ಶಿಶುಗೀತೆ - ಆಡೋಣ ಬನ್ನಿ
ಕವನ
ಮಳೆಯು ಸುರಿಯುತಿದೆ
ಹನಿಯು ಬೀಳುತಿದೆ
ಜಿಟಿ ಜಿಟಿ ಪಟಪಟ
ಶಬ್ದ ಕೇಳುತಿದೆ
ಆಡೋಣ ಬನ್ನಿ
ಈಜೋಣ ಎನ್ನಿ
ಕಾಲನು ನೀರಲಿ
ಚಾಚೋಣ ಬನ್ನಿ
ಕಾಗದ ದೋಣಿ
ಮಾಡೋಣ ಕೂಡಿ
ತೇಲಿ ಬಿಡೋಣ
ಕೆಂಪನೆ ನೀರಲಿ
ಚಪ್ಪಾಳೆ ತಟ್ಟುತ
ಕೇಕೆಯ ಹಾಕುತ
ಕೈಕೈ ಹಿಡಿಯುತ
ನೆಗೆಯೋಣ ನಗುತಲಿ
ಅಮ್ಮನು ಗದರುತ
ಬೆತ್ತವ ಹಿಡಿಯಲು
ಒಳಗಡೆ ಓಡುತ
ಅಡಗೋಣ ಬನ್ನಿ
ಮಳೆಯ ನೀರಲಿ
ಮಜವನು ಮಾಡುತ
ಶಾಲೆಗೆ ರಜೆಯೆಂದು
ಬೊಬ್ಬೆಯ ಹೊಡೆಯುತ
ನಾಳೆಯು ಸೇರೋಣ
ಜೊತೆಯಲಿ ನಲಿಯೋಣ
ಸಂತಸ ಪಡುತಲಿ
ಆನಂದ ಹೊಂದೋಣ
ಕಪ್ಪೆಯ ಕೂಗನು
ಆಲಿಸೋಣ ಬನ್ನಿ
ಹರಿಯುವ ನೀರನು
ನೋಡೋಣ ಬನ್ನಿ
ಕೊಡೆಯನು ಬಿಡಿಸುತ
ಅದರಡಿ ನಡೆಯುತ
ಹನಿಗಳ ಕಾರಂಜಿ
ಹಿಡಿಯೋಣ ಬನ್ನಿ
-ರತ್ನಾ ಕೆ.ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್