"ಶಿವಾಜಿ" "ರೋಬೋಟ್" "ಮಗಧೀರ" "ಬದ್ರಿನಾಥ್" ಈ ಚಿತ್ರಗಳ ಪ್ರಚಾರ ಮಾಡಿದ್ದು ಯಾರು?

"ಶಿವಾಜಿ" "ರೋಬೋಟ್" "ಮಗಧೀರ" "ಬದ್ರಿನಾಥ್" ಈ ಚಿತ್ರಗಳ ಪ್ರಚಾರ ಮಾಡಿದ್ದು ಯಾರು?

ಕಳೆದ ವಾರ ತೆಲುಗಿನ "ಬದ್ರಿನಾಥ್" ಎಂಬ ಸಿನಿಮಾ ತೆರೆಕಂಡಿದೆ. ಸಿನಿಮಾ ನೋಡಿಬಂದ ಪ್ರೇಕ್ಷಕರು ತಲೆನೋವಿನಿಂದ ಬಳಲುತ್ತಿದ್ದಾರೆ. ಕೆಲವರು ಅರ್ಧ ಸಿನೆಮಾಗೆ ಎದ್ದು ಬಂದಿದ್ದಾರೆ. ಅಷ್ಟು ಘೋರವಾಗಿದೆಯಂತೆ ಸಿನಿಮಾ. ನಾನಿಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಿಲ್ಲ. ನಾನು ಇಲ್ಲಿ ಹೇಳ ಹೊರಟಿರುವ ವಿಷಯ ಏನೆಂದರೆ ಈ ಸಿನೆಮಾ ತೆರೆಕಾಣುವ ವಾರದ ಮುಂಚೆ ಈ ಸಿನೆಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು, ತಡೆಯಾಜ್ಞೆ ತರಬೇಕು. ಅಷ್ಟು ವಾರದ ನಂತರ ಬಿಡುಗಡೆ ಮಾಡಬೇಕು, ಇಷ್ಟು ವಾರದ ನಂತರ ಬಿಡುಗಡೆ ಮಾಡಬೇಕು, ಈ ಸಿನಿಮಾ ತೆರೆ ಕಂಡರೆ  ಕನ್ನಡ ಸಿನಿಮಾಗಳಿಗೆ ತೊಂದರೆ ಅದೂ ಇದೂ ಏನೇನೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು. ಆಗ ನನಗೆ ಅನಿಸಿದ ವಿಷಯ ಏನೆಂದರೆ ನಮ್ಮವರೇ ಪರಭಾಷಾ ಚಿತ್ರಗಳಿಗೆ ಪ್ರಚಾರ ಮಾಡುತ್ತಿದ್ದಾರೆಯೇ?


ಏಕೆಂದರೆ ನಮ್ಮ ಜನಗಳಿಗೆ ಆ ಸಿನೆಮಾ ನೋಡುವ ಉದ್ದೇಶ ಇರುವುದೋ ಇರುವುದಿಲ್ಲವೋ ಗೊತ್ತಿಲ್ಲ, ಆದರೆ ಆ ಸಿನೆಮಾಗಳಿಗೆ ನಮ್ಮ ಮಾಧ್ಯಮಗಳಲ್ಲಿ ಈ ರೀತಿಯ ಪ್ರಚಾರಗಳನ್ನು ಮಾಡಿ ಜನರಲ್ಲಿ "ಓಹೋ ಇಷ್ಟೊಂದು ಪ್ರಚಾರ ಮಾಡುತ್ತಿದ್ದಾರೆ ಎಂದ ಮೇಲೆ ಖಂಡಿತ ಆ ಸಿನಿಮಾ ಚೆನ್ನಾಗಿ ಇರುತ್ತದೆ. ಒಮ್ಮೆಯಾದರೂ ನೋಡಬೇಕು ಎಂಬ ಕುತೂಹಲ ಕೆರಳಿಸುವಂತೆ ಮಾಡುತ್ತಾರೆ ಎಂದು ನನ್ನ ಅಭಿಪ್ರಾಯ.  ಅಸಲಿಗೆ ಆ ಸಿನೆಮಾ ಹೇಗಿರುವುದೋ ಏನೋ ಒಂದೂ ಸಹಾ ಗೊತ್ತಿರುವುದಿಲ್ಲ. ಸುಖಾ ಸುಮ್ಮನೆ ಅದರ ಬಗ್ಗೆ "Hype " ಸೃಷ್ಟಿಸುತ್ತಾರೆ. 


ಕಳೆದ ಬಾರಿಯೂ ಹೀಗೆ ಆಗಿದ್ದು ನಿಮಗೆಲ್ಲ ನೆನಪಿರಬಹುದು. ರಜನಿಕಾಂತ್ ಅಭಿನಯದ "ಶಿವಾಜಿ" ಚಿತ್ರ ಬಿಡುಗಡೆಯಾಗುವ ಮುಂಚೆಯೇ ಆ ಚಿತ್ರದ ಬಗ್ಗೆ ಇಲ್ಲಸಲ್ಲದ ಕುತೂಹಲವನ್ನು ಕೆರಳಿಸಿಬಿಟ್ಟರು ಮಾಧ್ಯಮಗಳಲ್ಲಿ. ಆ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಬಾರದು ಅದರಿಂದ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಬರುವುದಿಲ್ಲ, ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಿಲ್ಲ ವಾಣಿಜ್ಯ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಅದೂ ಇದೂ ಎಂದು ಎಷ್ಟು ಬೇಕೋ ಅಷ್ಟು ಪ್ರಚಾರ ಮಾಡಿಕೊಟ್ಟರು ಆ ಸಿನೆಮಾಗೆ. ಅದರಿಂದ ಆ ಸಿನೆಮಾ ಬಗ್ಗೆ ಅರಿವಿಲ್ಲದವರೂ ಸಹ ಹೇಗಾದರೂ ಮಾಡಿ ಆ ಸಿನೆಮಾ ನೋಡಲೇಬೇಕೆಂದು ಮೊದಲನೆಯ ದಿನವೇ ಚಿತ್ರಮಂದಿರದ ಬಳಿ ಸಾವಿರಾರು ರೂ ಬ್ಲಾಕಿನಲ್ಲಿ ಕೊಟ್ಟು ನೋಡಿಬಂದರು. ನಂತರ "ಮಗಧೀರ" ಹಾಗೂ " ರೋಬೋಟ್" ಚಿತ್ರಗಳಿಗೂ ಹೀಗೆ ಆಗಿದ್ದು ತಮಗೆಲ್ಲಾ ನೆನಪಿರಬಹುದು.


ವಾರಕ್ಕೆ ಕನಿಷ್ಠ ಪಕ್ಷ ಎರಡು ಮೂರು ಪರಭಾಷಾ ಚಿತ್ರಗಳು ತೆರೆ ಕಾಣುತ್ತಲೇ ಇರುತ್ತವೆ ಅಷ್ಟೇ ವೇಗವಾಗಿ ಚಿತ್ರಮಂದಿರದಿಂದ ಎತ್ತಂಗಡಿಯೂ ಆಗುತ್ತಿರುತ್ತದೆ. ಹಾಗಿರಬೇಕಾದರೆ ಕೆಲವೊಂದು ನಟರ ಸಿನೆಮಾಗಳು, ಅಥವಾ ಕೆಲವು ಭಾರಿ ಬಜೆಟ್ ಚಿತ್ರಗಳು ಬಂದಾಗ ಮಾತ್ರ ಯಾಕೆ ನಮ್ಮ ವಾಣಿಜ್ಯ ಮಂಡಳಿಯವರು ಎಗರಾಡುತ್ತಿದ್ದಾರೆ. ವಾಣಿಜ್ಯ ಮಂಡಳಿಯವರಿಗೆ ನಿಜವಾಗಿಯೂ ಕನ್ನಡ ಚಿತ್ರಗಳ ಬಗ್ಗೆ ಅಷ್ಟೊಂದು ಒಲವಿದ್ದರೆ ಪರಭಾಷಾ ಚಿತ್ರಗಳ ಮೇಲೆ ಸಂಪೂರ್ಣ ನಿಷೇಧ ಹೇರಿ. ಯಾಕೆಂದರೆ ಕರ್ನಾಟಕ ಬಿಟ್ಟು ಹೊರ ರಾಜ್ಯಗಳವರು ಎಷ್ಟು ಕನ್ನಡ ಸಿನೆಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇಲ್ಲವಾದಲ್ಲಿ ಬೇರೆ ಪರಭಾಷಾ ಚಿತ್ರಗಳು ಬಂದಾಗ ಹೇಗೆ ಸುಮ್ಮನಿರುತ್ತೀರೋ ಹಾಗೆ ದೊಡ್ಡ ನಟರ, ದೊಡ್ಡ ಬಜೆಟ್ ಸಿನೆಮಾಗಳು ಬಂದಾಗಲೂ ಸುಮ್ಮನಿದ್ದುಬಿಡಿ


ಅದು ಬಿಟ್ಟು ಮಾಧ್ಯಮಗಳಲ್ಲಿ ನೀವೇ ಆ ಸಿನೆಮಾಗಳ ಬಗ್ಗೆ ಪ್ರಚಾರ ಕೊಟ್ಟು ಜನ ಚಿತ್ರಮಂದಿರದ ಕಡೆ ಬರಬೇಡಿ ಎಂದು ಏಕೆ ಬೊಬ್ಬೆ ಹೊಡೆಯುತ್ತೀರಿ. ನನಗೊಂದು ಸಣ್ಣ ಅನುಮಾನ ಹಾಗೆ ಮಾಡುವುದರಿಂದ ನಿಮಗೇನಾದರೂ ಲಾಭ ಉಂಟೆ ಎಂದು...ವಿತರಕರಿಂದ ಅಥವಾ ನಿರ್ಮಾಪಕರಿಂದ ಏನಾದರೂ.....

Comments