ಶಿಶಿರ ಶಶಾಂಕ
ಕವನ
ಶಿಶಿರ ಋತು ಹೆಬ್ಬಾಗಿಲಿನಲಿ
ಫಾಲ್ಗುಣದ ವ್ಯೋಮ ವಾರಿಧಿಯಲಿ
ಪೌರ್ಣಿಮಾ ಚಂದಿರನು ನಲಿಯುತಿಹನು.
ಬಹು ವರುಷಗಳಿಗೊಮ್ಮೆ
ತೋರುತ ಭುವಿಗೆ ಒಲ್ಮೆ
ಎಂದೂ ಬಾರದ ಸನಿಹದಲಿ ಪಿಸುಗುಡುತಿಹನು.
ನಿಶೆಯ ಮೊಗದಂಚಿನಲಿ
ಸೊಬಗನನುಪಮಗೊಳಿಸುವಲ್ಲಿ
ಅವಳ ಮೂಗುತಿಯಾಗಿ ಮಿನುಗುತಿಹನು.
ಜಗವೆ ನೋಡುತಿಹುದು ಬಾನಿರುವಲ್ಲಿ
ಶ್ವೇತದೀಪ್ತ ಶಶಿಯ ಮೋಹದಲಿ
ಪೂರ್ಣಚಂದ್ರತೇಜಸ್ಸು ಬೆಳಗಿಹುದೀ ಧರೆಯನು.
ನದಿ,ಸಾಗರ,ನಾಡು,ಕಾಡುಗಳು ಹೊಳೆಯುತಿವೆ
ಬೆಳಕಿನ ಕ್ಷೀರಸಿಂಧುವಿನಲಿ ಮಿಂದು.
ಶಿಶಿರ ಶಶಾಂಕನ ದಿವ್ಯ ಸೌದರ್ಯ ನೋಡಿ,
ನೋಡುಗನ ಕಣ್ಗಳಲಿ ತುಂಬಿದೆ ಹೊಳೆವ ಬಿಂದು.
ಅಮೃತಕರನು ಬೀರುತಿರಲು ಮುಗಿಲಿನಲಿ ಮಂದಹಾಸ,
ರಸಭಾವದೊನಲಿನಲಿ ತೇಲುತಿಹನಿಲ್ಲಿ ಚಂದ್ರಹಾಸ.
- ಚಂದ್ರಹಾಸ. ( ಮಾರ್ಚ್ ೧೯ ೨೦೧೧)
Comments
ಉ: ಶಿಶಿರ ಶಶಾಂಕ
ಉ: ಶಿಶಿರ ಶಶಾಂಕ
ಉ: ಶಿಶಿರ ಶಶಾಂಕ
ಉ: ಶಿಶಿರ ಶಶಾಂಕ
ಉ: chandrashekar B C