ಶಿವ-ಪಾರ್ವತಿಯರ ಹೆಣ್ಣುಮಕ್ಕಳು

ಶಿವ-ಪಾರ್ವತಿಯರ ಹೆಣ್ಣುಮಕ್ಕಳು

ಶಿವನ ಮಕ್ಕಳು ಎಂದರೆ ನಮಗೆಲ್ಲಾ ನೆನಪಿಗೆ ಬರುವುದು ಗಣೇಶ, ಕಾರ್ತಿಕೇಯ. ಆದರೆ ಇವರಿಬ್ಬರನ್ನ ಹೊರತುಪಡಿಸಿ ಶಿವ ಮತ್ತು ಪಾರ್ವತಿಗೆ ಇನ್ನೂ ನಾಲ್ವರು ಮಕ್ಕಳಿದ್ದರು‌. ಅಂದರೆ ಒಟ್ಟು ಆರು ಮಂದಿ ಮಕ್ಕಳಿದ್ದರು ಅಂತ ಶಿವಪುರಾಣದಲ್ಲೇ ಹೇಳಲಾಗಿದೆ. ಶಿವನ ಮೂರನೇ ಮಗ ಅಯ್ಯಪ್ಪಸ್ವಾಮಿ. ಶಿವ ಮತ್ತು ವಿಷ್ಣುವಿನ ಶಕ್ತಿಯ ಸಂಗಮದಿಂದ ಅಯ್ಯಪ್ಪಸ್ವಾಮಿಯ ಜನನವಾಗುತ್ತದೆ. ಈ ಮೂವರನ್ನ ಹೊರತುಪಡಿಸಿ ಇನ್ನೂ ಮೂವರು ಹೆಣ್ಣುಮಕ್ಕಳಿದ್ದರು. ಹಾಗಾದರೆ ಅವರು ಯಾರು? ಅವರನ್ನ ಎಲ್ಲಿ ಪೂಜಿಸಲಾಗುತ್ತದೆ ಅಂತ ಗೊತ್ತಾ? ಶಿವ ಮತ್ತು ಪಾರ್ವತಿಗಿದ್ದ ಮೂವರು ಹೆಣ್ಣುಮಕ್ಕಳು ಅಂದರೆ ಅಶೋಕಸುಂದರಿ, ಜ್ಯೋತಿ ಮತ್ತು ವಾಸುಕಿ.

ಪಾರ್ವತಿ ತನ್ನ ಏಕಾಂಗಿತನವನ್ನ ದೂರ ಮಾಡಿಕೊಳ್ಳಲು ಅಶೋಕಸುಂದರಿಗೆ ಜನ್ಮ ನೀಡಿದಳು. ಪಾರ್ವತಿಯ ಏಕಾಂಗಿತನ ಅಂದರೆ ಶೋಕವನ್ನ ದೂರಮಾಡಲು ಜನಿಸಿದ್ದರಿಂದ ಅಶೋಕ ಎನ್ನುವ ಹೆಸರು ಬಂತು. ಅದೇ ರೀತಿ ಆಕೆ ಸುಂದರಿಯೂ ಆಗಿದ್ದರಿಂದ ಅಶೋಕಸುಂದರಿ ಅಂತ ಕರೆಯಲಾಯಿತು. ಶಿವ ಕೋಪಗೊಂಡು ಗಣೇಶನ ತಲೆಯನ್ನ ಕತ್ತರಿಸಿದಾಗ ಹೆದರಿದ ಅಶೋಕಸುಂದರಿ ಉಪ್ಪಿನ ಗೋಣಿಚೀಲದಲ್ಲಿ ಹೋಗಿ ಅವಿತು ಕುಳಿತಿದ್ದಳು. ಹೀಗಾಗಿ ಇವರನ್ನ ಉಪ್ಪಿನ ಮಹತ್ವದ ಜೊತೆಗೂ ನೋಡಲಾಗುತ್ತದೆ. ಗುಜರಾತಿನಲ್ಲಿ ಇವರಿಗೆ ಪೂಜೆ ನಡೆಯುತ್ತದೆ.

ಎರಡನೇ ಪುತ್ರಿ ಜ್ಯೋತಿ ಇವರ ಜನನದ ಬಗ್ಗೆ ಎರಡು ಕಥೆಗಳಿವೆ. ಮೊದಲ ಕಥೆಯ ಪ್ರಕಾರ ಜ್ಯೋತಿಯ ಜನನ ಶಿವನ ತೇಜಸ್ಸಿನಿಂದ ಆಗಿತ್ತು. ಎರಡನೇ ಕಥೆಯ ಪ್ರಕಾರ ಪಾರ್ವತಿಯ ಹಣೆಯಿಂದ ಹೊರಬಿದ್ದ ತೇಜಸ್ಸಿನಿಂದ ಜ್ಯೋತಿಯ ಜನನವಾಗಿದ್ದು ಎಂದು ಹೇಳಲಾಗುತ್ತದೆ. ತೇಜಸ್ಸಿನಿಂದ ಜನಿಸಿದ ಕಾರಣಕ್ಕೆ ಜ್ಯೋತಿ ಎಂದು ಹೆಸರಿಡಲಾಯಿತು. ತಮಿಳುನಾಡಿನ ಹಲವು ದೇವಾಲಯಗಳಲ್ಲಿ ಜ್ಯೋತಿ ಮಾತೆಯ ಪೂಜೆ ಸಲ್ಲಿಸಲಾಗುತ್ತದೆ.

ಶಿವನ ಮೂರನೇ ಮಗಳು ವಾಸುಕಿ. ಇದು ಶಿವ ಮತ್ತು ಪಾರ್ವತಿಗೆ ಜನಿಸಿದ ಮಗುವಲ್ಲ. ಏಕೆಂದರೆ ವಾಸುಕಿಯ ಜನನ ಶಿವನ ಬೆವರಿನಿಂದ ಆಗಿದ್ದು ಅಂದರೆ ಒಮ್ಮೆ ಶಿವನ ಬೆವರು ಸರ್ಪಗಳ ದೇವಿ ಕುದ್ರುವಿನ ವಿಗ್ರಹದ ಮೇಲೆ ಬಿತ್ತು. ಇದರಿಂದ ವಾಸುಕಿಯ ಜನನವಾಯಿತು ಅಂತ ಹೇಳಲಾಗುತ್ತದೆ. ಈಕೆಯನ್ನು ಮಾನ್ಸಾದೇವಿ (ಮಾನಸ ದೇವಿ) ಅನ್ನುವ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದ ಹಲವು ಕಡೆ ಈ ದೇವಿಯನ್ನ ಪೂಜಿಸಲಾಗುತ್ತದೆ.

ಈ ಮೂವರು ಸಹೋದರಿಯರು ಶಿವ ಮತ್ತು ಪಾರ್ವತಿಯ ಇತರ ಮಕ್ಕಳಂತೆ ಪ್ರಸಿದ್ಧವಾಗಿಲ್ಲ. ಅಲ್ಲದೆ ಹಿಂದೂ ಧರ್ಮೀಯರಿಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ ದೇಶದ ಹಲವೆಡೆ ಇವರನ್ನ ಪೂಜಿಸಲಾಗುತ್ತದೆ.

(ಸಂಗ್ರಹ) - ಸತೀಶ್ ಶೆಟ್ಟಿ ಚೇರ್ಕಾಡಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ (ಜ್ಯೋತಿ, ಅಶೋಕ ಸುಂದರಿ, ಮಾನ್ಸಾ ದೇವಿ)