ಶಿಶಿಲೇಶ್ವರ ದೇಗುಲ ಶಿಶಿಲಾ
ಕವನ
ಎಂಥ ಚಂದ ಕ್ಷೇತ್ರವಿಲ್ಲಿ ಎನಿತು ಸುಂದರ
ಮರೆತು ಹೋದೆ ನನ್ನ ನಾನೆ ಶಿಶಿಲೇಶ್ವರ||ಪ||
ಪುಣ್ಯನಾಡು ಹರನು ಇಲ್ಲಿ ಆಗಿ ಉದ್ಭವ
ನಂಬಿದವರ ಬಿಡದೆ ಪೊರೆವ ಶಿಶಿಲೇಶ್ವರ
ಭಕ್ತಿಯಲ್ಲಿ ಬರುವ ಮಂದಿ ಅರುಹೆ ಕಷ್ಟವ
ಕಳೆದುಬಿಡುವ ಒಲವಿನಿಂದ ದೇವ ಈಶ್ವರ||
ಕಪಿಲ ನದಿಗೆ ತಾಗಿದಂತೆ ದಿವ್ಯ ದೇಗುಲ
ಗುಡಿಯ ಸುತ್ತ ಹಸಿರು ಸಿರಿಯ ಭವ್ಯ ವರ್ತುಲ
ಮತ್ಸ್ಯ ತೀರ್ಥ ಮತ್ಸ್ಯ ರಾಶಿ ಮನವ ಸೆಳೆವುದು
ತಿನಿಸು ಕೊಡಲು ತಿನ್ನಲದನು ನೃತ್ಯಗೈವುದು||
ಕಾಣುತಿಹುದು ಗುಡ್ಡ ಬೆಟ್ಟ ಸೆಳೆದು ಮೈಮನ
ಬೆಟ್ಟವನ್ನು ಅಪ್ಪಿಕೊಂಡ ದಟ್ಟ ಕಾನನ
ಕೊಡಲು ಉಸಿರು ಚಿಗುರು,ಹಸಿರು ಶುದ್ಧ ಪರಿಸರ
ಮರಳಿ ತೆರಳೆ ಮನವು ಬರದು ಸಗ್ಗದಾತರ||
ಶುದ್ಧ ಮನದಿ ಇಲ್ಲಿ ಕಂಡೆ ಹರನ ಸನ್ನಿಧಿ
ಪುಳಕಗೊಂಡೆ ಕಳೆದುಕೊಂಡೆ ಮನದ ಬೇಗುದಿ
ಹಿತವು ಎನಿಸಿ ನಿಜಕು ದೊರೆತು ಬಹಳ ನೆಮ್ಮದಿ
ಮತ್ತೆ ಹೊತ್ತು ಕಳೆಯುವಾಸೆ ಬುವಿಯ ಸಗ್ಗದಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
