಎಂದರು. ಯೋಚನೆ ಬಂದಷ್ಟೇ ತೀವೃದಿಂದ 'ವಸಂತ'ವೆಂಬ ಮಾಸಪತ್ರಿಕೆಯನ್ನು ಹೊರಡಿಸುವ ನಿಶ್ಚಯವಾಯಿತು’ ಎಂದು ದಾಖಲಿಸಿದ್ದಾರೆ.

ಮಾಲಿನಿ ಮಲ್ಯ ಅವರು ನವಕರ್ನಾಟಕಕ್ಕೆ ಬರೆದ ಕೃತಿಯಲ್ಲಿ 2023ರ ದಶಂಬರ ತಿಂಗಳಲ್ಲಿ ಕಾರಂತರು ಆರಂಭಿಸಿದ `ವಸಂತ’ ಎಂಬ ಕನ್ನಡ ಪತ್ರಿಕೆಯೇ ಒಬ್ಬ ಪ್ರತಿಭಾನ್ವಿತ ಲೇಖಕ, ವಿಮರ್ಶಕ, ವಿಚಾರವಾದಿ, ಹೋರಾಟಗಾರ ಸಾಹಿತಿಯನ್ನು ಸೃಷ್ಟಿಸಿತೆಂದು ಹೇಳಬಹುದು. `ವಸಂತ’ ಪತ್ರಿಕೆ ಕನ್ನಡ ಸಾಹಿತ್ಯ ಜಗತ್ತಿನ ಪಾಲಿಗೆ ವಸಂತ ಋತುವಿನ ಆಗಮನದ ಸಂಕೇತವಾಗಿತ್ತು’ ಎಂದು ಬರೆದಿದ್ದಾರೆ. ಮುಂದುವರೆದು `1924ರಲ್ಲಿ ಸ್ವಂತಕ್ಕೆ ತೊಡಗಿದ ಪತ್ರಿಕಾ ಸಾಹಸದ ದೆಸೆಯಿಂದಾಗಿ- ಕಾರಂತರ ಲೇಖನಿ ಪಳಗಲಾರಂಭಿಸಿದ್ದನ್ನು ಗಮನಿಸಬಹುದು’ ಎಂದು ಪ್ರಸ್ತಾಪಿಸಿದ್ದಾರೆ.

ವಿ.ಎಂ. ಇನಾಂದಾರ್‌ ಅವರು `ಶಿವರಾಮ ಕಾರಂತ: ಬದುಕು-ಬರಹ’ ಕೃತಿಯಲ್ಲಿ' ಕಾರಂತರು ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದ್ದು ಪತ್ರಿಕಾ ವ್ಯವಸಾಯದ ಮುಖಾಂತರ, ಅಂದು ಅವರು ಒಂದು ಪತ್ರಿಕೆಯನ್ನು ಪ್ರಾರಂಭಿಸಿರದಿದ್ದರೆ ಈಗ ಬೆಳೆದಂತೆ ಅವರು ಬೆಳೆಯುತ್ತಿದ್ದರೋ ಹೇಳಲಾಗುವುದಿಲ್ಲ. ಅವರು ತೊಡಗಿದ ಪತ್ರಿಕೆ ಬರವಣಿಗೆಯ ಕ್ಷೇತ್ರದಲ್ಲಿಯ ಮೊದಲ ಹೆಜ್ಜೆಯಾದಂತೆ ಮುಂದೆ ಅವರು ನಡೆದ ದಾರಿಯಲ್ಲಿಯೇ ಆ ಹೆಜ್ಜೆಗಳು ಬೀಳುವಂತೆ ಮಾಡಿದ ಪ್ರಭಾವಶಕ್ತಿಯೂ ಆಯಿತು. ಸಮಕಾಲೀನ ಜೀವನದ ಎಲ್ಲ ಮುಖಗಳನ್ನು ಕುರಿತ ವಿಚಾರಗಳ ಪ್ರಚಾರವನ್ನೇ ಗುರಿಯಾಗಿಸಿ ಕೊಂಡ “ವಸಂತ” ಎಂಬ ಪಾಕ್ಷಿಕ ಪತ್ರಿಕೆಯನ್ನು 1924ರಲ್ಲಿ ಪ್ರಾರಂಭಿಸಿದರು’ ಎಂದು ಬರೆದು ’ಅವರ ಮೊದಲ ಕಾದಂಬರಿಗಳಾದ “ವಿಚಿತ್ರಕೂಟ” ಮತ್ತು “ಭೂತ' ಪ್ರಕಟವಾದದ್ದು ಆ ಪತ್ರಿಕೆಯಲ್ಲಿ, ಸೆಕ್ಸಟನ್ ಬೈಕ್ ಮಾದರಿಯ ಪತ್ತೇದಾರಿ ಕಾದಂಬರಿಗಳು ಅವು. ಕೊನೆಯವರೆಗೆ ಕುತೂಹಲವನ್ನು ಕಾಯ್ದುಕೊಂಡು ಹೋಗಬೇಕಾದ ಕೃತಕ ಕಥಾರಚನೆಯೇ ಮುಖ್ಯವಾಗಿದ್ದ ಅಂಥ ಕೃತಿಗಳಲ್ಲಿ ಮುಂದೆ ಬೆಳೆಯಲಿದ್ದ ಕಾದಂಬರಿಕಾರನ ಯಾವ ಸೂಚನೆಯೂ ಸಿಕ್ಕುವುದಿಲ್ಲ. ಆದರೆ ಮುಂದೆ ಒಂದೆರಡು ವರ್ಷಗಳಲ್ಲಿ ಪ್ರಕಟವಾದ ’ನಿರ್ಭಾಗ್ಯ ಜನ್ಮ’, ’ದೇವದೂತರು’ ಮತ್ತು ’ಸೂಳೆಯ ಸಂಸಾರ’ಗಳಲ್ಲಿ ಹೊಸ ದೃಷ್ಟಿ ಕಾಣಿಸಿಕೊಳ್ಳುತ್ತದೆ’ ಎಂದು ವಿಶ್ಲೇಷಿಸಿದ್ದಾರೆ.

ಇದಕ್ಕೆ ಪೂರಕವಾಗಿ ಕಾರಂತರು ತಮ್ಮ ’ಸ್ಮತಿ ಪಟಲದಿಂದ’ (ಸಂಪುಟ 2) ಕೃತಿಯಲ್ಲಿ `ನಾನು-ಆರ್ಥರ್ ಕಾನನ್‌ಡೈಲನ ಪತ್ತೇದಾರಿ ಕಥೆಗಳನ್ನು, ಸೆಕ್ಸ್‌ಟನ್ ಪ್ಲೇಕನ ಕಥೆಗಳನ್ನು ತುಣುಕು, ಚೂರು ಓದಿಕೊಂಡದ್ದರ ಮೇಲಿಂದ, ಅಂತಹ ಅದ್ಭುತ ಕಾಲ್ಪನಿಕ ಕಥಾನಕಗಳನ್ನು ನಾನೇ ಹೊಸೆಯುವುದಕ್ಕೆ ತೊಡಗಿದೆ. ಪತ್ರಿಕೆಯ ಕೆಲವು ಪುಟಗಳನ್ನು ಅದರಿಂದ ಹಾಗೂ ಹೀಗೂ ತುಂಬಿಸಿದೆ’ ಎಂದು ಮಾಹಿತಿ ನೀಡುವುದರ ಜೊತೆಗೆ ’ಪತ್ತೇದಾರಿ ಕಾದಂಬರಿಯಂತಹ ಕಗ್ಗವನ್ನು ಹೊಸೆಯುವುದಕ್ಕೆ ನನ್ನ ಕಲ್ಪನೆ ಸಾಕೆನಿಸಿತ್ತು. ನಾನು ಪ್ರಕಟಿಸಿದ 'ಭೂತ' ಮತ್ತು 'ವಿಚಿತ್ರ ಕೂಟ' ಎಂಬೆರಡು ಕಾದಂಬರಿಗಳನ್ನು ನನ್ನಷ್ಟೂ ಬುದ್ಧಿ ಇಲ್ಲದ ಎಷ್ಟೋ ಹುಂಬ ಜನರು ಮೆಚ್ಚಿದ್ದರು. ಅದರಿಂದ ನಾನು ಹಿಗ್ಗಿ ನಲಿಯುತ್ತಿದ್ದ ಕಾಲದಲ್ಲೇ ಪುತ್ತೂರಿನಲ್ಲಿ ನೆಲೆಸಿದ್ದ ಉಗ್ರಾಣ ಮಂಗೇಶರಾಯರು ಎಂಬ ಪಂಡಿತರು ನನ್ನನ್ನು ಪ್ರೀತಿಯಿಂದ ಹತ್ತಿರ ಕರೆದು ಕಾರಂತರೇ, ಈ ವಿಚಿತ್ರಕೂಟ ಬರೆದಿರಲ್ಲ, ಇದರಿಂದ ಏನು ಪ್ರಯೋಜನ ?' ಎಂದು ಪ್ರಶ್ನಿಸಿಯೇ ಬಿಟ್ಟರು. ಈ ಪ್ರಶ್ನೆ ನನ್ನನ್ನು ವಿಚಾರಕ್ಕೆ ಗುರಿಮಾಡಲೇ ಬೇಕಾಯಿತು’ ಎಂದು ವಿವರಿಸಿದ್ದಾರೆ.

ಕಾರಂತರ ಕಾದಂಬರಿಯ ಬರವಣಿಗೆ ಆರಂಭವಾದದ್ದು ’ವಸಂತ’ದಲ್ಲಿ ಧಾರಾವಾಹಿಗಳಾಗಿ ಪ್ರಕಟಣೆ ಆರಂಭಿಸಿದ್ದರಿಂದ ಎಂಬುದು ನಿರ್ವಿವಾದ. ಇದಕ್ಕೆ ಪೂರಕವಾಗಿ ಮಾಲಿನಿ ಮಲ್ಯ ಅವರು ನವಕರ್ನಾಟಕಕ್ಕಾಗಿ ರಚಿಸಿದ ಕೃತಿಯಲ್ಲಿ ’ಸ್ತ್ರೀಪರ ನಿಷ್ಠೆಯಿಂದ ಕೂಡಿದ ಇಂಥ ಸಾಮಾಜಿಕ ಕಾದಂಬರಿಗಳು ಕಾರಂತರ ಮನಸ್ಸನ್ನು ತಟ್ಟಿದ್ದರಿಂದ ಅವೇ ಧ್ಯೇಯ ಧೋರಣೆಗಳನ್ನು ಪ್ರತಿಪಾದಿಸುವ `ನಿರ್ಭಾಗ್ಯ ಜನ್ಮ’ (1925) ಮತ್ತು ಕನ್ಯಾಬಲಿ ಅಥವಾ ಸೂಳೆಯ ಸಂಸಾರ (1929-30) ಎಂಬ ಕಾದಂಬರಿಗಳನ್ನು ಕಾರಂತರು ತಮ್ಮ ಸ್ವಂತ ಪತ್ರಿಕೆ ’ವಸಂತ’ದಲ್ಲಿ ಪ್ರಕಟಿಸಿದರು. ಇದಕ್ಕೂ ಮುನ್ನ, ಬಂಗಾಳೀ ಕಾದಂಬರಿಗಳ ಕನ್ನಡ ಅನುವಾದಗಳ ಸ್ಫೂರ್ತಿಯಿಂದ ಅದ್ಭುತ, ರಮಣೀಯತೆಗಳ ಕಡೆಗೆ ಮಾರುಹೋಗಿದ್ದ ಕಾರಂತರು, ಜನರಂಜನೆಗಾಗಿ ’ವಸಂತ’ ಪತ್ರಿಕೆಯಲ್ಲಿ 1924ರಲ್ಲಿ ’ವಿಚಿತ್ರಕೂಟ’ ಮತ್ತು 1925ರಲ್ಲಿ ’ಭೂತ’ ಎಂಬ ಎರಡು ಪತ್ತೇದಾರಿಗಳನ್ನು ಪ್ರಕಟಪಡಿಸಿದರು. ಕಾರಂತರ ಮೊದಲ ಕಾದಂಬರಿ ವಿಚಿತ್ರಕೂಟ ವಸ್ತುವಿನ ದೃಷ್ಟಿಯಿಂದ ಮಹತ್ವದ ಕಾದಂಬರಿಯಲ್ಲದಿದ್ದರೂ ಕಾರಂತರ ಕಥನಶೈಲಿ ಮೊದಲ ಬರಹದಲ್ಲೇ ಆಕರ್ಷಕವಾಗಿದ್ದನ್ನು ವಿಮರ್ಶಕರು ಕಡೆಗಣಿಸುವಂತಿಲ್ಲ; ಮಾತ್ರವಲ್ಲ, ಅದೊಂದು ಪತ್ತೇದಾರಿ ಕಾದಂಬರಿ ಆಗಿರುವುದರಿಂದ ಪತ್ತೇದಾರಿ ಕಾದಂಬರಿ ಹೇಗಿರಬೇಕೋ, ಹೇಗಿರುತ್ತದೋ ಆ ಎಲ್ಲ ಲಕ್ಷಣಗಳನ್ನೂ ಈ ಕಾದಂಬರಿ ಹೊಂದಿರುವುದರಿಂದ ಇದೊಂದು ಯಶಸ್ವೀ ಬರಹವೆಂದು ಪರಿಗಣಿಸಲ್ಪಡಬೇಕಾದ ಅಗತ್ಯವಿದೆ. ಜನರಂಜನೆಗಾಗಿ, ಪತ್ರಿಕೆಯ ಆಕರ್ಷಣೆಯನ್ನು ಹೆಚ್ಚಿಸಲು ಇಂಥದೊಂದು ಕತೆಯನ್ನು ಪ್ರಕಟಿಸಿದರೂ, ಕಾರಂತರ ಒಳಮನಸ್ಸು ಗಂಭೀರ ಚಿಂತನೆಯತ್ತ ವಾಲಿದ್ದುದರ ಸ್ಪಷ್ಟ ಸೂಚನೆ ಈ ಕಾದಂಬರಿಯ ಅಂತ್ಯದಲ್ಲಿ ಸಿಗುತ್ತದೆ’ ಎಂದು ತಿಳಿಸಿದ್ದಾರೆ.

(ಇನ್ನೂ ಇದೆ)

-ದೇವು ಪತ್ತಾರ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ